ಶಿವಮೊಗ್ಗ ಮಣಿಸಿ ಮೊದಲ ತಂಡವಾಗಿ ಮಹಾರಾಜ ಟ್ರೋಫಿ ಸೆಮಿಫೈನಲ್ ಪ್ರವೇಶಿಸಿದ ಹುಬ್ಬಳ್ಳಿ ಟೈಗರ್ಸ್
Aug 25, 2023 09:56 PM IST
ಹುಬ್ಬಳ್ಳಿ ತಂಡಕ್ಕೆ ಜಯ
- Maharaja Trophy: ಹುಬ್ಬಳ್ಳಿ ಟೈಗರ್ಸ್ ತಂಡವು ಪ್ರಸಕ್ತ ಆವೃತ್ತಿಯ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಯ್ತು.
ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ (Hubli Tigers) ತಂಡವು ಮಹಾರಾಜ ಟ್ರೋಫಿಯ (Maharaja Trophy KSCA T20 2023) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಶಿವಮೊಗ್ಗ ಲೈಯನ್ಸ್ (Shivamogga Lions) ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಗೆದ್ದ ಮನೀಶ್ ಪಾಂಡೆ (Manish Pandey) ಬಳಗವು ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಯ್ತು. ಅತ್ತ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮೊದಲ ತಂಡವಾಗಿ ಟೂರ್ನಿಯಿಂದ ನಿರ್ಗಮಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶಿವಮೊಗ್ಗ ತಂಡವು, ಹುಬ್ಬಳ್ಳಿ ಬೌಲರ್‌ಗಳ ದಾಳಿಗೆ ತುತ್ತಾಗಿ ಅಲ್ಪ ಮೊತ್ತಕ್ಕೆ ಕುಸಿಯಿತು. ಎಲ್ಲಾ 20 ಓವರ್ ಬ್ಯಾಟ್ ಬೀಸಿದರೂ, 130 ರನ್‌ಗಳಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಟೈಗರ್ಸ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡರೂ, 18.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಸಾಧಾರಣ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಆರಂಭದಲ್ಲೇ ಆಘಾತ ಎದುರಿಸಿತು. ಮೊದಲ ಎಸೆತದಲ್ಲೇ ಶಿವಂ ಎಂಬಿ ಗೋಲ್ಡನ್ ಡಕ್ ಆದರು. ಪವರ್‌ಪ್ಲೇ ಒಳಗೆ 41 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟ ಅನುಭವಿಸಿತು. ಈ ನಡುವೆ ಅರ್ಧಶತಕ ಸಿಡಿಸಿದ ಶ್ರೀಜಿತ್ ತಂಡಕ್ಕೆ ನಿಧಾನಗತಿಯಲ್ಲಿ ರನ್ ಕಲೆ ಹಾಕುತ್ತಾ ಸಾಗಿದರು. ನಾಯಕನಾಟವಾಡಲು ವಿಫಲವಾದ ಮನೀಶ್ ಪಾಂಡೆ, 8 ಎಸೆತಗಳಲ್ಲಿ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಲವಿಶ್ ಕೌಶಲ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹುಬ್ಬಳ್ಳಿ ತಂಡವು ಸುಲಭವಾಗಿ ಸೆಮಿ ಕದನಕ್ಕೆ ಲಗ್ಗೆ ಹಾಕಿದೆ. ಅತ್ತ ಶಿವಮೊಗ್ಗ ತಂಡವು 5ನೇ ಸ್ಥಾನದಲ್ಲಿದ್ದು, ಮುಂದಿನ ಹಂತಕ್ಕೆ ಲಗ್ಗೆ ಹಾಕಲು ಇತರ ತಂಡಗಳ ಸೋಲು ಗೆಲುವನ್ನು ನೆಚ್ಚಿಕೊಳ್ಳಬೇಕಿದೆ.
ಆಗಸ್ಟ್ 26 ಮತ್ತು 27ರಂದು ಎರಡು ದಿನ ಲೀಗ್ ಹಂತದ ನಾಲ್ಕು ಪಂದ್ಯಗಳು ನಡೆಯಲಿದೆ. 28ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, 29ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ಗೆ ಮೊದಲ ಜಯ
ಮಹಾರಾಜ ಟ್ರೋಫಿ (Maharaja Trophy KSCA T20 2023) ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ (Bengaluru Blasters) ತಂಡವು ಕೊನೆಗೂ ಮೊದಲ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮಹಾರಾಜ ಟ್ರೋಫಿಯ 25ನೇ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಪಡೆಯು ಮೈಸೂರು ವಾರಿಯರ್ಸ್ ತಂಡವನ್ನು 10 ರನ್‌ಗಳಿಂದ ಸೋಲಿಸಿದೆ. ಸತತ ಎಂಟು ಪಂದ್ಯಗಳನ್ನು ಸೋತ ಬಳಿಕ ಇದು ತಂಡದ ಮೊದಲನೇ ಗೆಲುವು. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.