ಕೆಕೆಆರ್ ತಂಡಕ್ಕಲ್ಲ; ಐಪಿಎಲ್ಗೂ ಮುನ್ನ ಈ ಫ್ರಾಂಚೈಸಿ ಹೆಡ್ಕೋಚ್ ಆಗಲಿದ್ದಾರೆ ರಾಹುಲ್ ದ್ರಾವಿಡ್
Jul 23, 2024 03:49 PM IST
ಕೆಕೆಆರ್ ತಂಡಕ್ಕಲ್ಲ; ಐಪಿಎಲ್ಗೂ ಮುನ್ನ ಈ ಫ್ರಾಂಚೈಸಿ ಹೆಡ್ಕೋಚ್ ಆಗಲಿದ್ದಾರೆ ರಾಹುಲ್ ದ್ರಾವಿಡ್
- Rahul Dravid: ಟಿ20 ವಿಶ್ವಕಪ್ 2024 ಗೆದ್ದ ನಂತರ ಟೀಮ್ ಇಂಡಿಯಾದ ಉನ್ನತ ಸ್ಥಾನದಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ಹೆಡ್ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಭಾರತ ತಂಡ ಟಿ20 ವಿಶ್ವಕಪ್ 2024 ಗೆದ್ದ ನಂತರ ಹೆಡ್ಕೋಚ್ ಸ್ಥಾನದಿಂದ ಕೆಳಗಿಳಿದ ರಾಹುಲ್ ದ್ರಾವಿಡ್ (Rahul Dravid) ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2024) ಮರಳಲು ಸಜ್ಜಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಮುಖ್ಯಕೋಚ್ ಆಗಿ ದ್ರಾವಿಡ್ ನೇಮಕವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆರ್ಆರ್ ಫ್ರಾಂಚೈಸಿಯೊಂದಿಗೆ ದ್ರಾವಿಡ್ ಅವರು ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಸುದ್ದಿ ಹೊರಬೀಳಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದ್ರಾವಿಡ್ ಅವರು ಈ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರನ್ನೇ ಮತ್ತೊಮ್ಮೆ ಕೋಚ್ ಮಾಡಲು ಆರ್ಆರ್ ಒಲವು ತೋರಿದೆ ಎಂದು ವರದಿಯಾಗಿದೆ. 2011ರಲ್ಲಿ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದ ರಾಹುಲ್, 2014ರಲ್ಲಿ ಫ್ರಾಂಚೈಸಿಗೆ ಮಾರ್ಗದರ್ಶಕರಾಗಿ ಅಧಿಕಾರ ವಹಿಸಿಕೊಂಡರು. ಆ ಬಳಿಕ ಅವರು ಎನ್ಸಿಎ ನಿರ್ದೇಶಕನಾಗಿ ನೇಮಕಗೊಂಡರು. ಅವರ ಅವಧಿಯಲ್ಲಿ ಭಾರತ ಅಂಡರ್-19 ತಂಡವು 1 ಸಲ ಚಾಂಪಿಯನ್, 1 ಸಲ ರನ್ನರ್ಅಪ್ ಆಗಿತ್ತು.
ರಾಜಸ್ಥಾನ್ ಮತ್ತು ದ್ರಾವಿಡ್ ನಡುವೆ ಮಾತುಕತೆ ಅಂತಿಮಗೊಂಡಿದ್ದು, ಜ್ಯಾಮಿ ಅವರ ಅಂತಿಮ ನಿರ್ಧಾರಕ್ಕೆ ಕಾಯಲಾಗುತ್ತಿದೆ. ದ್ರಾವಿಡ್ ಐಪಿಎಲ್ನಲ್ಲಿ 89 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 11 ಅರ್ಧಶತಕ ಸಹಿತ 2174 ರನ್ ಗಳಿಸಿದ್ದಾರೆ. ಈ ಪೈಕಿ ರಾಜಸ್ಥಾನ್ ಪರ 2011 ರಿಂದ 2013ರವರೆಗೆ 46 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ದ್ರಾವಿಡ್ 7 ಅರ್ಧಶತಕಗಳೊಂದಿಗೆ 1276 ರನ್ ಗಳಿಸಿದ್ದರು. ದ್ರಾವಿಡ್ ಐಪಿಎಲ್ ಆಡಲು ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ, ಕುಟುಂಬವನ್ನು ತೊರೆದು ಹೆಚ್ಚು ಕಾಲ ಕ್ರಿಕೆಟ್ ತಂಡದೊಂದಿಗೆ ಕಳೆಯಲು ದ್ರಾವಿಡ್ ಇಚ್ಛಿಸುತ್ತಿಲ್ಲ. ಈಗಾಗಲೇ ಮೂರೂವರೆ ವರ್ಷಗಳ ಭಾರತ ತಂಡದೊಂದಿಗೆ ಸೇವೆ ಸಲ್ಲಿಸಿದ್ದ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಂಡಿದ್ದರು. ಈ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದರು. ಹೆಡ್ಕೋಚ್ ಆಗಿ ನೇಮಕವಾಗುವುದಕ್ಕೂ ಮೊದಲು ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರು ಮನವೊಲಿಸುವಾಗ ಕುಟುಂಬ ಬಿಟ್ಟು ಬರಲು ಸಾಧ್ಯವಿಲ್ಲ ಎಂದಿದ್ದರಂತೆ ದ್ರಾವಿಡ್.
ಇದೀಗ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿರುವ 50 ವರ್ಷದ ದ್ರಾವಿಡ್ ಅವರು ತಮ್ಮ ಮಕ್ಕಳಾದ ಸಮಿತ್ ಮತ್ತು ಅನ್ವೇ ಕ್ರಿಕೆಟ್ ಯೋಜನೆಗಳನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ಆದರೆ, ದ್ರಾವಿಡ್ 2 ತಿಂಗಳ ಕಾಲ ಮಾತ್ರ ಐಪಿಎಲ್ನಲ್ಲಿ ಸೇವೆ ಸಲ್ಲಿಸಬಹುದು. ಉಳಿದ 10 ತಿಂಗಳ ಕಾಲ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಗಲಿದೆ. ಹೀಗಾಗಿ, ಆರ್ಆರ್ ಹೆಡ್ಕೋಚ್ ಸ್ಥಾನಕ್ಕೆ ಒಪ್ಪಿಗೆ ಸೂಚಿಸಬಹುದು ಎಂದು ಮೂಲಗಳು ತಿಳಿಸುತ್ತಿವೆ.
ಕುಮಾರ್ ಸಂಗಕ್ಕಾರ ಔಟ್?
ಶ್ರೀಲಂಕಾದ ದಿಗ್ಗಜ ಕುಮಾರ್ ಸಂಗಕ್ಕಾರ ಅವರು ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಮುಖ್ಯಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2021ರಲ್ಲಿ ಹೆಡ್ಕೋಚ್ ಸ್ಥಾನದಿಂದ ಆಂಡ್ರ್ಯೂ ಮೆಕ್ ಡೊನಾಲ್ಡ್ ಕೆಳಗಿಳಿದ ಕಾರಣ ಅವರ ಸ್ಥಾನವನ್ನು ಅಂದು ಫ್ರಾಂಚೈಸಿ ನಿರ್ದೇಶಕರಾಗಿದ್ದ ಸಂಗಕ್ಕಾರ ತುಂಬಿದ್ದರು. 2022ರಲ್ಲಿ ಅವರ ಮಾರ್ಗದರ್ಶನದಲ್ಲಿ ರಾಜಸ್ಥಾನ್ ಒಂದು ಬಾರಿ ಫೈನಲ್ಗೆ, 1 ಬಾರಿ ಪ್ಲೇಆಫ್ ಪ್ರವೇಶಿಸಿದೆ.
ದ್ರಾವಿಡ್ ಕೆಕೆಆರ್ಗೆ ಹೋಗುವುದಿಲ್ಲವೇ?
ಈ ಹಿಂದೆ ನ್ಯೂಸ್ 18 ಬಾಂಗ್ಲಾ ವರದಿಯ ಪ್ರಕಾರ, ದ್ರಾವಿಡ್ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಬಹುದು ಹೋಗಬಹುದು ಎಂದು ಹೇಳಲಾಗಿತ್ತು. ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ಟೀಮ್ ಇಂಡಿಯಾ ಹೆಡ್ಕೋಚ್ ಆದ ಕಾರಣ ಅವರಿಂದ ತೆರವಾದ ಸ್ಥಾನಕ್ಕೆ ದ್ರಾವಿಡ್, ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ದ್ರಾವಿಡ್ ಆಸಕ್ತಿ ತೋರಲಿಲ್ಲ ಎಂದು ವರದಿಯಾಗಿತ್ತು. ಹೀಗಾಗಿ, ಗಂಭೀರ್ ಅವರ ಸ್ಥಾನಕ್ಕೆ ಕೆಕೆಆರ್, ನೂತನ ಮೆಂಟರ್ ಹುಡುಕಾಟ ನಡೆಸುತ್ತಿದೆ.
ಭಾರತ ಎ ಮತ್ತು ಅಂಡರ್-19 ತಂಡಗಳ ತರಬೇತುದಾರರಾಗಿದ್ದ ದ್ರಾವಿಡ್, 2016ರ ಅಂಡರ್-19 ವಿಶ್ವಕಪ್ ಫೈನಲ್ಗೆ ಭಾರತ ತಂಡವನ್ನು ಮುನ್ನಡೆಸಿದ್ದರು. 2 ವರ್ಷಗಳ ನಂತರ 2018ರಲ್ಲಿ ಭಾರತ ತಂಡವು ಅಂಡರ್ -19 ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಕಿರೀಟ ಧರಿಸಿತು. ಅಂದು ಕೂಡ ದ್ರಾವಿಡ್ ಅವರೇ ಕೋಚ್ ಆಗಿದ್ದರು.