logo
ಕನ್ನಡ ಸುದ್ದಿ  /  ಕ್ರಿಕೆಟ್  /  ದಾಖಲೆಯ 9ನೇ ಏಷ್ಯಾಕಪ್‌ ಫೈನಲ್‌ ಆಡುತ್ತಿವೆ ಭಾರತ-ಶ್ರೀಲಂಕಾ; ಏಷ್ಯಾದ ಬಲಿಷ್ಠ ತಂಡಗಳ ರೆಕಾರ್ಡ್ಸ್‌ ಹೀಗಿವೆ

ದಾಖಲೆಯ 9ನೇ ಏಷ್ಯಾಕಪ್‌ ಫೈನಲ್‌ ಆಡುತ್ತಿವೆ ಭಾರತ-ಶ್ರೀಲಂಕಾ; ಏಷ್ಯಾದ ಬಲಿಷ್ಠ ತಂಡಗಳ ರೆಕಾರ್ಡ್ಸ್‌ ಹೀಗಿವೆ

Jayaraj HT Kannada

Sep 17, 2023 10:00 AM IST

google News

ಭಾರತ ಶ್ರೀಲಂಕಾ ಫೈನಲ್‌ ದಾಖಲೆ

    • India vs Sri Lanka: ಏಷ್ಯಾಕಪ್‌ ಇತಿಹಾಸದಲ್ಲಿ ನಡೆದ ಫೈನಲ್‌ ಪಂದ್ಯಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಹಲವು ಭಾರಿ ಮುಖಾಮುಖಿಯಾಗಿವೆ. ಈ  ಬಾರಿ ಮತ್ತೆ ಅಂತಿಮ ಕದನದಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗುತ್ತಿವೆ. ಏಷ್ಯಾದ ಬಲಿಷ್ಠ ತಂಡಗಳ ಏಷ್ಯಾಕಪ್‌ ದಾಖಲೆಗಳು ಹೀಗಿವೆ ನೋಡಿ.
ಭಾರತ ಶ್ರೀಲಂಕಾ ಫೈನಲ್‌ ದಾಖಲೆ
ಭಾರತ ಶ್ರೀಲಂಕಾ ಫೈನಲ್‌ ದಾಖಲೆ

ಏಷ್ಯಾಕಪ್‌ 2023ರ (Asia Cup 2023) ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ತಂಡಗಳು ಸೆಣಸುತ್ತಿವೆ. ಈಗಾಗಲೇ ಪ್ರಸಕ್ತ ಆವೃತ್ತಿಯ ಸೂಪರ್‌ ಫೋರ್‌ ಹಂತದಲ್ಲಿ ಒಂದು ಬಾರಿ ಮುಖಾಮುಖಿಯಾಗಿರುವ ತಂಡಗಳು, ಮತ್ತೊಮ್ಮೆ ಪೈಪೋಟಿಗಿಳಿಯುತ್ತಿವೆ. ಇದು ಉಭಯ ತಂಡಗಳ ನಡುವಿನ 9ನೇ ಏಷ್ಯಾಕಪ್‌ ಫೈನಲ್ ಪಂದ್ಯ‌ ಎನ್ನುವುದು ವಿಶೇಷ.

ಇದುವರೆಗೆ ಏಷ್ಯಾಕಪ್‌ನ 15 ಆವೃತ್ತಿಗಳು ನಡೆದಿದ್ದು, ಈ ಬಾರಿ 16ನೇ ಆವೃತ್ತಿಯ ಫೈನಲ್‌ ಪಂದ್ಯ ನಡೆಯುತ್ತಿದೆ. ಏಷ್ಯಾಕಪ್‌ ಇತಿಹಾಸದಲ್ಲೇ ಶ್ರೀಲಂಕಾ ತಂಡವು 13ನೇ ಬಾರಿಗೆ ಫೈನಲ್‌ ಪಂದ್ಯವನ್ನು ಆಡುತ್ತಿದ್ದರೆ, ಭಾರತ ತಂಡವು ಇದು 11ಬಾರಿಗೆ ಏಷ್ಯಾಕಪ್‌ ಫೈನಲ್‌ ಪಂದ್ಯ ಆಡುತ್ತಿದೆ. 1984ರಲ್ಲಿ ನಡೆದ ಮೊದಲ ಆವೃತ್ತಿಯ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ, ಭಾರತ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಚೊಚ್ಚಲ ಆವೃತ್ತಿಯಲ್ಲಿ ಲಂಕನ್ನರನ್ನು ಮಣಿಸಿ ಭಾರತ ಟ್ರೋಫಿ ಜಯಿಸಿತ್ತು.

ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ ಪ್ರವೇಶಿಸಿದ ತಂಡಗಳು (ಏಕದಿನ+ಟಿ20)

ಪ್ರಸಕ್ತ ಆವೃತ್ತಿ ಸೇರಿ, ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಶ್ರೀಲಂಕದ್ದು. ಇದರಲ್ಲಿ ಎರಡನೇ ಸ್ಥಾನದಲ್ಲಿ ಭಾರತವಿದೆ. ಶ್ರೀಲಂಕಾ 13 ಬಾರಿ ಅಂತಿಮ ಸುತ್ತಿಗೆ ಪ್ರವೇಶ ಪಡೆದರೆ, ಭಾರತ 11 ಬಾರಿ ಫೈನಲ್‌ ಪಂದ್ಯವನ್ನು ಆಡಿದೆ. ಪಾಕಿಸ್ತಾನ 5 ಬಾರಿ ಮತ್ತು ಬಾಂಗ್ಲಾದೇಶ 3 ಬಾರಿ ಫೈನಲ್‌ ಪ್ರವೇಶಿಸಿದೆ.

ಮುಖಾಮುಖಿ ದಾಖಲೆ (ಒಟ್ಟಾರೆ)

ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಭಾರತದ ಗೆಲುವು ಹೆಚ್ಚಿದೆ. 44 ವರ್ಷಗಳ ಸುದೀರ್ಘ ಏಕದಿನ ಮುಖಾಮುಖಿಯಲ್ಲಿ ಉಭಯ ತಂಡಗಳು ಒಟ್ಟು 166 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 97 ಪಂದ್ಯಗಳಲ್ಲಿ ಗೆದ್ದರೆ, ಶ್ರೀಲಂಕಾ 57 ಪಂದ್ಯಗಳನ್ನು ಮಾತ್ರ ಜಯಿಸಿದೆ. ಈ ನಡುವೆ 1 ಪಂದ್ಯ ಟೈ ಆಗಿದೆ. ಭಾರತದ ಗೆಲುವಿನ ಪ್ರಮಾಣ 58.43 ಶೇಕಡದಷ್ಟಿದೆ.

ಏಷ್ಯಾಕಪ್‌ ಮುಖಾಮುಖಿ ದಾಖಲೆ

ಏಕದಿನ ಏಷ್ಯಾಕಪ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ಎರಡೂ ತಂಡಗಳು ತಲಾ 11 ಬಾರಿ ಗೆದ್ದಿವೆ. ಪ್ರಸಕ್ತ ವರ್ಷದ ಟೂರ್ನಿಯಲ್ಲಿ ಸೂಪರ್‌ ಫೋರ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ, ಭಾರತ ಗೆದ್ದಿದೆ.

ಇಂಡೋ-ಶ್ರೀಲಂಕಾ ತಂಡಗಳ 9ನೇ ಏಷ್ಯಾಕಪ್‌ ಫೈನಲ್

ಏಷ್ಯಾದ ಬಲಿಷ್ಠ ತಂಡಗಳು ಎಂದೇ ಕರೆಸಿಕೊಳ್ಳುವ ಇಂಡೋ ಮತ್ತು ಲಂಕಾ, ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಬಾರಿ ಫೈನಲ್‌ ಪಂದ್ಯಗಳಲ್ಲಿ ಮುಖಾಮುಖಿಯಾದ ಸಾಧನೆ ಮಾಡಿವೆ. ಇದುವರೆಗೆ ನಡೆದ‌ 15 ಏಷ್ಯಾಕಪ್ ಆವೃತ್ತಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಬರೋಬ್ಬರಿ 8 ಬಾರಿ‌ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಪ್ರಸಕ್ತ ನಡೆಯುತ್ತಿರುವ 16ನೇ ಆವೃತ್ತಿ ಸೇರಿದರೆ ಇದು 9ನೇ ಬಾರಿಗೆ ಏಷ್ಯಾಕಪ್‌ನಲ್ಲಿ ಇಂಡೋ-ಲಂಕಾ ಫೈನಲ್ ಕದನ ನಡೆಯುತ್ತಿದೆ.

ಭಾರತವೇ ಬಲಿಷ್ಠ

ಉಭಯ ತಂಡಗಳ ನಡುವಣ 8 ಫೈನಲ್‌ ಮುಖಾಮುಖಿಯಲ್ಲಿ 5 ಬಾರಿ ಭಾರತ ಜಯಿಸಿದ್ರೆ, 3 ಬಾರಿ ಮಾತ್ರ ಶ್ರೀಲಂಕಾ ಗೆದ್ದಿದೆ. ಇದೀಗ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಮತ್ತೊಮ್ಮೆ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ಏಷ್ಯಾಕಪ್‌ ವಿಜೇತರ ಸಂಪೂರ್ಣ ಪಟ್ಟಿ

ವರ್ಷಮಾದರಿ (ಟಿ20, ಏಕದಿನ)ಚಾಂಪಿಯನ್ ತಂಡರನ್ನರ್​ಅಪ್ ತಂಡಆತಿಥ್ಯ ವಹಿಸಿದ ಸ್ಥಳ
1984ಏಕದಿನಭಾರತಶ್ರೀಲಂಕಾಶಾರ್ಜಾ ಮೈದಾನ, ಯುಎಇ
1986ಏಕದಿನಶ್ರೀಲಂಕಾಪಾಕಿಸ್ತಾನಕೊಲಂಬೊ, ಶ್ರೀಲಂಕಾ
1988ಏಕದಿನಭಾರತಶ್ರೀಲಂಕಾಬಂಗಬಂಧು ರಾಷ್ಟ್ರೀಯ ಮೈದಾನ, ಬಾಂಗ್ಲಾದೇಶ
1990/91ಏಕದಿನಭಾರತಶ್ರೀಲಂಕಾಈಡನ್ ಗಾರ್ಡನ್ಸ್, ಕೋಲ್ಕತ್ತಾ, ಭಾರತ
1995ಏಕದಿನಭಾರತಶ್ರೀಲಂಕಾಶಾರ್ಜಾ ಮೈದಾನ, ಯುಎಇ
1997ಏಕದಿನಶ್ರೀಲಂಕಾಭಾರತಪ್ರೇಮದಾಸ ಮೈದಾನ, ಕೊಲಂಬೊ, ಶ್ರೀಲಂಕಾ
2000ಏಕದಿನಪಾಕಿಸ್ತಾನಶ್ರೀಲಂಕಾಬಂಗಬಂಧು ರಾಷ್ಟ್ರೀಯ ಮೈದಾನ, ಬಾಂಗ್ಲಾದೇಶ
2004ಏಕದಿನಶ್ರೀಲಂಕಾಭಾರತಪ್ರೇಮದಾಸ ಸ್ಟೇಡಿಯಂ, ಕೊಲಂಬೊ, ಶ್ರೀಲಂಕಾ
2008ಏಕದಿನಶ್ರೀಲಂಕಾಭಾರತಕರಾಚಿ, ಪಾಕಿಸ್ತಾನ
2010ಏಕದಿನಭಾರತಶ್ರೀಲಂಕಾಡಂಬುಲ್ಲಾ ಮೈದಾನ, ಶ್ರೀಲಂಕಾ
2012ಏಕದಿನಪಾಕಿಸ್ತಾನಬಾಂಗ್ಲಾದೇಶಶೇರ್​-ಇ-ಬಾಂಗ್ಲಾ ಮೈದಾನ, ಬಾಂಗ್ಲಾದೇಶ
2014ಏಕದಿನಶ್ರೀಲಂಕಾಪಾಕಿಸ್ತಾನಶೇರ್​-ಇ-ಬಾಂಗ್ಲಾದ ಮೈದಾನ, ಬಾಂಗ್ಲಾದೇಶ
2016ಟಿ20ಭಾರತಬಾಂಗ್ಲಾದೇಶಶೇರ್-ಇ-ಬಾಂಗ್ಲಾ ಮೈದಾನ, ಬಾಂಗ್ಲಾದೇಶ
2018ಏಕದಿನಭಾರತಬಾಂಗ್ಲಾದೇಶದುಬೈ ಕ್ರಿಕೆಟ್ ಸ್ಟೇಡಿಯಂ, ದುಬೈ
2022ಟಿ20ಶ್ರೀಲಂಕಾಪಾಕಿಸ್ತಾನದುಬೈ ಕ್ರಿಕೆಟ್ ಸ್ಟೇಡಿಯಂ, ದುಬೈ

ಅತಿ ಹೆಚ್ಚು ಬಾರಿ ಏಷ್ಯಾಕಪ್‌ ಗೆದ್ದ ತಂಡಗಳು

ಈವರೆಗೆ ನಡೆದ ಏಷ್ಯಾಕಪ್‌ನ 15 ಆವೃತ್ತಿಗಳಲ್ಲಿ 10 ಬಾರಿ ಫೈನಲ್‌ ಪ್ರವೇಶಿಸಿದ ಭಾರತ ತಂಡವು, ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ. ಟೀಮ್‌ ಇಂಡಿಯಾ 7 ಬಾರಿ ಟ್ರೋಫಿ ಗೆದ್ದು, ಮೂರು ಬಾರಿ ಮಾತ್ರ ಫೈನಲ್‌ನಲ್ಲಿ ಸೋತಿದೆ. ಅತ್ತ 12 ಬಾರಿ ಫೈನಲ್‌ ಪ್ರವೇಶಿಸಿದ ಶ್ರೀಲಂಕಾ, 6 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದರೆ, ಉಳಿದ 6 ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದೆ. ಅದರಲ್ಲಿ 5 ಬಾರಿ ಭಾರತದ ವಿರುದ್ಧವೇ ಸೋತಿದೆ. ಮತ್ತೊಂದೆಡೆ ಪಾಕಿಸ್ತಾನ 2 ಬಾರಿ ಫೈನಲ್‌ ಗೆದ್ದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ