ಬುಮ್ರಾ, ಸಿರಾಜ್ ಅಲ್ಲ; ಟಿ20 ವಿಶ್ವಕಪ್ಗೆ ಭಾರತದ ಎಕ್ಸ್-ಫ್ಯಾಕ್ಟರ್ ಬೌಲರ್ ಗುರುತಿಸಿದ ಜಹೀರ್ ಖಾನ್
Jan 19, 2024 07:47 AM IST
ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್.
- Zaheer Khan: 2024ರ ಟಿ20 ವಿಶ್ವಕಪ್ ಟೂರ್ನಿಗೆ ನಾಲ್ವರು ಬೌಲರ್ಗಳನ್ನು ಆಯ್ಕೆ ಮಾಡಿರುವ ಭಾರತದ ಮಾಜಿ ವೇಗಿ ಜಹೀರ್ ಖಾನ್, ಒಬ್ಬರನ್ನು ಮಾತ್ರ ಎಕ್ಸ್ ಫ್ಯಾಕ್ಟರ್ ಎಂದು ಕರೆದಿದ್ದಾರೆ.
ನವದೆಹಲಿ: ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿರುವ ಮಾಜಿ ವೇಗಿ ಜಹೀರ್ ಖಾನ್, ಎಕ್ಸ್ಫ್ಯಾಕ್ಟರ್ ಬೌಲರ್ ಈ ಇಬ್ಬರೂ ಅಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20ಐ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ಭಾರತ 3-0 ಅಂತರದಿಂದ ಸೋಲಿಸಿತ್ತು.
ಬೆಂಗಳೂರಿನಲ್ಲಿ ಬುಧವಾರ (ಜ 17) ನಡೆದ ಡಬಲ್ ಸೂಪರ್ ಓವರ್ ಥ್ರಿಲ್ಲರ್ ಪಂದ್ಯದಲ್ಲಿ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ, ಪ್ರವಾಸಿ ತಂಡವನ್ನು ಮಣಿಸಿತು. 2024ರ ವಿಶ್ವಕಪ್ಗೆ ಮುನ್ನ ನಡೆದ ಭಾರತದ ಕೊನೆಯ ಸರಣಿ ಇದಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಹಿ-ಸಿಹಿ ಪ್ರದರ್ಶನದ ನಂತರ ಬುಮ್ರಾ ಮತ್ತು ಸಿರಾಜ್ ಅವರಿಗೆ ಅಫ್ಘಾನಿಸ್ತಾನ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು.
ಮೊಹಮ್ಮದ್ ಶಮಿ ಎಕ್ಸ್ಫ್ಯಾಕ್ಟರ್
ಮುಂದಿನ ಐಸಿಸಿ ಟಿ20 ವಿಶ್ವಕಪ್ನಲ್ಲಿ ಭಾರತದ ವೇಗದ ಬೌಲಿಂಗ್ ದಾಳಿಯ ಬಗ್ಗೆ ಕಲರ್ಸ್ ಸಿನಿಪಲ್ನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಜಹೀರ್, ಮೆಗಾ ಟೂರ್ನಿಗಾಗಿ ನಾಲ್ವರು ಬೌಲರ್ಗಳನ್ನು ಆಯ್ಕೆ ಮಾಡಿದ್ದಾರೆ. ಈ ಪೈಕಿ ಒಬ್ಬರನ್ನು ಮಾತ್ರ ಎಕ್ಸ್ಫ್ಯಾಕ್ಟರ್ ಎಂದು ಕರೆದಿದ್ದಾರೆ. ನಾಲ್ವರು ವೇಗಿಗಳು ಖಚಿತವಾಗಿ ಆಯ್ಕೆಯಾಗಬೇಕು ಎಂದು ಮಾಜಿ ವೇಗದ ಬೌಲರ್, ಸೂಚಿಸಿದ್ದಾರೆ.
ಭಾರತ ತಂಡದಲ್ಲಿ ಸಿರಾಜ್ ಮತ್ತು ಬುಮ್ರಾ ಅವರು ಅವಕಾಶ ಪಡೆಯುತ್ತಾರೆ. ಈ ಜೋಡಿ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದೆ. ಮತ್ತೊಂದೆಡೆ ಅರ್ಷದೀಪ್ ಸಿಂಗ್ ಸಹ ತಂಡದ ಭಾಗವಾಗಲಿದ್ದಾರೆ. ಎಡಗೈ ವೇಗಿಯಾಗಿದ್ದು, ಯಾರ್ಕರ್ಗಳ ಮೂಲಕ ಎದುರಾಳಿ ತಂಡಗಳಿಗೆ ನಡುಕ ಸೃಷ್ಟಿಸಬಲ್ಲರು. ಅಲ್ಲದೆ, ಬೌಲಿಂಗ್ ವಿಭಾಗದಲ್ಲೂ ಸ್ವಲ್ಪ ವ್ಯತ್ಯಾಸ ಕಾಣಬಹುದು ಎಂದು ಹೇಳಿದ್ದಾರೆ.
ಆದರೆ ಭಾರತ ತಂಡದ ಎಕ್ಸ್-ಫ್ಯಾಕ್ಟರ್ ಅಂದರೆ ಮೊಹಮ್ಮದ್ ಶಮಿ ಎಂದು ಜಹೀರ್ ಹೇಳಿದ್ದಾರೆ. ಆದರೆ ನಾನು ಶಮಿಯನ್ನು ಹೆಚ್ಚು ನಂಬುತ್ತೇನೆ. ಏಕೆಂದರೆ ಫಿಟ್ ಆಗಿ ತಂಡಕ್ಕೆ ಲಭ್ಯವಾದರೆ ಅವರು ವಿಶ್ವಕಪ್ನಲ್ಲಿ ನಿಮಗೆ (ಮ್ಯಾನೇಜ್ಮೆಂಟ್ಗೆ) ಎಕ್ಸ್-ಫ್ಯಾಕ್ಟರ್ ಆಯ್ಕೆಯಾಗಬಹುದು. ಏಕದಿನ ವಿಶ್ವಕಪ್ನಲ್ಲಿ ಯಾವ ರೀತಿ ಎಕ್ಸ್ಫ್ಯಾಕ್ಟರ್ ಆಗಿದ್ದರೋ ಅದೇ ರೀತಿ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವಕಪ್ ಬಳಿಕ ಆಡಿಯೇ ಇಲ್ಲ ಶಮಿ
2023ರ ಏಕದಿನ ವಿಶ್ವಕಪ್ ಬಳಿಕ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡ ಮೊಹಮ್ಮದ್ ಶಮಿ, ಮೆಗಾ ಈವೆಂಟ್ನಲ್ಲಿ ಅತ್ಯಧಿಕ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು. 33 ವರ್ಷದ ಆಟಗಾರ 24 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಶಮಿ, ಫಿಟ್ನೆಸ್ ಸಮಸ್ಯೆಯಿಂದ ಹಿಂದೆ ಸರಿದರು. ಇನ್ನೂ ಫಿಟ್ ಆಗುತ್ತಿರುವ ಶಮಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ಗಳಿಗೆ ಆಯ್ಕೆಯಾಗಿಲ್ಲ.
ಸದ್ಯ ಫಿಟ್ನೆಸ್ನತ್ತ ಗಮನ ನೀಡಿರುವ ಮೊಹಮ್ಮದ್ ಶಮಿ, ಉಳಿದ ಮೂರು ಟೆಸ್ಟ್ಗಳಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಕಳೆದ ಜೂನ್ನಲ್ಲಿ ಶಮಿ ತಮ್ಮ ಕೊನೆಯ ಟೆಸ್ಟ್ ಆಡಿದ್ದರು. ಬುಮ್ರಾ ಮತ್ತು ಸಿರಾಜ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಉನ್ನತ ಮಟ್ಟದ ಟೆಸ್ಟ್ ಸರಣಿಯಲ್ಲಿ ಪ್ರಮುಖ ಬೌಲರ್ಗಳಾಗಿ ಕಣಕ್ಕಿಳಿಯಲಿದ್ದಾರೆ. ಸಿರಾಜ್ ಮತ್ತು ಬುಮ್ರಾ ಜೊತೆಗೆ ವೇಗಿಗಳಾಗಿ ಮುಕೇಶ್ ಕುಮಾರ್ ಮತ್ತು ಅವೇಶ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ.