IND vs SA Highlights: ದಕ್ಷಿಣ ಆಫ್ರಿಕಾ ಮಣಿಸಿದ ಭಾರತ ಟಿ20 ಚಾಂಪಿಯನ್, ಬಿಕ್ಕಿ ಬಿಕ್ಕಿ ಅತ್ತ ಹಾರ್ದಿಕ್, ಹೈಲೈಟ್ಸ್
Jun 29, 2024 11:49 PM IST
India vs South Africa Final Highlights: ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಇದರೊಂದಿಗೆ 13 ವರ್ಷಗಳಿಂದ ಅನುಭವಿಸುತ್ತಿದ್ದ ಟ್ರೋಫಿ ಬರ ನೀಗಿದೆ.
ಭಾರತೀಯರ ಹೃದಯ ಹಗುರ
13 ವರ್ಷಗಳ ಐಸಿಸಿ ಟ್ರೋಫಿ ಬರಕ್ಕೆ ಭಾರತ ಅಂತ್ಯ ಹಾಡಿದೆ. ಸತತ ಎರಡು ಐಸಿಸಿ ಫೈನಲ್‌ಗಳಲ್ಲಿ ಸೋತಿದ್ದ ಟೀಮ್ ಇಂಡಿಯಾ, ಕೊನೆಗೂ ಟಿ20 ವಿಶ್ವಕಪ್ ಫೈನಲ್ ಗೆದ್ದು ಬೀಗಿದೆ. ಆ ಮೂಲಕ ಟೂರ್ನಿಯುದ್ದಕ್ಕೂ ಅಜೇಯ ಅಭಿಯಾನ ಕೈಗೊಂಡು ಅಜೇಯವಾಗಿ ಗೆಲುವಿನ ನಗೆ ಬೀರಿದೆ. ಟೂರ್ನಿಯುದ್ದಕ್ಕೂ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅಬ್ಬರಿಸಿ ಫಾರ್ಮ್ ಕಂಡುಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿ ಭಾರತ ಕೊನೆಗೂ ಕಪ್ ಗೆದ್ದಿದೆ. ಇದರೊಂದಿಗೆ ದ್ರಾವಿಡ್‌ಗೆ ಗೆಲುವಿನ ವಿದಾಯ ಸಿಕ್ಕಿದೆ.
ರೋಚಕ ಹಂತದತ್ತ ದಕ್ಷಿಣ ಆಫ್ರಿಕಾ ಚೇಸಿಂಗ್
ನಿರ್ಣಾಯಕ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ವಿಕೆಟ್ ಕಬಳಿಸಿದ್ದಾರೆ. ರೋಹಿತ್ ಶರ್ಮಾ ನಿರ್ಧಾರವನ್ನು ವೇಗಿ ಸಮರ್ಥಿಸಿದ್ದು, ಮಾರ್ಕೊ ಜಾನ್ಸೆನ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಕ್ಲಾಸೆನ್ ಔಟ್; ಮತ್ತೆ ಭಾರತೀಯರಲ್ಲಿ ಉತ್ಸಾಹ
ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸನ್ ಔಟಾಗಿದ್ದಾರೆ. ಆಕರ್ಷಕ ಅರ್ಧಶತಕ ಸಿಡಿಸಿ ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದ್ದಾರೆ.
ಗೆಲುವಿನ ಸಮೀಪಕ್ಕೆ ಬಂದ ದಕ್ಷಿಣ ಆಫ್ರಿಕಾ
ಒಂದೇ ಓವರ್‌ನಲ್ಲಿ ಅಕ್ಷರ್ ಪಟೇಲ್ 24 ರನ್ ಬಿಟ್ಟುಕೊಟ್ಟಿದ್ದಾರೆ. ಹೆನ್ರಿಚ್ ಕ್ಲಾಸೆನ್ ಸಿಡಿದೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ಗೆಲುವಿನ ಸಮೀಪ ದಾಪುಗಾಲಿಡುತ್ತಿದೆ. ಭಾರತ ತಂಡ ಪಂದ್ಯವನ್ನು ಬಹುತೇಕ ಕೈಚೆಲ್ಲಿದೆ.
ಕ್ವಿಂಟನ್ ಡಿಕಾಕ್ ಔಟ್!
ಭಾರತ ತಂಡಕ್ಕೆ ನಿರ್ಣಾಯಕ ವಿಕೆಟ್ ಸಿಕ್ಕಿದೆ. 39 ರನ್ ಗಳಿಸಿ ಅಬ್ಬರಿಸುತ್ತಿದ್ದ ಕ್ವಿಂಟನ್ ಡಿಕಾಕ್ ವಿಕೆಟ್ ಪಡೆದು ಅರ್ಷದೀಪ್ ಸಿಂಗ್ ಭಾರತ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಪಂದ್ಯದಲ್ಲಿ ಇನ್ನೂ ರೋಚಕತೆ ಉಳಿದಿದೆ.
ದಕ್ಷಿಣ ಆಫ್ರಿಕಾ 81/3 (10)
ಮೊದಲ ಹತ್ತು ಓವರ್‌ಗಳ ಅಂತ್ಯದ ಬಳಿಕ ದಕ್ಷಿಣ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಸದ್ಯ ಆಫ್ರಿಕ ಸುಸ್ಥಿತಿಯಲ್ಲಿದೆ. ಭಾರತ ತಂಡವು ಈ ಹಂತದಲ್ಲಿ 75 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆ ಲೆಕ್ಕದಲ್ಲಿ ತಂಡವು ಮುನ್ನಡೆಯಲ್ಲಿದೆ.
ಸ್ಟಬ್ಸ್ ವಿಕೆಟ್ ಕಿತ್ತ ಅಕ್ಷರ್ ಪಟೇಲ್
ದಕ್ಷಿಣ ಆಫ್ರಿಕಾ ಮೂರನೇ ವಿಕೆಟ್ ಕಳೆದುಕೊಂಡಿದೆ. 31 ರನ್ ಗಳಿಸಿ ಆಕರ್ಷಕವಾಗಿ ಬ್ಯಾಟ್ ಬೀಸುತ್ತಿದ್ದ ಸ್ಟಬ್ಸ್, ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಪವರ್‌ಪ್ಲೇ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 42-2
6 ಓವರ್‌ಗಳ ಪವರ್‌ಪ್ಲೇ ಬಳಿಕ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ. ಟ್ರಿಸ್ಟನ್ ಸ್ಟಬ್ಸ್ ಹಾಗೂ ಕ್ವಿಂಟನ್ ಡಿಕಾಕ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರ ಬುಮ್ರಾ ಹಾಗೂ ಅರ್ಷದೀಪ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
ಐಡೆನ್ ಮರ್ಕ್ರಾಮ್ ಔಟ್
ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮರ್ಕ್ರಾಮ್ ಔಟಾಗಿದ್ದಾರೆ. ಅರ್ಷದೀಪ್ ಎಸೆದ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಮರ್ಕ್ರಾಮ್ 4(5) ರನ್ ಗಳಿಸಿ ಔಟಾಗಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ಆಕರ್ಷಕ ಕ್ಯಾಚ್ ಹಿಡಿದಿದ್ದಾರೆ. ಹರಿಣಗಳಿಗೆ ಆರಂಭದಲ್ಲೇ ಟೀಮ್ ಇಂಡಿಯಾ ಆಘಾತ ಕೊಟ್ಟಿದೆ.
ಭಾರತಕ್ಕೆ ಬುಮ್ರಾ ಅಭಯ
ಬಿತ್ತು! ದಕ್ಷಿಣ ಆಫ್ರಿಕಾದ ಮೊದಲ ವಿಕೆಟ್ ಪತನಗೊಂಡಾಗಿದೆ. ಜಸ್ಪ್ರೀತ್ ಬುಮ್ರಾ ಮ್ಯಾಜಿಕಲ್ ಎಸೆತಕ್ಕೆ ರೀಜಾ ಹೆನ್ರಿಕ್ಸ್ ವಿಕೆಟ್ ಕಳೆದುಕೊಂಡಿದ್ದಾರೆ. ಕ್ಲೀನ್ ಬೋಲ್ಡ್!!! ಇದು ಬುಮ್ ಬುಮ್ ಮ್ಯಾಜಿಕ್, ಅಷ್ಟೇ.
ಚೇಸಿಂಗ್ ಆರಂಭಿಸಿದ ಸೌತ್ ಆಫ್ರಿಕಾ
ದಕ್ಷಿಣ ಆಫ್ರಿಕಾ ಚೇಸಿಂಗ್ ಆರಂಭಿಸಿದೆ. ರೀಝಾ ಹೆನ್ರಿಕ್ಸ್ ಹಾಗೂ ಕ್ವಿಂಟನ್ ಡಿಕಾಕ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಷದೀಪ್ ಸಿಂಗ್ ಮೊದಲ ಓವರ್ ಎಸೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾಗೆ 177 ರನ್‌ಗಳ ಸ್ಪರ್ದಾತ್ಮಕ ಗುರಿ
ಮೊದಲು ಬ್ಯಾಟಿಂಗ್ ನಡೆಸಿದ ಭಾರತ 176 ರನ್ ಗಳಿಸಿದೆ. ಭಾರತ ತಂಡ ಆಫ್ರಿಕಾಗೆ ಸ್ಪರ್ಧಾತ್ಮಕ ಗುರಿ ನೀಡಿದೆ. ಈ ಮೊತ್ತ ಸಣ್ಣದಾದರೂ ಇದು ಸ್ಪರ್ಧಾತ್ಮಕವಾಗಲಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.
ಶಿವಂ ದುಬೆ ಔಟ್!
ಕೊನೆಯ ಓವರ್‌ನಲ್ಲಿ ಶಿವಂ ದುಬೆ 27 ರನ್ ಗಳಿಸಿ ಔಟಾಗಿದ್ದಾರೆ. ಭಾರತ 6 ವಿಕೆಟ್ ಕಳೆದುಕೊಂಡಿದೆ. ಎರಡು ಎಸೆತಗಳು ಮಾತ್ರ ಬಾಕಿ ಉಳಿದಿವೆ.
76 ರನ್ ಗಳಿಸಿ ವಿರಾಟ್ ಕೊಹ್ಲಿ ಔಟ್
ವಿರಾಟ್ ಕೊಹ್ಲಿ 76 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಪ್ರಮುಖ ಬ್ಯಾಟರ್‌ಗಳು ವಿಕೆಟ್ ಒಪ್ಪಿಸುತ್ತಿದ್ದಾಗ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಮಾಜಿ ನಾಯಕ, ನಿರ್ಣಾಯಕ ಪಂದ್ಯದಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ್ದಾರೆ.
ವಿರಾಟ್ ಕೊಹ್ಲಿ ಅರ್ಧಶತಕ
ಟೂರ್ನಿಯುದ್ದಕ್ಕೂ ಬ್ಯಾಟ್ ಬೀಸಲು ಪರದಾಡಿದ್ದ ವಿರಾಟ್ ಕೊಹ್ಲಿ, ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. ಇದು ಟೂರ್ನಿಯಲ್ಲಿ ಮೊದಲ ಫಿಫ್ಟಿ. 18 ಓವರ್ ಬಳಿಕ ಭಾರತ 150 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.
ಭಾರತ ತಂಡದ ಸ್ಕೋರ್ 126/4 (16)
16 ಓವರ್‌ಗಳ ಬಳಿಕ ಭಾರತ ತಂಡದ 4 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಜೊತೆಗೂಡಿರುವ ಶಿವಂ ದುಬೆ ಕೂಡಾ ಜವಾಬ್ದಾರಿಯುತ ಆಟವಾಡುತ್ತಿದ್ದಾರೆ.
47 ರನ್ ಗಳಿಸಿ ಅಕ್ಷರ್ ಪಟೇಲ್ ರನೌಟ್!
54 ಎಸೆತಗಳಲ್ಲಿ ಆಕರ್ಷಕ 72 ರನ್ ಜೊತೆಯಾಟದ ಬಳಿಕ ಅಕ್ಷರ್ ಪಟೇಲ್ ದುರದೃಷ್ಟಕರ ರೀತಿಯಲ್ಲಿ ರನೌಟ್ ಆಗಿದ್ದಾರೆ. 47 ರನ್ ಗಳಿಸಿ ಅಕ್ಷರ್ ವಿಕೆಟ್ ಒಪ್ಪಿಸಿದ್ದಾರೆ. ಭಾರತವು 13.4 ಓವರ್ ವೇಳೆಗೆ 107 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.
ಭಾರತ 98/3 (13)
13 ಓವರ್ ಬಳಿಕ ಭಾರತದ ಮೊತ್ತ 98 ರನ್. 3 ವಿಕೆಟ್ ಕಳೆದುಕೊಂಡಿರುವ ತಂಡದ ಪರ ಅಕ್ಷರ್ ಹಾಗೂ ವಿರಾಟ್ ನಿರ್ಣಾಯಕ ಜೊತೆಯಾಟವಾಡುತ್ತಿದ್ದಾರೆ. 13.2 ಓವರ್ ವೇಳೆಗೆ ಇವರಿಬ್ಬರ ಬ್ಯಾಟ್‌ನಿಂದ 71 ರನ್ ಜೊತಾಯಾಟ ಬಂದಿದೆ.
ಭಾರತ : 75/3 (10)
ಮೊದಲ 10 ಓವರ್ ಬಳಿಕ ಭಾರತ ತಂಡದ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದಾರೆ. ವಿರಾಟ್ ಹಾಗೂ ಅಕ್ಷರ್ 41 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ್ದಾರೆ. 34 ರನ್ ವೇಳೆಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ಸದ್ಯ ಸುಸ್ಥಿತಿಯಲ್ಲಿದೆ.
8 ಓವರ್ ಬಳಿಕ ಭಾರತ 59/3
8 ಓವರ್ ಬಳಿಕ ಭಾರತ 59/3 ರನ್ ಗಳಿಸಿದೆ. ಅಕ್ಷರ್ ಪಟೇಲ್ ಹಾಗೂ ವಿರಾಟ್ ವ್ಯಾಟ್ ಬೀಸುತ್ತಿದ್ದಾರೆ. ಮರ್ಕ್ರಾಮ್ ಎಸೆತದಲ್ಲಿ ಅಕ್ಷರ್ ಪಟೇಳ್ ಆಕರ್ಷಕ ಸಿಕ್ಸರ್ ಸಿಡಿಸಿದ್ದಾರೆ.
ಪವರ್‌ಪ್ಲೇನಲ್ಲಿ ಸೌತ್ ಆಫ್ರಿಕಾ ಪವರ್‌ಫುಲ್ ಆಟ
ಪವರ್‌ಪ್ಲೇನಲ್ಲಿ ಭಾರತ ತಂಡವು 45 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ಐಸಿಸಿ ಫೈನಲ್ ಪಂದ್ಯದಲ್ಲಿ ಭಾರತದ ಈ ಪ್ರದರ್ಶನ ಗಮನಾರ್ಹವಾಗಿಲ್ಲ. ಮತ್ತೊಮ್ಮೆ ಐಸಿಸಿ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಫಲರಾಗಿದ್ದು ಭಾರತಕ್ಕೆ ನಿರಾಶೆಯಾಗಿದೆ. ಆದರೆ, ವಿರಾಟ್ ಕೊಹ್ಲಿ ಉಪಸ್ಥಿತಿ ಅಭಿಮಾನಿಗಳಿಗೆ ತುಸು ಧೈರ್ಯ ಮೂಡಿಸಿದೆ.
ವಿಕೆಟ್! ವಿಶ್ವದ ನಂಬರ್ ವನ್ ಬ್ಯಾಟರ್ ಔಟ್!
ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಔಟಾಗಿದ್ದಾರೆ. ಕಗಿಸೊ ರಬಾಡಾ ಮೊದಲ ವಿಕೆಟ್ ಕಬಳಿಸಿದ್ದಾರೆ. ಭಾರತ ಕೇವಲ 4.3 ಓವರ್ ವೇಳೆಗೆ 34 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ಭಾರತ: 26/2 (3)
3 ಓವರ್ ಬಳಿಕ ಭಾರತ ತಂಡ 2 ವಿಕೆಟ್ ಕಳೆದುಕೊಂಡು 26 ರನ್ ಗಳಿಸಿದೆ. ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಮೈದಾನದಲ್ಲಿದ್ದಾರೆ.
ಬ್ಯಾಕ್ ಟು ಬ್ಯಾಕ್ ವಿಕೆಟ್, ಭಾರತಕ್ಕೆ ಡಬಲ್ ಆಘಾತ!
ರೋಹಿತ್ ಶರ್ಮಾ ಬೆನ್ನಲ್ಲೇ ರಿಷಬ್ ಪಂತ್ ಕೂಡಾ ಔಟಾಗಿದ್ದಾರೆ. ಎದುರಿಸಿದ ಎರಡನೇ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಕೇಶವ್ ಮಹಾರಾಜ್ ಒಂದೇ ಓವರ್‌ನಲ್ಲಿ ಎರಡು ಪ್ರಮುಖ ವಿಕೆಟ್ ಕಬಳಿಸಿದ್ದಾರೆ.
ವಿಕೆಟ್! ರೋಹಿತ್ ಶರ್ಮಾ ಔಟ್!!!
ವಿಕೆಟ್, ಇನ್‌ಫಾರ್ಮ್ ಬ್ಯಾಟರ್ ಔಟ್. ರೋಹಿತ್ ಶರ್ಮಾ ವಿಕೆಟ್ ಓಪ್ಪಿಸಿದ್ದಾರೆ. 9(5) ರನ್ ಗಳಿಸಿದ ಭಾರತದ ನಾಯಕ, ಕೇಶವ್ ಮಹಾರಾಜ್ ಎಸೆತದಲ್ಲಿ ಕ್ಲಾಸೆನ್‌ಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.
ಫೋರ್… ಫೋರ್…
ಎದುರಿಸಿದ ಮೊದಲ ಎಸೆತವನ್ನೇ ವಿರಾಟ್ ಕೊಹ್ಲಿ ಬೌಂಡರಿಗಟ್ಟಿದ್ದಾರೆ. ಇನ್ನಿಂಗ್ಸ್‌ನ 2 ಹಾಗೂ 3ನೇ ಎಸೆತ ಬೌಂಡರಿ ಲೈನ್ ಮುಟ್ಟಿದೆ. ವಿರಾಟ್ ಖಾತೆಗೆ 8 ರನ್ ಸೇರ್ಪಡೆ!
ಭಾರತದ ಬ್ಯಾಟಿಂಗ್ ಆರಂಭ
ಭಾರತ ತಂಡ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಿಚ್‌ಗೆ ಆಗಮಿಸಿದ್ದಾರೆ. ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ದೃಷ್ಟಿ ನೆಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಬೌಲಿಂಗ್ ಮಾಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲೂ ಬದಲಾವಣೆ ಇಲ್ಲ
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
ಬದಲಾಗದ ಭಾರತ ತಂಡ
ಫೈನಲ್ ಪಂದ್ಯಕ್ಕೂ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.
ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಬಾರ್ಬಡೋಸ್‌ನಲ್ಲಿ ಮಳೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಪಂದ್ಯಕ್ಕೂ ಮುನ್ನವೇ ಬಾರ್ಬಡೋಸ್‌ನಲ್ಲಿ ಮಳೆ ಆರಂಭವಾಗಿದೆ. ಪಂದ್ಯಕ್ಕೆ 4 ಗಂಟೆಗಳ ಮೊದಲೇ ಗುಡುಗು ಸಹಿತ ಮಳೆ ಸುರಿಯುತ್ತಿದೆ.
ಟಿ20ಐ ಕ್ರಿಕೆಟ್ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ ದಾಖಲೆ
ಉಭಯ ತಂಡಗಳು ಚುಟುಕು ಸ್ವರೂಪದಲ್ಲಿ ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ತಂಡ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ದಕ್ಷಿಣ ಆಫ್ರಿಕಾ 11ರಲ್ಲಿ ಗೆದ್ದಿದೆ.
ಮೀಸಲು ದಿನದ ನಿಯಮಗಳು
ನಿಗದಿತ ದಿನದಂದು ಮಳೆ ಅಡ್ಡಿ ಉಂಟು ಮಾಡಿ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನ ಪಂದ್ಯ ಮುಂದುವರೆಯಲಿದೆ. ಪಂದ್ಯದ ದಿನ ಹೆಚ್ಚುವರಿ 190 ನಿಮಿಷಗಳನ್ನು ಬಳಸಿಕೊಂಡು ಆಟವನ್ನು ಪೂರ್ಣಗೊಳಿಸಬಹುದು. ಎರಡೂ ತಂಡಗಳಿಗೆ ತಲಾ ಕನಿಷ್ಠ 10 ಓವರ್‌ಗಳನ್ನು ಆಡಲು ಅವಕಾಶ ಸಿಗದಿದ್ದರೆ, ಮಾರ್ಗಸೂಚಿಗಳ ಪ್ರಕಾರ ಪಂದ್ಯವನ್ನು ಮೀಸಲು ದಿನಕ್ಕೆ ವರ್ಗಾಯಿಸಲಾಗುತ್ತದೆ.
ಐಸಿಸಿ ನಿಯಮಗಳ ಪ್ರಕಾರ, ಫೈನಲ್ ಪಂದ್ಯವು ಟೈನಲ್ಲಿ ಕೊನೆಗೊಂಡರೆ ವಿಜಯಶಾಲಿ ತಂಡವನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ಬಳಸಲಾಗುವುದು. ಸೂಪರ್ ಓವರ್ ಕೂಡ ನಡೆಯಲು ಸಾಧ್ಯವಾಗದಿದ್ದರೆ, ಎರಡೂ ತಂಡಗಳನ್ನು, ಅಂದರೆ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
ಬಾರ್ಬಡೋಸ್ ಹವಾಮಾನ ವರದಿ
ಆಕ್ಯುವೆದರ್ ರಿಪೋರ್ಟ್ ಪ್ರಕಾರ, ಬಾರ್ಬಡೋಸ್‌ನಲ್ಲಿ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಗುಡುಗು ಸಹಿತ ಭಾರಿ ಮಳೆ ಸುರಿಯಾಗಲಿದೆ. ಶೇ.70 ರಷ್ಟು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಜೇಯ ತಂಡಗಳ ನಡುವೆ ಫೈನಲ್
ಟೂರ್ನಿಯಲ್ಲಿ ಒಂದೇ ಪಂದ್ಯ ಸೋಲದೆ ಫೈನಲ್ ಪ್ರವೇಶಿಸಿದ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿದೆ. ಸೌತ್ ಆಫ್ರಿಕಾ ಲೀಗ್ ಹಂತದಲ್ಲಿ 4, ಸೂಪರ್-8 ಸುತ್ತಿನಲ್ಲಿ 3 ಮತ್ತು ಸೆಮಿಫೈನಲ್ನಲ್ಲಿ ಗೆದ್ದು ಫೈನಲ್ಗೇರಿದೆ. ಮತ್ತೊಂದೆಡೆ ಭಾರತ ತಂಡ ಲೀಗ್ನಲ್ಲಿ 3 ಪಂದ್ಯ (4ರಲ್ಲಿ 1 ಪಂದ್ಯ ಮಳೆಯಿಂದ ರದ್ದು), ಸೂಪರ್-8 ಹಂತದ ಎಲ್ಲಾ ಮೂರು ಪಂದ್ಯ ಹಾಗೂ ಸೆಮಿಫೈನಲ್ ಜಯಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.
ಸೌತ್ ಆಫ್ರಿಕಾ ಸಂಭಾವ್ಯ ತಂಡ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನೋಕಿಯಾ, ತಬ್ರೈಜ್ ಶಮ್ಸಿ.
ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.