ನಿಮಗೆ ಗಟ್ಸ್ ಇದ್ದರೆ, ಅಲ್ಲಿ ಪೋಸ್ಟ್ ಮಾಡಿ; ಸಾನಿಯಾ ಮಿರ್ಜಾ ಜೊತೆ ಮದುವೆ ವದಂತಿ ಬಗ್ಗೆ ಮೌನ ಮುರಿದ ಮೊಹಮ್ಮದ್ ಶಮಿ
Jul 20, 2024 04:06 PM IST
ನಿಮಗೆ ಗಟ್ಸ್ ಇದ್ದರೆ, ಅಲ್ಲಿ ಪೋಸ್ಟ್ ಮಾಡಿ; ಸಾನಿಯಾ ಮಿರ್ಜಾ ಜೊತೆ ಮದುವೆ ವದಂತಿ ಬಗ್ಗೆ ಮೌನ ಮುರಿದ ಮೊಹಮ್ಮದ್ ಶಮಿ
- Mohammed Shami: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುತ್ತಾರೆ ಎಂದು ಹಬ್ಬಿದ್ದ ವದಂತಿಗಳಿಗೆ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ವಿಚ್ಛೇದನ ಪಡೆದ ಕೆಲವು ದಿನಗಳ ನಂತರ ಭಾರತದ ಟೆನಿಸ್ ತಾರೆ ಸಾನಿಯಾ (Sania Mirza) ಅವರನ್ನು ಮದುವೆಯಾಗಲಿದ್ದಾರೆ ಎಂದು ತಮ್ಮ ಮೇಲೆ ಹಬ್ಬಿದ್ದ ವದಂತಿಗಳಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami) ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಶಮಿ ಅವರು ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕುವ ಮೂಲಕ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಲಿಕ್ ಜೊತೆ ಡಿವೋರ್ಸ್ ಪಡೆದ ಬಳಿಕ ಒಂದು ತಿಂಗಳ ನಂತರ ಶಮಿ ಮತ್ತು ಸಾನಿಯಾ ಮದುವೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಏಕೆಂದರೆ ಶಮಿ ಕೂಡ ತನ್ನ ಪತ್ನಿ ಹಸಿನ್ ಜಹಾನ್ ಅವರೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಹಾಗಾಗಿ, ವೇಗಿ ಮತ್ತು ಟೆನಿಸ್ ತಾರೆಯ ಮದುವೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಯಬಿಟ್ಟಿದ್ದರು. ಕೆಲವರು ನಿಜವೆಂದೇ ನಂಬಿದ್ದರು. ಶಮಿ ಹಲವು ತಿಂಗಳ ನಂತರ ಕ್ಲಾರಿಟಿ ಕೊಟ್ಟಿದ್ದಾರೆ.
ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದ ಶಮಿ
ಶುಭಂಕರ್ ಮಿಶ್ರಾ ಅವರೊಂದಿಗಿನ ಯೂಟ್ಯೂಬ್ ಸಂವಾದದಲ್ಲಿ ಮಾತನಾಡಿದ ಶಮಿ, ನಿಮಗೆ ಗಟ್ಸ್ ಇದ್ದರೆ, ವೆರಿಫೈಯ್ಡ್ ಪೇಜ್ನಿಂದ ಪೋಸ್ಟ್ ಮಾಡಿ ಆಗ ಪ್ರತಿಕ್ರಿಯಿಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ. ಜಾಲತಾಣಗಳಲ್ಲಿ ಅನಗತ್ಯ ಪೋಸ್ಟ್ಗಳ ಸುಳ್ಳು ಹಬ್ಬಿಸುವ ಟ್ರೋಲಿಗರ ವಿರುದ್ಧ ಸಿಡಿದೆದ್ದ ಶಮಿ, ಮೀಮ್ಸ್, ಟ್ರೋಲ್ ಎಷ್ಟು ಮನರಂಜನೆ ನೀಡುತ್ತವೋ, ಅಷ್ಟೇ ಹಾನಿಕಾರಕ. ಎಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹೀಗೆ ನಡೆದುಕೊಳ್ಳುವುದು ಎಷ್ಟು ಸರಿ ಎಂದಿದ್ದಾರೆ.
ಎಲ್ಲರೂ ಜವಾಬ್ದಾರರಾಗಿರಬೇಕು. ಇಂತಹ ಆಧಾರರಹಿತ ಸುದ್ದಿ ಹರಡುವ ಮತ್ತು ಪ್ರಕಟಿಸುವುದನ್ನು ತಡೆಯಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಶಮಿ ಮನವಿ ಮಾಡಿದ್ದಾರೆ. 2023ರ ಏಕದಿನ ವಿಶ್ವಕಪ್ ನಂತರ ಗಾಯಗೊಂಡಿದ್ದ ಶಮಿ ಅವರು ಇದುವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಡೆ ಮುಖಮಾಡಿಲ್ಲ. ಕಾಲಿನ ಶಸ್ತ್ರ ಚಿಕಿತ್ಸೆಯ ನಂತರ ಸಂಪೂರ್ಣ ಚೇತರಿಸಿಕೊಂಡ ವೇಗಿ, ಸದ್ಯ ಬೆಂಗಳೂರಿನ ಎನ್ಸಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನಿಮಗೆ ಗಟ್ಸ್ ಇದ್ದರೆ…
ಊಹಾಪೋಹ ಸುದ್ದಿಗಳನ್ನು ಪ್ರಕಟಿಸಿದ ಕುರಿತು ಮಾತನಾಡಿದ ಶಮಿ, ಇದು ವಿಚಿತ್ರ ಎನಿಸುತ್ತದೆ. ಉದ್ದೇಶಪೂರ್ವಕ ಮೀಮ್ಸ್ ಮಾಡುವುದರ ಮನರಂಜನೆಗಾಗಿಯೂ ಮೀಮ್ಸ್ ಮಾಡಲಾಗುತ್ತದೆ. ನಾನು ನನ್ನ ಫೋನ್ ತೆರೆದರೆ ಆ ಮೀಮ್ಗಳೇ ಕಾಣಿಸುತ್ತವೆ. ಮೀಮ್‌ಗಳನ್ನು ಮೋಜಿಗಾಗಿ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವು ಇನ್ನೊಬ್ಬರ ಜೀವನಕ್ಕೆ ಸಂಬಂಧಿಸಿ ಮೀಮ್ಸ್ ಆದ ಕಾರಣ ನೀವು ಅದರ ಬಗ್ಗೆ ಯೋಚಿಸಬೇಕು ಎಂದು ಶಮಿ ಪಾಠ ಮಾಡಿದ್ದಾರೆ.
ಆದರೆ, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಿಮಗೆ ಧೈರ್ಯ ಇದ್ದರೆ ಪರಿಶೀಲಿಸಿದ (ವೆರಿಫೈಡ್ ಪೇಜ್ಗಳಲ್ಲಿ) ಪುಟದಲ್ಲಿ ಪೋಸ್ಟ್ ಮಾಡಿ. ಆಗ ನಾನು ಇದೆಲ್ಲದಕ್ಕೂ ಉತ್ತರಿಸುತ್ತೇನೆ. ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿ. ಜನರಿಗೆ ಸಹಾಯ ಮಾಡಿ ಮತ್ತು ನಿಮ್ಮನ್ನು ಅಪ್‌ಗ್ರೇಡ್ ಮಾಡಿಕೊಳ್ಳಿ. ಆಗ ನೀವು ಒಳ್ಳೆಯ ವ್ಯಕ್ತಿ ಎಂದು ನಾನು ನಂಬುತ್ತೇನೆ ಎಂದು ಶಮಿ ಬುದ್ದಿವಾದ ಹೇಳಿದ್ದಾರೆ. ಶಮಿಗೂ ಮೊದಲು ಸಾನಿಯಾ ಅವರ ತಂದೆ ಪ್ರತಿಕ್ರಿಯಿಸಿ ವದಂತಿಗಳನ್ನು ತಳ್ಳಿ ಹಾಕಿದ್ದರು.
ಶ್ರೀಲಂಕಾ ಸರಣಿಗೂ ಆಯ್ಕೆಯಾಗಿಲ್ಲ ಶಮಿ
ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಎನ್ಸಿಎ ರಿಪೋರ್ಟ್ ಪ್ರಕಾರ ಅವರಿನ್ನೂ ಫಿಟ್ ಆಗಬೇಕಿದೆ. ಚೇತರಿಕೆಯ ಹಾದಿಯಲ್ಲಿರುವ ಕಾರಣ ಅವರನ್ನು ಈ ಸರಣಿಗೆ ಪರಿಗಣನೆಗೆ ತೆಗೆದುಕೊಂಡಿಲ್ಲ. ಅವರು ಮುಂದಿನ ಸರಣಿಗೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ.