ಕನ್ನಡ ಸುದ್ದಿ  /  ಕ್ರಿಕೆಟ್  /  ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗ್ಬೇಕು, ಕ್ರೀಡೆಯಲ್ಲಿ ವಿಕಸನ ಅಗತ್ಯ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ

ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗ್ಬೇಕು, ಕ್ರೀಡೆಯಲ್ಲಿ ವಿಕಸನ ಅಗತ್ಯ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ

ಐಪಿಎಲ್ 2024ರ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಭಾರಿ ಚರ್ಚೆಯಲ್ಲಿದೆ. ನಿಯಮದ ಕುರಿತು ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಅಪರೂಪಕ್ಕೆ ನಿಯಮದ ಪರ ವಾದಿಸಿರುವ ರವಿ ಶಾಸ್ತ್ರಿ ಅವರು, ಪ್ರಸ್ತುತ ಆವೃತ್ತಿಯಲ್ಲಿ ರೋಚಕ ಪಂದ್ಯಗಳಿಗೆ ಈ ನಿಯಮ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ
ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ (PTI)

ಐಪಿಎಲ್‌ನಲ್ಲಿ ಇಂಪ್ಯಾಕ್ಸ್‌ ಪ್ಲೇಯರ್‌ ನಿಯಮ ಚಾಲ್ತಿಯಲ್ಲಿದೆ. ಆಡುವ ಬಳಗದ 11 ಆಟಗಾರರ ಜೊತೆಗೆ ಒಬ್ಬ ಆಟಗಾರನನ್ನು ಪಂದ್ಯದ ಸಮಯದಲ್ಲಿ ಬದಲಿಯಾಗಿ ಆಡಿಸುವ ನಿಯಮ ಇದು. ಈ ನಿಯಮದ ಪರ-ವಿರೋಧ ಚರ್ಚೆಗಳು ನಡೆಯುತ್ತಲೆ ಇವೆ. ಈಗಾಗಲೇ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ ಸೇರಿದಂತೆ ಹಲವು ಆಟಗಾರರು ನಿಯಮದ ವಿರುದ್ಧವಾಗಿ ಮಾತನಾಡಿದ್ದಾರೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದಿಂದಾಗಿ ಆಲ್‌ರೌಂಡರ್‌ಗಳಿಗೆ ಸರಿಯಾಗಿ ಆಡುವ ಅವಕಾಶ ಸಿಗುತ್ತಿಲ್ಲ. ಕ್ರಿಕೆಟ್‌ನಲ್ಲಿ 12 ಆಟಗಾರರನ್ನು ಆಡಿಸಿದಂತಾಗುತ್ತದೆ. ಇದು ಸರಿಯಲ್ಲ ಎಂದು ಹೇಳಿದ್ದರು. ಇದೀಗ ಈ ನಿಯಮವನ್ನು ಭಾರತದ ಮಾಜಿ ಕೋಚ್‌ ಹಾಗೂ ಖ್ಯಾತ ವೀಕ್ಷಕ ವಿವರಣೆಕಾರ ಸಮರ್ಥಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಅಥವಾ ಬದಲಿ ಆಟಗಾರ ನಿಯಮವನ್ನು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಬೆಂಬಲಿಸಿದ್ದಾರೆ. ಹಲವಾರು ಆಟಗಾರರು ಹಾಗೂ ತರಬೇತುದಾರರು ಇದನ್ನು ಒಪ್ಪುದಿದ್ದರೂ, ಶಾಸ್ತ್ರಿ ಈ ನಿಯಮವನ್ನು ಸಮರ್ಥಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗಬೇಕು ಎಂದಿರುವ ಅವರು, ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಈ ನಿಯಮದಿಂದಾಗಿ ಹಲವು ಪಂದ್ಯಗಳು ಕಠಿಣ ಪೈಪೋಟಿಯೊಂದಿಗೆ ರೋಚಕ ಅಂತ್ಯ ಕಂಡಿವೆ ಎಂದಿದ್ದಾರೆ.

“ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಉತ್ತಮವಾಗಿದೆ. ದಿನ ಕಳೆದಂತೆ ನಾವು ಸಮಯದೊಂದಿಗೆ ವಿಕಸನಗೊಳ್ಳಬೇಕು. ನಿಮಗೆ ತಿಳಿದಿರುವಂತೆ ಇತರ ಕ್ರೀಡೆಗಳಲ್ಲಿಯೂ ಸಮಯಕ್ಕೆ ತಕ್ಕನಾಗಿ ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಐಪಿಎಲ್‌ನ ಈ ನಿಯಮ ಹಲವು ಪಂದ್ಯಗಳಲ್ಲಿ ರೋಚಕ ಫಿನಿಶಿಂಗ್‌ಗೆ ಸಾಕ್ಷಿಯಾಗಿದೆ. ನಾವು ಸಮಯದೊಂದಿಗೆ ಅಪ್ಡೇಟ್‌ ಆಗಬೇಕು. ನನ್ನ ಪ್ರಕಾರ ಇದು ಉತ್ತಮ ನಿಯಮ. ಕಳೆದ ವರ್ಷದ ಕೂಡಾ ಐಪಿಎಲ್‌ನಲ್ಲಿ ಕಠಿಣ ಪೈಪೋಟಿ ಎದುರಾಗಿ ರೋಚಕ ಅಂತ್ಯ ಕಂಡ ಪಂದ್ಯಗಳನ್ನು ನೀವು ನೋಡಿದ್ದೀರಿ. ಇದು ದೊಡ್ಡ ಬದಲಾವಣೆಗೆ ಸಾಕ್ಷಿಯಾಗುತ್ತದೆ,” ಎಂದು ಶಾಸ್ತ್ರಿ ಅವರು ರವಿಚಂದ್ರನ್ ಅಶ್ವಿನ್‌ ಅವರೊಂದಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ?

ಪಂದ್ಯದ ವೇಳೆ ಒಂದು ನಿರ್ದಿಷ್ಟ ತಂಡದಲ್ಲಿ 12ನೇ ಆಟಗಾರನಿಗೆ ಆಡುವ ಅವಕಾಶ ಕೊಡುವುದೇ ಇಂಪ್ಯಾಕ್ಟ್‌ ಪ್ಲೇಯರ್‌ ನಿಮಮ. ಪಂದ್ಯದ ಟಾಸ್ ಸಮಯದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಲು ಅವಕಾಶ ಇರುವ ಐದು ಹೆಸರುಗಳನ್ನು ನೀಡಬೇಕು. ಪಂದ್ಯದ ಪರಿಸ್ಥಿತಿಯ ಆಧಾರದಲ್ಲಿ ಆ ತಂಡವು ಬಯಸುವ ಯಾವುದೇ ಆಟಗಾರನನ್ನು ಪಂದ್ಯದ ನಡುವೆ ಕಣಕ್ಕಿಳಿಸಬಹುದು. ಇದೇ ವೇಳೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದ ಯಾವುದೇ ಆಟಗಾರ ಕೂಡಾ ಮೈದಾನದಿಂದ ಹೊರಹೋಗಬಹುದು. ಬ್ಯಾಟರ್‌ಗೆ ಪ್ರತಿಯಾಗಿ ಬೌಲರ್‌ ಕೂಡಾ ಆಡಬಹುದು.

ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್‌ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್‌, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ

“ಯಾವುದೇ ಹೊಸ ನಿಯಮ ಬಂದಾಗಲೂ, ಪರ-ವಿರೋಧಗಳು ಇದ್ದೇ ಇರುತ್ತವೆ. ಅದು ಏಕೆ ಸರಿಯಲ್ಲ ಎಂದು ಹೇಳಲು ಜನರು ಪ್ರಯತ್ನಿಸುತ್ತಾರೆ. ಅಲ್ಲದೆ ತಮ್ಮ ವಾದವನ್ನು ಸಮರ್ಥಿಸುತ್ತಾರೆ” ಎಂದು ಅವರು ಹೇಳಿದ್ದಾರೆ.

ಈ ನಡುವೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಮುಂದುವರೆಸಬೇಕೇ ಬೇಡವೇ ಎಂಬ ಕುರಿತು ತಂಡಗಳ ನಾಯಕರು ಮತ್ತು ತರಬೇತುದಾರರೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಐಪಿಎಲ್ ತಂಡಗಳಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರಿಗೆ ಆಡಿಸುವ ಅವಕಾಶ ನೀಡುವ ನಿಯಮದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.

ನಿಯಮಕ್ಕೆ ರೋಹಿತ್‌ ಶರ್ಮಾ ವಿರೋಧ

ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವನ್ನು ಟೀಕಿಸಿದ ಮೊದಲ ಆಟಗಾರ ರೋಹಿತ್ ಶರ್ಮಾ. ಈ ನಿಯಮದಿಂದಾಗಿ ದೇಶದಲ್ಲಿ ಆಲ್‌ರೌಂಡರ್‌ಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಹಿಟ್‌ಮ್ಯಾನ್‌ ದೂರಿದ್ದರು. “ಈ ನಿಯಮ ಆಲ್‌ರೌಡರ್‌ಗಳ ಬೆಳವಣಿಗೆಯನ್ನು ತಡೆಹಿಡಿಯಲಿದೆ ಎಂದು ನನಗನಿಸುತ್ತಿದೆ. ಏಕೆಂದರೆ ಕ್ರಿಕೆಟ್ ಎಂಬುದು 12 ಆಟಗಾರರು ಆಡುವ ಆಟವಲ್ಲ. ಅದನ್ನು 11 ಆಟಗಾರರು ಆಡಬೇಕು. ಹೀಗಾಗಿ ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಭಿಮಾನಿ ಅಲ್ಲ. ಕೆಲವೊಬ್ಬರಿಗೆ ಹೆಚ್ಚು ಮನರಂಜನೆ ನೀಡುವ ಸಲುವಾಗಿ ಆಟದ ನೈಜತೆಯನ್ನು ತೆಗೆದುಕೊಳ್ಳುತ್ತಿದ್ದೀರಿ” ಎಂದು ರೋಹಿತ್ ಹೇಳಿದ್ದರು.

ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈ ನಿಯಮವನ್ನು "ದುಃಸ್ವಪ್ನ" ಎಂದು ಕರೆದರೆ, ಕೋಲ್ಕತಾ ನೈಟ್ ರೈಡರ್ಸ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡಾ ಇದನ್ನು ದೂರಿದ್ದಾರೆ. ಐಪಿಎಲ್ 2024 ಋತುವಿನಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕಾರಣ ಎಂದಿದ್ದಾರೆ.

IPL_Entry_Point