ಎಂಎಸ್ ಧೋನಿ ದಾಖಲೆ ಪುಡಿಪುಡಿ; ಭಾರತದ ನಾಯಕನಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರೋಹಿತ್ ಶರ್ಮಾ
Jan 18, 2024 10:30 AM IST
ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ.
- Rohit Sharma: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾ ಪರ ಅತ್ಯಧಿಕ ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ನಾಯಕ ಎಂಬ ದಾಖಲೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ.
ಅಫ್ಘಾನಿಸ್ತಾನ ತಂಡದ ವಿರುದ್ಧ 3ನೇ ಟಿ20 ಪಂದ್ಯದಲ್ಲೂ ಡಬಲ್ ಸೂಪರ್ನಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ, 3-0 ಅಂತರದಲ್ಲಿ (India vs Afghanistan 3rd T20) ಸರಣಿಯನ್ನು ವಶಪಡಿಸಿಕೊಂಡಿದೆ. ಈ ವೈಟ್ವಾಶ್ ಸಾಧನೆ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma), ಮಾಜಿ ನಾಯಕ ಎಂಎಸ್ ಧೋನಿ (MS Dhoni) ದಾಖಲೆಯನ್ನು ಹಿಂದಿಕ್ಕಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ಭಾರತದ ನಾಯಕ ಎನಿಸಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ಜನವರಿ 17ರಂದು ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್ಗಳಲ್ಲಿ 212 ರನ್ ಗಳಿಸಿತು. ರೋಹಿತ್ ಶರ್ಮಾ ವಿಶ್ವ ದಾಖಲೆಯ ಶತಕ ಸಿಡಿಸಿದರು. ಈ ಗುರಿ ಬೆನ್ನಟ್ಟಿದ 6 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿ ಟೈ ಮಾಡಿತು. ಬಳಿಕ ಮೊದಲ ಸೂಪರ್ ಓವರ್ ಸಹ ಟೈ ಆಯಿತು. ಕೊನೆಗೆ ಭಾರತ 2ನೇ ಸೂಪರ್ ಓವರ್ನಲ್ಲಿ ಜಯಿಸಿತು.
ಅತ್ಯಧಿಕ ಗೆಲುವಿನ ದಾಖಲೆ
ಈ ಪಂದ್ಯಕ್ಕೂ ಮುನ್ನ ನಾಯಕನಾಗಿ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ್ದ ರೋಹಿತ್, ಈಗ ರೆಕಾರ್ಡ್ ಅನ್ನು ಮುರಿದಿದ್ದಾರೆ. ಇದರೊಂದಿಗೆ ಅತ್ಯಧಿಕ ಟಿ20 ಗೆಲುವು ದಾಖಲಿಸಿದ ಭಾರತದ ಕ್ಯಾಪ್ಟನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ನಾಯಕನಾಗಿ ಧೋನಿ ಟಿ20 ಕ್ರಿಕೆಟ್ನಲ್ಲಿ ಭಾರತಕ್ಕೆ 41 ಗೆಲುವು ತಂದುಕೊಟ್ಟಿದ್ದರು. ಹಿಟ್ಮ್ಯಾನ್ 42 ಗೆಲುವು ಸಾಧಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಅದು ಕೂಡ ಅತಿ ಕಡಿಮೆ ಪಂದ್ಯಗಳಲ್ಲಿ ಎಂಬುದು ವಿಶೇಷ.
72 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಧೋನಿ, 41 ಗೆಲುವು, 28 ಸೋಲು ಕಂಡಿದ್ದಾರೆ. 1 ಟೈನಲ್ಲಿ ಅಂತ್ಯಕಂಡಿದೆ. ಗೆಲುವಿನ ಪ್ರಮಾಣ 56.94. ಅದೇ ರೋಹಿತ್ ಶರ್ಮಾ 55 ಪಂದ್ಯಗಳಲ್ಲಿ ತಂಡಕ್ಕೆ ನಾಯಕನಾಗಿದ್ದು, 42 ಗೆಲುವು, 12 ಸೋಲು, 1 ಟೈ ಕಂಡಿದ್ದಾರೆ. ಗೆಲುವಿನ ಪ್ರಮಾಣ 75.92. ಈಗ ರೋಹಿತ್ ಅಗ್ರಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿರುವ ವಿರಾಟ್, 50 ಟಿ20ಗಳಲ್ಲಿ ಕ್ಯಾಪ್ಟನ್ ಆಗಿದ್ದು, 30 ಜಯ, 16 ಸೋಲು ಕಂಡಿದ್ದಾರೆ. ಗೆಲುವಿನ ಪ್ರಮಾಣ 60.
ರೋಹಿತ್ ನಾಯಕನಾಗಿ ಮತ್ತೊಂದು ದಾಖಲೆ
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದ ರೋಹಿತ್ ಅಂತಿಮ ಟಿ20ಯಲ್ಲಿ ಆಕರ್ಷಕ ಶತಕ ಸಿಡಿಸಿದರು. ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದು ಚುಟುಕು ಕ್ರಿಕೆಟ್ನಲ್ಲಿ ಐದನೇ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಹಲವು ದಾಖಲೆ ಬರೆದರು. ಕೇವಲ 69 ಎಸೆತಗಳಲಕ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ ಅಜೇಯ 121 ರನ್ ಕಲೆ ಹಾಕಿದರು. ಟಿ20 ಸ್ವರೂಪದಲ್ಲಿ ಇದು ಅವರ ಅತಿ ಹೆಚ್ಚು ಸ್ಕೋರ್.
ಇದೇ ವೇಳೆ ನಾಯಕನಾಗಿ ರೋಹಿತ್ ವಿಶೇಷ ದಾಖಲೆ ನಿರ್ಮಿಸಿದರು. ಭಾರತ ತಂಡದ ನಾಯಕನಾಗಿ ಟಿ20 ಸ್ವರೂಪದಲ್ಲಿ ಅಧಿಕ ರನ್ ಕಲೆ ಹಾಕಿದರು. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆ ಬ್ರೇಕ್ ಮಾಡಿದರು. ಕೊಹ್ಲಿ ನಾಯಕನಾಗಿ 1570 ರನ್ ಗಳಿಸಿದ್ದು, ರೋಹಿತ್ ಶರ್ಮಾ ಆ ರನ್ ಮೀರಿಸಿದ್ದಾರೆ. 1647ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ವಿಶ್ವ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸೇರಿದಂತೆ ಹಲವು ದಾಖಲೆಗಳು ದಾಖಲಾದವು.
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in