2024ರ ಅಂಡರ್ 19 ವಿಶ್ವಕಪ್ ವೇಳಾಪಟ್ಟಿ ಪ್ರಕಟ; ಬಾಂಗ್ಲಾದೇಶ ವಿರುದ್ಧ ಅಭಿಯಾನ ಆರಂಭಿಸಲಿದೆ ಭಾರತ
Dec 22, 2023 05:46 PM IST
ಟ್ರೋಫಿಯೊಂದಿಗೆ ಹಾಲಿ ಚಾಂಪಿಯನ್ ಭಾರತ ಅಂಡರ್ 19 ತಂಡ
- ICC U19 World Cup 2024: 15ನೇ ಆವೃತ್ತಿಯ ಅಂಡರ್ 19 ವಿಶ್ವಕಪ್‌ಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. 2024ರ ಜನವರಿ 13ರಂದು ಟೂರ್ನಿ ಆರಂಭವಾಗಲಿದ್ದು, ಒಟ್ಟು 16 ತಂಡಗಳು ಭಾಗವಹಿಸಲಿವೆ.
ಪ್ರಸಕ್ತ ವರ್ಷ ಏಕದಿನ ವಿಶ್ವಕಪ್ ನಡೆಯುತ್ತಿದೆ. ಆ ಬಳಿಕ ಮುಂದಿನ ವರ್ಷ ಕಿರಿಯರ ವಿಶ್ವಕಪ್ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ಅಂಡರ್ 19 ವಿಶ್ವಕಪ್ 2024ರ (ICC U19 Men's World Cup) ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ದ್ವೀಪರಾಷ್ಟ್ರ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಪಂದ್ಯಾವಳಿಯು 2024ರ ಜನವರಿ 13ರಂದು ಆರಂಭವಾಗಲಿದೆ. ಟೂರ್ನಿಯು ಫೆಬ್ರವರಿ 4ರವರೆಗೆ ನಡೆಯಲಿದೆ. ಒಟ್ಟು 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಇದರಲ್ಲಿ 11 ಪೂರ್ಣ ಸದಸ್ಯತ್ವ ಪಡೆದ ತಂಡಗಳು ಹಾಗೂ ಐದು ಪ್ರಾದೇಶಿಕ ಅರ್ಹತಾ ತಂಡಗಳು ಕಿರಿಯರ ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಯಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ.
ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಸ್ಎ ಪ್ರಾದೇಶಿಕ ಅರ್ಹತೆಯ ಮೂಲಕ ವಿಶ್ವಕಪ್‌ನ ಅಂತಿಮ ಟೂರ್ನಿಯಲ್ಲಿ ಆಡಲು ಸ್ಥಾನ ಗಿಟ್ಟಿಸಿಕೊಂಡಿವೆ.
15ನೇ ಆವೃತ್ತಿಯ ಅಂಡರ್ 19 ವಿಶ್ವಕಪ್‌ಗೆ ಶ್ರೀಲಂಕಾದ ರಾಜಧಾನಿ ಕೊಲಂಬೊದ ಐದು ಐತಿಹಾಸಿಕ ಮೈದಾನಗಳು ಆತಿಥ್ಯ ವಹಿಸಲಿವೆ. ಸಾರಾ ಓವಲ್, ಕೊಲಂಬೊ ಕ್ರಿಕೆಟ್ ಕ್ಲಬ್, ನಾನ್‌ಡಿಸ್ಕ್ರಿಪ್ಟ್ ಕ್ರಿಕೆಟ್ ಕ್ಲಬ್, ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಪಂದ್ಯಗಳನ್ನು ಆಯೋಜಿಸಲಿವೆ. ಇದರಲ್ಲಿ ಪ್ರೇಮದಾಸ ಮೈದಾನವು, ಜನವರಿ 30 ಮತ್ತು ಫೆಬ್ರವರಿ 1ರಂದು ನಡೆಯಲಿರುವ ಸೆಮಿಫೈನಲ್, ಹಾಗೂ ಫೆಬ್ರವರಿ 4ರಂದು ನಡೆಯುವ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ನಾಲ್ಕು ಗುಂಪು
ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. A, B, C, ಮತ್ತು D ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳಿವೆ. ಪ್ರತಿ ಗುಂಪಿನ ಕೊನೆಯ ತಂಡವು ಪ್ರಾದೇಶಿಕ ಅರ್ಹತಾ ಸುತ್ತಿನಿಂದ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಗುಂಪು A - ಭಾರತ, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್‌ಎ
ಗುಂಪು B - ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್
ಗುಂಪು C - ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ
ಗುಂಪು D - ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳ
ಭಾರತದ ಅಭಿಯಾನ ಜನವರಿ 14ರಂದು ಆರಂಭ
ಜನವರಿ 13ರಂದು ಉದ್ಘಾಟನಾ ದಿನದಂದು ಮೂರು ಪಂದ್ಯಗಳು ನಡೆಯಲಿವೆ. ಆತಿಥೇಯ ಶ್ರೀಲಂಕಾ ತಂಡವು ಜಿಂಬಾಬ್ವೆಯನ್ನು ಎದುರಿಸಲಿದೆ. 2022ರ ಫೈನಲಿಸ್ಟ್ ಇಂಗ್ಲೆಂಡ್ ತಂಡವು ಸ್ಕಾಟ್ಲೆಂಡ್ ಅನ್ನು ಎದುರಿಸಿದರೆ, ನ್ಯೂಜಿಲೆಂಡ್ ತಂಡವು ನೇಪಾಳ ವಿರುದ್ಧ ಸೆಣಸಲಿದೆ. 2022ರ ಟ್ರೋಫಿ ಗೆದ್ದಿರುವ ಹಾಲಿ ಚಾಂಪಿಯನ್ ಭಾರತ, ಜನವರಿ 14ರಂದು ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ 2020ರ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ ಅಭಿಯಾನ ಆರಂಭಿಸಲಿದೆ.
ಗುಂಪು ಹಂತಗಳಲ್ಲಿ ಹೆಚ್ಚು ಗೆಲುವು ಸಾಧಿಸಿದ ತಂಡಗಳು, ಜನವರಿ 24ರಿಂದ ನಡೆಯುವ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸುತ್ತವೆ. ಇಲ್ಲಿ ಆರು ತಂಡಗಳ ಎರಡು ಗುಂಪುಗಳಲ್ಲಿ ಮೇಲುಗೈ ಸಾಧಿಸುವ ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ.
ವಿಭಾಗ