IPL 2023: ಮೂರು ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ!-virat kohli eye on 3 big milestones in ipl 2023 ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Ipl 2023: ಮೂರು ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ!

IPL 2023: ಮೂರು ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟ ಕಿಂಗ್​ ಕೊಹ್ಲಿ!

IPL​​​ನಲ್ಲಿ ನೂರಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಕೊಹ್ಲಿ, ಮಾರ್ಚ್​​ 31ರಿಂದ ಆರಂಭವಾಗಲಿರುವ ಸೀಸನ್​ನಲ್ಲಿ 3 ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ.! (Virat Kohli) ಟೀಮ್​ ಇಂಡಿಯಾದ ರನ್​ ಮೆಷಿನ್, ದಾಖಲೆಗಳ ಸರದಾರ.. ವಿರಾಟ್​​ಗಿರುವ ರನ್​ ದಾಹ, ದಾಖಲೆಗಳನ್ನು ಧೂಳೀಪಟ ಮಾಡುವ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. ಕ್ರೀಸ್​​​​ನಲ್ಲಿ ಕಚ್ಚಿ ನಿಂತು ಬೌಲರ್​​ಗಳನ್ನು ದಂಡಿಸಲು ನಿಂತರೆ ಕೊಹ್ಲಿಯನ್ನು ತಡೆಯುವುದು ಅಸಾಧ್ಯದ ಮಾತು. ಅಂತಾರಾಷ್ಟ್ರೀಯ ಕ್ರಿಕೆಟ್​​​​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕಿಂಗ್​, ಇಂಡಿಯನ್​ ಪ್ರೀಮಿಯರ್​ ಲೀಗ್​​​​ನಲ್ಲೂ (Indian Premier League) ಅಸಾಧ್ಯವಾದ ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

IPLನಲ್ಲಿ ಒಂದೇ ಫ್ರಾಂಚೈಸಿಗಾಗಿ ಆಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ ಪ್ರಸ್ತುತ ಮುಂಬರುವ IPL ಸೀಸನ್‌ಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. IPL​​​ನಲ್ಲಿ ನೂರಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಕೊಹ್ಲಿ, ಮಾರ್ಚ್​​ 31ರಿಂದ ಆರಂಭವಾಗಲಿರುವ ಸೀಸನ್​ನಲ್ಲಿ 3 ದೊಡ್ಡ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕೊಹ್ಲಿ, IPLನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಈ ಲೀಗ್‌ನಲ್ಲಿ ಕೊಹ್ಲಿ 223 ಪಂದ್ಯಗಳಲ್ಲಿ 6,624 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಇದರಲ್ಲಿ 5 ಶತಕಗಳು, 44 ಅರ್ಧಶತಕಗಳು ಸೇರಿವೆ. ಕೊಹ್ಲಿ 6,624 ರನ್ ಗಳಿಸಿದ್ದರೆ, ಶಿಖರ್ ಧವನ್ (6,244), ಡೇವಿಡ್ ವಾರ್ನರ್ (5,881), ರೋಹಿತ್ ಶರ್ಮಾ (5,879) ಮತ್ತು ಸುರೇಶ್ ರೈನಾ (5,528) ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ.

376 ರನ್​​ ಗಳಿಸಿದರೆ 7,000 ರನ್

ಸದ್ಯ ಈ ಆವೃತ್ತಿಯಲ್ಲಿ 3 ದೊಡ್ಡ ದಾಖಲೆಗಳನ್ನು ಮುರಿಯಲು ವಿರಾಟ್​ ಕೊಹ್ಲಿ ಸಜ್ಜಾಗುತ್ತಿದ್ದಾರೆ. ಕೊಹ್ಲಿ, ಇನ್ನೂ 376 ರನ್ ಗಳಿಸಿದರೆ, 7000 ರನ್‌ಗಳ ಮೈಲಿಗಲ್ಲು ತಲುಪಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮೂರು ವರ್ಷಗಳಿಂದ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಕೊಹ್ಲಿ, ಕಳೆದ ವರ್ಷ ಅದ್ಭುತ ಫಾರ್ಮ್​​​ಗೆ ಮರಳಿದ್ದಾರೆ. ಹಾಗಾಗಿ ಈ ಋತುವಿನಲ್ಲಿ 400 ರನ್ ಗಳಿಸಿದ್ದು ದೊಡ್ಡ ವಿಷಯವಲ್ಲ.

100 ಕ್ಯಾಚ್​ಗಳ ದಾಖಲೆ!

IPLನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಪೈಕಿ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ಈ ಲೀಗ್‌ನಲ್ಲಿ ಕೊಹ್ಲಿ ಪಡೆದ ಕ್ಯಾಚ್‌ಗಳ ಸಂಖ್ಯೆ 93. 7 ಕ್ಯಾಚ್‌ ಪಡೆದರೆ, ಅದರಲ್ಲೂ ಶತಕ ಸಿಡಿಸಲಿದ್ದಾರೆ. ಸುರೇಶ್ ರೈನಾ, 109 ಕ್ಯಾಚ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕೀರನ್ ಪೊಲಾರ್ಡ್ 103 ಕ್ಯಾಚ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 97 ಕ್ಯಾಚ್‌ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಶತಕ.!

2016ರ IPLನಲ್ಲಿ ಕೊಹ್ಲಿ 4 ಶತಕ ಸಿಡಿಸಿದ್ದರು. 2019ರಲ್ಲಿ KKR ವಿರುದ್ಧ ಶತಕ ಬಾರಿಸಿದ್ದರು. ಇದರೊಂದಿಗೆ IPLನಲ್ಲಿ ಅವರ ಶತಕಗಳ ಸಂಖ್ಯೆ 5ಕ್ಕೆ ತಲುಪಿದೆ. 2023ರ ಋತುವಿನಲ್ಲಿ ಅವರು ಶತಕ ಬಾರಿಸಿದರೆ, ಕೊಹ್ಲಿ ಶತಕಗಳ ಸಂಖ್ಯೆ ಆರು ತಲುಪುತ್ತದೆ. RCBಯ ಮಾಜಿ ಆರಂಭಿಕ ಆಟಗಾರ ಕ್ರಿಸ್​​ ಗೇಲ್, IPLನಲ್ಲಿ ಹೆಚ್ಚು ಶತಕ ಬಾರಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಲೀಗ್‌ನಲ್ಲಿ ಗೇಲ್, 6 ಶತಕ ಬಾರಿಸಿದ್ದಾರೆ. 2023ರ ಆವೃತ್ತಿಯಲ್ಲಿ ಕೊಹ್ಲಿ, ಶತಕ ಸಿಡಿಸಿದರೆ ಗೇಲ್ ದಾಖಲೆ ಸರಿಗಟ್ಟಲಿದ್ದಾರೆ. ಒಂದು ವೇಳೆ ಎರಡು ಶತಕ ಸಿಡಿಸಿದರೆ, ಅದೊಂದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಗೇಲ್ (6), ಕೊಹ್ಲಿ (5) ನಂತರ ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್, KL ರಾಹುಲ್ ಮತ್ತು ಜೋಸ್ ಬಟ್ಲರ್ (4 ಶತಕ) IPLನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ್ದಾರೆ.

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.