ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್; ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್ ರಾಯಲ್ಸ್ಗೆ ನಿರಾಸೆ
May 03, 2024 12:16 AM IST
ಕೊನೆಯಲ್ಲಿ ರೋಚಕ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್; ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್ ರಾಯಲ್ಸ್ಗೆ ನಿರಾಸೆ
- Sunrisers Hyderabad vs Rajasthan Royals: 17ನೇ ಆವೃತ್ತಿಯ ಐಪಿಎಲ್ನ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಕೇವಲ 1 ರನ್ನಿಂದ ರೋಚಕ ಗೆಲುವು ಸಾಧಿಸಿತು.
17ನೇ ಆವೃತ್ತಿಯ ಐಪಿಎಲ್ನ 50ನೇ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 1 ರನ್ನಿಂದ ರೋಚಕ ಜಯ ಸಾಧಿಸಿತು. ಪಂದ್ಯದ ಅಂತಿಮ ಎಸೆತದಲ್ಲಿ ಆರ್ಆರ್ ಗೆಲುವಿಗೆ 2 ರನ್ ಬೇಕಿದ್ದಾಗ ಸ್ಟ್ರೈಕ್ನಲ್ಲಿದ್ದ ರೋವ್ಮನ್ ಪೊವೆಲ್, ಭುವನೇಶ್ವರ್ ಕುಮಾರ್ ಎಸೆದ ಲೋ ಫುಲ್ಟಾಸ್ ಬಾಲಿಗೆ ಎಲ್ಬಿಡಬ್ಲ್ಯು ಆದರು. ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರೂ ವ್ಯರ್ಥವಾಯಿತು. ಇದರೊಂದಿಗೆ ಎಸ್ಆರ್ಹೆಚ್ ಗೆದ್ದು ಸಂಭ್ರಮಿಸಿದರೆ, ಸ್ಯಾಮ್ಸನ್ ಪಡೆಗೆ ನಿರಾಸೆಯಾಯಿತು.
ಹೈದರಾಬಾದ್ನ ರಾಜೀವ್ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ಮತ್ತೊಂದು ಉತ್ತಮ ಮೊತ್ತವನ್ನು ಗಳಿಸಿತು. ಟ್ರಾವಿಸ್ ಹೆಡ್ (58) ಮತ್ತು ನಿತಿಶ್ ರೆಡ್ಡಿ (76*) ಅವರ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಆರ್ ಪರ 200 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ (67) ಮತ್ತು ರಿಯಾನ್ ಪರಾಗ್ (77) ಹೋರಾಟದ ನಡುವೆಯೂ 1 ರನ್ನಿಂದ ಸೋಲಿಗೆ ಶರಣಾಯಿತು. ಆರ್ಆರ್ಗೆ ಟೂರ್ನಿಯಲ್ಲಿ ಎರಡನೇ ಸೋಲು.
ಕೊನೆಗೂ ಲಯಕ್ಕೆ ಮರಳಿದ ಹೈದರಾಬಾದ್
ಆರ್ಆರ್ ವಿರುದ್ಧ ಗೆಲ್ಲುವುದಕ್ಕೂ ಮುನ್ನ ಆರ್ಸಿಬಿ ಮತ್ತು ಸಿಎಸ್ಕೆ ಎದುರು ಸತತ ಸೋಲು ಕಂಡಿದ್ದ ಎಸ್ಆರ್ಹೆಚ್, ಮತ್ತೊಂದು ಸೋಲಿನ ಆತಂಕಕ್ಕೆ ಸಿಲುಕಿತ್ತು. ಆದರೆ, ಭುವನೇಶ್ವರ್ ಕುಮಾರ್ ಅಂತಿಮ ಓವರ್ನಲ್ಲಿ 13 ರನ್ ಡಿಫೆಂಡ್ ಮಾಡಿಕೊಂಡು ಜಯ ತಂದುಕೊಟ್ಟರು. ಹೀಗಾಗಿ ಹೈದರಾಬಾದ್ ಹ್ಯಾಟ್ರಿಕ್ ಸೋಲಿನ ಶರಣಾಗುವುದರಿಂದ ತಪ್ಪಿಸಿಕೊಂಡಿತು. ಇದರೊಂದಿಗೆ ಗೆಲುವಿಗೆ ಹಾದಿಗೆ ಮರಳಿತು. ಅತ್ತ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ ಎರಡನೇ ಸೋಲಿಗೆ ಶರಣಾಯಿತು.
ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಆಟ ವ್ಯರ್ಥ
202 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಆರ್ಆರ್ 1 ರನ್ನಿಗೆ 2 ವಿಕೆಟ್ ಕಳೆದುಕೊಂಡಿತು. ಅದು ಕೂಡ ಮೊದಲ ಓವರ್ನಲ್ಲೇ. ಜೋಸ್ ಬಟ್ಲರ್ ಮತ್ತು ಸಂಜು ಸ್ಯಾಮ್ಸನ್ ಸೊನ್ನೆ ಸುತ್ತಿದರು. ಈ ವೇಳೆ ಸಂಕಷ್ಟದಲ್ಲಿದ್ದ ತಂಡಕ್ಕೆ ಜೈಸ್ವಾಲ್ ಮತ್ತು ಪರಾಗ್ ಮೂರನೇ ವಿಕೆಟ್ಗೆ 134 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಜೈಸ್ವಾಲ್ 67 ಮತ್ತು ಪರಾಗ್ 77 ರನ್ ಬಾರಿಸಿ ವಿಕೆಟ್ ಬೀಳದಂತೆ ನೋಡಿಕೊಂಡರು. ಇವರಿಬ್ಬರ ನಂತರ ಸತತ ವಿಕೆಟ್ ಕಳೆದುಕೊಂಡ ಆರ್ಆರ್, ಇನ್ನಿಂಗ್ಸ್ನ ಅಂತಿಮ ಎಸೆತದಲ್ಲಿ ಶರಣಾಯಿತು. ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರು.
ನಿತೀಶ್ ರೆಡ್ಡಿ ಮತ್ತು ಹೆಡ್ ಮಿಂಚು
ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ತಂಡ ಅಭಿಶೇಕ್ ಶರ್ಮಾ ಅವರನ್ನು 12 ರನ್ಗೆ ಕಳೆದುಕೊಂಡಿತು. ಆಗ ತಂಡದ ಮೊತ್ತ 25 ಆಗಿತ್ತು. ಬಳಿಕ ಅನ್ಮೋಲ್ ಪ್ರೀತ್ ಸಿಂಗ್ (5) ಸಹ ನಿರಾಸೆ ಮೂಡಿಸಿದರು. ನಂತರ ಒಂದಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ಆರಂಭಿಕ ಆಟಗಾರ ಟ್ರಾವಿಸ್ ಹೆಡ್, 96 ರನ್ ಪಾಲುದಾರಿಕೆ ಒದಗಿಸಿ ತಂಡಕ್ಕೆ ಆಸರೆಯಾದರು. ಹೆಡ್ 58 ರನ್ ಬಾರಿಸಿ ಔಟಾದರೆ, ನಿತೀಶ್ 76 ರನ್ ಬಾರಿಸಿ ಔಟಾಗದೆ ಉಳಿದರು. ಅಂತಿಮ ಹಂತದಲ್ಲಿ ಹೆನ್ರಿಚ್ ಕ್ಲಾಸೆನ್ 19 ಎಸೆತಕ್ಕೆ 42 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.