logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದೆದುರು ಶಾಲಾ ಮಕ್ಕಳಂತೆ ಆಡಿದ್ರಿ; ಮುಂದೆ ನೆದರ್ಲೆಂಡ್ಸ್ ಸೋಲಿಸಲು ಹೆಣಗಾಡ್ತೀರಿ; ಪಾಕ್ ಮಾಜಿ ‌ಆಟಗಾರ

ಭಾರತದೆದುರು ಶಾಲಾ ಮಕ್ಕಳಂತೆ ಆಡಿದ್ರಿ; ಮುಂದೆ ನೆದರ್ಲೆಂಡ್ಸ್ ಸೋಲಿಸಲು ಹೆಣಗಾಡ್ತೀರಿ; ಪಾಕ್ ಮಾಜಿ ‌ಆಟಗಾರ

HT Sports Desk HT Kannada

Dec 22, 2023 05:56 PM IST

google News

ಬಾಬರ್‌ ಅಜಾಮ್

    • Asia Cup 2023: ಪಾಕಿಸ್ತಾನದ ಮಾಜಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಕಮ್ರಾನ್ ಅಕ್ಮಲ್, ಭಾರತ ವಿರುದ್ಧ ತಮ್ಮದೇ ದೇಶದ ತಂಡ ತೋರಿದ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ.
ಬಾಬರ್‌ ಅಜಾಮ್
ಬಾಬರ್‌ ಅಜಾಮ್ (AFP)

ಭಾರತ ವಿರುದ್ಧದ ಏಷ್ಯಾಕಪ್ ಸೂಪರ್‌ ಫೋರ್‌ (Asia Cup 2023) ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡ ಬಳಿಕ, ತಂಡದ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಪಾಕಿಸ್ತಾನದ ಮಾಜಿ ಆಟಗಾರರೇ ತಮ್ಮ ದೇಶದ ತಂಡದ ಪ್ರದರ್ಶನದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನದ ಮಾಜಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಕಮ್ರಾನ್ ಅಕ್ಮಲ್, ಭಾರತ ವಿರುದ್ಧ ಬಾಬರ್‌ ಅಜಾಮ್‌ ಬಳಗ ತೋರಿದ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ್ದಾರೆ. ಪಾಕ್‌ ತಂಡವು ಇದೇ ರೀತಿ ಆಡಿದರೆ, ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಕೂಡಾ ಸೋಲಿಸಲು ಕಷ್ಟಪಡಬೇಕಾಗುತ್ತದೆ ಎಂದು ಅಕ್ಮಲ್‌ ಜರಿದಿದ್ದಾರೆ.

ಸತತ ವಿಕೆಟ್‌ಗಳು ಪತನವಾಗುತ್ತಿದ್ದರೂ ಆಕ್ರಮಣಕಾರಿ ಆಟಕ್ಕೆ ಕೈ ಹಾಕಿದ ಪಾಕಿಸ್ತಾನದ ಬ್ಯಾಟರ್‌ಗಳ ವಿರುದ್ಧ ಅಕ್ಮಲ್ ವಾಗ್ದಾಳಿ ನಡೆಸಿದರು. ಪ್ರಮುಖ ಪಂದ್ಯಾವಳಿಯಲ್ಲಿ ನೆಟ್‌ ರನ್‌ ರೇಟ್‌ ಕಡೆಗೆ ಹೆಚ್ಚು ಗಮನ ಕೊಡಬೇಕಿತ್ತು. ಎನ್‌ಆರ್‌ಆರ್‌ ಗಮನದಲ್ಲಿಟ್ಟುಕೊಂಡು ಆಡುವಂತೆ ಆಟಗಾರರಿಗೆ ಹೇಳುವಲ್ಲಿ ತಂಡದ ಮ್ಯಾನೇಜ್‌ಮೆಂಟ್‌ ಮೊದಲೇ ಎಚ್ಚರ ವಹಿಸಬೇಕಿತ್ತು ಎಂದು ಅವರು ಸಿಡಿದರು.

ನೆದರ್ಲೆಂಡ್ಸ್ ತಂಡವನ್ನು ಸೋಲಿಸಲು ಹೆಣಗಾಡುತ್ತೀರಿ

“ನೀವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದಿದ್ದರೆ ಮತ್ತು ಏಷ್ಯಾಕಪ್ ಫೈನಲ್‌ನಲ್ಲಿ ಆಡಲು ಬಯಸಿದರೆ, ಮೊದಲು ನಿಮ್ಮ ಆಟದ ವಿಧಾನವನ್ನು ಬದಲಾಯಿಸಬೇಕು. ಒಂದು ವೇಳೆ ನೀವೇನಾದರೂ ಇದೇ ರೀತಿಯ ಪ್ರದರ್ಶನ ಮುಂದುವರೆಸಿದರೆ, ನೀವು ನೆದರ್ಲೆಂಡ್ಸ್ ತಂಡವನ್ನು ಕೂಡಾ ಸೋಲಿಸಲು ಹೆಣಗಾಡುತ್ತೀರಿ. ತಂಡದ ಮ್ಯಾನೇಜ್‌ಮೆಂಟ್‌ ಏನು ಮಾಡುತ್ತಿದೆ? ನಿಮಗೆ ಮೊದಲು ಬೌಲಿಂಗ್ ಮಾಡಲು ಯಾರು ಹೇಳಿದರು? ನಿಮ್ಮ ರನ್ ರೇಟ್ ತೀರಾ ಕೆಟ್ಟದಾಗಿದೆ. ಬಾಂಗ್ಲಾದೇಶದ ವಿರುದ್ಧ ಕೇವಲ 190 ರನ್‌ಗಳನ್ನು ಬೆನ್ನಟ್ಟಲು 40ಕ್ಕೂ ಹೆಚ್ಚು ಓವರ್‌ಗಳು ಬೇಕಾಯ್ತು” ಎಂದು ಮಾಜಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಶಾಲಾ ಮಕ್ಕಳಂತೆ ಬ್ಯಾಟ್‌ ಬೀಸಿದ್ರಿ

“ಶಾದಾಬ್, ಇಫ್ತಿಕರ್, ಸಲ್ಮಾನ್ ಔಟಾದ ರೀತಿ ನೋಡಿ. ಮ್ಯಾನೇಜ್‌ಮೆಂಟ್‌ ಅವರಿಗೆ ಪೂರ್ಣ ಓವರ್‌ಗಳನ್ನು ಆಡಲು ಹೇಳಬೇಕಾಗಿತ್ತು. ತಂಡದ ಮೊತ್ತವನ್ನು ಕನಿಷ್ಠ 260-280ರವರೆಗೆ ಕೊಂಡೊಯ್ಯಲು ತಿಳಿಸಬೇಕಿತ್ತು. ಅವರಿಗೆ ಪಿಸಿಬಿಯು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ತಿಳಿದಿದೆ. ಆಟಕ್ಕೊಂದು ಯೋಜನೆಯಿಲ್ಲ, ಏನೂ ಇಲ್ಲ. ಎಲ್ಲರೂ ರಜೆಯ ಮಜಾ ಉಡಾಯಿಸಲು ಹೋಗಿದ್ದಾರೆ. ನನಗೆ ಹೇಳಲು ಸರಿ ಅನಿಸುತ್ತಿಲ್ಲ. ಆದ್ರೂ ಹೇಳುತ್ತೇನೆ. ನೀವು ವಿಶ್ವದ ಉನ್ನತ ತಂಡದ ವಿರುದ್ಧ ಶಾಲಾ ಮಕ್ಕಳಂತೆ ಆಡಿದ್ರಿ” ಎಂದು ಅಕ್ಮಲ್‌ ವ್ಯಂಗ್ಯವಾಡಿದ್ದಾರೆ.

ಪ್ರಸಕ್ತ ಏಷ್ಯಾಕಪ್‌ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ. ಇದೇ ವೇಳೆ ಬಾಂಗ್ಲಾದೇಶವು ಏಷ್ಯಾಕಪ್‌ ಟೂರ್ನಿಯಿಂದ ಹೊರಬಿದ್ದಿದೆ. ಸದ್ಯ ಅಖಾಡದಲ್ಲಿ ಉಳಿದಿರುವುದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮಾತ್ರ. ಈ ಎರಡು ತಂಡಗಳಲ್ಲಿ ಯಾವ ತಂಡ ಫೈನಲ್‌ಗೆ ಪ್ರವೇಶಿಸಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ. ಉಭಯ ತಂಡಗಳ ನಡುವೆ ಗುರುವಾರ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ಭಾರತದೊಂದಿಗೆ ಫೈನಲ್‌ ಪಂದ್ಯದಲ್ಲಿ ಆಡಲಿದೆ. ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತನ್ನ ತವರಿನ ಲಾಭ ಪಡೆಯುವ ನಿರೀಕ್ಷೆ ಇದೆ. ಇಂದು ಗೆಲುವು ಸಾಧಿಸುವ ತಂಡ ಸೆಪ್ಟೆಂಬರ್ 17 (ಭಾನುವಾರ) ನಡೆಯುವ ಫೈನಲ್‌ ಸಮರದಲ್ಲಿ ಟೀಮ್ ಇಂಡಿಯಾವನ್ನು ಎದುರಿಸಲಿದೆ.‌ ಒಂದು ವೇಳೆ ಪಂದ್ಯವು ಮಳೆಯಿಂದ ರದ್ದಾದರೆ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಫೈನಲ್‌ಗೆ ಬರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ