ಕನ್ನಡ ಸುದ್ದಿ  /  Sports  /  We Havent Won The Ipl But I Still Feel That We Have The Best Fans In The World Says Virat Kohli

RCB: ಕಪ್​ ಗೆದ್ದಿಲ್ಲದಿದ್ರೂ, ವಿಶ್ವದಲ್ಲೇ ನಮ್ಮ ಫ್ಯಾನ್​ ಬೇಸ್​​ ಅದ್ಭುತ: ವಿರಾಟ್​ ಮನದಾಳ

ನಾವು 15 ವರ್ಷಗಳಿಂದ ಕಪ್​ ಗೆಲ್ಲದೇ ಇರಬಹುದು. ಆದರೆ ನಾವು ವಿಶ್ವದಲ್ಲೇ ಅತ್ಯುತ್ತಮ ಅಭಿಮಾನಿಗಳನ್ನು ಸಂಪಾದಿಸಿದ್ದೇವೆ. ನಮ್ಮ ನಿಯತ್ತಿನ ಆಟಕ್ಕಾಗಿಯೇ ನಾವು ಅದ್ಭುತ ಅಭಿಮಾನಿ ಬಳಗವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಆರ್​ಸಿಬಿ ಅಭಿಮಾನಿಗಳು
ಆರ್​ಸಿಬಿ ಅಭಿಮಾನಿಗಳು (Twitter)

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ (Royal Challengers Bangalore), ಅಂತಿಮವಾಗಿ ಗೆದ್ದು ಬೀಗಿದೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​​​​​​ನಲ್ಲಿ (Women's Premier League) ಸತತ 5 ಸೋಲಿನ ಬಳಿಕ ಗೆಲುವಿನ ಖಾತೆ ತೆರೆದಿದೆ. ಡಿವೈ ಪಾಟೀಲ್ ಮೈದಾನದಲ್ಲಿ ಯುಪಿ ವಾರಿಯರ್ಸ್‌ (UP Warriorz) ಎದುರಿನ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆ, ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಫ್ಯಾನ್ಸ್​​​​ ಅಭಿಮಾನಿಗಳ ಮೊಗದಲ್ಲಿ ಸಂತಸ ತಂದಿದೆ.

ಭಾರತ ಕ್ರಿಕೆಟ್‌ ದಿಗ್ಗಜ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಆರ್‌ಸಿಬಿ ಮಹಿಳಾ ತಂಡ ಭೇಟಿ ಮಾಡಿ ಸ್ಫೂರ್ತಿಯ ಮಾತುಗಳನ್ನಾಡಿ ಹುರಿದುಂಬಿಸಿದ್ದರು. ಇದರ ಪರಿಣಾಮ ಸತತ 5 ಸೋಲುಗಳ ಬಳಿಕ RCB ಆಟಗಾರ್ತಿಯರು ಮೊದಲ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಆರ್‌ಸಿಬಿ ಜತೆಗೆ 15 ವರ್ಷಗಳ ನಿಕಟ ಬಾಂಧವ್ಯ ಹೊಂದಿರುವ ಕೊಹ್ಲಿ, ಪ್ರೇರಣ ಭಾಷಣದ ಮಧ್ಯೆಯೇ ಫ್ಯಾನ್ಸ್​​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಪ್​​ ಗೆಲ್ಲದಿದ್ದರೂ, ನಮ್ಮ ಫ್ಯಾನ್​ ಬೇಸ್​ ಅದ್ಭುತ, ಅಮೋಘ. ನಾನು 15 ವರ್ಷದಿಂದ ಐಪಿಎಲ್ ಆಡುತ್ತಿದ್ದೇನೆ. ಆದರೆ ಕಪ್​ ಗೆದ್ದಿಲ್ಲ. ಹಾಗಂತ ನನ್ನ ಕಠಿಣ ಪರಿಶ್ರಮ, ಪ್ರಯತ್ನ ಎಂದಿಗೂ ಕಡಿಮೆಯಾಗಿಲ್ಲ. ಕುಗ್ಗಿಲ್ಲ. ಟ್ರೋಫಿ ಜಯಿಸಿದರಷ್ಟೇ ಸಂತೋಷ. ಗೆಲ್ಲದೇ ಇದ್ದರೆ ಅಲ್ಲಿಗೇ ಅಂತ್ಯ ಕಾಣುವುದಿಲ್ಲ. ಆಟದಲ್ಲಿ ಸೋಲು ಸಹಜ. ಹಾಗಂತ ಎಂದೂ ಕುಗ್ಗಬೇಡಿ. ತಪ್ಪುಗಳನ್ನು ಪಟ್ಟಿ ಮಾಡಿ ಮುಂದಿನ ಅವಕಾಶಕ್ಕಾಗಿ ಕಾಯಿರಿ ಎಂದು ಧೈರ್ಯ ಕೊಹ್ಲಿ ಧೈರ್ಯ ತುಂಬಿದ್ದಾರೆ.

ನಿಜ, ನಾವು 15 ವರ್ಷಗಳಿಂದ ಕಪ್​ ಗೆಲ್ಲದೇ ಇರಬಹುದು. ಆದರೆ ನಾವು ವಿಶ್ವದಲ್ಲೇ ಅತ್ಯುತ್ತಮ ಅಭಿಮಾನಿಗಳನ್ನು ಸಂಪಾದಿಸಿದ್ದೇವೆ. ನಮ್ಮ ನಿಯತ್ತಿನ ಆಟಕ್ಕಾಗಿಯೇ ನಾವು ಅದ್ಭುತ ಅಭಿಮಾನಿ ಬಳಗವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಆರ್‌ಸಿಬಿಗಾಗಿ ಆಡುವ ಪ್ರತಿಯೊಂದು ಪಂದ್ಯಕ್ಕೂ ನಾವು ಯಾವಾಗಲೂ ಬದ್ಧರಾಗಿದ್ದೇವೆ. ಅದು ನಮ್ಮ ಅಭಿಮಾನಿಗಳಿಗೆ ಅತ್ಯಂತ ವಿಶೇಷವಾದ ಸಂಗತಿಯಾಗಿದೆ. ಪ್ರತಿ ವರ್ಷ ಕಪ್ ನೀಡುವ ಯಾವುದೇ ಗ್ಯಾರಂಟಿ ಇಲ್ಲ. ಆದರೆ, ಪ್ರತಿ ವರ್ಷ 110 ರಷ್ಟು ಪ್ರಯತ್ನಿಸುತ್ತೇವೆ ಎಂದು ಆತ್ಮಸ್ಥೈರ್ಯ ತುಂಬುವ ಜೊತೆಗೆ ಅಭಿಮಾನಿಗಳನ್ನು ಬಣ್ಣಿಸಿದ್ದಾರೆ.

ಐದು ಪಂದ್ಯ ಸೋತಿದ್ದೇವೆ. ನಾನು ಸರಿಯಾಗಿ ಆಡುತ್ತಿಲ್ಲವಾ? ಅವರು ಏನೆಂದುಕೊಳ್ಳುತ್ತಾರೋ? ಯಾವುದನ್ನೂ ಮನಸಿಗೆ ಹಚ್ಚಿಕೊಳ್ಳಬೇಡಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿ. ಅದಕ್ಕೆ ತಕ್ಕಂತೆ ಪರಿಶ್ರಮ ಹಾಕಿ. ನಮ್ಮ ಖ್ಯಾತಿಗೆ ತಕ್ಕಂತೆ ಆಡಬೇಕು. ಈಗ ನೋಡಿ ಓಹ್​​.. ನಾನು ವಿರಾಟ್ ಕೊಹ್ಲಿ. ಪ್ರತಿ ಪಂದ್ಯದಲ್ಲೂ ಪ್ರದರ್ಶನ ನೀಡಬೇಕು. ನಾನು ಔಟಾಗುವುದಿಲ್ಲ ಎಂಬುದೆಲ್ಲಾ ತಪ್ಪು. ಕರಿಯರ್​ನಲ್ಲಿ ಏರು ಪೇರು ಇದೆ. ಎಲ್ಲವನ್ನೂ ಸ್ವೀಕರಿಸಬೇಕು. ಹಾಗಂತ ಒಂದೆಡೆಯೇ ಕೂರಬಾರದು. ಅವಕಾಶಕ್ಕಾಗಿ ಮುಂದೆ ಸಾಗುತ್ತಿರಬೇಕು ಎಂದಿದ್ದಾರೆ.

ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ನಾಯಕಿ ಸ್ಮೃತಿ ಮಂಧಾನ (Smriti Mandhana), ನಾವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದಾಗ ನೆರೆದಿದ್ದ ಅಭಿಮಾನಿಗಳು ನಮಗೆ ಸಪೋರ್ಟ್ ಮಾಡಿದ್ದಾರೆ. ಈ ಅಭಿಮಾನ ಕಂಡು ಖುಷಿಯಾಗಿದೆ. ಐದು ಪಂದ್ಯಗಳಲ್ಲಿ ಸೋತ ಬಳಿಕ ಒಂದು ತಂಡಕ್ಕೆ ಈ ರೀತಿಯ ಬೆಂಬಲ ಸಿಗುವುದಿಲ್ಲ. ಆದರೆ, ಅಭಿಮಾನಿಗಳನ್ನು ನಮ್ಮನ್ನು ಕೈಬಿಡದೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.