ಪೂಜಾರಗಿಂತ ಉತ್ತಮ ಬ್ಯಾಟರ್ ನಮ್ಮಲ್ಲಿ ಯಾರೂ ಇಲ್ಲ, ಅವರನ್ನು ಹೊರಗಿಡಲು ಕಾರಣ ಏನೆಂದೇ ಗೊತ್ತಿಲ್ಲ; ಹರ್ಭಜನ್
Dec 29, 2023 09:50 PM IST
ಟೆಸ್ಟ್ ತಂಡದಲ್ಲಿ ಚೇತೇಶ್ವರ್ ಪೂಜಾರ ಅನುಪಸ್ಥಿತಿಯನ್ನು ಪ್ರಶ್ನಿಸಿದ ಹರ್ಭಜನ್ ಸಿಂಗ್
- Harbhajan Singh: ಭಾರತ ಟೆಸ್ಟ್ ತಂಡದಲ್ಲಿ ಪೂಜಾರ ಅನುಪಸ್ಥಿತಿಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ (South Africa vs India) ಭಾರತದ ಸೋಲಿನ ಸರಣಿ ಮುಂದುವರೆದಿದೆ. ಸತತ 30 ವರ್ಷಗಳಿಂದ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಭಾರತದ ಪಾಲಿಗೆ ದೂರದ ಬೆಟ್ಟವಾಗಿಯೇ ಉಳಿದಿದೆ. ಕೇವಲ ಮೂರೇ ದಿನಕ್ಕೆ ಇಂಡೋ-ಆಫ್ರಿಕಾ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಸೋತಿದ್ದು, ತಂಡದ ಆಟದ ತಂತ್ರಕ್ಕೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡಾ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಬಹಿರಂಗಪಡಿಸಿದ್ದು, ಒಬ್ಬ ಆಟಗಾರನ್ನು ತಂಡ ಮಿಸ್ ಮಾಡಿಕೊಂಡಿತು ಎಂದಿದ್ದಾರೆ. ಅಲ್ಲದೆ ಪ್ರಮುಖ ಕ್ರಿಕೆಟಿಗರನ್ನು ಆಯ್ಕೆ ಮಾಡದೇ ಇರುವುದಕ್ಕೆ ಆಯ್ಕೆಗಾರ ಮುಂದೆ ಪ್ರಶ್ನೆ ಇಟ್ಟಿದ್ದಾರೆ.
ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್, ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಖಂಡಿಸಿದ್ದಾರೆ. ಅಲ್ಲದೆ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಕೈಬಿಡುವುದರ ಹಿಂದಿನ ತರ್ಕವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಅಶ್ವಿನ್, ಪ್ರಸಿದ್ಧ್ ಹೊರಕ್ಕೆ, ಜಡೇಜಾ ಕಂಬ್ಯಾಕ್; ಇಂತಿದೆ 2ನೇ ಟೆಸ್ಟ್ಗೆ ಭಾರತ ಆಡುವ 11ರ ಬಳಗ
2023ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಹಿಂತಿರುಗಿದ್ದ ರಹಾನೆ, ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದರು. ಪೂಜಾರ ಕೂಡಾ ಕೊನೆಯ ಬಾರಿಗೆ ಡಬ್ಲ್ಯುಟಿಸಿ ಪಂದ್ಯದಲ್ಲಿ ಆಡಿದ್ದರು.
ಸದ್ಯ ಭಾರತ ತಂಡದಲ್ಲಿ ಪೂಜಾರ ಅನುಪಸ್ಥಿತಿಯಿಂದ ಆಫ್ ಸ್ಪಿನ್ನರ್ ಬೇಸರಗೊಂಡಿದ್ದಾರೆ. ಹಲವು ಪಂದ್ಯಗಳಲ್ಲಿ ಸುದೀರ್ಘ ಇನ್ನಿಂಗ್ಸ್ ಆಡಿದ್ದ ಪೂಜಾರ, ಈ ಹಿಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ 32.00 ಸರಾಸರಿಯಲ್ಲಿ 928 ರನ್‌ಗಳನ್ನು ಗಳಿಸಿದ್ದರು. ಭಾರತದ ಪರ ಇದು ಎರಡನೇ ಅತಿ ಹೆಚ್ಚು ರನ್. ಕೊಹ್ಲಿ 32.13 ಸರಾಸರಿಯಲ್ಲಿ 932 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
“ನೀವು (ಬಿಸಿಸಿಐ) ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡಿಲ್ಲ. ಅತ್ತ ಚೇತೇಶ್ವರ ಪೂಜಾರ ಅವರನ್ನು ಕೂಡಾ ವಿನಾಕಾರಣ ತಂಡದಿಂದ ಹೊರಗಿಟ್ಟಿದ್ದೀರಿ. ಈ ಇಬ್ಬರು ಆಟಗಾರರು ಎಲ್ಲ ಪಂದ್ಯಗಳಲ್ಲೂ ರನ್ ಗಳಿಸಿದ್ದಾರೆ. ಈ ಹಿಂದಿನ ದಾಖಲೆಯನ್ನು ನೋಡಿದರೆ ಪೂಜಾರ ಅವರು ಕೊಹ್ಲಿಯಂತೆಯೇ ತಂಡಕ್ಕೆ ಕೊಡುಗೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಪೂಜಾರ ಅವರನ್ನು ತಂಡದಿಂದ ಏಕೆ ಹೊರಗಿಡಲಾಗಿದೆ ಎಂಬುದು ನನಗೆ ಇನ್ನೂ ತಿಳಿಯುತ್ತಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರಿಗಿಂತ ಉತ್ತಮ ಬ್ಯಾಟರ್ ನಮ್ಮಲ್ಲಿ ಯಾರೂ ಇಲ್ಲ. ಅವರು ನಿಧಾನವಾಗಿ ಆಡುತ್ತಾರೆ ಹೌದು. ಆದರೆ ತಂಡವನ್ನು ಉಳಿಸುತ್ತಾರೆ. ಅವರಿಂದಾಗಿಯೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಭಾರತ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ,” ಎಂದು ಹರ್ಭಜನ್ ಹೇಳಿದ್ದಾರೆ.
ಇದನ್ನೂ ಓದಿ | ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ 5 ಕಾರಣಗಳು
ಸೆಂಚುರಿಯನ್ ಮೈದಾನದಲ್ಲಿ ಭಾರತೀಯ ಬ್ಯಾಟರ್‌ಗಳು ರಕ್ಷಣಾತ್ಮಕ ಮನೋಭಾವದಿಂದ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಟೀಮ್ ಇಂಡಿಯಾ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ಗೆ ತಕ್ಕಂತೆ ಆಟದ ತಂತ್ರದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಿಲ್ಲ. ಬೌಂಡರಿ ಬಾರಿಸುವ ಮೂಲಕವೇ ರನ್ ಕಲೆಹಾಕುವ ಪ್ರವೃತ್ತಿಯು ಭಾರತದ ಬ್ಯಾಟರ್‌ಗಳಿಗೆ ಮುಳುವಾಯ್ತು. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಅವರಂಥ ದಿಟ್ಟ ರಕ್ಷಣಾತ್ಮಕ ಆಟಗಾರರ ಕೊರತೆ ತಂಡದಲ್ಲಿ ಎದ್ದು ಕಾಣುತ್ತಿತ್ತು. ಯಶಸ್ವಿ ಜಸ್ವಾಲ್ ಹಾಗೂ ಶುಭ್ಮನ್ ಗಿಲ್ ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಅನುಭವ ಇಲ್ಲ. ಹೀಗಾಗಿ ಅನುಭವಸ್ಥ ಆಟಗಾರರ ಅನುಪಸ್ಥಿತಿ ತಂಡದಲ್ಲಿತ್ತು.
ವಿಡಿಯೋ ನೋಡಿ | ಕಾಟೇರ ಸಂಭ್ರಮ; ಬಿರಿಯಾನಿ ತಿಂದು ಕುಣಿದು ಕುಪ್ಪಳಿಸಿದ ಡಿ ಬಾಸ್ ಫ್ಯಾನ್ಸ್