ಶತಕೋಟಿ ಭಾರತೀಯರ ವಿಶ್ವಕಪ್ ಕನಸು ನುಚ್ಚು ನೂರು; ಫೈನಲ್‌ನಲ್ಲಿ ಭಾರತ ಮಣಿಸಿ 6ನೇ ಟ್ರೋಫಿಗೆ ಮುತ್ತಿಟ್ಟ ಆಸೀಸ್
Nov 19, 2023 09:35 PM IST
ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್
- India vs Australia: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿಶ್ವಕಪ್ ಗೆಲುವನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಲಕ್ಷ ಲಕ್ಷ ಜನರು ಸ್ಮಶಾನಮೌನಕ್ಕೆ ಶರಣಾಗಿದ್ದಾರೆ. ತವರಿನ ಅಭಿಮಾನಿಗಳ ಮುಂದೆ ಮೂರನೇ ವಿಶ್ವಕಪ್ ಟ್ರೋಫಿ ಗೆಲ್ಲುವ ಭಾರತದ ಕನಸಿಗೆ ಆಸೀಸ್ ಅಡ್ಡಿಯಾಗಿದೆ.
ಶತಕೋಟಿ ಭಾರತೀಯರ ವಿಶ್ವಕಪ್ ಕನಸಿಗೆ ಆಸ್ಟ್ರೇಲಿಯಾ ಎಳ್ಳು ನೀರು ಬಿಟ್ಟಿದೆ. ಬರೋಬ್ಬರಿ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ಅಜೇಯವಾಗಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಎಡವಿದೆ. ಸತತ 10 ಗೆಲುವುಗಳ ಬಳಿಕ ತವರಿನಲ್ಲೇ ನಡೆಯುತ್ತಿರುವ ಟೂರ್ನಿಯಲ್ಲಿ 3ನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಬೇಕಿದ್ದ ಅಂತಿಮ ಪಂದ್ಯದಲ್ಲಿ ಸೋಲೊಪ್ಪಿದೆ. ಹತಾಶೆ, ನಿರಾಶೆ, ಬೇಸರ ಎಲ್ಲವೂ ಟೀಮ್ ಇಂಡಿಯಾ ಆಟಗಾರರ ಮುಖದಲ್ಲಿ ಮಾತ್ರವಲ್ಲದೆ ದೇಶದ ಕೋಟಿ ಕೋಟಿ ಸಂಖ್ಯೆಯ ಅಭಿಮಾನಿಗಳಲ್ಲಿಯೂ ಮನೆ ಮಾಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿಶ್ವಕಪ್ ಗೆಲುವಿಗಾಗಿ ನೀಲವರ್ಣದ ಜೆರ್ಸಿ ತೊಟ್ಟು ಸೇರಿದ್ದ ಬರೋಬ್ಬರಿ 1.3 ಲಕ್ಷ ಜನಸಾಗರವು ಅಕ್ಷರಶಃ ಸ್ಮಶಾನಮೌನಕ್ಕೆ ಶರಣಾಗಿದೆ. ಟ್ರಾವಿಸ್ ಹೆಡ್ ಸ್ಫೋಟಕ ಶತಕ ಮತ್ತು ಲಬುಶೇನ್ ಜೊತೆಗಿನ ದಾಖಲೆಯ ಜೊತೆಯಾಟದ ನೆರವಿನಿಂದ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡವು 6 ವಿಕೆಟ್‌ಗಳಿಂದ ಗೆದ್ದಿದೆ. ಬೌಲಿಂಗ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮೂರರಲ್ಲೂ ಭಾರತಕ್ಕಿಂತ ಉತ್ತಮವಾಗಿ ಆಡಿದ ಪ್ಯಾಟ್ ಕಮಿನ್ಸ್ ಪಡೆಯು 6ನೇ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 240 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಲಷ್ಟೇ ಶಕ್ತವಾಯ್ತು. ಭಾರತದ ಪರ ವಿರಾಟ್ ಕೊಹ್ಲಿ (54), ಕೆಎಲ್ ರಾಹುಲ್ (66) ಅರ್ಧಶತಕ ಸಿಡಿಸಿ ಮಿಂಚಿದರು. ಸಾಧಾರಣ ಮೊತ್ತ ಬೆನ್ನಟ್ಟಿದ ಆಸೀಸ್, ಟ್ರಾವಿಸ್ ಹೆಡ್ ಶತಕ ಹಾಗೂ ಲಬುಶೇನ್ ಜೊತೆಗಿನ 192 ರನ್‌ಗಳ ಜೊತೆಯಾಟದ ನೆರವಿನಿಂದ ಕೇವಲ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ ಗೆದ್ದು ಬೀಗಿತು.
ಭಾರತದ ಉತ್ತಮ ಆರಂಭ
ಸಾಧಾರಣ ಮೊತ್ತ ಬೆನ್ನಟ್ಟಲು ಮೈದಾನಕ್ಕಿಳಿದ ಆಸ್ಟ್ರೇಲಿಯಾ, ಬುಮ್ರಾ ಎಸೆದ ಮೊದಲ ಓವರ್‌ನಲ್ಲೇ 15 ರನ್ ರನ್ ಕಲೆ ಹಾಕಿತು. ಆದರೆ, ಎರಡನೇ ಓವರ್‌ನಲ್ಲಿಯೇ ಭಾರತಕ್ಕೆ ಆಪದ್ಬಾಂಧವ ಶಮಿ ಮುನ್ನಡೆ ತಂದುಕೊಟ್ಟರು. 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ವಿಕೆಟ್ ಪಡೆದು ಆಸೀಸ್‌ಗೆ ಆಘಾತವಿತ್ತರು. ಅದಾದ ಕೆಲವೇ ಹೊತ್ತಿನಲ್ಲಿ 15 ರನ್ ಗಳಿಸಿದ ಮಿಚೆಲ್ ಮಾರ್ಷ್ ಕೂಡಾ ಬುಮ್ರಾ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಏಳನೇ ಓವರ್‌ನ ಕೊನೆಯ ಎಸೆತದಲ್ಲಿ 4 ರನ್ ಗಳಿಸಿದ್ದ ಸ್ಟೀವ್ ಸ್ಮಿತ್ ಅವರನ್ನು ಬುಮ್ರಾ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು.
ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಕಾಡಿದ್ದ ಹೆಡ್ ಮತ್ತೆ ಭಾರತವನ್ನು ಕಾಡಿದರು
ಒಂದು ಹಂತದಲ್ಲಿ 47 ರನ್ ವೇಳೆಗೆ 3 ವಿಕೆಟ್ ಕಳೆದುಕೊಂಡಿದ್ದ ಆಸೀಸ್, ಇನ್ನೇನು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ವಿಕೆಟ್ ಕಳೆದುಕೊಳ್ಳುತ್ತದೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋಲಿಗೆ ಕಾರಣರಾಗಿದ್ದ ಟ್ರಾವಿಸ್ ಹೆಡ್, ಇಂದಿನ ಪಂದ್ಯದಲ್ಲೂ ಭಾರತಕ್ಕೆ ಮುಳುವಾದರು. ನೋಡನೋಡುತ್ತಲೇ ಶತಕ ಸಿಡಿಸಿ ಅಬ್ಬರಿಸಿದ ಅವರು, ತಂಡದ ಗೆಲುವಿಗೆ ಕಾರಣರಾದರು. ಅವರಿಗೆ ಉತ್ತಮ ಸಾಥ್ ನೀಡಿದ ಮಾರ್ನಸ್ ಲಬುಶೇನ್ ಕೂಡಾ ಆಕರ್ಷಕ ಜೊತೆಯಾಟವಾಡಿದರು. ಇವರಿಬ್ಬರ ಬ್ಯಾಟ್‌ನಿಂದ 192 ರನ್‌ಗಳ ಅಮೂಲ್ಯ ಜೊತೆಯಾಟ ಬಂದಿತು. ಈ ಜೊತೆಯಾಟ ಭಾರತದ ಸೋಲಿಗೆ ಕಾರಣವಾಯ್ತು.
ಭಾರತದ ನೀರಸ ಬ್ಯಾಟಿಂಗ್
ಭಾರತದ ಬ್ಯಾಟಿಂಗ್ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಕೇವಲ 4 ರನ್ ಗಳಿಸಿ ಶುಭ್ಮನ್ ಗಿಲ್ ಔಟಾದರು. ಏಂದಿನಂತೆ ಅಬ್ಬರಿಸಿದ ನಾಯಕ ರೋಹಿತ್ ಶರ್ಮಾ, 31 ಎಸೆತಗಳಲ್ಲಿ4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 47 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ಕೂಡಾ ತಂಡಕ್ಕೆ ನೆರವಾಗಲಿಲ್ಲ. ಬಂದಷ್ಟೇ ವೇಗವಾಗಿ 4 ಗಳಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಜೊತೆಯಾಟವಾಡಿದರು. ಇವರಿಬ್ಬರು 4ನೇ ವಿಕೆಟ್‌ಗೆ 109 ಎಸೆತಗಳಲ್ಲಿ 67 ರನ್ ಪೇರಿಸಿದರು.
ಈ ವೇಳೆ ಕೊಹ್ಲಿ 72ನೇ ಏಕದಿನ ಅರ್ಧಶತಕ ಸಿಡಿಸಿದರು. ಆ ಬೆನ್ನಲ್ಲೇ 54 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಬೋಲ್ಡ್ ಆದರು. ಬಳಿಕ ಕಣಕ್ಕಿಳಿದ ರವೀಂದ್ರ ಜಡೇಜಾ 9 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಒಂದೆಡೆ ವಿಕೆಟ್ಗಳು ಉರುಳಿತ್ತಿದ್ದರೂ ರಾಹುಲ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತವನ್ನು ಹೆಚ್ಚಿಸುವ ಜವಾಬ್ದಾರಿ ಹೊತ್ತರು. ಅಂತಿಮವಾಗಿ ಅವರು 107 ಎಸೆತಗಳಲ್ಲಿ 66 ರನ್ ಸಿಡಿಸಿ ಔಟಾದರು.