ರೋಹಿತ್ ಹೇಳಿದ್ರಿಂದ ದಿಲ್ ದಿಲ್ ಪಾಕಿಸ್ತಾನ್ ಹಾಡು ಹಾಕಲಿಲ್ಲ; ಮಿಕ್ಕಿ ಆರ್ಥರ್ ಆರೋಪಕ್ಕೆ ಮೈಕಲ್ ವಾನ್ ವ್ಯಂಗ್ಯ
Oct 21, 2023 12:50 PM IST
ಮಿಕ್ಕಿ ಆರ್ಥರ್ ಆರೋಪಕ್ಕೆ ಮೈಕಲ್ ವಾನ್ ವ್ಯಂಗ್ಯ.
- Michael Vaughan on Mickey Arthur: ಆತಿಥೇಯ ರಾಷ್ಟ್ರದ ವಿರುದ್ಧ ಆಧಾರರಹಿತ ಹೇಳಿಕೆಗಾಗಿ ಪ್ರಮುಖ ಕ್ರಿಕೆಟಿಗರು ಕೂಡ ಮಿಕ್ಕಿ ಆರ್ಥರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲಿ ಮೈಕಲ್ ವಾನ್ ಕೂಡ ಸೇರಿದ್ದು, ಮಿಕ್ಕಿಯ ಬ್ಲೇಮ್ ಗೇಮ್‌ಗೆ ವ್ಯಂಗ್ಯದ ಮೂಲಕ ಉತ್ತರಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನ (India vs Pakistan) ಪಂದ್ಯದಲ್ಲಿ ದಿಲ್ ದಿಲ್ ಪಾಕಿಸ್ತಾನ್ (Dil Dil Pakistan) ಹಾಡು ಕೇಳಿಸಲೇ ಇಲ್ಲ ಎಂದು ಪಾಕ್ ಕ್ರಿಕೆಟ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ (Mickey Arthur) ಆರೋಪಕ್ಕೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ (Michael Vaughan) ವ್ಯಂಗ್ಯ ಉತ್ತರ ಕೊಟ್ಟಿದ್ದಾರೆ. ಅಕ್ಟೋಬರ್ 14ರಂದು ಈ ಪಂದ್ಯ ನಡೆದಿತ್ತು.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) ಹೈವೋಲ್ಟೇಜ್ ಕದನದಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಪಾಕಿಸ್ತಾನ 191 ರನ್ಗಳಿಗೆ ಸರ್ವಪತನ ಕಂಡಿತ್ತು. ಆದರೆ ಭಾರತ 3 ವಿಕೆಟ್ ಕಳೆದುಕೊಂಡು 30.3 ಓವರ್ಗಳಲ್ಲಿ ಗುರಿ ಬೆನ್ನತ್ತಿತ್ತು. ರೋಹಿತ್ 86 ರನ್ಗಳ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ದರು.
ಈ ಪಂದ್ಯಕ್ಕೆ 1.30 ಲಕ್ಷ ಅಭಿಮಾನಿಗಳು ಹಾಜರಿದ್ದರು. ಮೈದಾನದ ತುಂಬಾ ನೀಲಿ ಜರ್ಸಿ ತೊಟ್ಟ ಅಭಿಮಾನಿಗಳೇ ಇದ್ದರು. ಪಾಕಿಸ್ತಾನ ತಂಡದ ಅಭಿಮಾನಿಗಳು ಕಾಣಿಸಲೇ ಇಲ್ಲ. ಪಾಕ್ ಅಭಿಮಾನಗಳಿಗೆ ಇನ್ನೂ ವೀಸಾ ನೀಡಲಿಲ್ಲ. ಭಾರತೀಯ ಅಭಿಮಾನಿಗಳು ಪಾಕಿಸ್ತಾನ ಆಟಗಾರರ ಮುಂದೆ ಜೈ ಶ್ರೀರಾಮ್ ಕೂಗಿದರು.
ಮಿಕ್ಕಿ ಆರ್ಥರ್ ಆರೋಪ
ಹೀನಾಯವಾಗಿ ಸೋತ ಹಿನ್ನೆಲೆ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್, ಕಿಡಿಕಾರಿದ್ದರು. ಈ ಪಂದ್ಯವು ಐಸಿಸಿ (ICC) ಈವೆಂಟ್ನಂತೆ ಇರಲಿಲ್ಲ. ಬಿಸಿಸಿಐ (BCCI) ನಡೆಸಿದ ದ್ವಿಪಕ್ಷೀಯ ಸರಣಿಯಂತೆ ಕಂಡು ಬಂತು. ಮೈದಾನದಲ್ಲಿ ದಿಲ್ ದಿಲ್ ಪಾಕಿಸ್ತಾನ್ ಎಂಬುದು ಕೇಳಿಸಲೇ ಇಲ್ಲ. ಇದು ಉದ್ದೇಶಪೂರ್ವಕ ಎಂದು ಆರೋಪ ಮಾಡಿದ್ದರು.
ಇದೀಗ ಮಿಕ್ಕಿ ಆರ್ಥರ್ ಹೇಳಿಕೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಟಾಂಗ್ ಕೊಟ್ಟಿದ್ದಾರೆ. ಆತಿಥೇಯ ರಾಷ್ಟ್ರದ ವಿರುದ್ಧ ಆಧಾರರಹಿತ ಹೇಳಿಕೆಗಾಗಿ ಪ್ರಮುಖ ಕ್ರಿಕೆಟಿಗರು ಕೂಡ ಆರ್ಥರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲಿ ಮೈಕಲ್ ವಾನ್ ಕೂಡ ಸೇರಿದ್ದು, ಮಿಕ್ಕಿಯ ಬ್ಲೇಮ್ ಗೇಮ್‌ಗೆ ವ್ಯಂಗ್ಯದ ಮೂಲಕ ಉತ್ತರಿಸಿದ್ದಾರೆ.
ಮೈಕಲ್ ವಾನ್ ವ್ಯಂಗ್ಯ
ರೋಹಿತ್ ಶರ್ಮಾ ಅಹ್ಮದಾಬಾದ್ನ ಡಿಜೆಗೆ 'ದಿಲ್ ದಿಲ್ ಪಾಕಿಸ್ತಾನ್' ಪ್ಲೇ ಮಾಡಬೇಡಿ ಎಂದು ಹೇಳಿದ್ದರು. ಏಕೆಂದರೆ ಪಾಕಿಸ್ತಾನ ಆ ಹಾಡು ಕೇಳಿದರೆ, ಪಂದ್ಯ ಗೆದ್ದುಬಿಡುತ್ತೆ ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ ರೋಹಿತ್ ಆ ಸ್ಪೂರ್ತಿದಾಯಕ ಹಾಡನ್ನು ನುಡಿಸಬೇಡಿ ಎಂದು ಡಿಜೆಗೆ ಹೇಳಿದ್ದರು. ಅದಕ್ಕೆ ಭಾರತ ಗೆದ್ದಿತು ಎಂದು ವಾನ್ ವ್ಯಂಗ್ಯವಾಡಿದ್ದಾರೆ.
ಆಕಾಶ್ ಚೋಪ್ರಾ ಟೀಕೆ
ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ (Australia vs Pakistan) ಸೋಲನುಭವಿಸಿತು. ಆದರೆ ಆಸೀಸ್ ಇನ್ನಿಂಗ್ಸ್ ಕಟ್ಟುತ್ತಿದ್ದ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮಿಕ್ಕಿ ಆರ್ಥರ್ ಅವರನ್ನು ಕುಟುಕಿದ್ದಾರೆ. ಈ ಪಂದ್ಯಕ್ಕೂ ಡಿಜೆ ಬಳಿ ಹೋಗಿ ದಿಲ್ ದಿಲ್ ಪಾಕಿಸ್ತಾನ ಹಾಡು ಪ್ಲೇ ಮಾಡಿಸು ಎಂದಿದ್ದಾರೆ.
ಆಸೀಸ್ ಪರ ಮಿಚೆಲ್ ಮಾರ್ಷ್-ಡೇವಿಡ್ ವಾರ್ನರ್ (David Warner - Mitchell Marsh) ಅದ್ಭುತ ಆಟ ಆಡುತ್ತಿದ್ದ ಕಾರಣ ಟ್ವೀಟ್ ಮಾಡಿದ ಚೋಪ್ರಾ, ಯಾರಾದ್ರೂ ಡಿಜೆಗೆ ಹೇಳಿ ದಿಲ್ ದಿಲ್ ಪಾಕಿಸ್ತಾನ್ ಪ್ಲೇ ಮಾಡಿಸಿ. ಪಾಕಿಸ್ತಾನ ತಂಡಕ್ಕೆ ಈಗ ವಿಕೆಟ್ ಬೇಕಿದೆ. ಆಸೀಸ್ 375+ ರನ್ಗಳತ್ತ ಹೆಜ್ಜೆ ಹಾಕುತ್ತಿದೆ ಎಂದು ಪೋಸ್ಟ್ನಲ್ಲಿ ಬರೆಯುವ ಮೂಲಕ ತಿರುಗೇಟು ನೀಡಿದ್ದಾರೆ.