ಕನ್ನಡ ಸುದ್ದಿ  /  Sports  /  Cricket News Sunil Gavaskar Pics Team India Playing Eleven For Wtc Final Ind Vs Aus Srikar Bharat Or Ishan Kishan Jra

Sunil Gavaskar: ಕೆಎಸ್ ಭರತ್ ಅಥವಾ ಇಶಾನ್ ಕಿಶನ್; ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಡುವ ಬಳಗ ರಚಿಸಿದ ಗವಾಸ್ಕರ್

WTC final 2023: ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಮ್ ಇಂಡಿಯಾ ಆಡುವ ಬಳಗವನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಇಶಾನ್‌ ಹಾಗೂ ಭರತ್‌, ಇಬ್ಬರಲ್ಲಿ ಯಾರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಮ್ ಇಂಡಿಯಾ ಆಡುವ ಬಳಗವನ್ನು ಗವಾಸ್ಕರ್ ಅವರು ಆಯ್ಕೆ ಮಾಡಿದ್ದಾರೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟೀಮ್ ಇಂಡಿಯಾ ಆಡುವ ಬಳಗವನ್ನು ಗವಾಸ್ಕರ್ ಅವರು ಆಯ್ಕೆ ಮಾಡಿದ್ದಾರೆ (Reuters-ANI)

ರಿಷಬ್ ಪಂತ್ ಬದಲಿಗೆ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿರುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕೆಎಸ್ ಭರತ್ (KS bharat), ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ (World Test Championship final) ಪಂದ್ಯಕ್ಕೆ ಈಗಾಗಲೇ ಟೀಮ್‌ ಇಂಡಿಯಾವು ಇಂಗ್ಲೆಂಡ್‌ಗೆ ಹಾರಿದ್ದು, ಆ ತಂಡದಲ್ಲಿ ಭರತ್‌ ಕೂಡಾ ಇದ್ದಾರೆ. ಆದರೆ, ಸ್ಟಂಪ್‌ಗಳ ಹಿಂದೆ ನಿಲ್ಲುವ ಭಾರತದ ಮೊದಲ ಆಯ್ಕೆ ಆಟಗಾರನಾಗಲು ಭರತ್ ಹೆಣಗಾಡುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಡಬ್ಲ್ಯೂಟಿಸಿ ಫೈನಲ್‌ ಪಂದ್ಯಕ್ಕೆ ರೋಹಿತ್ ಶರ್ಮಾ ಬಳಗವು ಈಗಾಗಲೇ ಮೊದಲ ಆಯ್ಕೆಯ ವಿಕೆಟ್ ಕೀಪರ್ ಪಂತ್ ಅವರನ್ನು ಕಳೆದುಕೊಂಡಿದೆ. ಅವರ ಬೆನ್ನಲ್ಲೇ ಬ್ಯಾಕ್ ಅಪ್ ವಿಕೆಟ್ ಕೀಪರ್ ಕನ್ನಡಿಗ ಕೆಎಲ್ ರಾಹುಲ್ ಅವರು ಕೂಡಾ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಭರತ್‌ ಅವರೊಂದಿಗೆ ಇಶಾನ್ ಕಿಶನ್ ಅವರನ್ನು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪಂದ್ಯಕ್ಕೆ ಕರೆಸಿಕೊಳ್ಳಲಾಗಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳು ಕಾದಾಡಲು ಸಜ್ಜಾಗಿವೆ. ಅದಕ್ಕೂ ಮುನ್ನ ಭಾರತದ ಆಡುವ ಬಳಗ ಹೇಗಿರಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಈ ಸಮಯದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಲಂಡನ್‌ನ ದಿ ಓವಲ್‌ನಲ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಸಂಭಾವ್ಯ ಆಡುವ ಬಳಗವನ್ನು ಆಯ್ಕೆ ಮಾಡಿದ್ದಾರೆ.

ನಾಯಕ ರೋಹಿತ್‌ ಶರ್ಮಾ ಅವರ ಆರಂಭಿಕ ಜೊತೆಗಾರನಾಗಿ ನಿರೀಕ್ಷೆಯಂತೆಯೇ ಇನ್‌ ಫಾರ್ಮ್‌ ಬ್ಯಾಟರ್‌ ಶುಬ್ಮನ್ ಗಿಲ್ ಅವರನ್ನುಗವಾಸ್ಕರ್‌ ಹೆಸರಿಸಿದ್ದಾರೆ. ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿಗೆ 3 ಮತ್ತು 4ನೇ ಕ್ರಮಾಂಕವನ್ನು ನೀಡಿದ್ದಾರೆ.

“ನಾನು ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್‌ಗೆ ಒಂದು ಮತ್ತು ಎರಡನೇ ಕ್ರಮಾಂಕ ನೀಡುತ್ತೇನೆ. 3ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಹಾಗೂ 4ನೇ ಕ್ರಮಾಂಕಾದಲ್ಲಿ ವಿರಾಟ್ ಕೊಹ್ಲಿ ಮತ್ತು 5ನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಇರಲಿದ್ದಾರೆ. ಆದರೆ, ಆರನೇ ಕ್ರಮಾಂಕದ ಬಗ್ಗೆ ಸ್ವಲ್ಪ ಕಾಳಜಿಯಿಂದ ಯೋಚಿಸಬೇಕಿದೆ,” ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿಕೆಟ್ ಕೀಪಿಂಗ್ ಆಯ್ಕೆಯಾಗಿದ್ದ ಆಂಧ್ರ ಪ್ರದೇಶದ ಬ್ಯಾಟಿಂಗ್‌ ಸ್ಟಾರ್ ಭರತ್‌, ಇದೀಗ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲೂ ಭಾರತದ ವಿಕೆಟ್‌ ಕೀಪಿಂಗ್‌ ಅಯ್ಕೆಯಾಗಿ ಉಳಿಯುತ್ತಾರೆಯೇ ಎಂಬ ಬಗ್ಗೆ ದಿಗ್ಗಜ ಕ್ರಿಕೆಟಿಗ ಗವಾಸ್ಕರ್ ಸ್ಪಷ್ಟನೆ ನೀಡಿದ್ದಾರೆ. ಕಿಶನ್‌ಗಿಂತ ಭರತ್‌ಗೆ ಆದ್ಯತೆ ನೀಡುವ ಮೂಲಕ ಚರ್ಚೆಗೆ ಅಂತ್ಯ ಹಾಡಿದ್ದಾರೆ.

“ನಾನು 6ನೇ ಕ್ರಮಾಂಕದಲ್ಲಿ ಶ್ರೀಕರ್ ಭರತ್ ಅಥವಾ ಇಶಾನ್ ಕಿಶನ್ ಆಗಬಹುದು ಎಂದು ಊಹಿಸುತ್ತೇನೆ. ಈಗೀಗ ಭರತ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಏಕೆಂದರೆ ಅವರು ಈ ಎಲ್ಲಾ ಪಂದ್ಯಗಳನ್ನು ಆಡಿದ್ದಾರೆ. ಆದ್ದರಿಂದ ಬಹುಶಃ ಆರನೇ ಕ್ರಮಾಂಕಕ್ಕೆ ಭರತ್ ಆವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು,” ಎಂದು ಗವಾಸ್ಕರ್ ಹೇಳಿದ್ದಾರೆ.

ಇದೇ ವೇಳೆ ವೇಗದ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿದ ಸನ್ನಿ, ವೇಗಿ ಶಾರ್ದೂಲ್ ಠಾಕೂರ್ ಅವರು ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್‌ಗೆ ಜೊತೆಯಾಗಬಲ್ಲರು ಎಂದು ಪ್ರತಿಪಾದಿಸಿದ್ದಾರೆ. “7ನೇ ಕ್ರಮಾಂಕದಲ್ಲಿ ರವೀಂದ್ರ) ಜಡೇಜಾ ಇರುತ್ತಾರೆ. ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು 7 ಮತ್ತು 8ನೇ ಕ್ರಮಾಂಕದಲ್ಲಿ ನೋಡಬಹುದು. ಹೀಗಾಗಿ 9, 10 ಮತ್ತು 11ರಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಆಡಬಹುದು” ಎಂದು ಗವಾಸ್ಕರ್ ತಿಳಿಸಿದರು.

ಗವಾಸ್ಕರ್ ಆಯ್ಕೆಯ ಭಾರತದ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್.