logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ಗೆ ಭಯೋತ್ಪಾದಕ ದಾಳಿ ಬೆದರಿಕೆ; ವೆಸ್ಟ್ ಇಂಡೀಸ್‌ನಲ್ಲಿ ಕಟ್ಟೆಚ್ಚರ, ಐಸಿಸಿ ಪ್ರತಿಕ್ರಿಯೆ

ಟಿ20 ವಿಶ್ವಕಪ್‌ಗೆ ಭಯೋತ್ಪಾದಕ ದಾಳಿ ಬೆದರಿಕೆ; ವೆಸ್ಟ್ ಇಂಡೀಸ್‌ನಲ್ಲಿ ಕಟ್ಟೆಚ್ಚರ, ಐಸಿಸಿ ಪ್ರತಿಕ್ರಿಯೆ

Jayaraj HT Kannada

May 06, 2024 02:12 PM IST

ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಯೋತ್ಪಾದಕ ದಾಳಿ ಬೆದರಿಕೆ

    • ICC T20 World Cup 2024: ಟಿ20 ವಿಶ್ವಕಪ್ ಪಂದ್ಯಾವಳಿಗೆ ಉಗ್ರ ದಾಳಿಯ ಬೆದರಿಕೆ ಇದೆ. ಐಎಸ್-ಖೊರಾಸನ್ ಸೇರಿದಂತೆ ಐಎಸ್ ಪರ ಮಾಧ್ಯಮಗಳಿಂದ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿರುವ ಟೂರ್ನಿಗೆ  ಸಂಭಾವ್ಯ ಬೆದರಿಕೆಗಳ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಯೋತ್ಪಾದಕ ದಾಳಿ ಬೆದರಿಕೆ
ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಯೋತ್ಪಾದಕ ದಾಳಿ ಬೆದರಿಕೆ (AFP)

ಐಸಿಸಿ ಟಿ20 ವಿಶ್ವಕಪ್‌ (T20 World Cup) ಪಂದ್ಯಾವಳಿಗೆ ಇನ್ನೇನು ಕೆಲವೇ ವಾರಗಳು ಬಾಕಿ ಇವೆ. ಅದರೊಳಗೆ ಐಸಿಸಿ ಟೂರ್ನಿಗೆ ಭಯೋತ್ಪಾದಕ ದಾಳಿಯ ಬೆದರಿಕೆಯೊಡ್ಡಿರುವ ವರದಿಗಳು ಮುನ್ನೆಲೆಗೆ ಬಂದಿವೆ. ಜಾಗತಿಕ ಕ್ರಿಕೆಟ್‌ ಟೂರ್ನಿಗೆ ಅಡ್ಡಿಪಡಿಸುವ ಬೆದರಿಕೆಯಿಂದ ಐಸಿಸಿ ಅಲರ್ಟ್‌ ಆಗಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಶಾಖೆ ಐಎಸ್-ಖೊರಾಸನ್ (ಐಎಸ್-ಕೆ) ಸೇರಿದಂತೆ ಇಸ್ಲಾಮಿಕ್ ಸ್ಟೇಟ್ (IS) ಪರ ಮಾಧ್ಯಮ ಮೂಲಗಳಿಂದ ಬೆದರಿಕೆಗಳು ಬಂದಿರುವುದಾಗಿ ಗುಪ್ತಚರ ಸಂಸ್ಥೆ ಸೂಚಿಸಿದೆ ಎಂದು ವರದಿಯಾಗಿದೆ. ಈ ಬೆದರಿಕೆಯು ಕ್ರಿಕೆಟ್‌ ಟೂರ್ನಿಯ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತವೆ ಎಂದು ವರದಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

2024ರ ಜೂನ್ 2ರಿಂದ 29ರವರೆಗೆ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ವೆಸ್ಟ್‌ ಇಂಡೀಸ್‌ನ ವಿವಿಧ ದೇಶಗಳು ಹಾಗೂ ಅಮೆರಿಕ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ವೆಸ್ಟ್‌ ಇಂಡೀಸ್‌ನ ಆಂಟಿಗುವಾ ಮತ್ತು ಬಾರ್ಬುಡಾ, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಪಂದ್ಯಗಳು ನಡೆಯಲಿವೆ. ಅಮೆರಿಕದ ಫ್ಲೋರಿಡಾ, ನ್ಯೂಯಾರ್ಕ್ ಮತ್ತು ಟೆಕ್ಸಾಸ್‌ನಲ್ಲಿಯೂ ಪಂದ್ಯಗಳು ನಡೆಯಲಿವೆ. ಸದ್ಯ ವಿಂಡೀಸ್‌ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಮಾತ್ರ ಬೆದರಿಕೆ ಸಂಭಾವ್ಯತೆ ಇದ್ದು, ಯುಎಸ್‌ನ ಯಾವುದೇ ಮೈದಾನಗಳಿಗೆ ನಿರ್ದಿಷ್ಟ ಬೆದರಿಕೆ ಕರೆಗಳು ಬಂದಿರುವ ಕುರಿತು ವರದಿಯಾಗಿಲ್ಲ.

ಸಂಭಾವ್ಯ ಉಗ್ರ ದಾಳಿ ಸಾಧ್ಯತೆ ಬೆನ್ನಲ್ಲೇ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಎಚ್ಚರಿಕೆಯಿಂದಿದೆ. ಸಿಇಒ ಜಾನಿ ಗ್ರೇವ್ಸ್ ಅವರು, ಆತಿಥೇಯ ದೇಶಗಳ ಸ್ಥಳೀಯ ಅಧಿಕಾರಿಗಳೊಂದಿಗೆ ಈ ಕುರಿತು ನಿಕಟ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ. ಯಾವುದೇ ರೀತಿಯ ಅಪಾಯಗಳನ್ನು ಪರಿಹರಿಸಲು ಸಮಗ್ರ ‌ ಭದ್ರತಾ ಯೋಜನೆ ರೂಪಿಸಲಾಗಿದೆ ಎಂದು ವಿಂಡೀಸ್‌ ಭರವಸೆ ನೀಡಿದೆ.

ಇದನ್ನೂ ಓದಿ | ಅಮೆರಿಕದಲ್ಲಿ 4 ಪಂದ್ಯಗಳು; ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

“ನಾವು ವೆಸ್ಟ್‌ ಇಂಡೀಸ್‌ನಲ್ಲಿ ವಿಶ್ವಕಪ್‌ ಪಂದ್ಯಗಳು ನಡೆಯುವ ಆತಿಥೇಯ ದೇಶಗಳು ಮತ್ತು ಆಯಾ ನಗರಗಳ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಬೆದರಿಕೆಗೆ ಸಂಬಂಧಿಸಿದ ಯಾವುದೇ ಅಪಾಯಗಳನ್ನು ಎದುರಿಸಲು ಸೂಕ್ತ ಯೋಜನೆಗಳು ಜಾರಿಯಲ್ಲಿವೆ. ಹೀಗಾಗಿ ಈ ವಿಚಾರವಾಗಿ ನಿರಂತರವಾಗಿ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಮಾಡುತ್ತೇವೆ” ಎಂದು ಅವರು ಸುದ್ದಿಸಂಸ್ಥೆ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ದೇಶಗಳಲ್ಲಿ ಕಟ್ಟೆಚ್ಚರ

ವೆಸ್ಟ್‌ಇಂಡೀಸ್‌ ಭಾಗದ ಟ್ರಿನಿಡಾಡ್ ಮತ್ತು ಟೊಬಾಗೊ ದೇಶದ ಪ್ರಧಾನಿ ಕೀತ್ ರೌಲಿ ಸೇರಿದಂತೆ ಕೆರಿಬಿಯನ್ ದೇಶಗಳ ನಾಯಕರು ಸಂಭಾವ್ಯ ಬೆದರಿಕೆ ಸಂಬಂಧ ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಪ್ರಾದೇಶಿಕ ಭದ್ರತಾ ಅಧಿಕಾರಿಗಳು ಕೂಡಾ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕ್ಯಾರಿಕಾಮ್ (ಕೆರಿಬಿಯನ್ ಸಮುದಾಯ) ಮತ್ತು ಭದ್ರತಾ ಸಂಸ್ಥೆಗಳ ನಡುವಿನ ಸಹಕಾರವನ್ನು ಪ್ರಧಾನಿ ರೌಲಿ ದೃಢಪಡಿಸಿದ್ದಾರೆ ಎಂದು ಟ್ರಿನಿಡಾಡ್‌ ಡೈಲಿ ಎಕ್ಸ್‌ಪ್ರೆಸ್‌ ವರದಿ ಮಾಡಿದೆ

ಟೂರ್ನಿಗೆ ಕೆಲವೇ ದಿನಗಳ ಬಾಕಿ ಇರುವಾಗ ಬೆದರಿಕೆ ಬಂದಿರುವುದು ಸಹಜವಾಗಿ ಐಸಿಸಿ ಹಾಗೂ ಆತಿಥೇಯ ರಾಷ್ಟ್ರಗಳಿಗೆ ಸವಾಲಾಗಿದೆ. ಟೂರ್ನಿಯ ಫೈನಲ್ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯಲಿದ್ದು, ಸೆಮಿಫೈನಲ್ ಪಂದ್ಯಗಳು ಟ್ರಿನಿಡಾಡ್ ಮತ್ತು ಗಯಾನಾದಲ್ಲಿ ನಡೆಯಲಿವೆ. 2010ರಲ್ಲಿ ವೆಸ್ಟ್ ಇಂಡೀಸ್ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಆಯೋಜಿಸಿತ್ತು. ಅದಾದ ನಂತರ 14 ವರ್ಷಗಳ ನಂತರ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಈ ನಡುವೆ ಸಂಭಾವ್ಯ ಬೆದರಿಕೆಯು ಭದ್ರತಾ ವ್ಯವಸ್ಥೆಗೆ ಸವಾಲೊಡ್ಡಿದೆ.

ಐಸಿಸಿ ಪ್ರತಿಕ್ರಿಯೆ

“ಸಂಭಾವ್ಯ ಬೆದರಿಕೆ ಸಂಬಂಧ ಸೂಕ್ತ ಯೋಜನೆಗಳು ಜಾರಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಐಸಿಸಿ ಆತಿಥೇಯ ರಾಷ್ಟ್ರಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ವರದಿಗಳು ಮುನ್ನೆಲೆಗೆ ಬರುತ್ತಿದ್ದಂತೆ ನಾವು ತಕ್ಷಣವೇ ವಿಂಡೀಸ್‌ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಯಾವುದೇ ಅಪಾಯವನ್ನು ಎದುರಿಸಲು ಸಮಗ್ರ ಭದ್ರತಾ ಯೋಜನೆಯು ಜಾರಿಯಲ್ಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಎಲ್ಲರಿಗೂ ಭರವಸೆ ನೀಡಿದೆ,” ಎಂದು ಐಸಿಸಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ