logo
ಕನ್ನಡ ಸುದ್ದಿ  /  ಕ್ರಿಕೆಟ್  /  ರುಬ್ಬಿದ ರೆಡ್ಡಿ, ರಗಡ್ ರಿಂಕು; ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ಕೈವಶಕ್ಕೆ ಕಾರಣಗಳಿವು

ರುಬ್ಬಿದ ರೆಡ್ಡಿ, ರಗಡ್ ರಿಂಕು; ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು; ಸರಣಿ ಕೈವಶಕ್ಕೆ ಕಾರಣಗಳಿವು

Prasanna Kumar P N HT Kannada

Oct 09, 2024 11:34 PM IST

google News

ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು

    • India vs Bangladesh: ಎರಡನೇ ಟಿ20ಐ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 56 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 2-0 ಅಂತರದಲ್ಲಿ ಸರಣಿಯನ್ನೂ ಗೆದ್ದುಕೊಂಡಿದೆ.
ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು
ಎರಡನೇ ಟಿ20ಐ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು (PTI)

ಬಾಂಗ್ಲಾದೇಶ ವಿರುದ್ಧ ನಡೆದ 2ನೇ ಟಿ20ಐ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ 86 ರನ್​ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಪಡೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗೆದ್ದು ಸರಣಿ ಉಳಿಸಿಕೊಳ್ಳುವ ತವಕದಲ್ಲಿದ್ದ ಪ್ರವಾಸಿಗರಿಗೆ ಭಾರೀ ನಿರಾಸೆಯಾಗಿದೆ. ಮತ್ತೊಂದೆಡೆ ಭಾರತ ಟೆಸ್ಟ್ ಸರಣಿ ಜೊತೆಗೆ ಟಿ20ಐ ಸರಣಿಯನ್ನೂ ಭಾರತ ವಶಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್​​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.

ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ಶತಕದ ಜೊತೆಯಾಟ

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲಿ 3 ವಿಕೆಟ್ ಕಳೆದುಕೊಂಡಿತು.  ಸಂಜು ಸ್ಯಾಮ್ಸನ್ 10, ಅಭಿಷೇಕ್ ಶರ್ಮಾ 15, ಸೂರ್ಯಕುಮಾರ್​ 8 ರನ್ ಗಳಿಸಿ ಬೇಗನೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಪವರ್​​ಪ್ಲೇನಲ್ಲೇ 3 ವಿಕೆಟ್ ನಷ್ಟದ ಬೆನ್ನಲ್ಲೇ ಬೃಹತ್ ಸ್ಕೋರ್ ಕಲೆ ಹಾಕುವುದು ಕಷ್ಟವೆಂದೇ ಹೇಳಲಾಗಿತ್ತು. ಈ ಹಂತದಲ್ಲಿ ಒಂದಾದ ನಿತೀಶ್ ರೆಡ್ಡಿ-ರಿಂಕು ಸಿಂಗ್ ಬಾಂಗ್ಲಾ ಬೌಲರ್ಸ್​​ಗೆ ಬೆಂಡೆತ್ತಿ ಆಸರೆಯಾದರು. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ನಿತೀಶ್ ತಾನಾಡಿದ ಎರಡನೇ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. 34 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 74 ರನ್ ಸಿಡಿಸಿ ಮಿಂಚಿದರು. ಮತ್ತೊಂದೆಡೆ ರಿಂಕು ಸಿಂಗ್ 29 ಎಸೆತಗಳಿಗೆ 5 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಚಚ್ಚಿದರು. ಈ ಜೋಡಿ 4ನೇ ವಿಕೆಟ್​​ಗೆ 104 ರನ್ ಜೊತೆಯಾಟ ಆಡಿದರು.

ಹಾರ್ದಿಕ್ ಪಾಂಡ್ಯ ಮತ್ತೊಂದು ಉತ್ತಮ ಇನ್ನಿಂಗ್ಸ್​​

ನಿತೀಶ್ ರೆಡ್ಡಿ ಮತ್ತು ರಿಂಕು ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದರು. ಮೊದಲ ಟಿ20 ಪಂದ್ಯದಲ್ಲಿ 39 ರನ್​ಗಳ ಅಜೇಯ ಆಟವಾಡಿದ್ದ ಹಾರ್ದಿಕ್, 2ನೇ ಪಂದ್ಯದಲ್ಲೂ ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. 19 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು 2 ಬೌಂಡರಿ ಸಹಿತ 32 ಚಚ್ಚಿದರು. ಉಳಿದಂತೆ ರಿಯಾನ್ ಪರಾಗ್ ಕೂಡ ಆಕ್ರಮಣಕಾರಿ ಆಟಕ್ಕೆ 15 ರನ್​ಗಳ ಕಾಣಿಕೆ ನೀಡಿದರು. ಬ್ಯಾಟಿಂಗ್​ನಲ್ಲಿ ಪರಾಕ್ರಮ ನಡೆಸಿದ ಭಾರತ ಬೌಲಿಂಗ್​ನಲ್ಲೂ ಧೂಳೆಬ್ಬಿಸಿತು. ಮೊದಲ ಪಂದ್ಯವನ್ನು ಸೋತಿದ್ದ ಬಾಂಗ್ಲಾದೇಶ, ಎರಡನೇ ಟಿ20ಐ ಪಂದ್ಯದಲ್ಲೂ ರನ್ ಗಳಿಸಲು ವಿಫಲವಾಯಿತು. ಇದರೊಂದಿಗೆ ಟೆಸ್ಟ್ ಬಳಿಕ ಚುಟುಕು ಸರಣಿಯನ್ನೂ ಕಳೆದುಕೊಂಡಿತು.

ಬಾಂಗ್ಲಾ ವಿರುದ್ಧ ದಂಡಯಾತ್ರೆ ನಡೆಸಿದ ಭಾರತೀಯ ಬೌಲರ್ಸ್

ಬ್ಯಾಟಿಂಗ್ ಜೊತೆಗೆ ಭಾರತೀಯ ಬೌಲರ್​ಗಳೂ ಪರಾಕ್ರಮ ಮೆರೆದರು. ಬಾಂಗ್ಲಾ ಪವರ್​ಪ್ಲೇನಲ್ಲೇ ಮೊದಲ ಮೂರು ವಿಕೆಟ್​​ಗಳನ್ನು ಕಳೆದುಕೊಂಡಿತು. ಪರ್ವೇಜ್ ಹೊಸೈನ್ ಎಮಾನ್ 16, ಲಿತ್ತನ್ ದಾಸ್ 14, ನಜ್ಮುಲ್ ಹೊಸೈನ್ ಶಾಂಟೊ 11 ರನ್ ಗಳಿಸಿ ಬೇಗನೇ ಔಟಾದರು. ಪವರ್​ಪ್ಲೇ ಬಳಿಕ ಬಾಂಗ್ಲಾ ಬ್ಯಾಟರ್​​ಗಳು ಕ್ರೀಸ್ ಕಚ್ಚಿ ನಿಂತು ಆಡಲಿಲ್ಲ. ಮೊಹಮದ್ದುಲ್ಲಾ 41 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಪರಿಣಾಮ ಸೋಲು ಕಾಣುವಂತಾಯಿತು. ಬ್ಯಾಟಿಂಗ್​ನಲ್ಲಿ ರೌದ್ರಾವತಾರ ನಡೆಸಿದ ನಿತೀಶ್ ರೆಡ್ಡಿ ಬೌಲಿಂಗ್​ನಲ್ಲೂ 2 ವಿಕೆಟ್ ಉರುಳಿಸಿ ಗಮನ ಸೆಳೆದರು. ವರುಣ್ ಚಕ್ರವರ್ತಿ 2 ವಿಕೆಟ್, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಭಿಷೇಕ್, ಮಯಾಂಕ್ ಯಾದವ್, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ