logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತದ ಪಿಚ್ ಆಸೀಸ್, ಇಂಗ್ಲೆಂಡ್‌ಗೆ ಹೊಸತೇನಲ್ಲ; ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡ ಹೆಸರಿಸಿದ ಚಾಪೆಲ್

ಭಾರತದ ಪಿಚ್ ಆಸೀಸ್, ಇಂಗ್ಲೆಂಡ್‌ಗೆ ಹೊಸತೇನಲ್ಲ; ವಿಶ್ವಕಪ್ ಗೆಲ್ಲುವ ಫೇವರೆಟ್ ತಂಡ ಹೆಸರಿಸಿದ ಚಾಪೆಲ್

Jayaraj HT Kannada

Jan 09, 2024 07:30 PM IST

google News

ಟೀಮ್‌ ಇಂಡಿಯಾ ಕುರಿತು ಗ್ರೆಗ್ ಚಾಪೆಲ್ ಅಭಿಪ್ರಾಯ

    • ODI World Cup 2023: ಆಸ್ಟ್ರೇಲಿಯಾ ದಿಗ್ಗಜ ಆಟಗಾರ ಗ್ರೆಗ್ ಚಾಪೆಲ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಆಟಗಾರರಿಗೆ ಭಾರತದ ಪಿಚ್ ಪರಿಸ್ಥಿತಿಗಳ ಕುರಿತು ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಟೀಮ್‌ ಇಂಡಿಯಾ ಕುರಿತು ಗ್ರೆಗ್ ಚಾಪೆಲ್ ಅಭಿಪ್ರಾಯ
ಟೀಮ್‌ ಇಂಡಿಯಾ ಕುರಿತು ಗ್ರೆಗ್ ಚಾಪೆಲ್ ಅಭಿಪ್ರಾಯ

ಹಾಲಿ ಚಾಂಪಿಯನ್‌ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು 2023ರ ವಿಶ್ವಕಪ್‌ಗೆ (2023 World Cup) ತಮ್ಮ ಪ್ರಾಥಮಿಕ ತಂಡಗಳನ್ನು ಘೋಷಿಸಿವೆ. ಇದೇ ಮೊದಲ ಬಾರಿಗೆ ಪಂದ್ಯಾವಳಿಯು ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ. ಈ ಹಿಂದೆ 2011ರಲ್ಲಿ ನಡೆದಿದ್ದ ಟೂರ್ನಿಯನ್ನು ಭಾರತವು ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾದೇಶದೊಂದಿಗೆ ಜಂಟಿಯಾಗಿ ಆಯೋಜಿಸಿತ್ತು. ಈ ಬಾರಿ ಸಂಪೂರ್ಣ ಪಂದ್ಯಾವಳಿಗೆ ದೇಶವು ಆತಿಥ್ಯ ವಹಿಸುತ್ತಿರುವುದರಿಂದ ಟೂರ್ನಿಯ ಅದ್ಧೂರಿತನ ಹೆಚ್ಚಲಿದೆ.

ಪಂದ್ಯಾವಳಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಗೆಲ್ಲುವ ಫೇವರೆಟ್‌ ತಂಡಗಳ ಹೆಸರು ಕೂಡಾ ಕೇಳಿ ಬರುತ್ತಿವೆ. ಪ್ರಸಕ್ತ ಆವೃತ್ತಿಗೆ ಹಾಲಿ ಚಾಂಪಿಯನ್ ಆಗಿ ಎಂಟ್ರಿ ಕೊಡುತ್ತಿರುವ ಇಂಗ್ಲೆಂಡ್ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ‌ ತಂಡಗಳೇ ಕನಿಷ್ಠ ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳು ಎಂದು ಬಹುತೇಕ ಮಾಜಿ ಆಟಗಾರರು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಟೀಮ್‌ ಇಂಡಿಯಾದ ಮಾಜಿ ಮುಖ್ಯ ಕೋಚ್ ಆಗಿರುವ ಬ್ಯಾಟಿಂಗ್ ದಿಗ್ಗಜ ಗ್ರೆಗ್ ಚಾಪೆಲ್ ಕೂಡಾ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್‌, ಆಸ್ಟ್ರೇಲಿಯಾಗೆ ಭಾರತದ ಪಿಚ್‌ ಹೊಸದೇನಲ್ಲ

ಪಂದ್ಯವು ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವುದರಿಂದ ಏಷ್ಯಾದ ತಂಡಗಳಿಗೆ ಆಟದ ಲಾಭವಿದ್ದರೂ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕೂಡಾ ಭಾರತದ ಮೈದಾನಗಳ ಪರಿಸ್ಥಿತಿಗಳಿಗೆ ಹೊಸದೇನಲ್ಲ ಎಂದು ಹೇಳಿದ್ದಾರೆ.

“ತವರಿನ ತಂಡಕ್ಕೆ ಅನುಕೂಲವಾಗಲಿದೆ. ಅಲ್ಲದೆ ಏಷ್ಯನ್ ತಂಡಗಳು ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹಲವು ಪಂದ್ಯಗಳನ್ನಾಡಿದ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಮೈದಾನಗಳು ಇನ್ನೂ ರಹಸ್ಯವಾಗಿ ಉಳಿದಿದೆ ಎಂದು ನನಗನಿಸುತ್ತಿಲ್ಲ. ಪರಿಸ್ಥಿತಿಗಳಲ್ಲಿನ ವ್ಯತ್ಯಾಸಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಕೆಲವು ಇಂಗ್ಲೆಂಡ್ ಆಟಗಾರರು ಸಹ ಈಗ ಭಾರತದಲ್ಲಿ ಸಮಯ ಕಳೆಯುತ್ತಾರೆ,” ಎಂದು ಚಾಪೆಲ್ ರೇವ್‌ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

ತವರಿನಲ್ಲಿ ಭಾರತ ಬಲಿಷ್ಠ

ಭಾರತವು ಯಾವುದೇ ಸ್ವರೂಪದ ಪಂದ್ಯವಾಡಿದರೂ ತವರಿನಲ್ಲಿ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಪರಿಗಣಿಸಿ ಭಾರತವು ಯಾವಾಗಲೂ ಗೆಲ್ಲುವ ಅಚ್ಚುಮೆಚ್ಚಿನ ತಂಡವಾಗಿರುತ್ತದೆ ಎಂದು ಚಾಪೆಲ್ ಹೇಳಿದರು. ಆಸ್ಟ್ರೇಲಿಯಾದ ಮಾಜಿ ನಾಯಕ 2005ರಿಂದ 2007ರವರೆಗೆ ಭಾರತದ ಮುಖ್ಯ ಕೋಚ್ ಆಗಿದ್ದಾಗ ತಂಡವು ತಮ್ಮ ಎದುರಾಳಿಗಳ ವಿರುದ್ಧ ತಮ್ಮ ತವರಿನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಗಮನಿಸಿದ ಪರಿಯನ್ನು ವಿವರಿಸಿದರು.

“ಭಾರತ ತಂಡ ತವರಿನಲ್ಲಿ ಯಾವಾಗಲೂ ಉತ್ತಮವಾಗಿ ಆಡಿದೆ. ಡ್ರೆಸ್ಸಿಂಗ್ ಕೋಣೆಯಲ್ಲಿ ಕುಳಿತು ಎದುರಾಳಿ ತಂಡಗಳನ್ನು ನೋಡುವುದು ನನಗೆ ಬಹಳ ಆಸಕ್ತಿದಾಯಕವಾಗಿತ್ತು. ಭಾರತ ತಂಡವು ಸಾಕಷ್ಟು ಆರಾಮದಾಯಕವಾಗಿತ್ತು. ಅಲ್ಲದೆ ತವರಿನ ಮೈದಾನಗಳಲ್ಲಿ ಯಾವುದೇ ತಂಡವಾದರೂ ಉತ್ತಮ ಪ್ರದರ್ಶನ ನೀಡಬಹುದು ಎಂಬ ಭಾವನೆ ಪ್ರತಿ ಬಾರಿಯೂ ಇತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಯಾವುದೇ ಪಂದ್ಯವಾದರೂ ಭಾರತ ನೆಚ್ಚಿನ ತಂಡವಾಗಿ ಆಡುತ್ತದೆ ಎಂದು ನಾನು ಭಾವಿಸುತ್ತೇನೆ. ಎದುರಾಳಿ ತಂಡಗಳು ಅವರನ್ನು ಸೋಲಿಸಲು ಶ್ರಮ ವಹಿಸಬೇಕು" ಎಂದು ಅವರು ವಿವರಿಸಿದ್ದಾರೆ.

ವಿರಾಟ್‌ಗೆ ಚಾಪೆಲ್‌ ಸಲಹೆ

ಭಾರತದ ಅನುಭವಿ ಬ್ಯಾಟರ್‌ ವಿರಾಟ್ ಕೊಹ್ಲಿ, ಬಹುಶಃ ಹೆಚ್ಚು ರನ್‌ ಗಳಿಸಲು ವಿಶೇಷ ಪ್ರಯತ್ನ ಮಾಡಬೇಕಾದ ಹಂತದಲ್ಲಿದ್ದಾರೆ ಎಂದು ಅವರು ಹೇಳಿದರು. “ವಿರಾಟ್ ಅವರಿಗೆ ಹೆಚ್ಚು ರನ್ ಗಳಿಸಲು ವಿಶೇಷ ಪ್ರಯತ್ನದ ಅಗತ್ಯವಿದೆ. ಅವರು ತಮ್ಮ ವೃತ್ತಿಜೀವನದ ಆ ಹಂತದಲ್ಲಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ವಿರಾಟ್ ಆಟವಾಡುವಾಗ ಮಾನಸಿಕವಾಗಿ ಫ್ರೆಶ್ ಆಗಬೇಕು. ಅದಕ್ಕಾಗಿ ಏನು ಮಾಡಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ವಿರಾಟ್ ಅದನ್ನು ಸಾಧಿಸಲು ಸಾಧ್ಯವಾದರೆ, ಅವರು ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ,” ಎಂದು ಅವರು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ