ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭುವನೇಶ್ವರ್ ಆಯ್ಕೆ ಮಾಡಬೇಕಿತ್ತು; ಕಾರಣ ವಿವರಿಸಿದ ಆಶಿಶ್ ನೆಹ್ರಾ
Dec 03, 2023 03:11 PM IST
ಭುವನೇಶ್ವರ್ ಕುಮಾರ್
- IND vs RSA: ದಕ್ಷಿಣ ಆಫ್ರಿಕಾ ಪ್ರವಾಸದಿಂದ ಭುವನೇಶ್ವರ್ ಕುಮಾರ್ ಸ್ಥಾನ ಕಳೆದುಕೊಂಡಿದ್ದಕ್ಕೆ ಆಶಿಶ್ ನೆಹ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹರಿಣಗಳ ವಿರುದ್ಧದ ಸರಣಿಗೆ ವೇಗಿ ಆಯ್ಕೆಯಾಗಬೇಕಿತ್ತು ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ಎಲ್ಲಾ ಮೂರು ಸ್ವರೂಪದ ಸರಣಿಗಾಗಿ ಭಿನ್ನ ತಂಡಗಳನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವೈಟ್-ಬಾಲ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಅತ್ತ ಸೂರ್ಯಕುಮಾರ್ ಯಾದವ್ ಟಿ20 ಸರಣಿಯಲ್ಲಿ ತಮ್ಮ ನಾಯಕತ್ವ ಉಳಿಸಿಕೊಂಡಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ಏಕದಿನ ಸ್ವರೂಪದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಾಹಲ್ ಇಬ್ಬರೂ ತಂಡಕ್ಕೆ ಮರಳಿದ್ದಾರೆ. ಇದನ್ನು ಹೊರತುಪಡಿಸಿ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳು ಕಾಣಿಸಿಲ್ಲ. ಈ ನಡುವೆ ಕೆಲವು ಆಟಗಾರರು ತಂಡದಲ್ಲಿ ಕಾಣಿಸಿಕೊಳ್ಳದೆ ಅಚ್ಚರಿ ಮೂಡಿಸಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯಬೇಕಿದ್ದ ಆಟಗಾರ ಇದ್ದರೆ ಅದು ಭುವನೇಶ್ವರ್ ಕುಮಾರ್ ಎಂದು ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | ದಕ್ಷಿಣ ಆಫ್ರಿಕಾ ವಿರುದ್ಧದ ಟಿ20, ಏಕದಿನ ಸರಣಿಗೆ ಕೊಹ್ಲಿ-ರೋಹಿತ್ ಲಭ್ಯವಾಗಿಲ್ಲ, ಏಕೆ; ಕಾರಣ ತಿಳಿಸಿದ ಬಿಸಿಸಿಐ
ಈ ಹಿಂದೆ ಸೀಮಿತ ಓವರ್‌ಗಳಲ್ಲಿ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದ ವೇಗಿ ಭುವನೇಶ್ವರ್, ಸತತ ಅಸ್ಥಿರ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡರು. ಆ ಬಳಿಕ ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂಥ ವೇಗಿಗಳು ಮುನ್ನೆಲೆಗೆ ಬಂದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಮೊದಲ ಆಯ್ಕೆಯ ವೇಗಿಗಳಾಗಿ ಮಿಂಚುತ್ತಿರುವುದರಿಂದ ಭುವನೇಶ್ವರ್ ಸ್ಥಾನ ವಂಚಿತರಾದ್ರು.
ಸ್ವಿಂಗ್ ಸ್ಪೆಷಲಿಸ್ಟ್ ಬಲಗೈ ವೇಗಿ ಭುವಿ, ಹೊಸ ಚೆಂಡಿನೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬಹುದು ಎಂದು ನೆಹ್ರಾ ನಂಬಿದ್ದಾರೆ. “ನನಗೆ ಒಂದು ಹೆಸರು ಮನಸ್ಸಿಗೆ ಬರುತ್ತದೆ. ದಕ್ಷಿಣ ಆಫ್ರಿಕಾಗೆ ಹೋಗುತ್ತಿದ್ದೀರಿ ಎಂದಾಗ ಸಾಕಷ್ಟು ವೇಗಿಗಳನ್ನು ಆಯ್ಕೆ ಮಾಡಿರಬೇಕು. ಅವರಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖರು. ತಂಡದಲ್ಲಿ ಬೇರೆ ಹೊಸ ಬಾಲ್ ಆಯ್ಕೆಗಳು ಕೂಡಾ ಇವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅರ್ಷದೀಪ್ ಸಿಂಗ್ , ಮುಖೇಶ್ ಕುಮಾರ್ ಆಡುತ್ತಿದ್ದಾರೆ,” ಎಂದು ಆಶಿಶ್ ನೆಹ್ರಾ ಜಿಯೋ ಸಿನಿಮಾದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ | ವಿಶ್ವಕಪ್ ಆಡಿದ್ದ 12 ಆಟಗಾರರಿಗಿಲ್ಲ ಏಕದಿನ ತಂಡದಲ್ಲಿ ಸ್ಥಾನ; ಒಡಿಐ ಸರಣಿಗೆ ಬಹುತೇಕ ಹೊಸಬರಿಗೆ ಮಣೆ
“ವೈಟ್ ಬಾಲ್ ಕ್ರಿಕೆಟ್‌ಗೆ ಬಂದಾಗ ಭುವಿ ಯಾವುದೇ ತಂಡದಲ್ಲಿ ಹೊಂದಿಕೊಳ್ಳುತ್ತಾರೆ. ಚೆನ್ನಾಗಿ ಬೌಲಿಂಗ್ ಮಾಡುವಾಗ ಅವರ ಕೌಶಲ್ಯ ಮತ್ತು ಅನುಭವದ ವಿಷಯದಲ್ಲಿ ಯಾವುದೇ ಕೊರತೆಯಿಲ್ಲ. ಅವರು ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿಲ್ಲ ಎಂಬುದು ಬೇರೆ ವಿಷಯ. ಆದರೆ ಅವರನ್ನು ಆಯ್ಕೆಯಾಗಿ ಇಟ್ಟುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.
ಭುವನೇಶ್ವರ್ ಕಳೆದ ವರ್ಷ ಭಾರತದ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು. 2022ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಕೊನೆಯ ಬಾರಿಗೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು.