logo
ಕನ್ನಡ ಸುದ್ದಿ  /  ಕ್ರಿಕೆಟ್  /  Asian Games: ಭಾರತ-ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯ ಮಳೆಯಿಂದ ರದ್ದು; ಟೀಮ್‌ ಇಂಡಿಯಾಗೆ ಒಲಿದ ಚಿನ್ನ

Asian Games: ಭಾರತ-ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯ ಮಳೆಯಿಂದ ರದ್ದು; ಟೀಮ್‌ ಇಂಡಿಯಾಗೆ ಒಲಿದ ಚಿನ್ನ

Jayaraj HT Kannada

Oct 07, 2023 03:20 PM IST

google News

ಚಿನ್ನ ಗೆದ್ದ ಭಾರತ ಕ್ರಿಕೆಟ್‌ ತಂಡ

    • Asian Games 2023 Cricket India vs Afghanistan: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಏಷ್ಯನ್ ಗೇಮ್ಸ್​​​ ಫೈನಲ್‌ ಪಂದ್ಯವು ಮಳೆಯಿಂದ ರದ್ದಾಗಿದೆ. ಹೀಗಾಗಿ ಭಾರತ ತಂಡವು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ.
ಚಿನ್ನ ಗೆದ್ದ ಭಾರತ ಕ್ರಿಕೆಟ್‌ ತಂಡ
ಚಿನ್ನ ಗೆದ್ದ ಭಾರತ ಕ್ರಿಕೆಟ್‌ ತಂಡ (BCCI Twitter)

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ (Asian Games 2023) ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್​ ತಂಡವು (Indian Cricket Team) ಚಿನ್ನ ಗೆದ್ದಿದೆ.​ ಅಫ್ಘಾನಿಸ್ತಾನ (India vs Afghanistan Final) ವಿರುದ್ಧದ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾಯ್ತು. ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಯ್ತು. ಉಭಯ ತಂಡಗಳಲ್ಲಿ ಭಾರತವು ಅಗ್ರ ಶ್ರೇಯಾಂಕದ ತಂಡವಾಗಿರುವ ಕಾರಣದಿಂದ ಭಾರತ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿದೆ. ಹೀಗಾಗಿ ಭಾರತಕ್ಕೆ ಚಿನ್ನ ಒಲಿದರೆ, ಅಫ್ಘಾನಿಸ್ತಾನ ತಂಡವು ಬೆಳ್ಳಿ ಪದಕ್ಕೆ ತೃಪ್ತಿ ಪಟ್ಟಿದೆ.

ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ, ಭಾರತದ ಬೌಲರ್‌ಗಳ ಮಾರಕ ದಾಳಿ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಮುನ್ನಡೆಯಿತು. ಆದರೆ, 18.2 ಓವರ್‌ ವೇಳೆಗೆ 5 ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿ ಆಡುತ್ತಿದ್ದಾಗ ಮಳೆ ಸುರಿಯಲು ಆರಂಭಿಸಿತು. ಪಂದ್ಯದ ಆರಂಭಕ್ಕೂ ಮುನ್ನವೂ ಮಳೆ ಸುರಿದು ಪಂದ್ಯ ತುಸು ವಿಳಂಬವಾಯ್ತು. ಅಂತಿಮವಾಗಿ ಮಳೆ ನಿಲ್ಲದ ಕಾರಣ ಪಂದ್ಯವನ್ನು ಯಾವುದೇ ಫಲಿತಾಂಶವಿಲ್ಲದೆ ರದ್ದುಪಡಿಸಲಾಯ್ತು.

ಪಂದ್ಯಾವಳಿಯುದ್ದಕ್ಕೂ ಬಲಿಷ್ಠ ಪ್ರದರ್ಶನ ನೀಡಿದ್ದ ಭಾರತ, ಫೈನಲ್‌ನಲ್ಲಿಯೂ ಸಂಪೂರ್ಣ ಪಂದ್ಯವನ್ನು ಆಡಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಮಳೆ ಭಾರತದ ಆಸೆಗೆ ತಣ್ಣೀರೆರಚಿತು. ಆದರೂ, ಭಾರತ ತಂಡ ನಿರಾಶೆಗೊಂಡಿಲ್ಲ. ಶ್ರೇಯಾಂಕದಲ್ಲಿ ಬಲಿಷ್ಠ ತಂಡವಾಗಿರುವ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ. ಹೀಗಾಗಿ ಭಾರತ ತಂಡ ಸಂಭ್ರಮದಿಂದ ಮಾಡುತ್ತಾ, ಬಂಗಾರಕ್ಕೆ ಕೊರಳೊಡ್ಡಲಿದೆ. ಅಫ್ಘಾನಿಸ್ತಾನ ತಂಡವು ಬೆಳ್ಳಿ ಗೆದ್ದರೆ, ಬಾಂಗ್ಲಾದೇಶ ಕಂಚು ಗೆದ್ದಿದೆ.

ಇದು ಪ್ರಸಕ್ತ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ 27ನೇ ಚಿನ್ನ. ಶನಿವಾರ ಒಂದೇ ದಿನ ಭಾರತ ಈವರೆಗೆ ಗೆದ್ದ 5ನೇ ಚಿನ್ನದ ಪದಕ ಗೆದ್ದಿದೆ. ಈಗಾಗಲೇ ಭಾರತ ವನಿತೆಯರ ಕ್ರಿಕೆಟ್‌ ತಂಡ ಕೂಡಾ ಚಿನ್ನ ಗೆದ್ದಿತ್ತು. ಈಗ ಪುರುಷರ ತಂಡ ಕೂಡಾ ಬಂಗಾರಕ್ಕೆ ಕೊರಳೊಡ್ಡಿದೆ. ಅಲ್ಲದೆ ಈ ದಿನ ಭಾರತ ಏಷ್ಯನ್‌ ಗೇಮ್ಸ್‌ನಲ್ಲಿ ಮೊದಲ ಬಾರಿಗೆ 100 ಪದಕಗಳ ಗಡಿ ದಾಟಿದೆ.

2010 ಮತ್ತು 2014ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸಿರಲಿಲ್ಲ. 2010ರಲ್ಲಿ ಮೊದಲ ಬಾರಿಗೆ ಕ್ರಿಕೆಟ್​ಗೆ ಏಷ್ಯನ್​ ಗೇಮ್ಸ್​ನಲ್ಲಿ ಆಡಲು ಅವಕಾಶ ನೀಡಲಾಗಿತ್ತು. 2010ರಲ್ಲಿ ಬಾಂಗ್ಲಾದೇಶ ಚಿನ್ನದ ಪದಕ ಜಯಿಸಿತ್ತು. 2014ರಲ್ಲಿ ಶ್ರೀಲಂಕಾ ಸ್ವರ್ಣ ಗೆದ್ದುಕೊಂಡಿತ್ತು. ಈ ಎರಡು ಬಾರಿಯೂ ಅಫ್ಘಾನಿಸ್ತಾನ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ ಮೂರನೇ ಬಾರಿ ಅಫ್ಘಾನ್‌ ತಂಡ ಬೆಳ್ಳಿ ಗೆದ್ದಿದೆ.

ಚಿನ್ನದ ಪದಕ ಗೆದ್ದ ಭಾರತ ಏಷ್ಯನ್‌ ಗೇಮ್ಸ್‌ ತಂಡ

ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಸಾಯಿ ಕಿಶೋರ್, ಅರ್ಷದೀಪ್ ಸಿಂಗ್, ರಾಹುಲ್ ತ್ರಿಪಾಠಿ, ಅವೇಶ್ ಖಾನ್, ಮುಖೇಶ್ ಕುಮಾರ್, ಪ್ರಭಾಸಿಮ್ರಾನ್ ಸಿಂಗ್, ಆಕಾಶ್ ದೀಪ್ .

ಬೆಳ್ಳಿ ಗೆದ್ದ ಅಫ್ಘಾನಿಸ್ತಾನ ತಂಡ

ಸೇದಿಕುಲ್ಲಾ ಅಟಲ್, ಮೊಹಮ್ಮದ್ ಶಹಜಾದ್, ನೂರ್ ಅಲಿ ಜದ್ರಾನ್, ಶಾಹಿದುಲ್ಲಾ ಕಮಾಲ್, ಅಫ್ಸರ್ ಝಜೈ, ಕರೀಂ ಜನತ್, ಗುಲ್ಬದಿನ್ ನೈಬ್ (ನಾಯಕ), ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಫರೀದ್ ಅಹ್ಮದ್ ಮಲಿಕ್, ಜಹೀರ್ ಖಾನ್, ಸಯೀದ್ ಶಿರ್ಜಾದ್, ಸಯೀದ್ ಶಿರ್ಜಾದ್ ಜುಬೈದ್ ಅಕ್ಬರಿ, ವಫಿವುಲ್ಲಾ ತಾರಖಿಲ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ