ಮಹಿಳಾ ಟಿ20 ವಿಶ್ವಕಪ್ 2024: ಸೌತ್ ಆಫ್ರಿಕಾ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್
Oct 20, 2024 11:13 PM IST
ಸೌತ್ ಆಫ್ರಿಕಾ ವಿರುದ್ಧ ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್
- ICC Womens T20 World Cup 2024: ದುಬೈನ ದುಬೈ ಇಂಟರ್ನ್ಯಾಷನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 32 ರನ್ಗಳಿಂದ ಜಯಿಸಿದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ.
2024ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ ತಂಡ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ಈ ಬಾರಿಯೂ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ದುಬೈನ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸೌತ್ ಆಫ್ರಿಕಾವನ್ನು 32 ರನ್ಗಳಿಂದ ಮಣಿಸಿದ ಕಿವೀಸ್ ವನಿತೆಯರು ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಜಯಿಸಿ ತಮ್ಮ ದೇಶದ ಪುರುಷರು ಮಾಡಲಾಗದ ಸಾಧನೆಯನ್ನು ಮಾಡಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತನ್ನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಆದರೆ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಮಹಿಳಾ ವಿಶ್ವಕಪ್ನಲ್ಲಿ ಕಿವೀಸ್ ನೂತನ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಚುಟುಕು ಸಮರ ಗೆದ್ದ ನಾಲ್ಕನೇ ತಂಡವೂ ಹೌದು. ಆಸ್ಟ್ರೇಲಿಯಾ 6 ಬಾರಿ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ತಲಾ ಒಂದು ಸಲ ಪ್ರಶಸ್ತಿ ಗೆದ್ದಿವೆ. ಕಿವೀಸ್ 2009 ಮತ್ತು 2010ರಲ್ಲಿ ಸತತ ಎರಡು ಫೈನಲ್ ಪ್ರವೇಶಿಸಿತ್ತು. ಆದರೆ ರನ್ನರ್ ಅಪ್ ಆಗಿತ್ತು.
ಮಿಂಚಿದ ಅಮೆಲಿಯಾ ಕೇರ್
ಕಿವೀಸ್ ಪರ ಅಮೆಲಿಯಾ ಕೇರ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಬ್ಬರಿಸಿದರು. ಆರಂಭದಲ್ಲಿ ಜಾರ್ಜಿಯಾ ಪ್ಲಿಮ್ಮರ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅಮೆಲಿಯಾ ಕೇರ್ ನೆರವಾದರು. ಸೂಜಿ ಬೇಟ್ (32), ಬ್ರೂಕ್ ಹ್ಯಾಲಿಡೇ (38) ಅವರೊಂದಿಗೆ ಸೇರಿ ಅತ್ಯುತ್ತಮ ಪ್ರದರ್ಶನ ನೀಡಿದರು. ಒಂದೆಡೆ ಸತತ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತು ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಕೇರ್ 38 ಎಸೆತಗಳಲ್ಲಿ 4 ಬೌಂಡರಿ ಸಹಿತ 43 ರನ್ ಚಚ್ಚಿದರು. ಅಲ್ಲದೆ, ಆಕೆ ಬೌಲಿಂಗ್ನಲ್ಲೂ 3 ವಿಕೆಟ್ ಪಡೆದು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. 4 ಓವರ್ಗಳಲ್ಲಿ 24 ರನ್ ನೀಡಿ ಮೂವರನ್ನು ಔಟ್ ಮಾಡಿದರು.
ಸೌತ್ ಆಫ್ರಿಕಾಗೆ ಸತತ 2ನೇ ಬಾರಿಗೆ ಫೈನಲ್ ಸೋಲು
ಕಳೆದ ಬಾರಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲೂ ಕಪ್ ಗೆಲ್ಲಲು ಸಾಧ್ಯವಾಗದ ಸೌತ್ ಆಫ್ರಿಕಾ ಈ ಬಾರಿಯೂ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದೆ. ಆ ಮೂಲಕ ಚೋಕರ್ಸ್ ಎನ್ನುವ ಹಣೆಪಟ್ಟಿಯನ್ನು ಕಳಚುವಲ್ಲಿ ವಿಫಲರಾದರು. ಕಳೆದ ಬಾರಿ ಆಸ್ಟ್ರೇಲಿಯಾ ಎದುರು ಮುಗ್ಗರಿಸಿದ್ದ ಹರಿಣಗಳು, ಈ ಬಾರಿ ಕಿವೀಸ್ ವಿರುದ್ಧ ಮಂಡಿಯೂರಿದೆ. ನಾಯಕಿ ಲಾರಾ ವೊಲ್ವಾರ್ಡ್ಟ್ 33 ರನ್ ಗಳಿಸಿದ್ದೇ ಅವರ ತಂಡದ ಪರ ಗರಿಷ್ಠ ಸ್ಕೋರ್ ಆಗಿದೆ. ಆದರೆ ಸೋಲು ಕಾಣುತ್ತಿದ್ದಂತೆ ಸೌತ್ ಆಫ್ರಿಕಾ ಆಟಗಾರ್ತಿಯರು ಕಣ್ಣೀರು ಹಾಕಿದರು. ಇದರ ವಿಡಿಯೋಗಳು ನೆಟ್ಸ್ನಲ್ಲಿ ಹರಿದಾಡುತ್ತಿವೆ.