logo
ಕನ್ನಡ ಸುದ್ದಿ  /  ಕ್ರಿಕೆಟ್  /  Imran Tahir: ಈತ ಹುಟ್ಟಿದ್ದು ಪಾಕಿಸ್ತಾನದಲ್ಲಿ, ಆಡಿದ್ದು ದಕ್ಷಿಣ​ ಆಫ್ರಿಕಾ ಪರ; ವಿವಾಹವಾಗಿದ್ದು ಭಾರತೀಯ ಮೂಲದ ಮಹಿಳೆಯನ್ನ!

Imran Tahir: ಈತ ಹುಟ್ಟಿದ್ದು ಪಾಕಿಸ್ತಾನದಲ್ಲಿ, ಆಡಿದ್ದು ದಕ್ಷಿಣ​ ಆಫ್ರಿಕಾ ಪರ; ವಿವಾಹವಾಗಿದ್ದು ಭಾರತೀಯ ಮೂಲದ ಮಹಿಳೆಯನ್ನ!

Prasanna Kumar P N HT Kannada

Sep 01, 2023 07:00 AM IST

google News

ಇಮ್ರಾನ್ ತಾಹಿರ್ ಮತ್ತು ಸುಮಯ್ಯ ದಿಲ್ದಾರ್.

    • Imran Tahir: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಪಿನ್ನರ್​ ಇಮ್ರಾನ್ ತಾಹೀರ್​ ಅವರು ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್​​ಗಳಲ್ಲಿ ಒಬ್ಬರು. ಆದರೆ ಅವರ ವೈಯಕ್ತಿಕ ಜೀವನದ ಕುರಿತು ಯಾರಿಗೂ ಅಷ್ಟಾಗಿ ಪರಿಚಯ ಇಲ್ಲ. ಈ ವರದಿಯಲ್ಲಿ ಅವರ ಬದುಕಿನ ಏಳು-ಬೀಳಿನ ಕುರಿತು ತಿಳಿಯೋಣ.
ಇಮ್ರಾನ್ ತಾಹಿರ್ ಮತ್ತು ಸುಮಯ್ಯ ದಿಲ್ದಾರ್.
ಇಮ್ರಾನ್ ತಾಹಿರ್ ಮತ್ತು ಸುಮಯ್ಯ ದಿಲ್ದಾರ್.

ಇಮ್ರಾನ್ ತಾಹಿರ್, ದಕ್ಷಿಣ​ ಆಫ್ರಿಕಾ ತಂಡದ ಐಕಾನಿಕ್ ಸ್ಪಿನ್ನರ್ (South Africa Spinner Imran Tahir)​​. ಅವರ ಸ್ಪ್ರಿಂಟ್ ಸೆಲೆಬ್ರೇಷನ್ (ವಿಕೆಟ್ ಕಬಳಿಸಿದ ತಕ್ಷಣ ಓಡುವುದು) ಈಗಲೂ​ ಎಲ್ಲರಿಗೂ ಅಚ್ಚುಮೆಚ್ಚು. ತನ್ನ ಸ್ಪಿನ್ ಮೋಡಿಯಿಂದ ಘಟಾನುಘಟಿ ಬ್ಯಾಟರ್​​ಗಳನ್ನು ಕಕ್ಕಾಬಿಕ್ಕಿಗೊಳಿಸುತ್ತಿದ್ದ ತಾಹೀರ್​​, ಹುಟ್ಟಿದ್ದು ಪಾಕಿಸ್ತಾನದಲ್ಲಿ (Pakistan) ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ. ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ.

ಇಮ್ರಾನ್ ತಾಹಿರ್​​ ಹುಟ್ಟಿದ್ದು, ಪಾಕಿಸ್ತಾನದಲ್ಲೇ ಆದರೂ ಆಡಿದ್ದು ದಕ್ಷಿಣ​ ಆಫ್ರಿಕಾ ತಂಡದ ಪರ. ಮತ್ತೊಂದು ವಿಶೇಷ ಅಂದರೆ, ಅವರು ಮದುವೆಯಾಗಿದ್ದು ಭಾರತೀಯ ಮೂಲದ ಮಾಡೆಲ್​​ ಅನ್ನು. ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ (Chennai Super Kings) ಆಟಗಾರನಾಗಿದ್ದ ತಾಹಿರ್ ಕ್ರಿಕೆಟ್​ ಲೋಕದಲ್ಲಿ ಹೊಸ ಸೆನ್​ಸೇಷನ್​ ಸೃಷ್ಟಿಸಿದ್ದರು. ಇವರು ಬೌಲಿಂಗ್ ಮಾಡಲು ಕಣಕ್ಕಿಳಿದರೆ ವಿಕೆಟ್​ ಇಲ್ಲದೆ ವಾಪಸ್ ಹೋದವರೇ ಅಲ್ಲ.

ಪಾಕ್ ಪರ ಆಡಲು ಸಿಗಲಿಲ್ಲ ಅವಕಾಶ

ಪೂರ್ಣ ಹೆಸರು ಮೊಹಮ್ಮದ್ ಇಮ್ರಾನ್ ತಾಹಿರ್. ಜನಿಸಿದ್ದು ಮಾರ್ಚ್​ 27, 1979ರಂದು ಪಾಕಿಸ್ತಾನದ ಲಾಹೋರ್​​ನ ಪಂಜಾಬ್​ನಲ್ಲಿ. ಗೂಗ್ಲಿ ಬೌಲಿಂಗ್ ಮೂಲಕ ಬ್ಯಾಟ್ಸ್​ಮನ್​ಗಳ ನಿದ್ದೆಗೆಡಿಸುತ್ತಿದ್ದ ತಾಹಿರ್, ದಕ್ಷಿಣ ಆಫ್ರಿಕಾದ ಪರ ಎಲ್ಲಾ ಮೂರು ಪ್ರಕಾರಗಳಲ್ಲೂ ಆಡಿದ್ದಾರೆ. ಆದರೆ ಇವರ ಕ್ರಿಕೆಟ್​ ವೃತ್ತಿಜೀವನ ಆರಂಭಗೊಂಡಿದ್ದು, ಪಾಕಿಸ್ತಾನದಲ್ಲಿ ಎಂಬುದು ವಿಶೇಷ. ತಾಹಿರ್ ಅಂಡರ್-19 ಮಟ್ಟದಲ್ಲಿ ಪಾಕಿಸ್ತಾನ ಪ್ರತಿನಿಧಿಸಿದರು. ಆದರೆ, ಹಿರಿಯರ ತಂಡದಲ್ಲಿ ಅವಕಾಶ ಪಡೆಯಬೇಕೆಂಬ ಕನಸು ನನಸಾಗಲಿಲ್ಲ.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು, ತಮ್ಮ 16ನೇ ವಯಸ್ಸಿನಲ್ಲಿ ಲಾಹೋರ್‌ನ ಪೇಸ್ ಶಾಪಿಂಗ್ ಮಾಲ್‌ನಲ್ಲಿ ಅಲ್ಪ ಸಂಬಳಕ್ಕೆ ಕೆಲಸ ಮಾಡಲು ಪ್ರಾರಂಭಿಸಿದರು. ಇದರ ಜೊತೆಗೆ ಕ್ರಿಕೆಟ್​​​ ಕಡೆಯೂ ಹೆಚ್ಚು ಗಮನ ಹರಿಸಿದ್ದರು. ಪಾಕಿಸ್ತಾನ ಅಂಡರ್-19 ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಟ್ರಯಲ್ಸ್‌ ಸಮಯದಲ್ಲಿ ತಾಹೀರ್​, ಆಯ್ಕೆಯಾದರು. ಇದು ಅವರ ಅದೃಷ್ಟವನ್ನೇ ಬದಲಿಸಲು ಕಾರಣವಾಯಿತು. ನಂತರ ಪಾಕ್ ‘ಎ’ ತಂಡದಲ್ಲೂ ಅವಕಾಶ ಗಿಟ್ಟಿಸಿಕೊಂಡರೂ, ರಾಷ್ಟ್ರೀಯ ತಂಡದಲ್ಲಿ ತನ್ನ ಹೆಸರನ್ನು ನಮೂದಿಸುವಲ್ಲಿ ವಿಫಲರಾದರು.

ಇಂಗ್ಲೆಂಡ್​ ಕೌಂಟಿಯಲ್ಲೂ ಆಡಿದ ಅನುಭವ

ಪಾಕಿಸ್ತಾನದಲ್ಲಿದ್ದಾಗಲೇ ತಾಹೀರ್​ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್​ನತ್ತ ಹೆಜ್ಜೆ ಹಾಕಿದರು. ಯಾರ್ಕ್‌ಷೈರ್ ಮತ್ತು ಮಿಡ್ಲ್‌ಸೆಕ್ಸ್‌ ತಂಡಗಳ ಪರ ಪರಿಣಾಮಕಾರಿ ಪ್ರದರ್ಶನ ನೀಡಿದರು. ಈ ಅದ್ಭುತ ಪ್ರದರ್ಶನವೇ  ದಕ್ಷಿಣ ಆಫ್ರಿಕಾಕ್ಕೂ ಕೊಂಡೊಯ್ಯಿತು. ಆದರೆ ಅಲ್ಲೂ ಏಕಾಏಕಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ. ದಕ್ಷಿಣ ಆಫ್ರಿಕಾ ಪರ 5 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ್ದರು.

ತಾಹಿರ್​ ಲವ್​ಸ್ಟೋರಿ

ತಾಹಿರ್​ ವೈಯಕ್ತಿಕ ಜೀವನ ಗಮನಿಸುವುದಾದರೆ, 1998ರಲ್ಲಿ ಸುಮಯ್ಯ ದಿಲ್ದಾರ್ ಎಂಬ ರೂಪದರ್ಶಿಯನ್ನು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಕ್ಕೆ ಬಂದಾಗ ಭೇಟಿಯಾಗಿದ್ದರು. ಅವರ ಭೇಟಿ ಸ್ನೇಹಕ್ಕೆ, ಸ್ನೇಹದಿಂದ ಪ್ರೀತಿಗೆ ತಿರುಗಿತ್ತು. ಆಕೆಯನ್ನು ಭೇಟಿಯಾಗಲೆಂದೇ ಹಲವು ಬಾರಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದ್ದರು. ಆದರೆ, ಆಗಿನ್ನೂ ತಾಹಿರ್​​ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿರಲಿಲ್ಲ. ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ ಭಾರತೀಯ ಮೂಲದ ರೂಪದರ್ಶಿ.

2007ರಲ್ಲಿ ಮದುವೆ, 2011ರಲ್ಲಿ ತಂಡಕ್ಕೆ ಆಯ್ಕೆ

ದ. ಆಫ್ರಿಕಾ ಪರ ಅವಕಾಶ ಸಿಕ್ಕ ನಂತರ ತಾಹಿರ್ 2006ರಲ್ಲಿ ಸ್ಥಳಾಂತರಗೊಂಡರು. ಮರುವರ್ಷವೇ ತಾನು ಪ್ರೀತಿಸುತ್ತಿದ್ದ ಸುಮಯ್ಯ ದಿಲ್ದಾರ್ ಅವರನ್ನು ವಿವಾಹವಾದರು. ಐದು ವರ್ಷಗಳ ಕಾಲ ದೇಶೀಯ ಕ್ರಿಕೆಟ್​​ನಲ್ಲಿ ಧೂಳೆಬ್ಬಿಸಿದ ತಾಹರ್​, ಆತ್ಮೀಯ ಸ್ನೇಹಿತ ಗುಲಾಮ್ ಬೋಡಿ ಮೂಲಕ ಡರ್ಬನ್‌ಗೆ ಸ್ಥಳಾಂತರಗೊಳ್ಳಲು ಸಹಾಯ ಮಾಡಿದರು. ಸತತ ಹೋರಾಟ, ಕಠಿಣ ಪರಿಶ್ರಮದಿಂದ ಕೊನೆಗೂ 2011ರಲ್ಲಿ ರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ದೊರೆಯಿತು.

ಅತ್ಯಂತ ಅಪಾಯಕಾರಿ ಬೌಲರ್​ ಆದರು

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಕಣಕ್ಕಿಳಿದ ತಾಹಿರ್, ದ. ಆಫ್ರಿಕಾ ಎದುರಿಸುತ್ತಿದ್ದ ಗುಣಮಟ್ಟದ ಸ್ಪಿನ್ನರ್​​ಗಳ ಕೊರತೆಯನ್ನು ನೀಗಿಸಿದರು. ಆ ಬಳಿಕ ತಾಹಿರ್ ಹಿಂತಿರುಗಿ ನೋಡಲೇ ಇಲ್ಲ. ಕ್ರಮೇಣ ಏಕದಿನ ಕ್ರಿಕೆಟ್​​ನಲ್ಲಿ ಆಧಾರಸ್ತಂಭವಾದರು. ನಂತರ ಟಿ20 ಕ್ರಿಕೆಟ್​​ನಲ್ಲಿ ಅತ್ಯಂತ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರಾದರು. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮೋಸ್ಟ್​ ಡೇಂಜರಸ್ ಸ್ಪಿನ್ನರ್​​ಗಳಲ್ಲಿ ಒಬ್ಬರಾಗಿ ಜಾಗ ಪಡೆದರು.

ಐಪಿಎಲ್​ನಲ್ಲೂ ವಿಕೆಟ್ ಬೇಟೆ

ಇದೇ ಯಶಸ್ಸು ಅವರನ್ನು ಐಪಿಎಲ್‌ಗೆ ಕರೆತಂದಿತು. ಮೊದಲ ಬಾರಿಗೆ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದಲ್ಲಿ ಕಾಣಿಸಿಕೊಂಡ ಗೂಗ್ಲಿ ಸ್ಪಿನ್ನರ್​, ನಂತರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲೂ ತಮ್ಮ ಸ್ಪಿನ್ ಮೋಡಿ ಮುಂದುವರೆಸಿದರು. 2019ರಲ್ಲಿ ವಿಕೆಟ್ ಬೇಟೆಯಾಡಿದ ತಾಹೀರ್​, ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದರು. ದಕ್ಷಿಣ ಆಫ್ರಿಕಾ ಪರ 20 ಟೆಸ್ಟ್, 107 ಏಕದಿನ, ಮತ್ತು 38 ಟಿ20 ಆಡಿದ್ದಾರೆ. 2019ರಲ್ಲಿ ನಿವೃತ್ತರಾದ 44 ವರ್ಷದ ತಾಹಿರ್, ಒಟ್ಟು 293 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಐಪಿಎಲ್​​​ನಲ್ಲೂ 82 ವಿಕೆಟ್​​ ಉರುಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ