logo
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್, ಹಾರ್ದಿಕ್ ಯೋ-ಯೋ ಟೆಸ್ಟ್ ಫಲಿತಾಂಶ ಬಹಿರಂಗ: ಬಿಸಿಸಿಐಗೆ ಕೆಎಲ್ ರಾಹುಲ್​ನದ್ದೇ ಚಿಂತೆ

ರೋಹಿತ್, ಹಾರ್ದಿಕ್ ಯೋ-ಯೋ ಟೆಸ್ಟ್ ಫಲಿತಾಂಶ ಬಹಿರಂಗ: ಬಿಸಿಸಿಐಗೆ ಕೆಎಲ್ ರಾಹುಲ್​ನದ್ದೇ ಚಿಂತೆ

Prasanna Kumar P N HT Kannada

Aug 25, 2023 02:00 PM IST

google News

ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್​ ಶರ್ಮಾ.

    • Rohit Sharma And Hardik Pandya: ವಿರಾಟ್​ ಕೊಹ್ಲಿ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದು, ಫಲಿತಾಂಶ ಬಹಿರಂಗಗೊಂಡಿದೆ.
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್​ ಶರ್ಮಾ.
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್​ ಶರ್ಮಾ.

ಆಗಸ್ಟ್​ 30ರಿಂದ ಬಹುನಿರೀಕ್ಷಿತ ಏಷ್ಯಾಕಪ್​ ಟೂರ್ನಿ (Asia Cup 2023) ಶುರುವಾಗಲಿದ್ದು, ಏಷ್ಯಾದ ರಾಷ್ಟ್ರಗಳು ಚಾಂಪಿಯನ್ ಪಟ್ಟಕ್ಕೇರಲು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಅದರಂತೆ ಭಾರತ ತಂಡದ ಆಟಗಾರರಿಗೆ (Team India Players) ಬೆಂಗಳೂರಿನ ಆಲೂರಿನಲ್ಲಿ ಒಂದು ವಾರ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದೇ ವೇಳೆ ಆಟಗಾರರು ಯೋ-ಯೋ ಟೆಸ್ಟ್​ನಲ್ಲಿ ಕಡ್ಡಾಯವಾಗಿ ಭಾಗವಹಿಸಿ ಉತ್ತೀರ್ಣರಾಗಬೇಕಿದೆ. ಈಗಾಗಲೇ ವಿರಾಟ್ ಕೊಹ್ಲಿ (Virat Kohli) ಈ ಟೆಸ್ಟ್​​ನಲ್ಲಿ 17.2 ಅಂಕ ಗಳಿಸಿ ಪಾಸಾಗಿದ್ದಾರೆ. ರೋಹಿತ್ ಶರ್ಮಾ (Rohit Sharma) ಸೇರಿದಂತೆ ಉಳಿದವರ ಫಲಿತಾಂಶ ಬಹಿರಂಗಗೊಂಡಿದೆ.

ಏಷ್ಯಾಕಪ್ 2023ಕ್ಕೂ ಮುನ್ನ ಪೂರ್ವಭಾವಿ ಫಿಟ್‌ನೆಸ್ ಮತ್ತು ತರಬೇತಿ ಶಿಬಿರದ ಮೊದಲ ದಿನವಾದ ಗುರುವಾರ ಬೆಂಗಳೂರಿನ ಕೆಎಸ್‌ಸಿಎ-ಆಲೂರು ಮೈದಾನದಲ್ಲಿ ಯೋ-ಯೋ ಫಿಟ್‌ನೆಸ್ ಪರೀಕ್ಷೆಯಲ್ಲಿ ಕೊಹ್ಲಿ ಜೊತೆಗೆ ರೋಹಿತ್​ ಶರ್ಮಾ, ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದರು. ಈಗಾಗಲೇ ತನ್ನ ಯೋ-ಯೋ ಟೆಸ್ಟ್ ಸ್ಕೋರ್ (17.2) ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಬಹಿರಂಗಪಡಿಸಿದ ಕೊಹ್ಲಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಗೌಪ್ಯ ಮಾಹಿತಿ ಸೋರಿಕೆ ಮಾಡದಂತೆ ಭಾರತೀಯ ಕ್ರಿಕೆಟಿಗರಿಗೆ ಮೌಖಿಕ ಮಾರ್ಗಸೂಚಿ ಹೊರಡಿಸಿದೆ.

ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಪಾಸ್

ನಾಯಕ ರೋಹಿತ್ ಮತ್ತು ಹಾರ್ದಿಕ್ ಕೂಡ ಯೋ-ಯೋ ಟೆಸ್ಟ್‌ನಲ್ಲಿ ಯಾವುದೇ ತೊಂದರೆಗಳಿಲ್ಲದೆ ತೇರ್ಗಡೆಯಾಗಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಆದರೆ ಅವರ ನಿಖರವಾದ ಸ್ಕೋರ್ ಅನ್ನು ಬಹಿರಂಗಪಡಿಗೊಂಡಿಲ್ಲ. ಸದ್ಯ ಪರೀಕ್ಷೆಗಳು ಯಶಸ್ವಿಯಾಗಿವೆ. ಮತ್ತು ವರದಿಗಳನ್ನು ಶೀಘ್ರದಲ್ಲೇ ಬಿಸಿಸಿಐಗೆ ಕಳುಹಿಸಲಾಗುವುದು ಎಂದು ಬೆಳವಣಿಗೆಗಳ ನಂತರದ ಮೂಲವು ಪಿಟಿಐಗೆ ತಿಳಿಸಿದೆ. ಆದರೆ ಕೆಎಲ್ ರಾಹುಲ್​ ಈ ಟೆಸ್ಟ್​​ನಲ್ಲಿ ಪಾಲ್ಗೊಂಡಿಲ್ಲ.

ಕ್ರಿಕೆಟಿಗರ ಫಿಟ್​ನೆಸ್​ ಜೊತೆಗೆ ವೈದ್ಯಕೀಯ ಸ್ಥಿತಿಯನ್ನು ಸಹ ಪರಿಶೀಲಿಸಲಾಗುತ್ತದೆ. ಆರು ದಿನಗಳ ಶಿಬಿರದಲ್ಲಿ ಲಿಪಿಡ್ ಪ್ರೊಫೈಲ್, ಯೂರಿಕ್ ಆಸಿಡ್, ಕ್ಯಾಲ್ಸಿಯಂ, ವಿಟಮಿನ್ ಬಿ12 ಮತ್ತು ಡಿ, ಕ್ರಿಯೇಟಿನೈನ್, ಟೆಸ್ಟೋಸ್ಟೆರಾನ್ ಮತ್ತು ಡೆಕ್ಸಾ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಫಿಟ್‌ನೆಸ್ ಹೊರತಾಗಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಹೆಡ್​ಕೋಚ್​ ರಾಹುಲ್ ದ್ರಾವಿಡ್, ಮ್ಯಾಚ್ ಸಿಮ್ಯುಲೇಶನ್ ಸೆಷನ್ ಅನ್ನೂ ಆಯೋಜನೆ ಮಾಡಲಾಗುತ್ತದೆ. ಈಗಾಗಲೇ ಆಟಗಾರರು ತರಬೇತಿ ಆರಂಭಿಸಿದ್ದಾರೆ.

ರಾಹುಲ್​ನದ್ದೇ ಚಿಂತೆ

ಕಳೆದ ವಾರ ನಡೆದ ಮ್ಯಾಚ್ ಸಿಮ್ಯುಲೇಶನ್ ಪ್ರಕ್ರಿಯೆಯಲ್ಲಿ ರಾಹುಲ್ ಅವರ ಬ್ಯಾಟಿಂಗ್ ಫಿಟ್‌ನೆಸ್ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಎನ್‌ಸಿಎ ಸಿಬ್ಬಂದಿ ತೃಪ್ತರಾಗಿದ್ದರು. ವಿಕೆಟ್ ಕೀಪಿಂಗ್​​​ ಅನ್ನೂ ಅದ್ಭುತವಾಗಿ ನಿಭಾಯಿಸಿದ್ದರು. ಆದರೂ ಅವರು ಫಿಟ್​ ಆಗಬೇಕಿದೆ. ರಾಹುಲ್ ಫಿಟ್​ನೆಸ್ ಮೇಲೆಯೇ ಉನ್ನತ ಅಧಿಕಾರಿಗಳು ಕಣ್ಣಿಟ್ಟಿದ್ದು, ಏಷ್ಯಾಕಪ್​​ನ ಆರಂಭಿಕ ಪಂದ್ಯಗಳಿಗೆ ರಾಹುಲ್​​ ಅಲಭ್ಯರಾದರೂ ಅಚ್ಚರಿ ಎನ್ನಲಾಗಿದೆ. ರಾಹುಲ್ ಫಿಟ್ನೆಸ್ ಡ್ರಿಲ್‌ನ ಭಾಗವಾಗಿದ್ದರು. ಆದರಿನ್ನೂ ಯೋ-ಯೋ ಪರೀಕ್ಷೆಯನ್ನು ತೆಗೆದುಕೊಳ್ಳಲಿಲ್ಲ ಎಂದು ವರದಿಯಾಗಿದೆ.

ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರು, ತರಬೇತಿ ಆರಂಭಿಸಿದ್ದಾರೆ. ಸದ್ಯ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಜಸ್ಪ್ರಿತ್​ ಬೂಮ್ರಾ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ ಅವರು ಐರ್ಲೆಂಡ್​ ಹೊರಟಿದ್ದು, ಇಂದು ಅಥವಾ ನಾಳೆ ಶಿಬಿರದ ಭಾಗವಾಗಲಿದ್ದಾರೆ. ಈ ತರಬೇತಿ ಶಿಬಿರವು, ಆಗಸ್ಟ್ 29ರವರೆಗೆ ಇರಲಿದ್ದು, ಭಾರತ ಆಗಸ್ಟ್ 30 ರಂದು ಶ್ರೀಲಂಕಾದ ಕೊಲಂಬೊಗೆ ಪ್ರಯಾಣ ಬೆಳೆಸಲಿದೆ.

ಯೋ-ಯೋ ಟೆಸ್ಟ್​ ಎಂದರೇನು?

ಇದು ತಂತ್ರಾಂಶ ಆಧಾರಿತ ಪ್ರಕ್ರಿಯೆ. 20 ಮೀಟರ್​​ ಗುರಿ ಓಡುವ ಗುರಿ ಇರಲಿದೆ. ಆರಂಭ ಹಾಗೂ ಕೊನೆಯ ಗುರಿಯನ್ನು ನಿಗದಿತ ಅವಧಿಯಲ್ಲಿ ಓಡುವ ಮೂಲಕ ಪೂರ್ಣಗೊಳಿಸಬೇಕಿದೆ. ಬೀಪ್ ಆರಂಭದೊಡನೆ ಓಟದ ಆರಂಭ ಹಾಗೂ ಅಂತ್ಯಕ್ಕೆ ಸಮಯ ನಿಗದಿಯಾಗಿರುತ್ತದೆ. ಹಾಗೆಯೇ ಅಂಕಗಳೂ ಇರುತ್ತವೆ. ಈ ಫಿಟ್​ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂದರೆ, 16.1 ರಷ್ಟಿದ್ದ ಉತ್ತೀರ್ಣ ಅಂಕ ಈಗ 16.5ಕ್ಕೆ ಹೆಚ್ಚಿಸಲಾಗಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್ (ವಿಕೆಟ್ ಕೀಪರ್​), ಇಶಾನ್ ಕಿಶನ್ (ವಿಕೆಟ್ ಕೀಪರ್​), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮದ್‌ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ