logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನಕ್ಕೆ ಕನ್ನಡಿಗ ಕಂಬ್ಯಾಕ್, ರೋಹಿತ್-ಕೊಹ್ಲಿ 2027ರ ವಿಶ್ವಕಪ್ ಭವಿಷ್ಯ; ಗೌತಮ್ ಗಂಭೀರ್ ಸುದ್ದಿಗೋಷ್ಠಿ ಪ್ರಮುಖಾಂಶಗಳು

ಏಕದಿನಕ್ಕೆ ಕನ್ನಡಿಗ ಕಂಬ್ಯಾಕ್, ರೋಹಿತ್-ಕೊಹ್ಲಿ 2027ರ ವಿಶ್ವಕಪ್ ಭವಿಷ್ಯ; ಗೌತಮ್ ಗಂಭೀರ್ ಸುದ್ದಿಗೋಷ್ಠಿ ಪ್ರಮುಖಾಂಶಗಳು

Jayaraj HT Kannada

Jul 22, 2024 02:39 PM IST

google News

ಗೌತಮ್ ಗಂಭೀರ್ ಸುದ್ದಿಗೋಷ್ಠಿ ಪ್ರಮುಖಾಂಶಗಳು

    • ಭಾರತ ತಂಡದ ಮುಖ್ಯ ಕೋಚ್ ಆದ ಬಳಿಕ ಗೌತಮ್ ಗಂಭೀರ್ ಮೊದಲ ಬಾರಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಟೀಮ್‌ ಇಂಡಿಯಾ ಭವಿಷ್ಯದ ಕುರಿತು ಅವರು ಹಲವು ಮಾಹಿತಿ ತಿಳಿಸಿದರು. ಕನ್ನಡಿಗ ಕೆಎಲ್‌ ರಾಹುಲ್‌ ಎಕದಿನ ಕಂಬ್ಯಾಕ್‌ ಸೇರಿದಂತೆ, ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಮುಂದಿನ ವಿಶ್ವಕಪ್‌ ಆಡುವ ಕುರಿತು ಸುಳಿವು ಕೊಟ್ಟರು.
ಗೌತಮ್ ಗಂಭೀರ್ ಸುದ್ದಿಗೋಷ್ಠಿ ಪ್ರಮುಖಾಂಶಗಳು
ಗೌತಮ್ ಗಂಭೀರ್ ಸುದ್ದಿಗೋಷ್ಠಿ ಪ್ರಮುಖಾಂಶಗಳು

ಭಾರತ ಕ್ರಿಕೆಟ್‌ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಗೌತಮ್ ಗಂಭೀರ್ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಾಗಿ ದ್ವೀಪರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ, ಕಳೆದ ಎರಡು ವಾರಗಳಲ್ಲಿ ಟೀಮ್‌ ಇಂಡಿಯಾ ಕುರಿತು ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಕುರಿತು ಗಂಭೀರ್ ಮಾತನಾಡಿದರು. ಈ ವೇಳೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಜೊತೆಗಿದ್ದರು. ಹಲವು ವಿಷಯಗಳ ಕುರಿತು ಇವರಿಬ್ಬರು ಮಾತನಾಡಿದರು. ರೋಹಿತ್ ಶರ್ಮಾ ಟಿ20 ನಿವೃತ್ತಿ ನಂತರ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ನೇಮಿಸಿದ ಕುರಿತು, ಹಿರಿಯ ಆಟಗಾರರಾದ ರೋಹಿತ್-ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಕ್ರಿಕೆಟ್‌ ಭವಿಷ್ಯದ ಕುರಿತೂ ಬೆಳಕು ಚೆಲ್ಲಿದರು. ಗೌತಮ್‌ ಗಂಭೀರ್‌ ಸುದ್ದಿಗೋಷ್ಠಿಯ ಪ್ರಮುಖಾಂಶಗಳನ್ನು ನೋಡೋಣ.

ಕೊಹ್ಲಿ ಮತ್ತು ರೋಹಿತ್ 2027ರ ವಿಶ್ವಕಪ್‌ ಆಡುತ್ತಾರೆ

ಭಾರತ ತಂಡದ ಹಿರಿಯ ಬ್ಯಾಟರ್‌ಗಳಾದ ಕೊಹ್ಲಿ ಮತ್ತು ರೋಹಿತ್, ಟಿ20 ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಚುಟುಕು ಸ್ವರೂಪಕ್ಕೆ ನಿವೃತ್ತಿ ಘೋಷಿಸಿದರು. ಇದೀಗ ಇನ್ನೆರಡು ಸ್ವರೂಪದಲ್ಲಿ ಅವರ ಭವಿಷ್ಯದ ಕುರಿತು ಅಭಿಮಾನಿಗಳಲ್ಲಿ ಗೊಂದಲವಿದೆ. ಈ ಕುರಿತು ಮಾತನಾಡಿದ ಗೌತಿ, ಅವರ ಫಿಟ್‌ನೆಸ್‌ ಇದ್ದಷ್ಟೂ ದಿನ ಅವರು ಕ್ರಿಕೆಟ್‌ ಆಡುತ್ತಾರೆ ಎಂದು ಹೇಳಿದ್ದಾರೆ. ಅಂದರೆ, 2027ರ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ ಎಂದಿದ್ದಾರೆ. ಸದ್ಯ 37 ವರ್ಷದ ರೋಹಿತ್ ಮತ್ತು 35 ವರ್ಷದ ಕೊಹ್ಲಿ ಇಬ್ಬರೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಅವರಿಬ್ಬರೂ ಮುಂದಿನ ವರ್ಷಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಧ್ಯವಾದರೆ, ಅವರಿಬ್ಬರಲ್ಲಿ ಇನ್ನೂ ಕ್ರಿಕೆಟ್ ಹಸಿವು ಉಳಿದಿದೆ ಎಂದು ಹೇಳಿದರು.

ಏಕದಿನಕ್ಕಿಲ್ಲ ಸೂರ್ಯಕುಮಾರ್‌, ಕನ್ನಡಿಗ ರಾಹುಲ್‌ ಕಂಬ್ಯಾಕ್

ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕನನ್ನಾಗಿ ಮಾಡಲಾಗಿದ್ದರೂ, ಏಕದಿನ ತಂಡದಲ್ಲಿ ಅವರಿಗೆ ಸ್ಥಾನ ಸಿಗದಿರಬಹುದು. ರಿಷಬ್ ಪಂತ್ ಮರಳುವುದರೊಂದಿಗೆ, ಭಾರತೀಯ ಏಕದಿನ ತಂಡದಲ್ಲಿ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ ಕೂಡಾ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯುತ್ತಾರೆ. ಹೀಗಾಗಿ ಸೂರ್ಯಕುಮಾರ್‌ಗೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಸ್ಥಾನ ಸಿಗುವುದಿಲ್ಲ ಎಂದು ಅಗರ್ಕರ್ ಹೇಳಿದ್ದಾರೆ. ಕನ್ನಡಿಗ ರಾಹುಲ್ ಅವರನ್ನು ಏಕದಿನ ತಂಡಕ್ಕೆ ಮರಳಿ ಕರೆತರುವ ಅವಶ್ಯಕತೆಯಿದೆ ಎಂದು ಅಗರ್ಕರ್ ದೃಢಪಡಿಸಿದ್ದಾರೆ.

ಹಾರ್ದಿಕ್‌ ಪಾಂಡ್ಯ ಫಿಟ್‌ನೆಸ್‌ ಸಮಸ್ಯೆಯಿಂದ ನಾಯಕತ್ವ ನೀಡುವಲ್ಲಿ ಹಿನ್ನಡೆ

ಹಾರ್ದಿಕ್‌ ಪಾಂಡ್ಯ ಸಾಕಷ್ಟು ಸಮಯದವರೆಗೆ ಭಾರತ ಟಿ20 ತಂಡದ ಉಪನಾಯಕರಾಗಿದ್ದರು. ಕಳೆದ ತಿಂಗಳು ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಅವರೇ ಉಪನಾಯಕರಾಗಿದ್ದರು. ಆದರೆ, ಸೂರ್ಯಕುಮಾರ್ ಯಾದವ್‌ ಇದೀಗ ಚುಟುಕು ಸ್ವರೂಪಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದು ಅಭಿಮಾನಿಗಳ ಅಚ್ಚರಿಗೆ ಕಾರಣವಾಯ್ತು. ಈ ಕುರಿತು ಮಾತನಾಡಿದ ಅಗರ್ಕರ್, ನಾಯಕತ್ವಕ್ಕೆ ಸೂರ್ಯಕುಮಾರ್ ಅರ್ಹ ಅಭ್ಯರ್ಥಿ. ಅವರು ಇನ್ನೂ ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್.‌ ಆಟಗಾರರು ನಾಯಕನಾಗಿ ಸ್ಕೈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಅಗರ್ಕರ್ ಹೇಳಿದರು. ವಿಶಿಷ್ಟ ಕೌಶಲ್ಯದಿಂದಾಗಿ ಪಾಂಡ್ಯ ಪ್ರಮುಖ ಆಟಗಾರನಾಗಿ ಉಳಿದಿದ್ದಾರೆ. ಆದರೆ ಪಾಂಡ್ಯಗೆ ಫಿಟ್ನೆಸ್ ಒಂದು ಸವಾಲಾಗಿದೆ ಎಂದು ಅಗರ್ಕರ್ ಹೇಳಿದರು.

ಗಂಭೀರ್ ಮತ್ತು ಕೊಹ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ

ಐಪಿಎಲ್‌ನಲ್ಲಿ ಗಂಭೀರ್‌ ಹಾಗೂ ಕೊಹ್ಲಿ ನಡುವೆ ಮೈದಾನದಲ್ಲೇ ಆಗಾಗ ವಾಗ್ಯುದ್ಧಗಳು ನಡೆದಿವೆ. ಇದೀಗ ಗೌತಿ ಕೋಚಿಂಗ್‌ನಲ್ಲೇ ಕೊಹ್ಲಿ ಆಡಲಿದ್ದಾರೆ. ಹೀಗಾಗಿ ಅದೇ ಆಕ್ರೋಶ ಮುಂದೆಯೂ ಇರಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಐಪಿಎಲ್‌ನಲ್ಲಿ ಹಲವು ವರ್ಷಗಳಿಂದ ಕೊಹ್ಲಿಯೊಂದಿಗೆ ನಡೆಸಿದ ಬಹಿರಂಗ ವಾಕ್‌ಸಮರಗಳು ಟಿವಿ ರೇಟಿಂಗ್‌ಗೆ ಕೊಡುಗೆ ನೀಡಿವೆಯೇ ಹೊರತು ಅದರಿಂದ ಬೇರೇನೂ ಆಗಿಲ್ಲ. ನಾವಿಬ್ಬರೂ ಈಗ ಭಾರತವನ್ನು ಪ್ರತಿನಿಧಿಸುತ್ತಿದ್ದೇವೆ. ತಂಡಕ್ಕೆ ಯಾವುದು ಉತ್ತಮವೋ ಅದನ್ನೇ ಮಾಡಬೇಕಾಗಿದೆ. ಈ ಬಗ್ಗೆ ನಾನು ಕೊಹ್ಲಿಯೊಂದಿಗೆ ಚರ್ಚಿಸಿದ್ದೇನೆಯೇ ಇಲ್ಲವೇ ಎಂಬುದು ಮುಖ್ಯವಲ್ಲ ಎಂದು ಗಂಭೀರ್ ಹೇಳಿದ್ದಾರೆ. ಇದೇ ವೇಳೆ ಕೊಹ್ಲಿಯನ್ನು ಸಂಪೂರ್ಣ ವೃತ್ತಿಪರ, ವಿಶ್ವ ದರ್ಜೆಯ ಕ್ರೀಡಾಪಟು ಎಂದು ಗಂಭೀರ್‌ ಶ್ಲಾಘಿಸಿದ್ದಾರೆ.

ರವೀಂದ್ರ ಜಡೇಜಾ ಹೊರಗಿಟ್ಟಿದ್ದು ಯಾಕೆ?

ಶ್ರೀಲಂಕಾ ವಿರುದ್ಧದ ಏಕದಿನ ತಂಡದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿ ಅಭಿಮಾನಿಗಳ ಹುಬ್ಬೇರಿಸಿತ್ತು. ರೋಹಿತ್ ಮತ್ತು ಕೊಹ್ಲಿಯಂತೆ, ಜಡೇಜಾ‌ ಕೂಡಾ ಅನುಭವಿ ಆಟಗಾರ. ಈ ವರ್ಷದ ಕೊನೆಯಲ್ಲಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿಗಾಗಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಅದಕ್ಕೆ ಜಡ್ಡು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ