ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ಗೆ ಮೊದಲ ಜಯ
Aug 25, 2023 06:10 PM IST
ಬೆಂಗಳೂರು ಬ್ಲಾಸ್ಟರ್ಸ್ಗೆ ಮೊದಲ ಜಯ
- Maharaja Trophy KSCA T20 2023: ಮಹಾರಾಜ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಮೊದಲ ಜಯ ಸಾಧಿಸಿದೆ. ಮೈಸೂರು ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಮಣಿಸಿ ಜಯದ ರುಚಿ ನೋಡಿದೆ.
ಮಹಾರಾಜ ಟ್ರೋಫಿ (Maharaja Trophy KSCA T20 2023) ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters) ತಂಡವು ಕೊನೆಗೂ ಮೊದಲ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಾರಾಜ ಟ್ರೋಫಿಯ 25ನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಯು ಮೈಸೂರು ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿದೆ. ಸತತ ಎಂಟು ಪಂದ್ಯಗಳನ್ನು ಸೋತ ಬಳಿಕ ಇದು ತಂಡದ ಮೊದಲನೇ ಗೆಲುವು.
ರಾಜ್ಯದ ಪ್ರತಿಷ್ಠಿತ ಟಿ20 ಟೂರ್ನಿಯಿಂದ ಈಗಾಗಲೇ ಎಲಿಮನೇಟ್ ಆಗಿರುವ ಬೆಂಗಳೂರು ಬ್ಲಾಸ್ಟರ್ಸ್, ಗೆಲುವಿನ ರುಚಿ ಕಾಣದೆ ಸಪ್ಪೆಯಾಗಿತ್ತು. ಇಂದು ಭರ್ಜರಿ ಪ್ರದರ್ಶನ ನೀಡಿದ ತಂಡವು, ನಾಯಕ ಮಯಾಂಕ್ ಅಗರ್ವಾಲ್ ಶತಕದ ನೆರವಿನಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 212 ರನ್ ಕಲೆ ಹಾಕಿತು. ಭರ್ಜರಿ ಗುರಿ ಬೆನ್ನಟ್ಟಿದ ತಂಡವು ಉತ್ತಮ ಆರಂಭದ ಹೊರತಾಗಿಯೂ 8 ವಿಕೆಟ್ ಕಳೆದುಕೊಂಡು 202 ರನ್ ಗಳಿಸಲಷ್ಟೇ ಶಕ್ತವಾಯ್ತು.
ಬೆಂಗಳೂರು ಪರ ಶತಕ ಸಿಡಿಸಿ ಮಯಾಂಕ್, ಕೇವಲ 57 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿದರು.
ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಮೈಸೂರು ತಂಡವು ಆರಂಭಿಕ ಯಶಸ್ಸು ಕಂಡಿತು. ಪವರ್‌ಪ್ಲೇನಲ್ಲಿ 88 ರನ್‌ಗಳು ಹರಿದುಬಂದವು. ಮೈಸೂರು ಪರ ಆರಂಭಿಕರಾದ ಸಮರ್ಥ್ 35 ರನ್ ಗಳಿಸಿದರೆ, ಪದಾರ್ಪಣೆ ಪಂದ್ಯದಲ್ಲೇ ಕಾರ್ತಿಕ್ 70 ರನ್ ಪೇರಿಸಿದರು. ಇವರಿಬ್ಬರೂ 200ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ನಾಯಕ ಕರುಣ್ ನಾಯರ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 32 ರನ್ ಗಳಿಸಿ ಔಟಾದರು.
ಪಂದ್ಯ ಸೋತರೂ ಮೈಸೂರು ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 9 ಪಂದ್ಯಗಳನ್ನು ಆಡಡಿರುವ ತಂಡವು 5ರಲ್ಲಿ ಗೆದ್ದು 4ರಲ್ಲಿ ಸೋತಿದೆ. ಮುಂದೆ ಆಗಸ್ಟ್ 26ರಂದು ನಡೆಯುವ ಪಂದ್ಯದಲ್ಲಿ ತಂಡವು ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು ಎದುರಿಸುತ್ತಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ (Gulbarga Mystics) ವಿರುದ್ಧ ಬೆಂಗಳೂರು 5 ವಿಕೆಟ್ಗಳ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಬೆಂಗಳೂರು ಬ್ಲಾಸ್ಟರ್ಸ್, 19.3 ಓವರ್‌ಗಳಲ್ಲಿ ಕೇವಲ 113 ರನ್ ಗಳಿಸಿ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ ಗುಲ್ಬರ್ಗಾ ತಂಡವು, 14.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇನ್ನಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ