WPL Auction 2024: ಹರಾಜಿನಲ್ಲಿ ಆಸೀಸ್-ಇಂಗ್ಲೆಂಡ್ನ ಖಡಕ್ ಆಲ್ರೌಂಡರ್ಸ್ ಖರೀದಿಸಿದ ಆರ್‌ಸಿಬಿ
Dec 09, 2023 04:57 PM IST
ಕೇಟ್ ಕ್ರಾಸ್ ಮತ್ತು ಜಾರ್ಜಿಯಾ ವೇರ್ಹ್ಯಾಮ್.
- Royal Challengers Bangalore: ಮಹಿಳಾ ಪ್ರೀಮಿಯರ್ ಲೀಗ್ನ 2ನೇ ಆವೃತ್ತಿಗೆ ಸಂಬಂಧಿಸಿ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಡಕ್ ಆಲ್ರೌಂಡರ್ಸ್ಗೆ ಮಣೆ ಹಾಕಿದೆ.
ಮಹಿಳಾ ಪ್ರೀಮಿಯರ್ ಲೀಗ್ 2024ರ (Women's Premier League) ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಮುಖ ಆಲ್ರೌಂಡರ್ಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಮೂಲ ಬೆಲೆಗೆ ಇಬ್ಬರನ್ನೂ ಖರೀದಿಸಿ ಗಮನ ಸೆಳೆದಿದೆ. ಚೊಚ್ಚಲ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರ್‌ಸಿಬಿ ಬಲಿಷ್ಠವಾಗಿ ಮರಳಲು ಪ್ರಮುಖರನ್ನೇ ಖರೀದಿಸಿದೆ.
ಆಸ್ಟ್ರೇಲಿಯಾ ತಂಡದ ಸ್ಪಿನ್ ಆಲ್ರೌಂಡರ್ ಜಾರ್ಜಿಯಾ ವೇರ್ಹ್ಯಾಮ್ (Georgia Wareham) ಮತ್ತು ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಆಲ್ರೌಂಡರ್ ಕೇಟ್ ಕ್ರಾಸ್ (Kate Cross) ಅವರು ತಮ್ಮ ಮೂಲ ಬೆಲೆಗೆ ಆರ್‌ಸಿಬಿ ಪಾಲಾಗಿದ್ದಾರೆ.
ಜಾರ್ಜಿಯಾ ಮತ್ತು ಕೇಟ್ ಕ್ರಾಸ್ ಇಬ್ಬರೂ ಸಹ ತಮ್ಮ ದೇಶಗಳ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜಾರ್ಜಿಯಾ 40 ಲಕ್ಷ ಮತ್ತು ಕೇಟ್ 30 ಲಕ್ಷಕ್ಕೆ ಸೇಲ್ ಆಗಿದ್ದಾರೆ. ಇದರೊಂದಿಗೆ ತಂಡದ ಬೌಲಿಂಗ್ಗೆ ಬಲ ತುಂಬಲು ಸಜ್ಜಾಗಿದ್ದಾರೆ.
ಜಾರ್ಜಿಯಾ ವೇರ್ಹ್ಯಾಮ್ ಪ್ರದರ್ಶನ ಹೇಗಿದೆ
24 ವರ್ಷದ ಯುವ ಆಟಗಾರ್ತಿ ಜಾರ್ಜಿಯಾ ತಮ್ಮ ಲೆಗ್ ಬ್ರೇಕ್ ಬೌಲಿಂಗ್ನಿಂದ ಎದುರಾಳಿ ತಂಡಕ್ಕೆ ಕಂಟಕವಾಗಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಮಹಿಳಾ ಬಿಗ್ ಬ್ಯಾಷ್ ಲೀಗ್ ಮತ್ತು ಹಂಡ್ರೆಡ್ ಲೀಗ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಅಲ್ಲದೆ, ಉದ್ಘಾಟನಾ ಆವೃತ್ತಿಯಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರ ಆಡಿದ್ದ ಆಸೀಸ್ ಆಟಗಾರ್ತಿ ಈ ಬಾರಿ ಬೆಂಗಳೂರು ಸೇರಿದ್ದಾರೆ. ಆದರೆ ಮೊದಲ ಡಬ್ಲ್ಯುಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಗುಜರಾತ್ ತಂಡದಿಂದ ಕೈಬಿಟ್ಟಿತ್ತು.
ಆಕೆ ಈವರೆಗೂ 46 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 44 ವಿಕೆಟ್ ಉರುಳಿಸಿದ್ದಾರೆ. 6.23ರ ಬೌಲಿಂಗ್ ಎಕಾನಮಿ ಹೊಂದಿರುವ ಯುವ ಆಲ್ರೌಂಡರ್, ಬೌಲಿಂಗ್ ಸರಾಸರಿ ಹೊಂದಿದ್ದಾರೆ.
ಕೇಟ್ ಕ್ರಾಸ್ ಪ್ರದರ್ಶನ ಹೇಗಿದೆ?
ಇಂಗ್ಲೆಂಡ್ ತಂಡದ ಅನುಭವಿ ಆಟಗಾರ್ತಿ ಕೇಟ್ ಕ್ರಾಸ್, ಆರ್ಸಿಬಿಗೆ ಹೊಸ ಭರವಸೆ ಮೂಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಡಿಮೆ ಟಿ20ಗಳನ್ನು ಆಡಿದ್ದರೂ ಏಕದಿನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಮಹಿಳಾ ಬಿಗ್ ಬ್ಯಾಷ್ ಲೀಗ್ ಮತ್ತು ಹಂಡ್ರೆಡ್ ಲೀಗ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 32 ವರ್ಷದ ಆಟಗಾರ್ತಿ ಕಳೆದ ಬಾರಿಯ ಮಹಿಳೆಯರ ಮೆಗಾ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು.
ಈವರೆಗೂ 16 ಟಿ20 ಪಂದ್ಯಗಳನ್ನಾಡಿದ್ದು, 11 ವಿಕೆಟ್ ಪಡೆದಿದ್ದಾರೆ. ಆದರೆ ಏಕದಿನದಲ್ಲಿ 59 ಪಂದ್ಯಗಳಲ್ಲಿ 79 ವಿಕೆಟ್ ಉರುಳಿಸಿದ್ದಾರೆ. ಲೈನ್ ಅಂಡ್ ಲೆಂಗ್ತ್ ಬೌಲಿಂಗ್ ಅದ್ಭುತವಾಗಿದ್ದು, ಕಡಿಮೆ ರನ್ಗಳನ್ನೂ ರಕ್ಷಿಸಿಕೊಳ್ಳುವ ಸಾಮರ್ಥ್ಯ ಅವರಿಗಿದೆ.
ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರ್ತಿಯರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರೇಣುಕಾ ಸಿಂಗ್, ಶ್ರೇಯಾಂಕಾ ಪಾಟೀಲ್, ರಿಚಾ ಘೋಷ್, ಇಂದ್ರಾಣಿ ರಾಯ್, ಕನಿಕಾ ಅಹುಜಾ.
ಬಿಡುಗಡೆಯಾದ ಆಟಗಾರ್ತಿಯರು: ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶುಟ್, ಸಹನಾ ಪವಾರ್, ಪೂನಮ್ ಖೇಮ್ನಾರ್, ಪ್ರೀತಿ ಬೋಸ್.