ODI World Cup: ಪಾಕಿಸ್ತಾನ-ನೆದರ್ಲೆಂಡ್ಸ್ ಪಂದ್ಯಕ್ಕಿಲ್ಲ ಮಳೆ ಭೀತಿ; ಹೈದರಾಬಾದ್ ಪಿಚ್ನಲ್ಲಿ ರನ್ ಮಳೆ ಗ್ಯಾರಂಟಿ
Oct 06, 2023 07:00 AM IST
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಪಂದ್ಯ ನಡೆಯಲಿರುವ ರಾಜೀವ್ ಗಾಂಧಿ ಕ್ರೀಡಾಂಗಣ
- ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ವರದಿ ಹಾಗೂ ಹೈದರಾಬಾದ್ ಹವಾಮಾನ ವರದಿ ಹೀಗಿದೆ.
ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ (Pakistan vs Netherlands) ತಂಡಗಳು ಶುಕ್ರವಾರದಂದು ಭಾರತದಲ್ಲಿ ವಿಶ್ವಕಪ್ (ICC ODI World Cup) ಅಭಿಯಾನ ಆರಂಭಿಸುತ್ತಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ (Rajiv Gandhi International Stadium) ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಬಾಬರ್ ಬಳಗಕ್ಕೆ ನೆದರ್ಲೆಂಡ್ಸ್ ಸವಾಲೆಸೆಯಲು ಸಜ್ಜಾಗಿದೆ.
ಭಾರತದ ನೆಲದಲ್ಲಿ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ ಪಾಕಿಸ್ತಾನವು, ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಮತ್ತೊಂದೆಡೆ ನೆದರ್ಲ್ಯಾಂಡ್ಸ್ ತಂಡದ ಎರಡೂ ಅಭ್ಯಾಸ ಪಂದ್ಯಗಳು ಮಳೆಯಿಂದಾಗಿ ರದ್ದಾಯಿತು. ಅದರಲ್ಲಿ ಒಂದು ಪಂದ್ಯ ಭಾರತ ವಿರುದ್ಧ ನಡೆಯಬೇಕಿತ್ತು. ಸದ್ಯ ಇಂದಿನ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇಲ್ಲಿನ ಪಿಚ್ ಕುರಿತ ಒಳನೋಟ ಹೀಗಿದೆ.
ಪಿಚ್ ಹೇಗಿದೆ
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ತಂಡಗಳು ಸುಲಭವಾಗಿ ಸುಮಾರು 350 ರನ್ ಗಳಿಸಿವೆ. ಬೌಲರ್‌ಗಳಿಗೆ ಪಿಚ್ ನೆರವಾಗಿಲ್ಲ. ಹೀಗಾಗಿ ವಿಶ್ವಕಪ್ ಪಂದ್ಯದಲ್ಲೂ ಈ ಪಿಚ್ ಬ್ಯಾಟರ್‌ಗಳಿಗೆ ನೆರವಾಗಬಹುದು. ಈ ಹಿಂದೆಯೂ ಹಲವು ಪಂದ್ಯಗಳಲ್ಲಿ ರನ್ ಮಳೆ ಹರಿದು ಬಂದಿವೆ. ಒಂದು ವೇಳೆ ಈ ಮೈದಾನದಲ್ಲಿ ತಂಡವೊಂದು 300+ ರನ್ ಗಳಿಸಿದರೂ, ಅದನ್ನು ಚೇಸಿಂಗ್ ಮಾಡಬಲ್ಲ ಸಾಧ್ಯತೆ ಹೆಚ್ಚು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡವು 350ಕ್ಕೂ ಹೆಚ್ಚು ರನ್ ಗಳಿಕೆಗೆ ಕೈ ಹಾಕಬೇಕಾಗಬಹುದು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳ ಸ್ವರ್ಗವಾಗಿದೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಳಿಗಿಂತ ವೇಗಿಗಳಿಗೆ ಪಿಚ್ ನೆರವಾಗಲಿದೆ. ಟಾಸ್ ಗೆಲ್ಲುವ ತಂಡವು ಚೇಸಿಂಗ್ ಮಾಡುವುದಕ್ಕೆ ಆದ್ಯತೆ ನೀಡಲಿವೆ.
ಏಕದಿನ ಪಂದ್ಯಗಳ ಫಲಿತಾಂಶ ಹೇಗಿವೆ?
ಈ ಮೈದಾನದಲ್ಲಿ ಈವರೆಗೆ 7 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ 4 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದರೆ, 3 ಬಾರಿ ಚೇಸಿಂಗ್ ಮಾಡಿದ ತಂಡ ಗೆದ್ದು ಬೀಗಿದೆ. ಮೊದಲ ಇನ್ನಿಂಗ್ಸ್ ಸರಾಸರಿ ರನ್ 288 ಆಗಿದ್ದರೆ, ಎರಡನೇ ಇನ್ನಿಂಗ್ಸ್ ಸರಾಸರಿ ರನ್ 262 ರನ್. ಮೈದಾನದಲ್ಲಿ ದಾಖಲಾದ ಅತಿ ಹೆಚ್ಚು ರನ್ 350. ಇದು ಭಾರತದ ವಿರುದ್ಧ ಆಸ್ಟ್ರೇಲಿಯಾ ಕಲೆ ಹಾಕಿತ್ತು.
ಹವಾಮಾನ ವರದಿ
ಹೈದರಾಬಾದ್‌ನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಪಂದ್ಯದ ಸಮಯದಲ್ಲಿ ತಾಪಮಾನವು 26 ಡಿಗ್ರಿಯಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಹೀಗಾಗಿ ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ಇದೆ.
ಪಾಕಿಸ್ತಾನ ತಂಡವು ಈವರೆಗೆ ಭಾರತದಲ್ಲಿ ಕೇವಲ ಎರಡು ಬಾರಿ ಮಾತ್ರ ಏಕದಿನ ವಿಶ್ವಕಪ್ ಪಂದ್ಯಗಳನ್ನು ಆಡಿದೆ. ಈ ಎರಡೂ ಪಂದ್ಯಗಳನ್ನು ಸೋತಿದೆ. 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತರೆ, 2011ರ ವಿಶ್ವಕಪ್ ಆವೃತ್ತಿಯಲ್ಲಿ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎರಡನೇ ಬಾರಿ ಭಾರತದ ವಿರುದ್ಧ ಮುಗ್ಗರಿಸಿತ್ತು.
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ
ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.
ನೆದರ್ಲೆಂಡ್ಸ್ ಸಂಭಾವ್ಯ ಆಡುವ ಬಳಗ
ವಿಕ್ರಮಜೀತ್ ಸಿಂಗ್, ಮ್ಯಾಕ್ಸ್ ಒ'ಡೌಡ್, ವೆಸ್ಲಿ ಬರೆಸ್ಸಿ, ಬಾಸ್ ಡಿ ಲೀಡೆ, ತೇಜ ನಿಡಮನೂರು/ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ, ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ಸಾಕಿಬ್ ಜುಲ್ಫಿಕರ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಪಾಲ್ ವ್ಯಾನ್ ಮೀಕೆರೆನ್, ಆರ್ಯನ್ ದತ್.