MS Dhoni: ಎಂಎಸ್​ ಧೋನಿ ಜಾರ್ಖಾಂಡ್​​ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾವತಿದಾರ; ಇದು ಐಪಿಎಲ್​ ವೇತನಕ್ಕಿಂತ 3 ಪಟ್ಟು ಹೆಚ್ಚಳ
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni: ಎಂಎಸ್​ ಧೋನಿ ಜಾರ್ಖಾಂಡ್​​ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾವತಿದಾರ; ಇದು ಐಪಿಎಲ್​ ವೇತನಕ್ಕಿಂತ 3 ಪಟ್ಟು ಹೆಚ್ಚಳ

MS Dhoni: ಎಂಎಸ್​ ಧೋನಿ ಜಾರ್ಖಾಂಡ್​​ ರಾಜ್ಯಕ್ಕೆ ಅತಿ ಹೆಚ್ಚು ತೆರಿಗೆ ಪಾವತಿದಾರ; ಇದು ಐಪಿಎಲ್​ ವೇತನಕ್ಕಿಂತ 3 ಪಟ್ಟು ಹೆಚ್ಚಳ

ಸೂಪರ್​ ಸ್ಟಾರ್​ ಆಟಗಾರ ಎಂಎಸ್ ಧೋನಿ (MS Dhoni) ಮತ್ತೊಮ್ಮೆ ಜಾರ್ಖಂಡ್ ರಾಜ್ಯದಲ್ಲಿ (Jharkhand State) ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ (Most Taxpayer) ಹೊರ ಹೊಮ್ಮಿದ್ದಾರೆ.

ಎಂಎಸ್ ಧೋನಿ
ಎಂಎಸ್ ಧೋನಿ

ಮಹೇಂದ್ರ ಸಿಂಗ್​ ಧೋನಿ (Mahendra Singh Dhoni) ವಿಶ್ವ ಕ್ರಿಕೆಟ್​​ ಕಂಡ ಚಾಣಾಕ್ಷ ವಿಕೆಟ್​​ ಕೀಪರ್​​, ಶ್ರೇಷ್ಠ ನಾಯಕ, ಬೆಸ್ಟ್​ ಫಿನಿಷರ್​​. ಭಾರತೀಯ ಕ್ರಿಕೆಟ್​​​ಗೆ ಸಿಕ್ಕ ಅಪರೂಪದ ಆಟಗಾರ. ಅವರ ಕೊಡುಗೆ ಕ್ರಿಕೆಟ್​​ಗಷ್ಟೇ ಸೀಮಿತವಲ್ಲ, ಭಾರತಕ್ಕೆ ನೀಡಿದ ಕಾಣಿಕೆಯೂ ಅಪಾರ. ಪ್ರತಿ ಹೆಜ್ಜೆಗೂ ದಾಖಲೆ ಬರೆದ್ದಾರೆ. ವಿಶೇಷ ಅಂದರೆ ನಿವೃತ್ತಿ ಹೊಂದಿದ್ದರೂ ದಾಖಲೆಯ ಮಟ್ಟದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ.

ಅಂತಹ ಸೂಪರ್​ ಸ್ಟಾರ್​ ಆಟಗಾರ ಎಂಎಸ್ ಧೋನಿ ಮತ್ತೊಮ್ಮೆ ಜಾರ್ಖಂಡ್ ರಾಜ್ಯದಲ್ಲಿ (Jharkhand State) ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿ (Most Taxpayer) ಹೊರ ಹೊಮ್ಮಿದ್ದಾರೆ. ಈ ವರ್ಷ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಮಹೇಂದ್ರ ಸಿಂಗ್​​ ಧೋನಿ, 38 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ ಎಂಬುದು ಆದಾಯ ತೆರಿಗೆ ಇಲಾಖೆಯ ಮಾಹಿತಿ. ಕೂಲ್​ ಕ್ಯಾಪ್ಟನ್​​ ವಾರ್ಷಿಕ ವರಮಾನ 130 ಕೋಟಿ ರೂಪಾಯಿಗೂ ಹೆಚ್ಚು ಎಂದು ತಿಳಿದು ಬಂದಿದೆ.

ಆಗಸ್ಟ್​ 15, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಟೀಮ್​​ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿ (MS Dhoni Retire) ಘೋಷಿಸಿದ್ದಾರೆ. ಕ್ರಿಕೆಟ್​​​ ರಿಟೈರ್​ಮೆಂಟ್​ ಘೋಷಿಸಿದರೂ ಧೋನಿ ಅವರ ಆದಾಯದ ಮೇಲೆ ಯಾವುದೇ ರೀತಿಯ ಪೆಟ್ಟು ಬಿದ್ದಿಲ್ಲ ಎಂಬುದು ಈ ಮೂಲಕ ತಿಳಿಯುತ್ತದೆ. ಧೋನಿ ಇಂಟರ್​ನ್ಯಾಷನಲ್​​​ ಕ್ರಿಕೆಟ್​​ ಶುರು ಮಾಡಿದಾಗಿನಿಂದ ನಿರಂತರವಾಗಿ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವರಿದಾರನಾಗಿ ಹೊರ ಹೊಮ್ಮಿದ್ದಾರೆ.

ಜಾರ್ಖಂಡ್‌ ರಾಜ್ಯದಲ್ಲಿ MS ಧೋನಿ ಕಳೆದ ವರ್ಷ ಸಹ ಹೆಚ್ಚು ಟ್ಯಾಕ್ಸ್​ ಕಟ್ಟಿದ ವ್ಯಕ್ತಿ ಎನಿಸಿದ್ದರು. 2020-21ರ ಸಾಲಿನಲ್ಲಿ ಧೋನಿ 30 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿ ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ಬಳಿಕವೂ ಆದಾಯದಲ್ಲಿ ಏರಿಕೆ ಕಂಡಿರುವುದು ಅಚ್ಚರಿಯ ಸಂಗತಿ. ಅಷ್ಟೇ ಅಲ್ಲದೆ, ಪಾವತಿಸುವ ಕಟ್ಟು ತೆರಿಗೆ ಮೊತ್ತವೂ ದುಪ್ಪಟ್ಟಾಗಿದೆ. ಈ ಬಾರಿ ಧೋನಿ ತಮ್ಮ ಐಪಿಎಲ್ ವೇತನಕ್ಕಿಂತ 3 ಪಟ್ಟು ಹೆಚ್ಚಿನ ಟ್ಯಾಕ್ಸ್​​ ಕಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಆಡಲು 12 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. ಆದರೆ, ಜಾಹೀರಾತಿನಲ್ಲಿ ಆದಾಯ ಹೆಚ್ಚಾಗುತ್ತಿದೆ. ಧೋನಿ ಅವರಿಂದ ಜಾಹೀರಾತು ಮಾಡಿಸಿಕೊಳ್ಳಲು ವಿವಿಧ ಬ್ರ್ಯಾಂಡ್​ಗಳು, ಕಂಪನಿಗಳು ದುಂಬಾಲು ಬೀಳುತ್ತವೆ. ಈ ಕಾರಣಕ್ಕೆ ಧೋನಿ ಅವರ ವರಮಾನ ವರ್ಷದಿಂದ ವರ್ಷಕ್ಕೆ ಡಬಲ್​ ಆಗುತ್ತಿದೆ.

ಭಾರತದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಧೋನಿ ಹೆಸರು 2ನೇ ಸ್ಥಾನದಲ್ಲಿದೆ. ಮಾಸ್ಟರ್ ಬ್ಲಾಸ್ಟರ್, ಬ್ಯಾಟಿಂಗ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ 1,394 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರೆ. ಧೋನಿ ಆಸ್ತಿ ಮೌಲ್ಯ 943 ಕೋಟಿ ರೂಪಾಯಿ. ವಿರಾಟ್​ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, 918 ಕೋಟಿ ಆಸ್ತಿ ಹೊಂದಿದ್ದಾರೆ.

ಐಪಿಎಲ್​​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ (Chennai Super Kings) ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2ರಲ್ಲಿ ಸೋಲು ಕಂಡಿದೆ. ಇಂದು ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad)​ ಎದುರು ಸೆಣಸಾಟ ನಡೆಸಲಿದೆ. ಧೋನಿಗೆ ಇದೇ ಕೊನೆಯ ಐಪಿಎಲ್​​​​​ ಎಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಧೋನಿ, ಐಪಿಎಲ್​ನಿಂದಲೂ ಶೀಘ್ರದಲ್ಲೇ ದೂರವಾಗುವ ಸಾಧ್ಯತೆ ಇದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.