logo
ಕನ್ನಡ ಸುದ್ದಿ  /  ಕ್ರಿಕೆಟ್  /  ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್

ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್

Jayaraj HT Kannada

Jul 22, 2024 09:18 PM IST

google News

ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್

    • ಸ್ಕಾಟ್ಲೆಂಡ್‌ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಚಾರ್ಲಿ ಕ್ಯಾಸೆಲ್, ದಾಖಲೆ ನಿರ್ಮಿಸಿದ್ದಾರೆ. ಪದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲಿಯೇ 7 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್
ಪದಾರ್ಪಣೆ ಪಂದ್ಯದಲ್ಲೇ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಸ್ಕಾಟ್ಲೆಂಡ್‌ ಬೌಲರ್ ಚಾರ್ಲಿ ಕ್ಯಾಸೆಲ್ (Cricket Scotland)

ಸ್ಕಾಟ್ಲೆಂಡ್ ವೇಗದ ಬೌಲರ್ ಚಾರ್ಲಿ ಕ್ಯಾಸೆಲ್ (Charlie Cassell) , ವಿಶ್ವದಾಖಲೆ ನಿರ್ಮಿಸಿದ್ದಾರೆ. ಏಕದಿನ ಪದಾರ್ಪಣೆ ಪಂದ್ಯದಲ್ಲೇ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ. ಒಮಾನ್ ವಿರುದ್ಧದ (Scotland vs Oman) ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸುವ ಮೂಲಕ, ಪದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಡಂಡೀಯಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯದಲ್ಲಿ ಕ್ಯಾಸೆಲ್‌ ಈ ದಾಖಲೆ ನಿರ್ಮಿಸಿದ್ದಾರೆ. ಕೇವಲ 5.4 ಓವರ್‌ ಬೌಲಿಂಗ್‌ ಮಾಡಿದ ಅವರು 21 ರನ್‌ ಮಾತ್ರ ಬಿಟ್ಟುಕೊಟ್ಟು 7 ವಿಕೆಟ್‌ ಪಡೆದರು. ಈ ಹಿಂದೆ ಪದಾರ್ಪಣೆ ಏಕದಿನ ಪಂದ್ಯದಲ್ಲೇ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಪ್ರಮುಖ ವೇಗದ ಬೌಲರ್ ಕಗಿಸೊ ರಬಾಡಾ ಹೆಸರಲ್ಲಿತ್ತು. 2015ರ ಜುಲೈ ತಿಂಗಳಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಪಡೆಯುವ ಮೂಲಕ ಚೊಚ್ಚಲ ಏಕದಿನ ಪಂದ್ಯಗಳಲ್ಲಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಹೊಂದಿದ್ದರು. ಇದೀಗ ಈ ದಾಖಲೆಯನ್ನು ಸ್ಕಾಟ್ಲೆಂಡ್‌ ಆಟಗಾರ ಮುರಿದಿದ್ದಾರೆ.

ಅಚ್ಚರಿಯೆಂದರೆ, ಕ್ಯಾಸೆಲ್ ಆರಂಭದಲ್ಲಿ ಸ್ಕಾಟ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ವೇಗಿ ಕ್ರಿಸ್ ಸೋಲ್ ಅವರ ಬದಲಿಯಾಗಿ ತಂಡಕ್ಕೆ ಸೇರಿಕೊಂಡರು. ಸಿಕ್ಕ ಅವಕಾಶವನ್ನು ಎರಡೂ ಕೈ ಚಾಚಿ ಬಾಚಿಕೊಂಡ ಬಲಗೈ ವೇಗಿ, ಮೊದಲ ಪಂದ್ಯದಲ್ಲಿಯೇ ಏಳು ವಿಕೆಟ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು.‌ ಅಲ್ಲದೆ ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದರು.

ಒಮಾನ್‌ ತಂಡದ ಝೀಶಾನ್ ಮಕ್ಸೂದ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ಯಾಸೆಲ್ ಅವರ ಮೊದಲ ಬಲಿಯಾದರು. ಮೊದಲ ಎಸೆತದಲ್ಲೇ ವಿಕೆಟ್ ಪಡೆದು ಕ್ಯಾಸೆಲ್ ಮಿಂಚಿದರು. ಅದರ ಬೆನ್ನಲ್ಲೇ ಎರಡನೇ ಎಸೆತದಲ್ಲಿ ಅಯಾನ್ ಖಾನ್ ಅವರ ವಿಕೆಟ್ ಕೂಡಾ ಪಡೆದರು. ಅಮೋಘ ಆರಂಭ ಪಡೆದ ವೇಗಿ ಹ್ಯಾಟ್ರಿಕ್ ವಂಚಿತರಾದರು. ತಮ್ಮ ಮೊದಲ ಒಂಬತ್ತು ಎಸೆತಗಳಲ್ಲಿ, ಒಂದೇ ಒಂದು ರನ್ ನೀಡದೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ಒಮಾನ್ ಬ್ಯಾಟರ್‌ಗಳು ಬ್ಯಾಟ್‌ ಬೀಸಲು ತಿಣುಕಾಡಿದರು. ಒಬ್ಬರ ನಂತರ ಒಬ್ಬರಂತೆ ಪೆವಿಲಿಯನ್‌ ಸೇರಿಕೊಂಡರು.

ಪಂದ್ಯಶ್ರೇಷ್ಠ ಸಾಧನೆ, ಸ್ಕಾಟ್ಲೆಂಡ್‌ ಗೆಲುವು

ಮೆಹ್ರಾನ್ ಖಾನ್ ಅವರ ವಿಕೆಟ್‌ ಪಡೆಯುವ ಮೂಲಕ ಐದು ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು. ಆ ಬಳಿಕ ಪ್ರತೀಕ್ ಅಠಾವಳೆ ವಿಕೆಟ್‌ನೊಂದಿಗೆ ರಬಾಡ ದಾಖಲೆ ಸರಿಗಟ್ಟಿದರು. ಕೊನೆಗೆ ಬಿಲಾಲ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಒಮಾನ್‌ 91 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಗುರಿ ಚೇಸಿಂಗ್‌ ನಡೆಸಿದ ಸ್ಕಾಟ್ಲೆಂಡ್‌ 17.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 95 ರನ್‌ ಗಳಿಸಿ ಗೆದ್ದು ಬೀಗಿತು. ದಾಖಲೆಯ ಸರದಾರ ಕ್ಯಾಸೆಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ