ವಂಚನೆ ಪ್ರಕರಣ: ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ವಿರುದ್ಧ ತನಿಖೆಗೆ ಆದೇಶಿಸಿದ ಡೆಲ್ಲಿ ಕೋರ್ಟ್
Oct 30, 2024 11:45 PM IST
ವಂಚನೆ ಪ್ರಕರಣ: ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ವಿರುದ್ಧ ತನಿಖೆಗೆ ಆದೇಶಿಸಿದ ಡೆಲ್ಲಿ ಕೋರ್ಟ್
- ಫ್ಲಾಟ್ ಖರೀದಿದಾರರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ದೆಹಲಿ ನ್ಯಾಯಾಲಯ ತನಿಖೆಗೆ ನಿರ್ದೇಶಿಸಿದೆ.
ಹೊಸದಿಲ್ಲಿ: ಫ್ಲಾಟ್ ಖರೀದಿದಾರರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಹಾಗೂ ಭಾರತ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ (Team India Head Coach Gautam Gambhir) ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯವು ಹೊಸ ತನಿಖೆಗೆ ಆದೇಶಿಸಿದೆ. ಈ ಹಿಂದೆ ಗಂಭೀರ್ ಮತ್ತು ಇತರರನ್ನು ಆರೋಪಮುಕ್ತಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗನೆ, ಪ್ರಕರಣದಲ್ಲಿ ಗಂಭೀರ್ ವಿರುದ್ಧದ ಆರೋಪಗಳು ತನಿಖೆಗೆ ಅರ್ಹವಾಗಿವೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮ್ಯಾಜಿಸ್ಟ್ರೇ್ಟ್ ನ್ಯಾಯಾಲಯದ ಆದೇಶವು ಗಂಭೀರ್ ವಿರುದ್ಧದ ಆರೋಪಗಳನ್ನು ನಿರ್ಧರಿಸುವಲ್ಲಿ ಅಸಮರ್ಪಕ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶ ಗಂಭೀರ್ ವಿರುದ್ಧದ ಆರೋಪಗಳನ್ನು ನಿರ್ಧರಿಸುವಲ್ಲಿ ಅಸಮರ್ಪಕ ಅಭಿವ್ಯಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಗೋಗನೆ ಹೇಳಿದ್ದಾರೆ. ವಂಚನೆ ಪ್ರಕರಣದಲ್ಲಿ ಗಂಭೀರ್ ಪಾತ್ರದ ಬಗ್ಗೆ ಅವರ ವಿರುದ್ಧದ ಆರೋಪಗಳು ತನಿಖೆಗೆ ಸಾಕಷ್ಟು ಪುಷ್ಠಿ ನೀಡುತ್ತಿವೆ ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಎಚ್‌ಆರ್ ಇನ್‌ಫ್ರಾಸಿಟಿ ಪ್ರೈವೇಟ್ ಲಿಮಿಟೆಡ್, ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್, ಯುಎಂ ಆರ್ಕಿಟೆಕ್ಚರ್ಸ್ ಆ್ಯಂಡ್ ಕಾಂಟ್ರಾಕ್ಟರ್ಸ್ ಲಿಮಿಟೆಡ್ ಮತ್ತು ಕಂಪನಿಗಳ ಜಂಟಿ ಉದ್ಯಮದ ನಿರ್ದೇಶಕ ಮತ್ತು ಬ್ರಾಂಡ್ ಅಂಬಾಸಿಡರ್ ಆಗಿದ್ದ ಗಂಭೀರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಆರೋಪದಿಂದ ಮುಕ್ತಗೊಳಿಸಿದ್ದೇಕೆ; ನ್ಯಾಯಾಧೀಶರು ಪ್ರಶ್ನೆ
ಬ್ರಾಂಡ್ ಅಂಬಾಸಿಡರ್ ಆಗಿ ಹೂಡಿಕೆದಾರರೊಂದಿಗೆ ನೇರ ಸಂಪರ್ಕ ಹೊಂದಿರುವ ಏಕೈಕ ಆರೋಪಿ ಗಂಭೀರ್ ಆಗಿದ್ದು, ಆದರೂ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ರುದ್ರಾ ಬಿಲ್ಡ್‌ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ಗೆ ಗಂಭೀರ್ 6 ಕೋಟಿ ರೂಪಾಯಿ ಪಾವತಿಸಿರುವ ಮತ್ತು 4.85 ಕೋಟಿ ಪಡೆದಿರುವ ಕುರಿತು ಮ್ಯಾಜಿಸ್ಟ್ರಿಯಲ್ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ರುದ್ರ ಬಿಲ್ಡ್‌ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ಗೆ ಮರಳಿ ಪಾವತಿಸಿದ ಮೊತ್ತವು ಯಾವುದೇ ಸಂಬಂಧವನ್ನು ಹೊಂದಿದೆಯೇ ಅಥವಾ ಪ್ರಶ್ನೆಯಲ್ಲಿರುವ ಯೋಜನೆಯಲ್ಲಿ ಹೂಡಿಕೆದಾರರಿಂದ ಪಡೆದ ಹಣದಿಂದ ಪಡೆಯಲಾಗಿದೆಯೇ ಎಂಬುದನ್ನು ಆರೋಪಪಟ್ಟಿ ಸ್ಪಷ್ಟಪಡಿಸಿಲ್ಲ. ಆರೋಪಗಳ ತಿರುಳು ವಂಚನೆಯ ಅಪರಾಧಕ್ಕೆ ಸಂಬಂಧಿಸಿದ ವಂಚಿಸಿದ ಮೊತ್ತದ ಯಾವುದೇ ಅಂಶವು ಗಂಭೀರ್‌ನ ಕೈಗೆ ಬಂದಿದೆಯೇ ಎಂಬುದನ್ನು ಆರೋಪಪಟ್ಟಿ ಮತ್ತು ದೋಷಾರೋಪಣೆಯ ಆದೇಶದ ಮೂಲಕ ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಹೆಚ್ಚುವರಿ ನಿರ್ದೇಶಕರಾಗಿದ್ದ ಗಂಭೀರ್
ಗಂಭೀರ್ ಅವರು ಬ್ರಾಂಡ್ ಅಂಬಾಸಿಡರ್ ಪಾತ್ರವನ್ನು ಮೀರಿ ಕಂಪನಿಯೊಂದಿಗೆ ಹಣಕಾಸಿನ ವಹಿವಾಟು ನಡೆಸಿದ್ದಾರೆ. 2011ರ ಜೂನ್ 29 ಮತ್ತು 2013ರ ಅಕ್ಟೋಬರ್ 1ರ ನಡುವೆ ಅವರು ಹೆಚ್ಚುವರಿ ನಿರ್ದೇಶಕರಾಗಿದ್ದರು ಎಂದು ನ್ಯಾಯಾಲಯ ತಿಳಿಸಿದೆ. ದೂರುದಾರರು ಜಾಹೀರಾತುಗಳು ಮತ್ತು ಕರಪತ್ರಗಳಿಂದ ಆಮಿಷಕ್ಕೆ ಒಳಗಾಗಿ 6 ಲಕ್ಷದಿಂದ 16 ಲಕ್ಷ ರೂಪಾಯಿಗಳವರೆಗೆ ವಿವಿಧ ಮೊತ್ತಗಳನ್ನು ಪಾವತಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.