Babar Azam: ವಿಶ್ವಕಪ್ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಬಾಬರ್ ಅಜಮ್; ವಧು ಯಾರು?
Aug 18, 2023 03:01 PM IST
ವಿಶ್ವಕಪ್ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಬಾಬರ್ ಅಜಮ್.
- Babar Azam: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕ್ರಿಕೆಟ್ ಕುರಿತು ಅಲ್ಲ. ಅವರ ಮದುವೆ ವಿಚಾರವಾಗಿ. ವಧು ಯಾರು? ಈ ಕುರಿತು ಮಾಹಿತಿ ಏನಿದೆ ಅನ್ನೋದನ್ನು ಈ ಮುಂದೆ ನೋಡೋಣ.
ಏಷ್ಯಾಕಪ್ (Asia Cup 2023) ಮತ್ತು ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಪಾಕಿಸ್ತಾನ ತಂಡವು (Pakistan Cricket Team) ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಗೆಲ್ಲಲೇಬೇಕೆಂದು ಶಪಥ ಮಾಡಿರುವ ಪಾಕ್ ರಣತಂತ್ರ ರೂಪಿಸುತ್ತಿದೆ. ಮತ್ತೊಂದೆಡೆ ನಾಯಕ ಬಾಬರ್ ಅಜಮ್ (Babar Azam) ಭರ್ಜರಿ ಲಯದಲ್ಲಿ ಇರುವುದು ತಂಡಕ್ಕೆ ಮತ್ತೊಂದು ಮುನ್ನಡೆ.
ಆದರೆ, ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಮತ್ತೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕ್ರಿಕೆಟ್ ಕುರಿತು ಅಲ್ಲ. ಅವರ ಮದುವೆ ವಿಚಾರವಾಗಿ (Babar Azam Marriage). ಹೌದು, ಅಕ್ಟೋಬರ್ 5ರಿಂದ ಭಾರತದಲ್ಲಿ ಶುರುವಾಗುವ ಏಕದಿನ ವಿಶ್ವಕಪ್ ಮುಕ್ತಾಯದ ನಂತರ ಪಾಕಿಸ್ತಾನ ತಂಡದ ನಾಯಕ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಮಾತುಕತೆ ನಡೆದಿದೆ. ಆದರೆ ವಿಷಯವನ್ನು ಗುಟ್ಟಾಗಿಡಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಗೌಪ್ಯವಾಗಿಡಲಾಗಿದೆ ಮದುವೆ ವಿಚಾರ
ಒಂದೆಡೆ ಬಾಬರ್ ಮಹತ್ವದ ಟೂರ್ನಿಗಳಿಗೆ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಅವರ ಕುಟುಂಬ ಸದಸ್ಯರು ಮದುವೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸರಳ ವಿವಾಹವನ್ನು ಆಗಲು ನಿಶ್ಚಯಿಸಿರುವ ಬಾಬರ್ ಮತ್ತು ವಧುವಿನ ಕುಟುಂಬ ಸದಸ್ಯರು ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾರೆ ಎಂದು ಪಾಕ್ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ. ಅಧಿಕೃತ ಮಾಹಿತಿಯನ್ನು ವಿಶ್ವಕಪ್ ಮುಗಿದ ಬಳಿಕ ಹೇಳುವ ಕುರಿತು ಯೋಜನೆ ಹಾಕಿಕೊಂಡಿದ್ದಾರೆ.
ವಧು ಯಾರು?
ಇನ್ನು ಬಾಬರ್ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ ವಧು ಯಾರು ಎಂಬ ಹುಡುಕಾಟ ನಡೆಯುತ್ತಿದೆ. ಮಧುಮಗಳು ಯಾರಿರಬಹುದು ಎಂದು ಅವರ ಫ್ಯಾನ್ಸ್ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ಬಾಬರ್ ಅಜಮ್ ತನ್ನ ಸೋದರ ಸಂಬಂಧಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಈವರೆಗೂ ಬಾಬರ್ ಅಜಮ್ ಕುಟುಂಬ, ವಧುವಿನ ಹೆಸರು ಮತ್ತು ಆಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸದ್ಯ ಮದುವೆ ಆಗುತ್ತಿಲ್ಲ ಎಂದಿದ್ದ ಬಾಬರ್
ಕೆಲವು ತಿಂಗಳ ಹಿಂದಷ್ಟೇ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅಜಮ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಬಾಬರ್, ಸದ್ಯಕ್ಕೆ ಮದುವೆ ಆಗುತ್ತಿಲ್ಲ. ಸಮಯ ಬಂದಾಗ ಅದು ಸಂಭವಿಸುತ್ತದೆ ಎಂದಷ್ಟೇ ಉತ್ತರ ನೀಡಿ ಜಾರಿಕೊಂಡಿದ್ದರು. ಇದೀಗ ವಿಶ್ವಕಪ್ ನಂತರ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ. ಬಾಬರ್ ಮದುವೆ ದೃಢಪಟ್ಟಿದ್ದರೂ, ಈ ಬಗ್ಗೆ ಒಂದು ಸುಳಿವನ್ನೂ ಕೊಡುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾವಿ ಪತ್ನಿಗೆ ಉಡುಗೊರೆ ನೀಡ್ತಾರಾ ಬಾಬರ್?
ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಗೆಲ್ಲುವುದು ಪ್ರತಿ ತಂಡದ ಧ್ಯೇಯ. ಮಾಜಿ-ಹಾಲಿ ಕ್ರಿಕೆಟರ್ಗಳು ತಮ್ಮ ನೆಚ್ಚಿನ ತಂಡಗಳ ಆಯ್ಕೆಯಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಗಮನಾರ್ಹ. ಏಕೆಂದರೆ, ಭಾರತದ ಪರಿಸ್ಥಿತಿ, ವಾತಾವರಣ, ಪಿಚ್ ಸೇರಿದಂತೆ ಪಾಕಿಸ್ತಾನಕ್ಕೆ ಹೋಲುತ್ತದೆ. ಹಾಗಾಗಿ, ಪಾಕಿಸ್ತಾನ ಗೆಲ್ಲುವ ಫೇವರಿಟ್ ಎನ್ನುತ್ತಿದ್ದಾರೆ. ಮತ್ತೊಂದೆಡೆ, ಬಾಬರ್ ಈ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಟ್ರೋಫಿ ಗೆಲ್ಲುವ ಮೂಲಕ ಮಹತ್ವದ ಮದುವೆಯಾಗುವ ಭಾವಿ ಪತ್ನಿಗೆ ಪ್ರಶಸ್ತಿ ಉಡುಗೊರೆ ನೀಡ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.