ಕುಲ್ದೀಪ್ ಔಟ್, ಪಡಿಕ್ಕಲ್ ಇನ್; ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ಆಡುವ ಬಳಗ ಆಯ್ಕೆ ಮಾಡಿದ ಮಾಜಿ ಕೋಚ್
Mar 05, 2024 08:24 PM IST
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್‌ಗೆ ಭಾರತ ಆಡುವ ಬಳಗ ಆಯ್ಕೆ ಮಾಡಿದ ಸಂಜಯ್ ಬಂಗಾರ್
- ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೆ ಭಾರತದ ಆಡುವ ಬಳಗದಲ್ಲಿ ಎರಡು ಬದಲಾವಣೆ ಆಗಲಿದೆ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಲಿದ್ದು, ಕನ್ನಡಿಗ ಪದಾರ್ಪಣೆ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ (India vs England, 5th Test) ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ರೋಹಿತ್ ಶರ್ಮಾ ಪಡೆಯು ಈಗಾಗಲೇ ಧರ್ಮಶಾಲಾದಲ್ಲಿ ಸೇರಿದೆ. ರಾಂಚಿ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಐದನೇ ಟೆಸ್ಟ್‌ಗೆ ತಂಡ ಸೇರಿಕೊಂಡಿದ್ದಾರೆ. ಅಂತಿಮ ಟೆಸ್ಟ್‌ನಲ್ಲಿ ಭಾರತದ ಉಪನಾಯಕ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಈ ನಡುವೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆ ಇದೆ.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ. ಬೆನ್ ಸ್ಟೋಕ್ಸ್ ಬಳಗದ ವಿರುದ್ಧದ ಅಂತಿಮ ಪಂದ್ಯದಲ್ಲಿ ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯದ ದಾಖಲೆ ನಿರ್ಮಿಸಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡುವ ಬಳಗದ ಬದಲಾವಣೆ ಕುರಿತು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಸರಣಿಯಲ್ಲಿ ಭಾರತದ ಮತ್ತೋರ್ವ ಆಟಗಾರ ಪದಾರ್ಪಣೆ ಮಾಡಬಹುದು ಎಂದು ಮಾಜಿ ಆಲ್‌ರೌಂಡರ್ ಹೇಳಿದ್ದಾರೆ. ಈಗಾಗಲೇ ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ಆಕಾಶ್ ದೀಪ್ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಮತ್ತೋರ್ವ ಕನ್ನಡಿಗ ಪದಾರ್ಪಣೆ ಮಾಡಲಿದ್ದಾರೆ ಎಂದು ಬಂಗಾರ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ | ಸುನಿಲ್ ಗವಾಸ್ಕರ್ ನಂತರ ಈ ಆಟಗಾರನೇ ಭಾರತದ ಶ್ರೇಷ್ಠ ಓಪನರ್ ಎಂದ ರವಿ ಶಾಸ್ತ್ರಿ; ಸೆಹ್ವಾಗ್ ಕಡೆಗಣಿಸಿದ್ದಕ್ಕೆ ಫ್ಯಾನ್ಸ್ ಕೆಂಡ
ಆಂಗ್ಲರ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಬಂಗಾರ್, ಪಾಟೀದಾರ್ ಬದಲಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನ ಆಡಿಸಬೇಕು ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಸ್ಪಿನ್ನರ್ ಕುಲ್ದೀಪ್ ಯಾದವ್ ಬದಲಿಗೆ ಬುಮ್ರಾ ತಂಡಕ್ಕೆ ಮರಳಬಹುದು ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಅಭಿಪ್ರಾಯಪಟ್ಟಿದ್ದಾರೆ.
ಕುಲ್ದೀಪ್ ಔಟ್, ಬುಮ್ರಾ ಇನ್
ಧರ್ಮಶಾಲಾದಲ್ಲಿ ಚಳಿ ಇರುತ್ತದೆ. ಎತ್ತರದಲ್ಲಿ ಮೈದಾನ ಇರುವುದರಿಂದ ಸ್ವಲ್ಪ ಸೀಮ್ ಚಲನೆ ಇರುತ್ತದೆ. ಹೀಗಾಗಿ, ಮೈದಾನದ ಆಧಾರದಲ್ಲಿ ಒಂದು ಬದಲಾವಣೆ ಇರುತ್ತದೆ. ಕುಲ್ದೀಪ್ ಯಾದವ್ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಬಹುದು. ಹೀಗಾಗಿ ಭಾರತವು ಮೂವರು ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅವರೊಂದಿಗೆ ಆಡಲಿದೆ, ಎಂದು ಬಂಗಾರ್ ಹೇಳಿದ್ದಾರೆ.
ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ
ಅತ್ತ ಸರಣಿಯಲ್ಲಿ ಮೇಲಿಂದ ಮೇಲೆ ಅವಕಾಶ ಪಡೆದ ರಜತ್ ಪಾಟೀದಾರ್, ಆಡಿದ ಎಲ್ಲಾ ಮೂರು ಪಂದ್ಯಗಳಲ್ಲೂ ವಿಫಲರಾಗಿದ್ದಾರೆ. ಆರು ಇನ್ನಿಗ್ಸ್‌ಗಳಲ್ಲಿ 32, 9, 5, 0, 17, 0 ರನ್ ಮಾತ್ರ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮತ್ತೆ ಅವರಿಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಅತ್ತ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕೂಡಾ ಆಯ್ಕೆಗೆ ಲಭ್ಯವಿಲ್ಲ. ಹೀಗಾಗಿ ಕನ್ನಡಿಗ ರಾಹುಲ್ ಬದಲಿಗೆ ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಬಹುದು.
ಇದನ್ನೂ ಓದಿ | ಧರ್ಮಶಾಲಾಗೆ ಹೆಲಿಕಾಪ್ಟರ್‌ನಲ್ಲಿ ಅದ್ಧೂರಿ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ; ವಿಡಿಯೋ ವೈರಲ್
“ರಜತ್ ಮೂರು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸದ ಕಾರಣ, ಭಾರತ ತಂಡವು ದೇವದತ್ ಪಡಿಕ್ಕಲ್‌ಗೆ ಅವಕಾಶ ನೀಡಬಹುದು. ಹೀಗಾಗಿ ನನ್ನ ಪ್ರಕಾರ ತಂಡದಲ್ಲಿ ನಾಲ್ಕನೇ ಟೆಸ್ಟ್‌ಗೆ ಎರಡು ಬದಲಾವಣೆಗಳು ಇರಲಿವೆ,” ಎಂದು ಬಂಗಾರ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)