logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅಗ್ರ ಕ್ರಮಾಂಕದಲ್ಲಿ ಶತಕ ಸಿಡಿಸುವ ಅವಕಾಶ ಹೆಚ್ಚು; ಸಾಯಿ ಸುದರ್ಶನ್ ಪ್ರತಿಭೆ ಕುರಿತು ಸುನಿಲ್ ಗವಾಸ್ಕರ್ ಮಾತು

ಅಗ್ರ ಕ್ರಮಾಂಕದಲ್ಲಿ ಶತಕ ಸಿಡಿಸುವ ಅವಕಾಶ ಹೆಚ್ಚು; ಸಾಯಿ ಸುದರ್ಶನ್ ಪ್ರತಿಭೆ ಕುರಿತು ಸುನಿಲ್ ಗವಾಸ್ಕರ್ ಮಾತು

Jayaraj HT Kannada

Dec 21, 2023 04:04 PM IST

google News

ಸುನಿಲ್‌ ಗವಾಸ್ಕರ್

    • Sunil Gavaskar: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಉದಯೋನ್ಮುಖ ಆಟಗಾರ ಸಾಯಿ ಸುದರ್ಶನ್‌ ಆಟವನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.
ಸುನಿಲ್‌ ಗವಾಸ್ಕರ್
ಸುನಿಲ್‌ ಗವಾಸ್ಕರ್ (PTI)

ದಕ್ಷಿಣ ಆಫ್ರಿಕಾ ವಿರುದ್ಧದ (South Africa vs India) ಮೊದಲ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವ ಬ್ಯಾಟರ್ ಸಾಯಿ ಸುದರ್ಶನ್ (Sai Sudharsan) ಪದಾರ್ಪಣೆ ಮಾಡಿದರು. ಸರಣಿಯ ಸತತ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಸ್ಥಿರ ಪ್ರದರ್ಶನ ಮುಂದುವರೆಸಿದರು. ಅಲ್ಲದೆ ದಿಗ್ಗಜ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಮಾತ್ರ ಮಾಡಿದ್ದ ವಿಶೇಷ ದಾಖಲೆಯನ್ನು ಪುನರಾವರ್ತಿಸಿದರು.

ಹರಿಣಗಳ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಪರ 50 ರನ್‌ ಗಡಿ ದಾಟಿದವರು ಇಬ್ಬರು ಮಾತ್ರ. ಅವರಲ್ಲಿ ಅಗ್ರಕ್ರಮಾಂಕದ ಬ್ಯಾಟರ್‌ ಸಾಯಿ ಸುದರ್ಶನ್ ಮೊದಲಿಗರಾದರೆ, ನಾಯಕ ಕೆಎಲ್ ರಾಹುಲ್ ಎರಡನೆಯವರು. ಆದರೂ, ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲೊಪ್ಪಿತು.

ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಪರ ಆಡುವ ಸುದರ್ಶನ್, ಆಯ್ಕೆದಾರರ ಮನಗೆದ್ದು ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅದರ ಬೆನ್ನಲ್ಲೇ ಉತ್ತಮ ಪ್ರದರ್ಶನದೊಂದಿಗೆ ಹಿರಿಯ ಕ್ರಿಕೆಟಿರ ಮನಗೆದ್ದಿದ್ದಾರೆ. ಅವರಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಒಬ್ಬರು. 2ನೇ ಏಕದಿನ ಪಂದ್ಯದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ ಸುದರ್ಶನ್‌ ಕುರಿತು ಮಾತನಾಡಿದ ಸನ್ನಿ, ಸಾಯಿ ಅವರ ಮನೋಧರ್ಮ ಮತ್ತು ಬ್ಯಾಟಿಂಗ್‌ ಪ್ರತಿಭೆಯಿಂದ ಪ್ರಭಾವಿತನಾಗಿರುವುದಾಗಿ ಹೇಳಿಕೊಂಡಿದ್ದಾರೆ.

“ಹೌದು, ಆತ ತುಂಬಾ ಚೆನ್ನಾಗಿ ಆಡುತ್ತಾನೆ. ತನ್ನ ದೇಹಕ್ಕೆ ಹತ್ತಿರವಾಗಿ ಆಡುತ್ತಾನೆ. ಆಡುವಾಗ ಸಮತೋಲನ ಕಾಯ್ದುಕೊಂಡು ಬ್ಯಾಟ್‌ ಬೀಸುವುದು ತುಂಬಾ ಒಳ್ಳೆಯದು. ಡ್ರೈವ್‌ ಆಡುವಾಗಲೂ ಚೆನ್ನಾಗಿ ಆಡುತ್ತಾನೆ. ಎಡಗೈ ಆಟಗಾರರು ತುಂಬಾ ಸೊಗಸಾಗಿ ಆಡಬಲ್ಲರು. ಅದರಲ್ಲೂ ಪುಲ್ ಶಾಟ್ ಕೂಡ ಚೆನ್ನಾಗಿ ಹೊಡೆಯಬಹುದು. ಆತನಲ್ಲಿ ಒಳ್ಳೆಯ ಮನೋಧರ್ಮ ಮತ್ತು ಉತ್ತಮ ಪ್ರತಿಭೆ ಇದೆ” ಎಂದು ಗವಾಸ್ಕರ್ ಹೇಳಿದ್ದಾರೆ.

ಅರ್ಧಶತಕದಿಂದ ಆತ ತೃಪ್ತನಾಗಿಲ್ಲ

ಯುವ ಎಡಗೈ ಆಟಗಾರನು 50 ಮತ್ತು 60ರ ರನ್‌ಗಳಿಂದ ತೃಪ್ತನಾಗಿಲ್ಲ. ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುತ್ತಾನೆ ಎಂದು ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

“ಆತ ಈ ಮೊತ್ತದಿಂದ ತೃಪ್ತನಾಗಿಲ್ಲ ಎಂಬುದು ನನಗೆ ಖಾತ್ರಿಯಿದೆ. ಯಾರು ಕೂಡಾ 50 ಅಥವಾ 60 ರನ್‌ ಗಳಿಸಿ ಔಟ್ ಆಗಲು ಬಯಸುವುದಿಲ್ಲ. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದಾಗ, ಪ್ರತಿ ಬಾರಿಯೂ ಶತಕ ಗಳಿಸುವ ಅವಕಾಶ ಇರುತ್ತದೆ. ಹಾಗಾಗಿ ಅವರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಅಗ್ರಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಜೊತೆಗೆ ಯಾರು ಪಾಲುದಾರರಾಗುತ್ತಾರೆ ಎಂಬುದರ ಕುರಿತು ಮಾತ್ರ ಜನರು ಮಾತನಾಡುವಂತೆ ಆಗುತ್ತದೆ” ಎಂದು ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ | ಪದಾರ್ಪಣೆ ಬಳಿಕ ಸತತ 2 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್; ಈ ಸಾಧನೆ ಮಾಡಿದ ಎರಡನೇ ಭಾರತೀಯ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸುದರ್ಶನ್‌, ಸತತ ಎರಡು ಪಂದ್ಯಗಳಲ್ಲಿಯೂ ಅರ್ಧಶತಕ ಸಿಡಿಸಿದ್ದಾರೆ. ಆ ಮೂಲಕ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತ ಅರ್ಧಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್‌ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮಾತ್ರ ಈ ಸಾಧನೆ ಮಾಡಿದ್ದರು. 1987ರಲ್ಲಿ ತಮ್ಮ ಮೊದಲ ನಾಲ್ಕು ಏಕದಿನ ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಸಿಡಿಸುವ ಮೂಲಕ ಸಿಧು ದಾಖಲೆ ಮಾಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ