ನಿನ್ಯಾಕೆ ರನ್ ಓಡುತ್ತಿಲ್ಲ ಎಂದ ಕೊಹ್ಲಿಗೆ, ನೀನು ಶತಕ ಸಿಡಿಸು ಎಂದ ರಾಹುಲ್; ಇಬ್ಬರ ನಡುವಿನ ಶತಕದ ಸಂಭಾಷಣೆ ಹೀಗಿದೆ
Oct 20, 2023 11:13 PM IST
ಕೆಎಲ್ ರಾಹುಲ್.
- KL Rahul: ವಿರಾಟ್ ಕೊಹ್ಲಿ ಶತಕ ಸಿಡಿಸಲು ತಾನು ಹೇಗೆ ಒಪ್ಪಿಸಿದರು ಎಂಬುದರ ಕುರಿತು ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಶತಕ ಸಿಡಿಸುವ ಇಚ್ಛೆ ಹೊಂದಿರಲಿಲ್ಲ. ಆದರೆ ಅವರನ್ನು ನಾನೇ ಒಪ್ಪಿಸಿದೆ ಎಂದು ರಾಹುಲ್ ಹೇಳಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) 17ನೇ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು (India vs Bangladesh) 7 ವಿಕೆಟ್ಗಳಿಂದ ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿತು. ವಿರಾಟ್ ಕೊಹ್ಲಿ (Virat Kohli) ಶತಕದ ನೆರವಿನಿಂದ ಭಾರತಕ್ಕೆ ಅದ್ಭುತ ಜಯ ಸಿಕ್ಕಿತು. 97 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದ ಕೊಹ್ಲಿ, ಇನ್ನಿಂಗ್ಸ್ನಲ್ಲಿ 6 ಬೌಂಡರಿ, 4 ಸಿಕ್ಸರ್ಗಳಿದ್ದವು.
ಮೊದಲು ಬ್ಯಾಟಿಂಗ್ ನಡಿಸಿದ್ದ ಬಾಂಗ್ಲಾದೇಶ, 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು. ಲಿಟ್ಟನ್ ದಾಸ್ 66 ರನ್, ತಂಝಿಜ್ ಹೊಸೈನ್ 51 ರನ್ ಗಳಿಸಿದರು. ಈ ಸ್ಪರ್ಧಾತ್ಮ ಮೊತ್ತ ಬೆನ್ನಟ್ಟಿದ ಭಾರತ, ಕೇವಲ 41.3 ಓವರ್‌ಗಳಲ್ಲಿ ಗುರಿ ತಲುಪಿತು. ಶುಭ್ಮನ್ ಗಿಲ್ 53 ರನ್, ರೋಹಿತ್ 48, ಕೊಹ್ಲಿ ಅಜೇಯ 103, ಕೆಎಲ್ ರಾಹುಲ್ ಅಜೇಯ 34 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೊಹ್ಲಿ ನಾಟಕೀಯ ಶತಕ
34 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ, ನಾಟಕೀಯ ಶೈಲಿಯಲ್ಲಿ ತಮ್ಮ ಶತಕವನ್ನು ತಲುಪಿದರು. ಭಾರತ ಗೆಲ್ಲಲು 19 ರನ್ ಅಗತ್ಯವಿತ್ತು. ಅದೇ ರೀತಿ ಕೊಹ್ಲಿ ಶತಕಕ್ಕೂ ಅಷ್ಟೇ ರನ್ ಅಗತ್ಯ ಇತ್ತು. ಆದರೆ ಈ ಹಂತದಲ್ಲಿ ಕೆಎಲ್ ರಾಹುಲ್ ಸಿಂಗಲ್ ತೆಗೆದುಕೊಳ್ಳಲಿಲ್ಲ. ಆದರೆ ಇದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ವೈಯಕ್ತಿಕ ಮೈಲಿಗಲ್ಲು ತಲುಪಲು ಕೊಹ್ಲಿ ಈ ರೀತಿ ಆಡುತ್ತಿದ್ದಾರೆ ಎನ್ನಲಾಗಿತ್ತು.
ಆದರೆ, ಈ ವಿವಾದಕ್ಕೆ ಕೆಎಲ್ ರಾಹುಲ್ ಫುಲ್ಸ್ಟಾಪ್ ಇಟ್ಟಿದ್ದಾರೆ. ಕೊಹ್ಲಿ ಶತಕ ಸಿಡಿಸಲು ತಾನು ಹೇಗೆ ಒಪ್ಪಿಸಿದರು ಎಂಬುದರ ಕುರಿತು ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ. ಕೊಹ್ಲಿ ಶತಕ ಸಿಡಿಸುವ ಇಚ್ಛೆ ಹೊಂದಿರಲಿಲ್ಲ. ಆದರೆ ಅವರನ್ನು ನಾನೇ ಒಪ್ಪಿಸಿದೆ ಎಂದು ರಾಹುಲ್ ಹೇಳಿದ್ದಾರೆ. ಆ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಲ್ಲದೆ, ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕೆಎಲ್ ರಾಹುಲ್ ಮಾತು
ಕೊಹ್ಲಿ ಗೊಂದಲಕ್ಕೊಳಗಾಗಿದ್ದರು. ನೀನು ಸಿಂಗಲ್ ರನ್ ತೆಗೆದುಕೊಳ್ಳಬೇಕು. ನೀನು ಸಹ ರನ್ ಗಳಿಸಬೇಕು. ಇಲ್ಲವಾದರೆ ನಾನು ವೈಯಕ್ತಿಕ ದಾಖಲೆಗಳಿಗೆ ಆಡುತ್ತಿದ್ದೇನೆ ಎಂದು ಜನರು ಭಾವಿಸುತ್ತಾರೆ ಎಂದು ಕೊಹ್ಲಿ ಹೇಳಿದ್ದರು. ಆದರೆ, ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುತ್ತೇವೆ. ಹಾಗಿದ್ದ ಮೇಲೆ ಏಕೆ ಚಿಂತೆ. ನೀವು ಶತಕವನ್ನು ಪೂರ್ಣಗೊಳಿಸಿ. ನಾನು ಸಿಂಗಲ್ಸ್ ತೆಗೆದುಕೊಳ್ಳುವುದಿಲ್ಲ ಎಂದು ರಾಹುಲ್, ಶತಕದ ಹಿಂದಿರುವ ಗುಟ್ಟನ್ನು ಬಹಿರಂಗಪಡಿಸಿದರು.
42ನೇ ಓವರ್ನಲ್ಲಿ ಅಂಪೈರ್ ರಿಚರ್ಡ್ ಕೆಟಲ್‌ಬರ್ಗ್ ಅವರು ವೈಡ್ ನೀಡದ ನಿರ್ಧಾರದ ಕುರಿತು ರಾಹುಲ್ರನ್ನು ಪ್ರಶ್ನಿಸಲಾಯಿತು. ಆ ಹಂತದಲ್ಲಿ ಕೊಹ್ಲಿ ಶತಕಕ್ಕೆ 3 ರನ್, ಪಂದ್ಯದ ಗೆಲುವಿಗೆ 2 ರನ್ ಬೇಕಿತ್ತು. ಅದಾಗಿಯೂ ಲೆಗ್ ಸೈಡ್ನಲ್ಲಿ ಕೊಹ್ಲಿ ಹಿಂದೆ ಬಂದ ಚೆಂಡು ಕೀಪರ್ ಕೈ ಸೇರಿತ್ತು. ಆದರೆ ಅಂಪೈರ್ ವೈಡ್ ನೀಡಿರಲಿಲ್ಲ. ಇದೇ ರೀತಿ ಅದರ ಹಿಂದಿನ ಓವರ್‌ನಲ್ಲಿಯೂ ಸಂಭವಿಸಿತು. ಇದಕ್ಕೆ ಉತ್ತರಿಸಿದ ರಾಹುಲ್, ಇದು ಉತ್ತರಿಸಲು ಕಷ್ಟಕರ ಪ್ರಶ್ನೆ ಎಂದರು.
ಕೊಹ್ಲಿ ವಿಶ್ವದಾಖಲೆ
ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 48ನೇ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ವಿಶ್ವ ದಾಖಲೆ ಸರಿಗಟ್ಟಲು ಇನ್ನು ಒಂದು ಶತಕವಷ್ಟೇ ಬೇಕಿದೆ. ಮೂರು ಸ್ವರೂಪಗಳಲ್ಲಿ ಕೊಹ್ಲಿಗಿದು 78 ನೇ ಅಂತಾರಾಷ್ಟ್ರೀಯ ಶತಕ. ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿಯದ್ದು ಮೂರನೇ ಶತಕ. ಸದ್ಯ ಅಮೋಘ ಗೆಲುವು ಸಾಧಿಸಿದ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.