ಜಿಂಬಾಬ್ವೆ ವಿರುದ್ಧ ಕೊನೆಯ ಟಿ20ಐ ಪಂದ್ಯದಲ್ಲೂ ಗೆದ್ದ ಭಾರತ ತಂಡ; 4-1ರಲ್ಲಿ ಸರಣಿ ವಶಪಡಿಸಿಕೊಂಡ ಗಿಲ್ ಪಡೆ
Jul 14, 2024 08:52 PM IST
ಜಿಂಬಾಬ್ವೆ ವಿರುದ್ಧ ಕೊನೆಯ ಟಿ20ಐ ಪಂದ್ಯದಲ್ಲೂ ಗೆದ್ದ ಭಾರತ ತಂಡ; 4-1ರಲ್ಲಿ ಸರಣಿ ವಶಪಡಿಸಿಕೊಂಡ ಗಿಲ್ ಪಡೆ
- India beat vs Zimbabwe: ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜಿಂಬಾಬ್ವೆ ವಿರುದ್ಧದ ಐದನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 42 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಜಿಂಬಾಬ್ವೆ ಎದುರಿನ ಕೊನೆಯ ಹಾಗೂ ಐದನೇ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾ 42 ರನ್ಗಳಿಂದ ಗೆದ್ದು ಬೀಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಯುವ ಭಾರತ, ಸರಣಿಯನ್ನು 4-1ರ ಅಂತರದಲ್ಲಿ ಗೆದ್ದುಕೊಂಡಿದೆ. ಆತಿಥೇಯ ಜಿಂಬಾಬ್ವೆ ತವರಿನಲ್ಲಿ ಸರಣಿ ಕಳೆದುಕೊಂಡು ಮುಖಭಂಗಕ್ಕೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದರೂ ಉಳಿದ 4ರಲ್ಲೂ ಕಂಬ್ಯಾಕ್ ಮಾಡಲು ವಿಫಲವಾದ ಜಿಂಬಾಬ್ವೆ, ಮೆನ್ ಇನ್ ಬ್ಲ್ಯೂ ವಿರುದ್ಧ ಚೊಚ್ಚಲ ಸರಣಿ ಗೆಲ್ಲಲು ವಿಫಲವಾಯಿತು.
ಬ್ಯಾಟಿಂಗ್ನಲ್ಲಿ ಸಂಜು ಸ್ಯಾಮ್ಸನ್ (58) ಮತ್ತು ಬೌಲಿಂಗ್ನಲ್ಲಿ ಮುಕೇಶ್ ಕುಮಾರ್ (22/4) ಅವರ ಮಿಂಚಿದ ಪ್ರದರ್ಶನದಿಂದ ಟೀಮ್ ಇಂಡಿಯಾ ಸತತ 4ನೇ ಗೆಲುವಿನ ಕೇಕೆ ಹಾಕಿತು. ಮೊದಲ ಪಂದ್ಯ ಸೋತಿದ್ದರೂ 2, 3, 4ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿತ್ತು. ಹೀಗಾಗಿ 5ನೇ ಟಿ20 ಔಪಚಾರಿಕವಾಗಿದ್ದ ಕಾರಣ ಜಿಂಬಾಬ್ವೆ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಶುಭ್ಮನ್ ಗಿಲ್ ತನ್ನ ಚೊಚ್ಚಲ ನಾಯಕತ್ವದಲ್ಲೇ ಸರಣಿ ಗೆದ್ದಿದ್ದಾರೆ.
ಹರಾರೆಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತು. ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಇನ್ನು ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 18.3 ಓವರ್ಗಳಲ್ಲೇ 125 ರನ್ಗಳಿಗೆ ಆಲೌಟ್ ಆಯಿತು. ಮುಕೇಶ್ ಕುಮಾರ್ 3.3 ಓವರ್ಗಳಲ್ಲಿ ಕೇವಲ 22 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್ ಉರುಳಿಸಿದರು.
ಮುಕೇಶ್ ಕುಮಾರ್ ಮಾರಕ ದಾಳಿ
ತವರಿನ ಮೈದಾನದಲ್ಲಿ ಸರಣಿ ಸೋತರೂ ಕೊನೆಯ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸುವ ಲೆಕ್ಕಾಚಾರ ಹಾಕಿದ್ದ ಜಿಂಬಾಬ್ವೆಗೆ ಮುಕೇಶ್ ಕುಮಾರ್ ಶಾಕ್ ನೀಡಿದರು. ಡಿಯೋನ್ ಮೈಯರ್ಸ್ 34 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿದೆ. ವೆಸ್ಲಿ ಮಾಧೆವೆರೆ (0), ಬ್ರಿಯಾನ್ ಬೆನೆಟ್ (10), ಫರಾಜ್ ಅಕ್ರಮ್ (27), ರಿಚರ್ಡ್ ನಾಗರವ (0) ಅವರನ್ನು ಮುಕೇಶ್ ಕುಮಾರ್ ಔಟ್ ಮಾಡಿದರು. ಶಿವಂ ದುಬೆ ಕೂಡ ಸಾಥ್ ಕೊಟ್ಟರು. ಜೋನಾಥನ್ ಕ್ಯಾಂಪ್ಬೆಲ್ (4), ಮೈಯರ್ಸ್ (34) ಅವರು ಶಿವಂ ದುವೆ ಬೌಲಿಂಗ್ನಲ್ಲಿ ಹೊರ ನಡೆದರು.
ಯಾರೂ ಕೂಡ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ನಡೆಸದ ಕಾರಣ ಭಾರತ ತಂಡಕ್ಕೆ ಜಿಂಬಾಬ್ವೆ ಪ್ರತಿರೋಧ ನೀಡಲು ಸಾಧ್ಯವಾಗಿಲ್ಲ. ನಾಯಕ ಸಿಕಂದರ್ ರಾಜಾ ಕೂಡ ತಂಡವನ್ನು ಆಧರಿಸಿಲು ವಿಫಲರಾದರು. ಆರಂಭದಿಂದ ಕೊನೆಯವರೆಗೂ ಮೇಲುಗೈ ಸಾಧಿಸಿದ ಭಾರತ ತಂಡದ ಬೌಲರ್ಗಳು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ವಾಷಿಂಗ್ಟನ್ ಸುಂದರ್, ತುಷಾರ್ ದೇಶಪಾಂಡೆ, ಅಭಿಷೇಕ್ ಶರ್ಮಾ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.
ಸಂಜು ಸ್ಯಾಮ್ಸನ್ ಅರ್ಧಶತಕ
ನಾಲ್ಕನೇ ಟಿ20ಐ ಪಂದ್ಯದಲ್ಲಿ ಅಬ್ಬರಿಸಿದ್ದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕೊನೆಯ ಪಂದ್ಯದಲ್ಲಿ ಕ್ರಮವಾಗಿ 13 ಮತ್ತು 12 ರನ್ ಗಳಿಸಿದರು. ನಂತರ ಅಭಿಷೇಕ್ ಶರ್ಮಾ 14 ರನ್ಗಳಿಸಿ ಔಟಾದರು. ಟಾಪ್-3 ಬ್ಯಾಟರ್ಸ್ ಬೇಗನೇ ಔಟಾಗಿ ಸಂಕಷ್ಟಕ್ಕೆ ಸಿಲುಕಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಆಸರೆಯಾದರು. ರಕ್ಷಣಾತ್ಮಕ ಒತ್ತು ಕೊಟ್ಟು ಅರ್ಧಶತಕ ಬಾರಿಸಿದರು. ಆದರೆ ರಿಯಾನ್ ಪರಾಗ್ 22 (24) ನಿರೀಕ್ಷೆಗೆ ತಕ್ಕಂತೆ ರನ್ ಗಳಿಸಲು ಸಾಧ್ಯವಾಗಲಿಲ್ಲ. ಸಂಜು 45 ಎಸೆತಗಳಲ್ಲಿ 1 ಬೌಂಡರಿ, 4 ಸಿಕ್ಸರ್ ಸಹಿತ 58 ರನ್ ಗಳಿಸಿದರು. ಕೊನೆಯಲ್ಲಿ ಶಿವಂ ದುಬೆ 12 ಎಸೆತಗಳಲ್ಲಿ 26 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿದರು.