logo
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಪಿಎಲ್​ಗೂ ಮುನ್ನವೇ ಆರ್​​ಸಿಬಿಗೆ ಆಘಾತ; ಸ್ಟಾರ್ ಆಟಗಾರ್ತಿ ಔಟ್, ಖಡಕ್ ಆಲ್​ರೌಂಡರ್​ಗೆ ಮಣೆ ಹಾಕಿದ ಬೆಂಗಳೂರು

ಡಬ್ಲ್ಯುಪಿಎಲ್​ಗೂ ಮುನ್ನವೇ ಆರ್​​ಸಿಬಿಗೆ ಆಘಾತ; ಸ್ಟಾರ್ ಆಟಗಾರ್ತಿ ಔಟ್, ಖಡಕ್ ಆಲ್​ರೌಂಡರ್​ಗೆ ಮಣೆ ಹಾಕಿದ ಬೆಂಗಳೂರು

Prasanna Kumar P N HT Kannada

Jan 28, 2024 10:55 AM IST

google News

ಆರ್​​ಸಿಬಿ ಮಹಿಳಾ ತಂಡ.

    • Heather Knight Pulls Out Of WPL 2024: ಮಹಿಳಾ ಪ್ರೀಮಿಯರ್​ ಲೀಗ್​ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಘಾತಕ್ಕೆ ಒಳಗಾಗಿದ್ದು, ಆಲ್​ರೌಂಡರ್ ಹೀದರ್​ ನೈಟ್​ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಆರ್​​ಸಿಬಿ ಮಹಿಳಾ ತಂಡ.
ಆರ್​​ಸಿಬಿ ಮಹಿಳಾ ತಂಡ.

ವುಮೆನ್ಸ್ ಪ್ರೀಮಿಯರ್ ಲೀಗ್‌ನ (WPL 2024) ಎರಡನೇ ಆವೃತ್ತಿಯು ಫೆಬ್ರವರಿ 23 ರಂದು ಪ್ರಾರಂಭವಾಗಲಿದೆ. ಈ ವರ್ಷದ ಟೂರ್ನಿಯನ್ನು 2 ಸ್ಥಳಗಳಲ್ಲಿ ಆಯೋಜಿಸಲಾಗುತ್ತದೆ. ಮೊದಲಾರ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಮಾರ್ಚ್ 17ರಂದು ಫೈನಲ್ ಸೇರಿದಂತೆ ಟೂರ್ನಿಯ ದ್ವಿತೀಯಾರ್ಧಕ್ಕೆ ಆತಿಥ್ಯ ವಹಿಸಲಿದೆ.

ಆರ್​​ಸಿಬಿಗೆ ಆಘಾತ

ಮೊದಲ ಆವೃತ್ತಿಯ ಫೈನಲಿಸ್ಟ್‌ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೆಬ್ರವರಿ 23ರಂದು ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಆದರೆ ಟೂರ್ನಿಗೆ ಇನ್ನು ತಿಂಗಳಿಗಿಂತ ಕಡಿಮೆ ಅವಧಿಗೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಘಾತಕ್ಕೆ ಒಳಗಾಗಿದೆ. ಸ್ಟಾರ್​ ಆಟಗಾರ್ತಿ ಟೂರ್ನಿಗೂ ಮೊದಲೇ ಹೊರ ಬಿದ್ದಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತೀಯ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ರಿಚಾ ಘೋಷ್, ರೇಣುಕಾ ಠಾಕೂರ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ಮೇಗನ್ ಶುಟ್ ಮತ್ತು ಹೀದರ್ ನೈಟ್ ಅವರಂತಹ ಆಟಗಾರ್ತಿಯರಿದ್ದರೂ ಆರ್​ಸಿಬಿ ನಿರೀಕ್ಷೆ ವಿಫಲಗೊಳಿಸಿತ್ತು.

ಹೀದರ್​ ನೈಟ್​ ಔಟ್

ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದ ಮಂಧಾನ ಪಡೆ, ಐದು ತಂಡಗಳ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಎರಡಲ್ಲಿ ಮಾತ್ರ ತಂಡ ಗೆದ್ದಿತ್ತು. ದೊಡ್ಡ ಪುನರಾಗಮನ ಮಾಡಲು ಕಾಯುತ್ತಿರುವ ಆರ್​​ಸಿಬಿ ಮಹಿಳಾ ತಂಡ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಸ್ಟಾರ್ ಇಂಗ್ಲೆಂಡ್ ಬ್ಯಾಟರ್ ಮತ್ತು ನಾಯಕಿ ಹೀದರ್ ನೈಟ್ ತಂಡದಿಂದ ಹಿಂದೆ ಸರಿದಿದ್ದಾರೆ ಎಂದು ಫ್ರಾಂಚೈಸಿ ದೃಢಪಡಿಸಿದೆ.

33 ವರ್ಷದ ಇಂಗ್ಲಿಷ್ ಆಟಗಾರ್ತಿ, ಇಂಗ್ಲೆಂಡ್‌ ಪರ 107 ಟಿ20ಐ ಪಂದ್ಯಗಳು ಆಡಿದ ಅನುಭವ ಹೊಂದಿದ್ದು, 1738 ರನ್ ಗಳಿಸಿದ್ದಾರೆ. 21 ವಿಕೆಟ್‌ ಕಬಳಿಸಿರುವ ನೈಟ್​, ಕಳೆದ ವರ್ಷ ಆರ್​​ಸಿಬಿ ಸೆಟ್‌ಅಪ್‌ನ ಅವಿಭಾಜ್ಯ ಅಂಗವಾಗಿದ್ದರು. ಡಬ್ಲ್ಯುಪಿಎಲ್​ ಮೊದಲ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 135 ರನ್ ಮತ್ತು ಬೌಲಿಂಗ್​ನಲ್ಲಿ 4 ವಿಕೆಟ್ ಉರುಳಿಸಿದ್ದರು. 34 ರನ್ ಅವರ ವೈಯಕ್ತಿಕ ಬೆಸ್ಟ್ ಸ್ಕೋರ್​.

ಖಡಕ್ ಆಟಗಾರ್ತಿಗೆ ಮಣೆ

ಹೀದರ್​ ನೈಟ್ ಬದಲಿಗೆ ದಕ್ಷಿಣ ಆಫ್ರಿಕಾದ ಆಲ್-ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. 24 ವರ್ಷದ ಕ್ಲರ್ಕ್ ಇಲ್ಲಿಯವರೆಗೆ 46 ಟಿ20 ಪಂದ್ಯಗಳಲ್ಲಿ 419 ರನ್ ಗಳಿಸಿದ್ದಾರೆ ಮತ್ತು 35 ವಿಕೆಟ್‌ಗಳನ್ನೂ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್ ತಂಡದ ಪರ 2023ರಲ್ಲಿ ನೀಡಿದ ಪ್ರದರ್ಶನಕ್ಕಾಗಿ ಇತ್ತೀಚೆಗೆ ವರ್ಷದ ಐಸಿಸಿ ಮಹಿಳಾ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಆರ್​​ಸಿಬಿ ಮಹಿಳಾ ತಂಡ

ಜಾರ್ಜಿಯಾ ವೇರ್ಹ್ಯಾಮ್ , ಕೇಟ್ ಕ್ರಾಸ್, ಏಕ್ತಾ ಬಿಶ್ತ್, ಶುಭಾ ಸತೀಶ್, ಎಸ್ ಮೇಘನಾ, ಸಿಮ್ರಾನ್ ಬಹದ್ದೂರ್, ಸೋಫಿ ಮೊಲಿನೆಕ್ಸ್, ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಂತ್ರಿ ಮಾನ್ , ಸೋಫಿ ಡಿವೈನ್ .

ಡಬ್ಲ್ಯುಪಿಎಲ್​ನಲ್ಲಿ ಆರ್​ಸಿಬಿ ವೇಳಾಪಟ್ಟಿ

  • ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ (ಬೆಂಗಳೂರು)
  • ಫೆಬ್ರವರಿ 27 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ (ಬೆಂಗಳೂರು)
  • ಫೆಬ್ರವರಿ 29 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)
  • ಮಾರ್ಚ್ 2 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ (ಬೆಂಗಳೂರು)
  • ಮಾರ್ಚ್ 4 - ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಬೆಂಗಳೂರು)
  • ಮಾರ್ಚ್ 6 - ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ದೆಹಲಿ)
  • ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ದೆಹಲಿ)
  • ಮಾರ್ಚ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ದೆಹಲಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ