ಭಾರತದ ಬಲಿಷ್ಠ ಬ್ಯಾಟರ್‌ಗಳಿಗೆ ಭಯ ಹುಟ್ಟಿಸಿದ ಜೆಫ್ರಿ ವಾಂಡರ್ಸೆ; ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾಗೆ ಭರ್ಜರಿ ವಿಜಯ
Aug 04, 2024 10:11 PM IST
ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾಗೆ ಭರ್ಜರಿ ವಿಜಯ
- ಭಾರತ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್‌ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿದ ಆತಿಥೇಯರು, ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಕೂಡಾ ಚೇಸಿಂಗ್ ವೇಳೆ ತಂಡವು ಬ್ಯಾಟಿಂಗ್‌ನಲ್ಲಿ ದಿಢೀರ್ ಕುಸಿತ ಕಂಡಿತ್ತು. ಆದರೆ, ಪಂದ್ಯವು ಟೈನಲ್ಲಿ ಅಂತ್ಯಗೊಂಡು ತುಸು ನಿರಾಳವಾಗಿತ್ತು. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ಲಂಕಾ ಸ್ಪಿನ್ನರ್‌ಗಳು ಭಾರತ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ವನಿಂದು ಹಸರಂಗ ಬದಲಿಗೆ ತಂಡ ಸೇರಿಕೊಂಡಿದ್ದ ಜೆಫ್ರಿ ವಾಂಡರ್ಸೆ, ಭಾರತದ ತಂಡಕ್ಕೆ ಕಂಟಕರಾದರು. ಭಾರತದ ಮೊದಲ ಆರು ಬ್ಯಾಟರ್‌ಗಳ ನಿರ್ಣಾಯಕ ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಲ್ಲೆಕೆಲೆಯಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಲಂಕಾ ತಂಡ ಇದೇ ರೀತಿ ಬ್ಯಾಟಿಂಗ್‌ನಲ್ಲಿ ಕುಸಿತ ಕಂಡಿತ್ತು. ಇದೀಗ ಕೊಲಂಬೊದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾರತವು ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರೆಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು. ಇದು ಮೊದಲ ಏಕದಿನ ಪಂದ್ಯಕ್ಕಿಂತ 10 ರನ್ ಹೆಚ್ಚು. ಆ ಪಂದ್ಯದಲ್ಲಿ ಭಾರತವು ಮೊತ್ತವನ್ನು ಸಮಬಲಗೊಳಿಸಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಅದು ಕೂಡಾ ಸಾಧ್ಯವಾಗಲಿಲ್ಲ. ಲಂಕಾ ಸ್ಪಿನ್ನರ್‌ಗಳ ಮಾರಕ ದಾಳಿಗೆ ನಲುಗಿದ ರೋಹಿತ್ ಶರ್ಮಾ ಪಡೆ, 42.2 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಶ್ರೀಲಂಕಾ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಉತ್ತಮ ಆರಂಭದ ಹೊರತಾಗಿಯೂ ಕುಸಿದ ಭಾರತ
ಲಂಕಾ ನೀಡಿದ 240 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ, ಉತ್ತಮ ಆರಂಭವನ್ನೇ ಪಡೆಯಿತು. ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿದರೆ, ಶುಭ್ಮನ್ ಗಿಲ್ 35 ರನ್ ಕಲೆ ಹಾಕಿದರು. ಮೊದಲ ವಿಕೆಟ್‌ಗೆ ಇವರಿಬ್ಬರೂ 97 ರನ್‌ಗಳ ಜೊತೆಯಾಟವಾಡಿದರು. 44 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 64 ರನ್ ಗಳಿಸಿ ಹಿಟ್‌ಮ್ಯಾನ್ ಔಟಾಗುತ್ತಿದ್ದಂತೆಯೇ, ಭಾರತ ಮೇಲಿಂದ ಮೇಲೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವಾಂಡರ್ಸೆ ಭಾರತದ ಅಗ್ರ ಕ್ರಮಾಂಕದ ಆರು ಬ್ಯಾಟರ್‌ಗಳನ್ನು ಪೆವಿಲಿಯನ್ ಕಳುಹಿಸಿದರು.
ಶಿವಂ ದುಬೆ ಶೂನ್ಯ ಸುತ್ತಿದರೆ, ವಿರಾಟ್ ಕೊಹ್ಲಿ 14 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 7 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ವೇಳೆ ನಿರ್ಭೀತ ಆಟವಾಡಿದ ಅಕ್ಷರ್ ಪಟೇಲ್ 44 ರನ್ ಗಳಿಸಿ ತಂಡ ಮೊತ್ತ ಹಿಗ್ಗಿಸಿದರು. ಆದರೆ, ಲಂಕಾ ನಾಯಕ ಅಸಲಂಕಾ ತಮ್ಮದೇ ಎಸೆತದಲ್ಲಿ ಅಮೋಘ ಕ್ಯಾಚ್ ಹಿಡಿದು ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಕೂಡಾ 15 ರನ್ ಗಳಿಸಿ ಔಟಾಗುವ ಮೂಲಕ ಭಾರತದ ಗೆಲುವಿನ ಭರವಸೆ ಕಮರಿತು. ಕೊನೆಗೆ ಸಿರಾಜ್ ಹಾಗೂ ಕುಲ್ದೀಪ್ ಸೇರಿ ತಂಡದ ಮೊತ್ತವನ್ನು 200 ಗಡಿ ದಾಟಿಸಿದರು.
ಲಂಕಾ ಕಂಬ್ಯಾಕ್
ಪಂದ್ಯದಲ್ಲಿ ಮೊದಲು ಬ್ಯಾಟಂಗ್ ನಡೆಸಿದ ಶ್ರೀಲಂಕಾ, ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಎಸೆದ ಮೊದಲ ಎಸೆತದಲ್ಲೇ ಇನ್‌ಫಾರ್ಮ್ ಬ್ಯಾಟರ್ ಪಾಥುಮ್ ನಿಸ್ಸಂಕಾ ಗೋಲ್ಡನ್ ಡಕ್ ಆದರು. ಆರಂಭಿಕ ಕುಸಿತದ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ನಿಗದಿತ 50 ಓವರ್‌ಗಳಲ್ಲ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ 62 ಎಸೆತಗಳಲ್ಲಿ 40 ರನ್ ಗಳಿಸಿದರೆ, ಕಮಿಂದು ಮೆಂಡಿಸ್ 44 ಎಸೆತಗಳಲ್ಲಿ 40 ರನ್ ಗಳಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರರ್‌ಗಳಾಗಿ ಹೊರಹೊಮ್ಮಿದರು.
ಮೊದಲು ಬ್ಯಾಟಿಂಗ್ ನಡೆಸಿದ ತಂಡವು ಪವರ್ ಪ್ಲೇನಲ್ಲಿ ಒಂದು ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತು. 25ನೇ ಓವರ್ ಸಮಯದಲ್ಲಿ ಲಂಕಾ 3 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತು. ಒಂದು ಹಂತದಲ್ಲಿ ವಿಕೆಟ್‌ಗಳನ್ನು ಕಳೆದುಕೊಡು ರನ್ ಗಳಿಸಲು ಲಂಕಾ ಬ್ಯಾಟರ್‌ಗೂ ಪರದಾಡುತ್ತಿದ್ದರು. 35 ಓವರ್ ವೇಳೆಗೆ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಅಂತಿಮ 10 ಓವರ್‌ಗಳಲ್ಲಿ ದುನಿತ್ ವೆಲ್ಲಾಲಗೆ 35 ಎಸೆತಗಳಲ್ಲಿ 39 ರನ್ ಗಳಿಸಿ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಇವರಿಗೆ ಜೊತೆಯಾದ ಮೆಂಡಿಸ್ ಕೂಡಾ ವೇಗವಾಗಿ ರನ್ ಕಲೆ ಹಾಕಿದರು.
ಭಾರತದ ಪರ ವಾಷಿಂಗ್ಟನ್ ಸುಂದರ್ 3 ವಿಎಕಟ್ ಪಡೆಯುವ ಮೂಲಕ ಭಾರತದ ಪರ ಹೆಚ್ಚು ವಿಕೆಟ್ ಪಡೆದು ಮಿಂಚಿದರು.