ಹುಷಾರ್! ಕೈ ಬೆರಳು ತೋರಿಸಿ ಅರ್ಷದೀಪ್ ಸಿಂಗ್ ವಿರುದ್ಧ ರೇಗಾಡಿದ ಸೂರ್ಯಕುಮಾರ್, ವಿಡಿಯೋ ವೈರಲ್
Dec 16, 2023 03:10 PM IST
ಅರ್ಷದೀಪ್ ಸಿಂಗ್ ವಿರುದ್ಧ ರೇಗಾಡಿದ ಸೂರ್ಯಕುಮಾರ್.
- Suryakumar Yadav: ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದ ಮುಗಿದ ನಂತರ ತಂಡದ ಬಸ್ನಲ್ಲಿ ಸೂರ್ಯಕುಮಾರ್ ಯಾದವ್, ಅರ್ಷದೀಪ್ ಸಿಂಗ್ ವಿರುದ್ಧ ಕೈ ಬೆರಳು ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ (ಡಿಸೆಂಬರ್ 14) ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 106 ರನ್ಗಳ ಅಂತರದಿಂದ ಸೋಲಿಸಿ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು. ಮೊದಲ ಪಂದ್ಯವು ಮಳೆಯಿಂದ ರದ್ದಾದರೆ, ಎರಡನೇ ಪಂದ್ಯದಲ್ಲಿ ಆತಿಥೇಯರು ಜಯ ಸಾಧಿಸಿದ್ದರು.
ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ನಾಯಕ ಸೂರ್ಯಕುಮಾರ್ ಯಾದವ್ ಅವರ ದಾಖಲೆಯ ನಾಲ್ಕನೇ ಟಿ20 ಶತಕದ ನೆರವಿನಿಂದ ಭಾರತ 7 ವಿಕೆಟ್ಗಳ ನಷ್ಟಕ್ಕೆ 201 ರನ್ ಪೇರಿಸಿತ್ತು. ಆದರೆ ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಸರ್ವಪತನ ಕಂಡಿತು. ಕುಲ್ದೀಪ್ 2.5 ಓವರ್‌ಗಳಲ್ಲಿ 17 ರನ್ ನೀಡಿ 5 ವಿಕೆಟ್ ಪಡೆದು ಗಮನ ಸೆಳೆದರು.
ಕೈ ಬೆರಳು ತೋರಿಸಿ ಸೂರ್ಯ ಕೆಂಡ
ಜೋಬರ್ಗ್‌ನಲ್ಲಿ ನಡೆದ ಮೂರನೇ ಟಿ20 ಮುಗಿದ ನಂತರ ತಂಡದ ಬಸ್ನಲ್ಲಿ ಹೋಗುತ್ತಿದ್ದ ವೇಳೆ ಸೂರ್ಯಕುಮಾರ್, ಯುವ ವೇಗಿ ಅರ್ಷದೀಪ್ ಸಿಂಗ್ ವಿರುದ್ದ ಕೆಂಡಾಮಂಡಲರಾದರು. ಸಿಟ್ಟಿಗೆದ್ದು ಮನಬಂದಂತೆ ಬೈದರು. ಸೀಟ್ನಲ್ಲಿ ಕುಳಿತಿದ್ದ ಅರ್ಷದೀಪ್ಗೆ ರೇಗಾಡಿದ ಸೂರ್ಯ, ಕೈ ಬೆರಳು ತೋರಿಸಿ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೋ ಪಂದ್ಯದ ಮುಗಿದು ಎರಡು ದಿನಗಳ ನಂತರ ಸಖತ್ ವೈರಲ್ ಆಗುತ್ತಿದೆ. ಆದರೆ ಸೂರ್ಯನ ಕೋಪಕ್ಕೆ ಕಾರಣ ಏನೆಂಬುದು ಇದುವರೆಗೂ ತಿಳಿದು ಬಂದಿಲ್ಲ.
ಏಕದಿನ ಸರಣಿಯನ್ನೂ ಆಡಲಿರುವ ಅರ್ಷ್ದೀಪ್
ಟಿ20 ಸರಣಿ ಮುಗಿದ ಬೆನ್ನಲ್ಲೇ ವೇಗಿ ಅರ್ಷದೀಪ್ ಸಿಂಗ್, ಏಕದಿನ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮೂರನೇ ಟಿ20 ಪಂದ್ಯದಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯಕ್ಕೂ ಮುನ್ನ ಎರಡನೇ ಟಿ20 ಪಂದ್ಯದಲ್ಲಿ 2 ಓವರ್‌ಗಲ್ಲಿ 31 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದರು.
ಡಿಸೆಂಬರ್ 17ರಿಂದ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದೆ. ಈ ಸರಣಿಯ ಭಾಗವಾಗಿರುವ ಅರ್ಷದೀಪ್ ಮಿಂಚಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಸರಣಿಯ ಆರಂಭಿಕ ಪಂದ್ಯ ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.
ತವರಿಗೆ ಸೂರ್ಯ
ಏಕದಿನ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯಕುಮಾರ್, ತವರಿಗೆ ಮರಳಿದ್ದಾರೆ. ಸೂರ್ಯ ಜೊತೆಗೆ ವಿಶ್ವದ ನಂ. 1 ಟಿ20 ಬೌಲರ್ ರವಿ ಬಿಷ್ಣೋಯ್ ಮತ್ತು ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಸಹ ಏಕದಿನ ಮತ್ತು ಟೆಸ್ಟ್ ತಂಡಗಳ ಭಾಗವಾಗಿರದ ಕಾರಣ ಮುಂಬರುವ ರಣಜಿ ಆವೃತ್ತಿಗೆ ತಯಾರಿ ನಡೆಸಲು ಭಾರತಕ್ಕೆ ಮರಳಲಿದ್ದಾರೆ.