WPL Auction 2024: ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್ ಸ್ಟಾರ್ ಆಟಗಾರ್ತಿ ಯುಪಿ ವಾರಿಯರ್ಸ್ ಪಾಲು
Dec 09, 2023 05:47 PM IST
ವಿರಾಟ್ ಕೊಹ್ಲಿ ಜೊತೆಗೆ ಡೇನಿಯಲ್ ವ್ಯಾಟ್.
- WPL Auction 2024: ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ 2014ರಲ್ಲಿ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಡಬ್ಲ್ಯುಪಿಎಲ್ ಹರಾಜಿನಲ್ಲಿ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ.
ವಿರಾಟ್ ಕೊಹ್ಲಿ (Virat Kohli) ಪ್ರೇಮ ನಿವೇದನೆ ಮಾಡಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ್ತಿ ಯುಪಿ ವಾರಿಯರ್ಸ್ (UP Warriorz) ತಂಡದ ಪಾಲಾಗಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ನ ಮಿನಿ ಹರಾಜಿನಲ್ಲಿ (WPL Auction 2024) 30 ಲಕ್ಷ ಮೂಲ ಬೆಲೆಯೊಂದಿಗೆ ಯುಪಿ ತಂಡದ ತೆಕ್ಕೆಗೆ ಬಿದ್ದಿದ್ದಾರೆ. ಈ ಆಟಗಾರ್ತಿ ಮೆಗಾ ಹರಾಜಿನಲ್ಲಿ ಆನ್ಸೋಲ್ಡ್ ಆಗಿದ್ದರು.
ಚೊಚ್ಚಲ ಆವೃತ್ತಿಯಲ್ಲಿ ಲೀಗ್ನಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೊರ ಬಿದ್ದಿದ್ದ ಯುಪಿ, ಈ ಬಾರಿ ಅತ್ಯಂತ ಬಲಿಷ್ಠ ತಂಡ ಕಟ್ಟಲು ಚಿಂತನೆ ನಡೆಸಿದೆ. ಅದರಂತೆ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮುಂದಾಗಿರುವ ಯುಪಿ, ಇಂಗ್ಲೆಂಡ್ ಓಪನರ್ ಡೇನಿಯಲ್ ವ್ಯಾಟ್ಗೆ (Danielle Wyatt) 30 ಲಕ್ಷ ನೀಡಿ ಖರೀದಿಸಿದೆ.
ಭಾರತದ ವಿರುದ್ಧ ಮಿಂಚಿದ ವ್ಯಾಟ್
ಭಾರತದ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಡೇನಿಯಲ್ ವ್ಯಾಟ್ ಅಬ್ಬರಿಸಿದರು. ಡಿಸೆಂಬರ್ 6ರಂದು ಈ ಪಂದ್ಯ ನಡೆಯಿತು. ಹರ್ಮನ್ ಪಡೆಯ ಬೌಲರ್ಗಳಿಗೆ ಬೆಂಡೆತ್ತಿದ 32 ವರ್ಷದ ಅನುಭವಿ ಆಟಗಾರ್ತಿ, 47 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಭರ್ಜರಿ 75 ರನ್ ಚಚ್ಚಿದರು. ಡಬ್ಲ್ಯುಪಿಎಲ್ ಹರಾಜಿಗೆ ಮೂರು ದಿನಗಳಿಗೂ ಮುನ್ನ ಮಿಂಚಿನ ಪ್ರದರ್ಶನ ನೀಡಿ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ಇಂದಿನ ಹರಾಜಿನಲ್ಲಿ ಸೋಲ್ಡ್ ಆದರು.
ಮೆಗಾ ಹರಾಜಿನಲ್ಲಿ ಆನ್ಸೋಲ್ಡ್ ಆಗಿದ್ದ ವ್ಯಾಟ್
ಇದೇ ವರ್ಷ ಫೆಬ್ರವರಿಯಲ್ಲಿ ನಡೆದಿದ್ದ ಮಹಿಳಾ ಆಟಗಾರ್ತಿಯರ ಮೆಗಾ ಹರಾಜಿನಲ್ಲಿ ಸ್ಫೋಟಕ ಆರಂಭಿಕ ಆಟಗಾರ್ತಿ ಅನ್ಸೋಲ್ಡ್ ಆಗಿದ್ದರು. ಇದರಿಂದಾಗಿ ಬೇಸರ ಹೊರ ಹಾಕಿದ್ದರು. ವುಮೆನ್ಸ್ ಪ್ರೀಮಿಯರ್ ಲೀಗ್ ಆಡಬೇಕೆಂಬುದು ನನ್ನ ಕನಸಾಗಿತ್ತು. ಆದರೆ ಹೃದಯ ಚೂರಾಗಿದೆ. ಖರೀದಿಯಾದವರಿಗೆ ಧನ್ಯವಾದ ಎಂದು ಹೇಳಿದ್ದರು.
ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಆಟಗಾರ್ತಿ
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಅಪ್ಪಟ ಅಭಿಮಾನಿ ಆಗಿರುವ ಡೇನಿಯಲ್ ವ್ಯಾಟ್, 2014ರಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಟ್ವಿಟರ್‌ನಲ್ಲಿ 'ಕೊಹ್ಲಿ ನನ್ನನ್ನು ವಿವಾಹವಾಗಿ' ಎಂದು ಬಹಿರಂಗವಾಗಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಖತ್ ವೈರಲ್ ಆಗಿತ್ತು. ಈಕೆ ಇದೇ ವರ್ಷ ಗೆಳತಿ ಜಾರ್ಜಿ ಹಾಡ್ಜ್ ಜೊತೆಗೆ ಎಂಗೇಟ್ಮೆಂಟ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ನಲ್ಲಿ ವ್ಯಾಟ್ ಪ್ರದರ್ಶನ
ಇಂಗ್ಲೆಂಡ್ನ ಸ್ಟಾರ್ ಆಟಗಾರ್ತಿ ಟಿ20 ಕ್ರಿಕೆಟ್ನಲ್ಲಿ ಧೂಳೆಬ್ಬಿಸಿದ್ದಾರೆ. ಈವರೆಗೂ 150 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2602 ರನ್ ಗಳಿಸಿದ್ದಾರೆ. 13 ಅರ್ಧಶತಕ, 2 ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಸ್ಟ್ರೈಕ್ರೇಟ್ 127.42 ಇದೆ. ಅಲ್ಲದೆ, ಬೌಲಿಂಗ್ನಲ್ಲೂ 46 ವಿಕೆಟ್ ಪಡೆದು ಮಿಂಚಿದ್ದಾರೆ.
ವ್ಯಾಟ್ ಜೊತೆಗೆ 1.30 ಕೋಟಿಗೆ ಭಾರತದ ಅನ್ಕ್ಯಾಪ್ಡ್ ಬ್ಯಾಟರ್ ವೃಂದಾ ದಿನೇಶ್, ತಲಾ 10 ಲಕ್ಷಕ್ಕೆ ಪೂನಂ ಖೇಮ್ನಾರ್, ಸೈಮಾ ಠಾಕೂರ್ ಯುಪಿ ಪಾಲಾಗಿದ್ದಾರೆ. ಇಬ್ಬರು ಸಹ ಭಾರತದ ಆಲ್ರೌಂಡರ್ಗಳು.
ಯುಪಿ ವಾರಿಯರ್ಸ್ (UPW)
ಉಳಿಸಿಕೊಂಡಿದ್ದ ಆಟಗಾರ್ತಿಯರು: ಅಲಿಸ್ಸಾ ಹೀಲಿ, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ಲಾರೆನ್ ಬೆಲ್, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟೋನ್*, ತಹ್ಲಿಯಾ ಮೆಗ್ರಾತ್.
ಬಿಡುಗಡೆಯಾದ ಆಟಗಾರ್ತಿಯರು: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್.