ಮರೆಯದಿರಿ, ಕಾಯ್ತಿದ್ದಾರೆ ಚೇತೇಶ್ವರ್ ಪೂಜಾರ; ಸತತ ವೈಫಲ್ಯ ಅನುಭವಿಸಿದ ಶುಭ್ಮನ್ ಗಿಲ್ಗೆ ಎಚ್ಚರಿಸಿದ ರವಿ ಶಾಸ್ತ್ರಿ
Feb 02, 2024 04:29 PM IST
ಸತತ ವೈಫಲ್ಯ ಅನುಭವಿಸಿದ ಶುಭ್ಮನ್ ಗಿಲ್ಗೆ ಎಚ್ಚರಿಸಿದ ರವಿ ಶಾಸ್ತ್ರಿ.
Ravi Shastri warns Shubman Gill : ಟೀಮ್ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲೂ ನಿರಾಸೆ ಮೂಡಿಸಿದರು. ಈ ವೇಳೆ ರವಿ ಶಾಸ್ತ್ರಿ, ಚೇತೇಶ್ವರ್ ಪೂಜಾರ ಕಾಯುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.
2023ರ ವರ್ಷ ಯುವ ಆಟಗಾರ ಶುಭ್ಮನ್ ಗಿಲ್ (Shubman Gill) ಪಾಲಿಗೆ ಗೋಲ್ಡನ್ ವರ್ಷ. ಜನವರಿಯಿಂದ ಡಿಸೆಂಬರ್ವರೆಗೆ ಅಬ್ಬರಿಸಿದ ಗಿಲ್, ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿದರು. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಶತಕ ಗಳಿಸಿದ ಗಿಲ್, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ತಮ್ಮ ಮೊದಲ ಟೆಸ್ಟ್ ಸೆಂಚುರಿ ದಾಖಲಿಸಿದರು. ಅವರ ಫಾರ್ಮ್ ಅವರಿಗೆ 'ಪ್ರಿನ್ಸ್' ಎಂಬ ಅಡ್ಡ ಹೆಸರು ತಂದುಕೊಟ್ಟಿತು. ಅನೇಕರು ವಿರಾಟ್ ಕೊಹ್ಲಿಗೆ ಉತ್ತರಾಧಿಕಾರಿ ಎಂದರು.
ಶುಭ್ಮನ್ ಗಿಲ್ ಮತ್ತೆ ವೈಫಲ್ಯ
ಆದರೆ ಆ ಹೆಸರನ್ನು ಉಳಿಸಿಕೊಳ್ಳಲು ಗಿಲ್, ಹೆಣಗಾಡುತ್ತಿದ್ದಾರೆ. ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಬ್ಯಾಟ್ನಿಂದ ದೊಡ್ಡ ಇನ್ನಿಂಗ್ಸ್ ಬರುತ್ತಲೇ ಇಲ್ಲ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಸತತ ವಿಫಲರಾಗುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ 23 ರನ್ ಗಳಿಸಿದ್ದರು. ಇದೀಗ ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 34 ರನ್ಗೆ ಆಟ ಮುಗಿಸಿ ವೈಫಲ್ಯ ಅನುಭವಿಸಿದರು.
ಆಂಡರ್ಸನ್ಗೆ 5ನೇ ಬಾರಿ ಔಟ್
ಜೈಸ್ವಾಲ್ ಜೊತೆ ಉತ್ತಮ ಆಟವಾಡುತ್ತಿದ್ದ ಗಿಲ್, ದೊಡ್ಡ ಇನ್ನಿಂಗ್ಸ್ ಭರವಸೆ ನೀಡಿದರು. ಸ್ಪಿನ್ನರ್ಗಳ ಎದುರು ಉತ್ತಮ ಲಯ ಕಂಡುಕೊಂಡಿದ್ದರು. ಆದರೆ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಎದುರು ಮಂಕಾದರು. ಮತ್ತೊಮ್ಮೆ ಹಿರಿಯ ವೇಗಿಯ ಬೌಲಿಂಗ್ನಲ್ಲಿ ವಿಫಲರಾದರು. ಆಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಬೆನ್ ಫೋಕ್ಸ್ಗೆ ಕ್ಯಾಚಿತ್ತು ಹೊರನಡೆದರು. ಇಂಗ್ಲೆಂಡ್ ವೇಗಿಯ ಬೌಲಿಂಗ್ನಲ್ಲಿ ಈ ಯಂಗ್ ಬ್ಯಾಟರ್ ಒಟ್ಟು 5 ಬಾರಿ ವಿಕೆಟ್ ಒಪ್ಪಿಸಿದ್ದಾರೆ.
ಡೆಂಗ್ಯೂ ಬಂದ ನಂತರ ದೊಡ್ಡ ಸ್ಕೋರ್ ಬಂದಿಲ್ಲ
ವಿಶ್ವಕಪ್ ಸಮಯದಲ್ಲಿ ಡೆಂಗ್ಯೂನಿಂದ ಚೇತರಿಸಿಕೊಂಡ ನಂತರ ಗಿಲ್, ಹಳೆಯ ಫಾರ್ಮ್ಗೆ ಮರಳಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಅವರಿಂದ ಬಿಗ್ ಸ್ಕೋರ್ಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಸದ್ಯ ಅವರನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಕ್ರಮಾಂಕಕ್ಕೆ ತಳ್ಳಲಾಗಿದೆ. ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ಯುವ ಆಟಗಾರ, ಅವರಂತೆ ಕ್ರೀಸ್ ಕಾಯ್ದುಕೊಳ್ಳುವಲ್ಲಿ ಎಡವುತ್ತಿದ್ದಾರೆ. ಇದೇ ಶುಭ್ಮನ್ ಗಿಲ್ಗೆ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಎಚ್ಚರಿಸಿದ್ದಾರೆ.
ಪೂಜಾರ ಕಾಯುತ್ತಿದ್ದಾರೆ ಎಂದ ರವಿ ಶಾಸ್ತ್ರಿ
ಭಾರತ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯುವಕರಿಗೆ ಮಾಜಿ ಕೋಚ್ ರವಿ ಶಾಸ್ತ್ರಿ ಸಮಯೋಚಿತ ಜ್ಞಾಪನೆಯನ್ನು ಕಳುಹಿಸಿದ್ದಾರೆ. ಶಾಸ್ತ್ರಿ ಯಾರೆಂದು ಹೆಸರು ಹೇಳದಿದ್ದರೂ ಪೂಜಾರ ಅವರನ್ನು ಉಲ್ಲೇಖಿಸಿ ಗಿಲ್ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದು ಹೊಸ ತಂಡ, ಯುವ ತಂಡ. ಈ ಯುವಕರು ತಮ್ಮನ್ನು ತಾವು ಸಾಬೀತುಪಡಿಸಬೇಕು. ಮರೆಯಬೇಡಿ, ಪೂಜಾರ ಕಾಯುತ್ತಿದ್ದಾರೆ. ಅವರು ರಣಜಿ ಟ್ರೋಫಿಯಲ್ಲಿ ಅಮೋಘ ಫಾರ್ಮ್ನಲ್ಲಿದ್ದಾರೆ. ರಾಕೆಟ್ನಂತೆ ರನ್ ಗಳಿಸುತ್ತಿದ್ದಾರೆ ಎಂದು ಶಾಸ್ತ್ರಿ ವೀಕ್ಷಕ ವಿವರಣೆಯಲ್ಲಿ ಗಿಲ್ ಔಟಾದ ಸಂದರ್ಭದಲ್ಲಿ ಹೇಳಿದರು.
ಚೇತೇಶ್ವರ್ ಪೂಜಾರ ಅಬ್ಬರ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡದ ಕೊನೆಯ ಬಾರಿಗೆ ಟೆಸ್ಟ್ ಆಡಿದ ಪೂಜಾರ, ಸೌರಾಷ್ಟ್ರ ಪರ ಉತ್ತಮ ರನ್ ಗಳಿಸುತ್ತಿದ್ದಾರೆ. ಜಾರ್ಖಂಡ್ ವಿರುದ್ಧ ದ್ವಿಶತಕ ಗಳಿಸಿದ ಟೆಸ್ಟ್ ಸ್ಪೆಷಲಿಸ್ಟ್, ನಂತರದ ಇನ್ನಿಂಗ್ಸ್ಗಳಲ್ಲಿ 49, 43, 43, 66 ಮತ್ತು 91 ರನ್ ಗಳಿಸಿದ್ದಾರೆ. ಯುವ ಆಟಗಾರರಿಗೆ ಆದ್ಯತೆ ನೀಡುವುದು ಸರಿಯಾದ ಮಾರ್ಗ ಎಂದು ಮ್ಯಾನೇಜ್ಮೆಂಟ್ ಸ್ಪಷ್ಟಪಡಿಸಿದ್ದರೂ ಪೂಜಾರ ಅನುಭವವನ್ನು ಎಂದಿಗೂ ಎಣಿಸಲು ಸಾಧ್ಯವಿಲ್ಲ ಎಂದ ಶಾಸ್ತ್ರಿ, ಗಿಲ್ ಬ್ಯಾಟಿಂಗ್ನಲ್ಲಿನ ದೋಷಗಳನ್ನು ವಿವರಿಸಿದರು.
ಸಮಸ್ಯೆಗೆ ಸಿಲುಕುತ್ತಿದ್ದೀರಿ ಎಂದ ಶಾಸ್ತ್ರಿ
ದಕ್ಷಿಣ ಆಫ್ರಿಕಾ ಸರಣಿಯ ಪ್ರಾರಂಭದಿಂದ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಗಿಲ್ ಅವರ ಇತ್ತೀಚಿನ ಸ್ಕೋರ್ಗಳು 2, 26, 36, 10, 23, 0 ಮತ್ತು 34 ಆಗಿದೆ. ಶುಭ್ಮನ್ ತಪ್ಪುಗಳ ಕುರಿತು ಮಾತನಾಡಿದ ರವಿ ಶಾಸ್ತ್ರಿ, ಇದು ಟೆಸ್ಟ್ ಪಂದ್ಯ. ನೀವು (ಗಿಲ್) ಅಲ್ಲಿಯೇ ಇರಬೇಕು. ಇಲ್ಲದಿದ್ದರೆ, ನೀವು ಎಲ್ಲಾ ರೀತಿಯ ಸಮಸ್ಯೆಗಳಿಗೆ ಸಿಲುಕುತ್ತೀರಿ. ಕಠಿಣವಾಗಿ ಚೆಂಡನ್ನು ಎದುರಿಸುತ್ತಿದ್ದೀರಿ. ವಿಶೇಷವಾಗಿ ಆಂಡರ್ಸನ್ ಬೌಲಿಂಗ್ನಲ್ಲಿ. ಅದರಿಂದ ಹೊರ ಬರಬೇಕು ಎಂದು ಸಲಹೆ ನೀಡಿದ್ದಾರೆ.