ಕನ್ನಡ ಸುದ್ದಿ  /  ಕ್ರೀಡೆ  /  Brij Bhushan Singh: ನಾನು ಮುಗ್ಧ;​ ತಪ್ಪು ಮಾಡಿಲ್ಲ, ರಾಜೀನಾಮೆ‌ ಕೊಡಲ್ಲ; ಎಫ್​​ಐಆರ್​‌ ದಾಖಲಾದ ಬಳಿಕ ಬ್ರಿಜ್ ಭೂಷಣ್ ಸಿಂಗ್ ಪ್ರತಿಕ್ರಿಯೆ

Brij Bhushan Singh: ನಾನು ಮುಗ್ಧ;​ ತಪ್ಪು ಮಾಡಿಲ್ಲ, ರಾಜೀನಾಮೆ‌ ಕೊಡಲ್ಲ; ಎಫ್​​ಐಆರ್​‌ ದಾಖಲಾದ ಬಳಿಕ ಬ್ರಿಜ್ ಭೂಷಣ್ ಸಿಂಗ್ ಪ್ರತಿಕ್ರಿಯೆ

ಧರಣಿ ನಡೆಸುತ್ತಿರುವ ಕುಸ್ತಿಪಟುಗಳು ಆರೋಪಗಳನ್ನು ಪರಿಶೀಲಿಸಲು ನೇಮಕ ಮಾಡಲಾಗಿರುವ ಸಮಿತಿಯ ವರದಿ ಬರುವವರೆಗೂ ಕಾಯಬೇಕಿತ್ತು. ನ್ಯಾಯಾಂಗದ ನಿರ್ಧಾರಕ್ಕೆ ತಲೆಬಾಗುತ್ತೇನೆ. ತನಿಖೆ ನಡೆಯಲಿದೆ. ತನಿಖೆಗೆ ಸಹಕಾರ ನೀಡಲು ಸಿದ್ಧನಿದ್ದೇನೆ. ಸುಪ್ರೀಂಕೋರ್ಟ್​ ನೀಡುವ ನಿರ್ಧಾರ ಸ್ವಾಗತಿಸುತ್ತೇನೆ ಎಂದು ಬ್ರಿಜ್​ ಭೂಷಣ್ (WFI president Brij Bhushan) ಹೇಳಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್​ ಭೂಷಣ್ ಶರಣ್​ ಸಿಂಗ್​
ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್​ ಭೂಷಣ್ ಶರಣ್​ ಸಿಂಗ್​

ಲೈಂಗಿಕ ಕಿರುಕುಳ (Sexual harassment) ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್​ ಸಿಂಗ್ (WFI President Brij Bhushan Sharan Singh) ವಿರುದ್ಧ ಕೊನೆಗೂ ಎರಡು ಪ್ರಕರಣಗಳು ದಾಖಲಾಗಿವೆ. ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ನೇತೃತ್ವದಲ್ಲಿ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್​​ನಲ್ಲಿ ಧರಣಿ (Wrestlers Protest) ನಡೆಸುತ್ತಿದ್ದಾರೆ.‌ ಸದ್ಯ ಎಫ್​​ಐಆರ್​ ದಾಖಲಾದ ಕುರಿತು ಪ್ರತಿಕ್ರಿಯಿಸಿರುವ ಬ್ರಿಜ್​ ಭೂಷಣ್ ಸಿಂಗ್​, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು, ಎರಡು ಎಫ್‌ಐಆರ್‌ ದಾಖಲಿಸಿದ ಒಂದು ದಿನದ ನಂತರ ಪ್ರತಿಕ್ರಿಯಿಸಿದ ಡಬ್ಲ್ಯುಎಫ್‌ಐ ಮುಖ್ಯಸ್ಥರು, ನಾನು ನಿರಪರಾಧಿ ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಉತ್ತರ ನೀಡಿದ್ದಾರೆ. ನಾನು ತನಿಖಾ ಸಂಸ್ಥೆಗೆ ಸಹಕರಿಸಲು ಸಿದ್ಧನಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ನಾನು ಸುಪ್ರೀಂ ಕೋರ್ಟ್‌ನ ಆದೇಶವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಡಬ್ಲ್ಯುಎಫ್‌ಐ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕುಸ್ತಿಪಟುಗಳ ಬೇಡಿಕೆಯ ಕುರಿತು ಮಾತನಾಡಿದ ಬ್ರಿಜ್ ಭೂಷಣ್, ರಾಜೀನಾಮೆ ನೀಡುವುದು ದೊಡ್ಡ ವಿಷಯವಲ್ಲ. ಆದರೆ ನಾನು ಅಪರಾಧಿ ಅಲ್ಲ. ನಾನು ಮುಗ್ಧ (ಇನ್ನೋಸೆಂಟ್​)​. ರಾಜೀನಾಮೆ ನೀಡಿದರೆ, ಅವರ (ಕುಸ್ತಿಪಟುಗಳ) ಆರೋಪಗಳನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಅರ್ಥ. ನನ್ನ ಅಧಿಕಾರಾವಧಿ ಬಹುತೇಕ ಮುಗಿದಿದೆ. ಸರ್ಕಾರವು 3 ಸದಸ್ಯರ ಸಮಿತಿಯನ್ನು ರಚಿಸಿದೆ. 45 ದಿನಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯ ನಂತರ ನನ್ನ ಅವಧಿ ಕೊನೆಗೊಳ್ಳುತ್ತದೆ. ಹಾಗಾಗಿ ರಾಜೀನಾಮೆ ನೀಡಲ್ಲ ಎಂದಿದ್ದಾರೆ.

ಅವರು (ಕುಸ್ತಿಪಟುಗಳು) 12 ವರ್ಷಗಳಿಂದ ಯಾವುದೇ ಪೊಲೀಸ್ ಠಾಣೆ, ಕ್ರೀಡಾ ಸಚಿವಾಲಯ ಅಥವಾ ಫೆಡರೇಶನ್‌ಗೆ ದೂರು ನೀಡಿಲ್ಲ. ಅವರು ಪ್ರತಿಭಟನೆಗೂ ಮುನ್ನ ನನ್ನನ್ನು ಹೊಗಳುತ್ತಿದ್ದರು. ಅವರ ಮದುವೆಗೆ ನನ್ನನ್ನು ಆಹ್ವಾನಿಸಿದ್ದರು. ನನ್ನೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ನನ್ನ ಆಶೀರ್ವಾದ ಪಡೆಯುತ್ತಿದ್ದರು. 12 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದಿದ್ದರೂ, ಈಗ ಹೊಸ ತಗಾದೆ ತೆಗೆದಿದ್ದಾರೆ. ಪ್ರಸ್ತುತ ಈ ವಿಷಯವು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಪೊಲೀಸರ ಅಂಗಳದಲ್ಲಿದ್ದು, ಇವರ ನಿರ್ಧಾರವನ್ನಷ್ಟೇ ಒಪ್ಪಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತಿದಿನ ಅವರು (ಕುಸ್ತಿಪಟುಗಳು) ತಮ್ಮ ಹೊಸ ಬೇಡಿಕೆಗಳೊಂದಿಗೆ ಬರುತ್ತಿದ್ದಾರೆ. ಮೊದಲು ಆರೋಪ, ಬಳಿಕ ಎಫ್‌ಐಆರ್‌ ದಾಖಲಿಸಿ ಎಂದರು. ನಂತರ ನನ್ನನ್ನು ಜೈಲಿಗೆ ಕಳುಹಿಸಬೇಕು. ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನನ್ನ ಕ್ಷೇತ್ರದ ಜನರಿಂದ ಸಂಸದನಾಗಿದ್ದೇನೆಯೇ ಹೊರತು ವಿನೇಶ್ ಫೋಗಟ್‌ನಿಂದಲ್ಲ. ಕೇವಲ ಒಂದು ಕುಟುಂಬವಷ್ಟೇ ಪ್ರತಿಭಟಿಸುತ್ತಿದೆ. ಆದರೆ ಹರಿಯಾಣದ ಶೇ 90% ಆಟಗಾರರು ನನ್ನೊಂದಿಗಿದ್ದಾರೆ ಎಂದು ಹೇಳಿದ್ದಾರೆ.

ನವದೆಹಲಿಯ ಜಂತರ್ ಮಂತರ್​ನಲ್ಲಿ ಪ್ರತಿಭಟನೆ ನಡುವೆ ಮಾತನಾಡಿದ ಕುಸ್ತಿಪಟುಗಳು​​, 'ಎಫ್​ಐಆರ್​​ ದಾಖಲಿಸಿದ್ದು, ನ್ಯಾಯದ ಅನ್ವೇಷಣೆಯಲ್ಲಿ ನಮಗೆ ಸಿಕ್ಕ ಮೊದಲ ಗೆಲುವು ಇದು ಎಂದು ಹೇಳಿದ್ದಾರೆ. ಆದರೆ ಅವರನ್ನು ಬಂಧನಕ್ಕೆ ಒಳಪಡಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಕುಸ್ತಿಪಟುಗಳು ಬೀದಿಗಿಳಿದ 6 ದಿನಗಳ ನಂತರ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಕನ್ನಾಟ್ ಪ್ಲೇಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಿಸಿದ್ದಾರೆ.