ಕನ್ನಡ ಸುದ್ದಿ  /  Sports  /  Ricky Ponting Prediction On India Vs Australia In Wtc Final World Test Championship The Oval London England Jra

Ricky Ponting: ಡಬ್ಲ್ಯೂಟಿಸಿ ಫೈನಲ್ ಕುರಿತು ಭವಿಷ್ಯ ನುಡಿದ ಪಾಂಟಿಂಗ್; ಗೆಲ್ಲುವ ಫೇವರೇಟ್ ಯಾರೆಂದು ಬಹಿರಂಗ

“ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ ಎಂಬುದು ಬಹುಶಃ ಉಭಯ ತಂಡಗಳ ನಡುವೆ ತೀವ್ರ ಹಣಾಹಣಿಗೆ ಕಾರಣವಾಗಲಿದೆ. ದಿ ಓವಲ್‌ನಲ್ಲಿ ಆಡಿದ ಅನುಭವದ ಮೇಲೆ ಹೇಳುವುದಾದರೆ, ಆಸ್ಟ್ರೇಲಿಯಾಗೆ ಇದು ಸ್ವಲ್ಪ ಲಾಭವಾಗಲಿದೆ” ಎಂದು ಪಾಂಟಿಂಗ್‌ ಹೇಳಿದ್ದಾರೆ.

ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್ (Sanjay Sharma)

ಐಪಿಎಲ್‌ ಮುಗಿದ ಬೆನ್ನಲ್ಲೇ, ಕ್ರಿಕೆಟ್ ಪ್ರಿಯರ ದೃಷ್ಟಿ ಇಂಗ್ಲೆಂಡ್‌ನತ್ತ ಸಾಗುತ್ತದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (World Test Championship) ಫೈನಲ್‌ ಪಂದ್ಯವು ಆಂಗ್ಲರ ನಾಡಿನಲ್ಲಿ ನಡೆಯುತ್ತಿದೆ. ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಠ ರಾಷ್ಟ್ರಗಳಾದ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ಚಾಂಪಿಯನ್‌ ಪಟ್ಟಕ್ಕಾಗಿ ಜಿದ್ದಿನ ಹೋರಾಟ ನಡೆಯಲಿದೆ. ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದಿಂದ ಮುಖಾಮುಖಿಯಾಗುತ್ತಿರುವ ಉಭಯ ರಾಷ್ಟ್ರಗಳು ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿರುವ ದಿ ಓವಲ್‌ (The Oval) ಮೈದಾನದ‌ಲ್ಲಿ ಮತ್ತೆ ಮುಖಾಮುಖಿಯಾಗುತ್ತಿವೆ.

ಈ ಪಂದ್ಯವು 2021ರಿಂದ 23ರ ಅವಧಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ವಿಜೇತರು ಯಾರು ಎಂಬುದನ್ನು ನಿರ್ಧರಿಸಲಿದೆ. ಕಳೆದ ಆವೃತ್ತಿಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತು ರನ್ನರ್‌ ಅಪ್‌ ಸ್ಥಾನ ಪಡೆದಿರುವ ಭಾರತ, ನಿಸ್ಸಂದೇಹವಾಗಿ ಗೆಲ್ಲುವ ಫೇವರೆಟ್‌ ತಂಡ ಎನಿಸಿಕೊಂಡಿದೆ. ವಿಶೇಷವೆಂದರೆ, ತಟಸ್ಥ ಸ್ಥಳದಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಹೀಗಾಗಿ ಸೋಲು ಗೆಲುವುಗಳ ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳುವ ಪ್ರಕಾರ, ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳು ಆಸ್ಟ್ರೇಲಿಯಾ ತಂಡಕ್ಕೆ ಲಾಭವಾಗಲಿದೆಯಂತೆ.

“ನಾನು ಆಸ್ಟ್ರೇಲಿಯಾ ತಂಡವು ಗೆಲ್ಲುವ ಫೇವರೆಟ್‌ ಎಂದು ಹೇಳುತ್ತೇನೆ. ಇಂಗ್ಲೆಂಡ್‌ನ ಮೈದಾನದ ಪಿಚ್ ಪರಿಸ್ಥಿತಿಯ ಕಾರಣದಿಂದಾಗಿ ನಾನು ಆಸ್ಟ್ರೇಲಿಯಾ ಪರ ಹೋಗುತ್ತಿದ್ದೇನೆ. ಒಂದು ವೇಳೆ ಈ ಪಂದ್ಯವನ್ನು ಭಾರತದಲ್ಲಿ ಆಡಿಸಿದರೆ, ಇದು ಆಸ್ಟ್ರೇಲಿಯಾಗೆ ಗೆಲ್ಲಲು ನಿಜವಾಗಿಯೂ ಕಷ್ಟಕರವಾದ ಪಂದ್ಯ ಎಂದು ನಾನು ಹೇಳಬಲ್ಲೆ. ಅದೇ ರೀತಿ ಈ ಪಂದ್ಯವನ್ನು ಆಸ್ಟ್ರೇಲಿಯಾದಲ್ಲಿ ನಡೆಸಿದರೆ, ನಿಸ್ಸಂದೇಹವಾಗಿ ಆಸೀಸ್‌ ಗೆಲ್ಲುತ್ತದೆ ಎಂದು ನಾನು ಹೇಳುತ್ತೇನೆ” ಎಂದು ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಆಯೋಜಿಸಿದ್ದ ಸಂವಾದದಲ್ಲಿ ಪಾಂಟಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದೆ ಎಂಬುದು ಬಹುಶಃ ಉಭಯ ತಂಡಗಳ ನಡುವೆ ತೀವ್ರ ಹಣಾಹಣಿಗೆ ಕಾರಣವಾಗಲಿದೆ. ದಿ ಓವಲ್‌ನಲ್ಲಿ ಆಡಿದ ಅನುಭವದ ಮೇಲೆ ಹೇಳುವುದಾದರೆ, ಇಲ್ಲಿನ ಪಿಚ್‌ ಪರಿಸ್ಥಿತಿಯು ಭಾರತಕ್ಕಿಂತ ಆಸ್ಟ್ರೇಲಿಯಾದ ಪಿಚ್‌ಗೆ ಹೋಲುತ್ತವೆ. ಆದ್ದರಿಂದ, ಆಸ್ಟ್ರೇಲಿಯಾಗೆ ಇದು ಸ್ವಲ್ಪ ಲಾಭವಾಗಲಿದೆ” ಎಂದು ಪಾಂಟಿಂಗ್‌ ಹೇಳಿದ್ದಾರೆ.

ಆದರೆ, ಭಾರತ ಇದನ್ನು ಗಂಭಿರವಾಗಿ ಪರಿಗಣಿಸಬೇಕಿಲ್ಲ. ಇತ್ತೀಚೆಗೆ ಮುಗಿದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಭಾರತವು ಆಸೀಸ್‌ ತಂಡವನ್ನು ತವರಿನಲ್ಲಿ ಸೋಲಿಸಿತ್ತು. ಅಲ್ಲದೆ 2018-19 ಮತ್ತು 2020-21 ರಲ್ಲಿ ನಡೆದ ಉಭಯ ತಂಡಗಳ ನಡುವಿನ ಕೊನೆಯ ಎರಡು ಸರಣಿಗಳನ್ನು ಕೂಡಾ ಭಾರತವೇ ಗೆದ್ದಿದೆ. ಉಭಯ ತಂಡಗಳ ನಡುವಿನ ಕೊನೆಯ ನಾಲ್ಕು ಸರಣಿಗಳನ್ನೂ ಭಾರತವೇ ಗೆದ್ದಿರುವುದು ವಿಶೇಷ.

ಐಪಿಎಲ್‌ನ 16ನೇ ಆವೃತ್ತಿಯು ಅಂತ್ಯಗೊಳ್ಳುತ್ತಿದ್ದಂತೆ, ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾಗವಹಿಸುವ ಆಟಗಾರರು ಫಸ್ಟ್‌ ಕ್ಲಾಸ್‌ ಕ್ರಿಕೆಟ್‌ನತ್ತ ಮುಖ ಮಾಡುತ್ತಾರೆ. ಪ್ರಸ್ತುತ ಭಾರತದ 15 ಸದಸ್ಯರ ತಂಡದಲ್ಲಿ 14 ಆಟಗಾರರು ಐಪಿಎಲ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿರುವ ಕೇವಲ ಮೂವರು ಆಟಗಾರರು ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇವರೆಲ್ಲರೂ ಐಪಿಎಲ್‌ ಬಳಿಕ ಇಂಗ್ಲೆಂಡ್‌ಗೆ ಹಾರಲಿದ್ದಾರೆ.

ಪ್ರಸಕ್ತ ಡಬ್ಲ್ಯೂಟಿಸಿ ಫೈನಲ್‌ ಗೆಲ್ಲುವುದು ಭಾರತದ ಪಾಲಿಗೆ ಮಹತ್ವದ್ದಾಗಿದೆ. ಕಳೆದ ಬಾರಿಯೂ ಕಿವೀಸ್‌ ವಿರುದ್ಧ ಎಡವಿದ ಭಾರತ, ಸತತ ಎರಡನೇ ಬಾರಿ ಫೈನಲ್‌ ಆಡುವ ಅರ್ಹತೆ ಗಿಟ್ಟಿಸಿಕೊಂಡಿದೆ. ಇದನ್ನು ಗೆಲುವಾಗಿ ಪರಿವರ್ತಿಸುವ ಜವಾಬ್ದಾರಿ ಆಟಗಾರರ ಮೇಲಿದೆ.