logo
ಕನ್ನಡ ಸುದ್ದಿ  /  ಕ್ರಿಕೆಟ್  /  ವೈಟ್‌ವಾಶ್‌ ತಪ್ಪಿಸಿಕೊಂಡ ಆಸ್ಟ್ರೇಲಿಯಾ; 66 ರನ್‌ಗಳಿಂದ ಸೋತರೂ ಸರಣಿ ವಶಪಡಿಸಿಕೊಂಡ ಭಾರತ

ವೈಟ್‌ವಾಶ್‌ ತಪ್ಪಿಸಿಕೊಂಡ ಆಸ್ಟ್ರೇಲಿಯಾ; 66 ರನ್‌ಗಳಿಂದ ಸೋತರೂ ಸರಣಿ ವಶಪಡಿಸಿಕೊಂಡ ಭಾರತ

Jayaraj HT Kannada

Sep 27, 2023 10:10 PM IST

google News

ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ

    • India vs Australia 3rd ODI: ‌ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ. ಆದರೂ 2-1 ಅಂತರದಿಂದ ಸರಣಿ ಗೆದ್ದಿದೆ.
ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ
ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ (AFP)

ಭಾರತ ವಿರುದ್ಧದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೊನೆಗೂ ಗೆದ್ದಿದೆ. ಆ ಮೂಲಕ ವೈಟ್‌ವಾಶ್‌ ಮುಖಭಂಗದಿಂದ ತಪ್ಪಿಸಿಕೊಂಡಿದೆ. ಬುಧವಾರದ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಉಭಯ ತಂಡಗಳ ನಡುವಿನ ಏಕದಿನ ಇತಿಹಾಸದಲ್ಲಿ ಮೊಟ್ಟಮೊದಲ ಕ್ಲೀನ್‌ ಸ್ವೀಪ್‌ ಸಾಧನೆ ಭಾರತದ ಹೆಸರಲ್ಲಿ ದಾಖಲಾಗುತ್ತಿತ್ತು. ಆದರೆ, ಮ್ಯಾಕ್ಸ್‌ವೆಲ್‌ ಬೌಲಿಂಗ್‌ ದಾಳಿಗೆ ಬ್ಯಾಟ್‌ ಬೀಸಲು ತುಸು ತಿಣುಕಾಡಿದ ರೋಹಿತ್‌ ಪಡೆ, ಸೋಲೊಪ್ಪಿಕೊಂಡಿದೆ. ಕೊನೆಯ ಪಂದ್ಯದಲ್ಲಿ ಸೋಲು ಕಂಡರೂ, ಭಾರತವು 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ; ವಾರ್ನರ್​, ಮಾರ್ಷ್, ಸ್ಮಿತ್ ಹಾಗೂ ಲ್ಯಾಬುಶೇನ್ ಅಬ್ಬರದ ಅರ್ಧಶತಕದ ನೆರವಿನಿಂದ 7 ವಿಕೆಟ್‌ ಕಳೆದುಕೊಂಡು 352 ರನ್‌ ಕಲೆ ಹಾಕಿತು. 353 ರನ್‌​ಗಳ ಬೃಹತ್ ಗುರಿ ಪಡೆದ ಭಾರತ, ಅಂತಿಮವಾಗಿ 49.4 ಓವರ್‌ಗಳಲ್ಲಿ 286 ರನ್‌ ಗಳಿಸಿ ಆಲೌಟ್‌ ಆಯ್ತು. ಆ ಮೂಲಕ 66 ರನ್‌ ಗಳಿಂದ ಆಸೀಸ್‌ ಪಂದ್ಯ ಗೆದ್ದಿದೆ.

ಭಾರತದ ಚೇಸಿಂಗ್

ಆಸ್ಟ್ರೇಲಿಯಾ ನೀಡಿದ ಬೃಹತ್‌ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ಇಶಾನ್‌ ಕಿಶನ್‌ ಅನುಪಸ್ಥಿತಿಯಲ್ಲಿ ಅಗ್ರಕ್ರಮಾಂಕಕ್ಕೆ ಬಡ್ತಿ ಪಡೆದ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್, ನಾಯಕ ರೋಹಿತ್‌ ಶರ್ಮಾ ಜೊತೆಗೆ ಇನ್ನಿಂಗ್ಸ್‌ ಆರಂಭಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರೂ 74 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 18 ರನ್‌ ಗಳಿಸಿದ್ದ ಸುಂದರ್‌ ಔಟಾದರು. ಅತ್ತ 5 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ ಸ್ಫೋಟಕ ಇನ್ನಿಂಗ್ಸ್‌ ಆಡುತ್ತಿದ್ದ ರೋಹಿತ್‌ ಶರ್ಮಾ, ಬೌಲರ್‌ ಮ್ಯಾಕ್ಸ್‌ವೆಲ್‌ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ 81 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ವಿರಾಟ್‌ ಅರ್ಧಶತಕ

ಆಕರ್ಷಕ ಅರ್ಧಶತಕ ಸಿಡಿಸಿದ ವಿರಾಟ್‌ ಕೊಹ್ಲಿ ಆಟ 56 ರನ್‌ಗಳಿಂಗೆ ನಿಂತಿತು. ಈ ವೇಳೆ ಒಂದಾಗಿ ಅರ್ಧಶತಕದ ಜೊತೆಯಾಟವಾಡಿದ ಕನ್ನಡಿಗ‌ ಕೆಎಲ್ ರಾಹುಲ್ ಮತ್ತು ಶ್ರೇಯಸ್‌ ಅಯ್ಯರ್‌, ಜವಾಬ್ದಾರಿಯುತ ಆಟವಾಡಿದರು. ಈ ನಡುವೆ ಅಲೆಕ್ಸ್‌ ಕ್ಯಾರಿ ಕೈಗೆ ಕ್ಯಾಚ್‌ ನೀಡಿ ರಾಹುಲ್‌ ಔಟಾದರು. ಅವರ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ ಕೂಡಾ 8 ರನ್‌ ಗಳಿಸಿ ನಿರ್ಗಮಿಸಿ ನಿರಾಶೆ ಮೂಡಿಸಿದ‌ರು. ಅರ್ಧಶತಕದ ಸಮೀಪ ಬಂದಿದ್ದ ಶ್ರೇಯಸ್‌ ಅಯ್ಯರ್‌ ಆಟವು 48 ರನ್‌ಗಳಿಗೆ ಮುಕ್ತಾಯವಾಯ್ತು.

ಭಾರತೀಯರ ಪಾಲಿಗೆ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಂಟಕರಾದರು. 4 ಪ್ರಮುಖ ವಿಕೆಟ್‌ ಕಬಳಿಸಿ ಭಾರತದ ಬ್ಯಾಟಿಂಗ್‌ ಲೈನಪ್‌ಗೆ ಘಾಸಿಗೊಳಿಸಿದರು.

ಆಸೀಸ್‌ ಭರ್ಜರಿ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಡೇವಿಡ್​​ ವಾರ್ನರ್-ಮಿಚೆಲ್​ ಮಾರ್ಷ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್​ಗೆ ಇವರಿಬ್ಬರೂ 78 ರನ್​ ಜೊತೆಯಾಟವಾಡಿದರು. ಇನ್ನಿಂಗ್ಸ್​ ಆರಂಭದ ಮೊದಲ ಎಸೆತದಿಂದಲೇ ಸ್ಫೋಟಕ ಆಟಕ್ಕೆ ಮುಂದಾದ ಡೇವಿಡ್ ವಾರ್ನರ್​, ಈ ಸರಣಿಯಲ್ಲಿ ಸತತ 3ನೇ ಅರ್ಧಶತಕ ಸಿಡಿಸಿ ಮಿಂಚಿದರು. 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾರ್ನರ್, 56 ರನ್ ಗಳಿಸಿದ್ದ ಸಂದರ್ಭದಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್​​ನಲ್ಲಿ ಕ್ಯಾಚ್​​ ನೀಡಿ ಔಟಾದರು. ಅಬ್ಬರ ಮುಂದುವರೆಸಿದ ಮಿಚೆಲ್ ಮಾರ್ಷ್,​​ ಸ್ಟೀವ್ ಸ್ಮಿತ್ ಜೊತೆಗೂಡಿ 3ನೇ ವಿಕೆಟ್​​ಗೆ 137 ರನ್​ ಪೇರಿಸಿದರು.

ನರ್ವಸ್‌ 90ಯಲ್ಲಿ ಮಾರ್ಷ್ ಔಟ್

ವಾರ್ನರ್ ಔಟಾದ ಬಳಿಕವೂ ಸಿಡಿದ ಮಿಚೆಲ್ ಮಾರ್ಷ್​, ಶತಕದ ಗಡಿಯಲ್ಲಿ ವಿಕೆಟ್ ಒಪ್ಪಿಸಿದರು. 84 ಎಸೆತಗಳಲ್ಲಿ 3 ಸಿಕ್ಸರ್​​ ಸಹಿತ 96 ರನ್ ಗಳಿಸಿ ಕುಲ್ದೀಪ್​ ಯಾದವ್​ಗೆ ವಿಕೆಟ್ ಒಪ್ಪಿಸಿದರು. ಅತ್ತ ಬಿರುಸಿನ ಆಟದ ಮೂಲಕ ಗಮನ ಸೆಳೆದ ಸ್ಮಿತ್​, 61 ಎಸೆತಗಳಲ್ಲಿ 72 ರನ್​ಸಿಡಿಸಿದರು. 58 ಎಸೆತಗಳಲ್ಲಿ 9 ಬೌಂಡರಿ ಸಹಿತ ಲ್ಯಾಬುಶೇನ್ 72 ರನ್ ಗಳಿಸಿದರೆ, ಇಂದು ತಂಡ ಸೇರಿಕೊಂಡ ಗ್ಲೆನ್ ಮ್ಯಾಕ್ಸ್​ವೆಲ್ 5 ರನ್‌ ಗಳಿಸಲಷ್ಟೇ ಶಕ್ತರಾದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 3, ಕುಲ್ದೀಪ್ ಯಾದವ್ 2, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ