logo
ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಇನ್ನೇನು ಮಾಡಬೇಕಿತ್ತು; ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಮೊಹಮ್ಮದ್ ಶಮಿ

ನಾನು ಇನ್ನೇನು ಮಾಡಬೇಕಿತ್ತು; ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಮೊಹಮ್ಮದ್ ಶಮಿ

Prasanna Kumar P N HT Kannada

Jul 21, 2024 07:00 AM IST

google News

2019ರ ವಿಶ್ವಕಪ್ ಸೆಮೀಸ್​ಗೆ ಕೈಬಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಮೊಹಮ್ಮದ್ ಶಮಿ

    • Mohammed Shami: ನಾನು 2019ರ ಏಕದಿನ ವಿಶ್ವಕಪ್​ನಲ್ಲಿ ಆಡಿದ 4 ಪಂದ್ಯಗಳಲ್ಲಿ 14 ವಿಕೆಟ್​ ಪಡೆದರೂ ಸೆಮಿಫೈನಲ್​ ಪಂದ್ಯದಲ್ಲಿ ಏಕೆ ಅವಕಾಶ ನೀಡಿಲ್ಲ ಎಂದು ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಅವರಿಗೆ ವೇಗಿ ಮೊಹಮ್ಮದ್ ಶಮಿ ಪ್ರಶ್ನಿಸಿದ್ದಾರೆ.
2019ರ ವಿಶ್ವಕಪ್ ಸೆಮೀಸ್​ಗೆ ಕೈಬಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಮೊಹಮ್ಮದ್ ಶಮಿ
2019ರ ವಿಶ್ವಕಪ್ ಸೆಮೀಸ್​ಗೆ ಕೈಬಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ವಿರುದ್ಧ ಸಿಡಿದೆದ್ದ ಮೊಹಮ್ಮದ್ ಶಮಿ

ಐಸಿಸಿ ಏಕದಿನ ಕ್ರಿಕೆಟ್​ ವಿಶ್ವಕಪ್​​-2019 ಟೂರ್ನಿಯಲ್ಲಿ ಕಣಕ್ಕಿಳಿದ 4 ಪಂದ್ಯಗಳಲ್ಲಿ14 ವಿಕೆಟ್​ ಪಡೆದರೂ ಕೊನೆಯ ಲೀಗ್​ ಪಂದ್ಯಕ್ಕೆ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ​ಪಂದ್ಯಕ್ಕೆ ನನಗೇಕೆ ಅವಕಾಶ ನೀಡಲಿಲ್ಲ ಎಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರು ಅಂದಿನ ಕೋಚ್ ರವಿ ಶಾಸ್ತ್ರಿ ಹಾಗೂ ಅಂದಿನ ನಾಯಕ ವಿರಾಟ್ ಕೊಹ್ಲಿ ಅವರಿಗೆ ಈಗ ಪ್ರಶ್ನೆ ಹಾಕಿದ್ದಾರೆ.

2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ರವಿ ಶಾಸ್ತ್ರಿ ಕೋಚ್​ ಆಗಿದ್ದರು. ಆದರೆ ಈ ಟೂರ್ನಿಯಲ್ಲಿ ಮೊದಲ 4 ಪಂದ್ಯಗಳಿಗೆ ಶಮಿ ಅವರನ್ನು ಡ್ರಾಪ್ ಮಾಡಲಾಗಿತ್ತು. ನಂತರ ಅಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿದ ಶಮಿ, ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ವೆಸ್ಟ್ ಇಂಡೀಸ್ ಎದುರು 4 ವಿಕೆಟ್, ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಗೊಂಚಲು, ಬಾಂಗ್ಲಾ ಎದುರು 1 ವಿಕೆಟ್ ಕಿತ್ತಿದ್ದರು.

ಆದಾಗ್ಯೂ, ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್​​ ಪಂದ್ಯಕ್ಕೆ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಅಲ್ಲದೆ, ಸೆಮಿಫೈನಲ್​​ ಪಂದ್ಯಕ್ಕೂ ಕಡೆಗಣಿಸಲಾಗಿತ್ತು. ನ್ಯೂಜಿಲೆಂಡ್​ ವಿರುದ್ಧದ ಸೆಮೀಸ್​ನಲ್ಲಿ ಶಮಿಯನ್ನು ಕೈಬಿಟ್ಟಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವಿಕೆಟ್ ಬೇಟೆಯಾಡುತ್ತಿದ್ದ ಶಮಿಯನ್ನು ನಿರ್ಲಕ್ಷಿಸಿದ್ದಕ್ಕೆ ನಾಯಕ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಕ್ರಿಕೆಟ್​​ ಅಭಿಮಾನಿಗಳ ಹಾಗೂ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಪಂದ್ಯದಲ್ಲಿ ಭಾರತ, ಕಿವೀಸ್ ವಿರುದ್ಧ 18 ರನ್ನಿಂದ ಸೋತಿತ್ತು.

ನನ್ನನ್ನು ಕಡೆಗಣಿಸಿದ್ದೇಕೆ ಎಂದು ಶಮಿ ಪ್ರಶ್ನೆ

ಇದೀಗ 5 ವರ್ಷಗಳ ಬಳಿಕ ಈ ಬಗ್ಗೆ ಶಮಿ ಪ್ರತಿಕ್ರಿಯಿಸಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದರೂ ಅವಕಾಶ ನೀಡದಿರಲು ಕಾರಣವೇನು ಎಂದು ಅಂದಿನ ಟೀಮ್​ ಮ್ಯಾನೇಜ್ಮೆಂಟ್​ ಅನ್ನು ಪ್ರಶ್ನಿಸಿದ್ದಾರೆ. ಇನ್ನೂ ಹೇಗೆ ಪ್ರದರ್ಶನ ನೀಡಬೇಕಿತ್ತು ಎಂದು ಮತ್ತೊಂದು ಪ್ರಶ್ನೆ ಹಾಕಿದ್ದಾರೆ ವೇಗದ ಬೌಲರ್​. ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಶೋ 'ಅನ್​ಪ್ಲಗ್​​'ನಲ್ಲಿ ಈ ಕುರಿತು ಶಮಿ ಮಾತನಾಡಿದ್ದಾರೆ.

2019ರಲ್ಲಿ ಟೀಮ್ ಮ್ಯಾನೇಜ್ಮೆಂಟ್ ನಿಲುವು ನನ್ನನ್ನು ಗೊಂದಲಕ್ಕೀಡು ಮಾಡಿತು. ಪ್ರತಿ ತಂಡಕ್ಕೆ ಉತ್ತಮ ಪ್ರದರ್ಶನಕಾರರ ಅಗತ್ಯ ಇದೆ. ಆದರೆ ಅತ್ಯುತ್ತಮ ಪ್ರದರ್ಶನ ನೀಡಿದರೂ ನನ್ನನ್ನು ಏಕೆ ಕಡೆಗಣಿಸಲಾಯಿತು. 2019ರಲ್ಲಿ ನಾನು ಮೊದಲ 4 ಪಂದ್ಯಗಳನ್ನು ಆಡಿರಲಿಲ್ಲ. ಮುಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದೆ. ನಂತರ 4 ವಿಕೆಟ್, 5 ವಿಕೆಟ್ ಪಡೆದೆ. 2023ರಲ್ಲಿಯೂ ಇದೇ ರೀತಿಯ ಆಗಿತ್ತು. ನಾನು ಮೊದಲ 4 ಪಂದ್ಯಗಳಲ್ಲಿ ಆಡಲಿಲ್ಲ. ನಂತರ ವಿಕೆಟ್ ಮೇಲೆ ವಿಕೆಟ್ ಪಡೆದಿದ್ದೆ ಎಂದು ಹೇಳಿದ್ದಾರೆ.

ನನ್ನಿಂದ ಇನ್ನೇನು ನಿರೀಕ್ಷಿಸುತ್ತೀರಿ ಎಂದ ಶಮಿ

ನಾನು ಮೂರು ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದೆ. ಆದರೆ, ನೀವು ನನ್ನಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಿದ್ರಿ? ನನ್ನ ಬಳಿ ಪ್ರಶ್ನೆಗಳೂ ಇಲ್ಲ, ಉತ್ತರಗಳೂ ಇಲ್ಲ. ನನಗೆ ಅವಕಾಶ ಸಿಕ್ಕರೆ ತಾನೇ ನಾನೂ ಸಾಮರ್ಥ್ಯ ಸಾಬೀತುಪಡಿಸಬಲ್ಲೆ. ನೀವು ನನಗೆ ಅವಕಾಶ ನೀಡಿದ್ದೀರಿ. ಅದರಂತೆ ನಾನು 3 ಪಂದ್ಯಗಳಲ್ಲಿ 13 ವಿಕೆಟ್​ ಪಡೆದಿದ್ದೆ. 4 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದೆ. ಆದರೂ ಶ್ರೀಲಂಕಾ ಮತ್ತು ಸೆಮಿಫೈನಲ್​ ಪಂದ್ಯದಲ್ಲಿ ನನ್ನನ್ನು ಏಕೆ ಆಡಿಸಲಿಲ್ಲ. ಅದಕ್ಕಿಂತ ನನ್ನಿಂದ ಇನ್ನೇನು ನಿರೀಕ್ಷೆ ಮಾಡಿದ್ರಿ ಎಂದು ಕೇಳಿದ್ದಾರೆ.

2023ರಲ್ಲಿ 7 ಪಂದ್ಯಗಳಿಂದ 24 ವಿಕೆಟ್ ಪಡೆದಿದ್ದ ಶಮಿ, ಮೊದಲ 4 ಪಂದ್ಯಗಳಿಗೆ ಬೆಂಚ್ ಕಾದಿದ್ದರು. ನಂತರ ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಗುಳಿದ ಬಳಿಕವೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದರು. ವಿಕೆಟ್ ಬೇಟೆಯಾಡಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದ ಬೌಲರ್ ಆಗಿ ಹೊರಹೊಮ್ಮಿದರು.

2019ರ ವಿಶ್ವಕಪ್​ನಲ್ಲಿ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಂದರ್ಭ.

ಏಕದಿನ ಕ್ರಿಕೆಟ್ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಐದನೇ ಹಾಗೂ ಏಷ್ಯಾದ ಮೂರನೇ ಮತ್ತು ಭಾರತದ ಮೊದಲ ಬೌಲರ್​​ ಮೊಹಮ್ಮದ್ ಶಮಿ. ಅವರು ನಾಲ್ಕು ಸಲ ಐದು ವಿಕೆಟ್​ ಗೊಂಚಲು ಪಡೆದ ಏಕೈಕ ಬೌಲರ್ ಕೂಡ ಹೌದು. ಆದರೆ 2019 ಮತ್ತು 2023ರ ವಿಶ್ವಕಪ್​​ನಲ್ಲಿ ಶಮಿ ಪ್ಲೇಯಿಂಗ್​​​ 11ರಲ್ಲಿ ಅವಕಾಶ ಪಡೆದಿದ್ದು 4 ಪಂದ್ಯಗಳ ನಂತರ. ಆ ಬಳಿಕ ಅವಕಾಶ ಪಡೆದಿದ್ದ ಶಮಿ ವಿಕೆಟ್ ಬೇಟೆಯಾಡಿದ್ದರು.

2015, 2019 ಮತ್ತು 2023ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ (ಮೂರು ವಿಶ್ವಕಪ್​​​ಗಳಲ್ಲಿ) ಭಾರತ 28 ಪಂದ್ಯಗಳನ್ನು ಆಡಿದೆ. ಆದರೆ, ಶಮಿ ಆಡಿರುವುದು ಮಾತ್ರ 18 ಪಂದ್ಯಗಳಲ್ಲಿ. ಈ ಪೈಕಿ ಟೀಮ್ ಇಂಡಿಯಾ 15 ಪಂದ್ಯಗಳನ್ನು ಗೆದ್ದಿದೆ. 2023ರ ವರ್ಲ್ಡ್​​​ಕಪ್​​ನಲ್ಲೂ ಶಮಿ ಕಣಕ್ಕಿಳಿದಿದ್ದು ನಾಲ್ಕು ಪಂದ್ಯಗಳ ನಂತರವೇ. ಹಾರ್ದಿಕ್ ಪಾಂಡ್ಯ ಗಾಯಗೊಂಡ ನಂತರ ಆಡುವ 11ರ ಬಗಳದಲ್ಲಿ ಸ್ಥಾನ ಪಡೆದಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ