ಬಾಬರ್ ಅಜಮ್-ಇಮಾದ್ ವಾಸಿಮ್ ನಡುವೆ ವಾಗ್ವಾದ; ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಶಿಬಿರದಲ್ಲಿ ಬಿರುಕಿನ ಸುಳಿವು
May 07, 2024 08:26 PM IST
ಬಾಬರ್ ಅಜಮ್-ಇಮಾದ್ ವಾಸಿಮ್ ನಡುವೆ ವಾಗ್ವಾದ ವಿಡಿಯೋ ವೈರಲ್
- ಪಾಕಿಸ್ತಾನ ಕ್ರಿಕೆಟ್ ತಂಡದ ಇಬ್ಬರು ಪ್ರಮುಖ ಆಟಗಾರರಾದ ಇಮಾದ್ ವಾಸಿಮ್ ಹಾಗೂ ಬಾಬರ್ ಅಜಮ್ ನಡುವೆ ಭಿನ್ನಾಭಿಪ್ರಾಯ ಇರುವುದು ಮತ್ತೆ ಸಾಬೀತಾಗಿದೆ. ಉಭಯ ಆಟಗಾರರ ನಡುವೆ ನಡೆದಿದೆ ಎನ್ನಲಾದ ವಾಗ್ವಾದದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಇಮಾದ್ ವಾಸಿಮ್, ನಾಯಕ ಬಾಬರ್ ಅಜಮ್ ಅವರನ್ನು ಉತ್ತಮ ಸ್ನೇಹಿತ ಎಂದು ಹೇಳಿದ ಕೆಲವೇ ದಿನಗಳೊಳಗೆ ಉಭಯ ಆಟಗಾರರ ನಡುವೆ ಜಗಳ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ಇಬ್ಬರು ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಮಾಧ್ಯಮ ವರದಿಗಳು ಬಿತ್ತರವಾದ ಬಳಿಕ, ಇಮಾದ್ ಆ ವದಂತಿಗಳನ್ನು ತಳ್ಳಿಹಾಕಿದ್ದರು. ನಾವಿಬ್ಬರು ಉತ್ತಮ ಸ್ನೇಹಿತರು ಎಂದಿದ್ದರು. ಸದ್ಯ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಸಿದ್ಧತೆ ನಡೆಸುತ್ತಿದೆ. ಈ ಸಮಯದಲ್ಲಿ ಈ ಇಬ್ಬರು ಆಟಗಾರರು ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ.
ಜೂನ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ಪಾಕ್ ತಂಡ ಎರಡು ಸರಣಿಗಳಲ್ಲಿ ಆಡುತ್ತಿದೆ. ಆದರೆ ವಿಶ್ವಸಮರಕ್ಕೂ ಮುಂಚಿತವಾಗಿ ವೈರಲ್ ಆಗಿರುವ ಈ ವಿಡಿಯೋ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಚಿಂತೆ ಹೆಚ್ಚಿಸಿದೆ. ಇದೇ ವೇಳೆ ಅಭಿಮಾನಿಗಳಲ್ಲಿ ಆತಂಕ ಹುಟ್ಟುಹಾಕಿದೆ.
ಮೇ 6ರ ಸೋಮವಾರ ಸಂಜೆ ನಡೆದಿದೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂಡದ ಸಹ ಆಟಗಾರರಾದ ಶಾಹೀನ್ ಅಫ್ರಿದಿ ಹಾಗೂ ಇತರ ಪಾಕಿಸ್ತಾನ ತಂಡದ ಆಟಗಾರರ ಸಮ್ಮುಖದಲ್ಲಿಯೇ ಬಾಬರ್ ಮತ್ತು ಇಮಾದ್ ವಾಗ್ವಾದದಲ್ಲಿ ತೊಡಗಿದ್ದಾರೆ. ಟಿ20 ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಗೆ ಲಭ್ಯವಿರಲು ಇಮಾದ್ ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದರು.
ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಭಯೋತ್ಪಾದಕ ದಾಳಿ ಬೆದರಿಕೆ; ವೆಸ್ಟ್ ಇಂಡೀಸ್‌ನಲ್ಲಿ ಕಟ್ಟೆಚ್ಚರ, ಐಸಿಸಿ ಪ್ರತಿಕ್ರಿಯೆ
“ನಮ್ಮ ನಡುವೆ ಏನೂ ಆಗಿಲ್ಲ. ನಾನು, ಬಾಬರ್ ಮತ್ತು ಅಮೀರ್ ಉತ್ತಮ ಸ್ನೇಹಿತರು. ನಾವು ನಮ್ಮ ನಾಯಕನಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಬಾಬರ್ ಅಜಮ್ ನಾಯಕತ್ವದಲ್ಲಿ 2024ರ ಟಿ20 ವಿಶ್ವಕಪ್ ಗೆಲ್ಲಲು ಬಯಸುತ್ತೇವೆ” ಎಂದು ಇಮಾದ್ ಹೇಳಿದ್ದರು.
ವೈರಲ್ ವಿಡಿಯೋ ಇಲ್ಲಿದೆ
ವಿಶ್ವಕಪ್ ಸಮರಕ್ಕೂ ಮುನ್ನ ಮೇ 10ರಿಂದ ಐರ್ಲೆಂಡ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ತಂಡ ಸಜ್ಜಾಗುತ್ತಿದೆ. ಆ ಬಳಿಕ ಮೇ 12 ಮತ್ತು 14ರಂದು ನಂತರದ ಪಂದ್ಯಗಳು ನಡೆಯಲಿವೆ. ಆ ಬಳಿಕ ಮೇ 22ರಿಂದ 30ವರೆಗೆ ನಡೆಯಲಿರುವ ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೆಣಸಲಿದೆ. ಅಲ್ಲಿಂದ ವಿಶ್ವಕಪ್ ಆಡಲು ಯುಎಸ್ಎಗೆ ತೆರಳಲಿದೆ.
ಪಾಕಿಸ್ತಾನ ತಂಡವು ಜೂನ್ 6ರಂದು ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಹ-ಆತಿಥೇಯ ಯುಎಸ್ಎ ವಿರುದ್ಧ ಆರಂಭಿಸಲಿದೆ. ಆ ಬಳಿಕ ಜೂನ್ 9ರಂದು ಇದೇ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಂ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಸೈಮ್ ಅಯೂಬ್, ಸಲ್ಮಾನ್ ಅಯೂಬ್ , ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.