logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸ್ಯಾಮ್ಸನ್ ಓಪನಿಂಗ್, ರಿಂಕು ಪದಾರ್ಪಣೆ; ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಸ್ಯಾಮ್ಸನ್ ಓಪನಿಂಗ್, ರಿಂಕು ಪದಾರ್ಪಣೆ; ಸೌತ್ ಆಫ್ರಿಕಾ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

Prasanna Kumar P N HT Kannada

Dec 16, 2023 05:28 PM IST

google News

ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್.

    • India vs South Africa 1st ODI: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಯುವಕರೇ ತುಂಬಿರುವ ಭಾರತ ತಂಡದಲ್ಲಿ ಆಡುವ 11ರ ಬಳಗ ಕಟ್ಟುವುದು ಟೀಮ್ ಮ್ಯಾನೇಜ್ಮೆಂಟ್​ಗೆ ದೊಡ್ಡ ತಲೆನೋವಾಗಿದೆ. ಯಾರನ್ನು ಕೈ ಬಿಡಬೇಕು, ಯಾರನ್ನು ಆಯ್ಕೆ ಮಾಡಬೇಕು ಗೊಂದಲ ಸೃಷ್ಟಿಯಾಗಿದೆ.
ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್.
ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್.

ಟಿ20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು (India vs South Africa 1st ODI) ಸಜ್ಜಾಗುತ್ತಿವೆ. ಜೋಹಾನ್ಸ್​ಬರ್ಗ್​​​ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ಮೊದಲ ಒಡಿಐ ಪಂದ್ಯ ನಡೆಯಲಿದ್ದು, ಸರಣಿ ಗೆದ್ದು ಚರಿತ್ರೆ ಸೃಷ್ಟಿಸಲು ಕೆಎಲ್ ರಾಹುಲ್ ನೇತೃತ್ವದ ಭಾರತ ಸಿದ್ಧಗೊಂಡಿದೆ. ವಿಶ್ವಕಪ್‌ ಬಳಿಕ‌ ಮೊದಲ ಬಾರಿಗೆ ಏಕದಿನದಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದೆ ಟೀಮ್ ಇಂಡಿಯಾ.

ಟಿ20 ಸರಣಿಯ ಭಾಗವಾಗಿದ್ದ ಹಲವು ಆಟಗಾರರು ಏಕದಿನ ತಂಡದ ಭಾಗವಾಗಿಲ್ಲ. ಇನ್ನೂ‌ ಕೆಲವು ಹೊಸ ಮುಖಗಳು ತಂಡದಲ್ಲಿವೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವರಿಗೆ ವಿಶ್ರಾಂತಿ ನೀಡಲಾಗಿದೆ. ಯುವಕರೇ ತುಂಬಿರುವ ಈ ತಂಡದಲ್ಲಿ ಆಡುವ 11ರ ಬಳಗ ಕಟ್ಟುವುದು ಟೀಮ್ ಮ್ಯಾನೇಜ್ಮೆಂಟ್​ಗೆ ದೊಡ್ಡ ತಲೆನೋವಾಗಿದೆ. ಯಾರನ್ನು ಕೈ ಬಿಡಬೇಕು, ಯಾರನ್ನು ಆಯ್ಕೆ ಮಾಡಬೇಕು ಗೊಂದಲ ಸೃಷ್ಟಿಯಾಗಿದೆ.

ಅವಕಾಶದ ನಿರೀಕ್ಷೆಯಲ್ಲಿದ್ದಾರೆ ಹಲವರು

ರಾಹುಲ್, ಶ್ರೇಯಸ್ ಅಯ್ಯರ್, ಅಕ್ಷರ್, ಕುಲ್ದೀಪ್, ಚಹಲ್ ಅವರಂತಹ ಅನುಭವಿ ಆಟಗಾರರ ಮಧ್ಯೆ ಇದೇ ಮೊದಲ ಬಾರಿಗೆ ಅವಕಾಶ ಪಡೆದ ಮತ್ತು ಈ‌ ಹಿಂದೆ ಅವಕಾಶ ಪಡೆದರೂ ಆಡುವ 11ರ ಬಳಗದಲ್ಲಿ ಸ್ಥಾನ ಸಿಗದೆ ಚೊಚ್ಚಲ‌ ಅವಕಾಶಕ್ಕೆ ಕಾಯುತ್ತಿರುವ ಆಟಗಾರರೂ ಇದ್ದಾರೆ. ರಿಂಕು ಸಿಂಗ್, ಸಾಯಿ ಸುದರ್ಶನ್ ಮೊದಲ ಬಾರಿಗೆ ತಂಡವನ್ನು ಸೇರಿದ್ದಾರೆ. ರಜತ್ ಪಟಿದಾರ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸಂಜು-ಋತುರಾಜ್ ಓಪನರ್ಸ್

ರೋಹಿತ್, ಗಿಲ್, ಇಶಾನ್ ಮತ್ತು ಜೈಸ್ವಾಲ್ ಅನುಪಸ್ಥಿತಿಯಲ್ಲಿ ಋತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಮತ್ತೊಬ್ಬ ಓಪನರ್ ಯಾರು ಎಂಬುದೇ ಕುತೂಹಲವಾಗಿದೆ. ಸದ್ಯ ಈ ಸ್ಥಾನಕ್ಕೆ ಸಾಯಿ ಸುದರ್ಶನ್ ಮತ್ತು ಸಂಜು ಸ್ಯಾಮ್ಸನ್ ನಡುವೆ ದೊಡ್ಡ ಪೈಪೋಟಿ ನಡೆಯುತ್ತಿದೆ. ಆದರೆ ಹೆಚ್ಚಿನ ಒಲವು ಸ್ಯಾಮ್ಸನ್ ಮೇಲಿರುವುದು ಕಂಡು ಬಂದಿದೆ. ಏಕೆಂದರೆ ಅವರು ವಿಕೆಟ್ ಕೀಪರ್ ಕೂಡ ಆಗಿದ್ದಾರೆ.

ಕೊಹ್ಲಿ ಸ್ಥಾನ ತುಂಬಲಿದ್ದಾರೆ ಪಟಿದಾರ್

ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಮೂರನೇ ಸ್ಲಾಟ್​ನಲ್ಲಿ ರಜತ್ ಪಟಿದಾರ್ ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಟಿ20 ಸರಣಿಯಲ್ಲಿ ಈ ಆರ್ಡರ್​ನಲ್ಲಿ ಬ್ಯಾಟ್ ಬೀಸಿದ್ದ ತಿಲಕ್ ಬೆಂಚ್ ಕಾಯಬೇಕಾಗುತ್ತದೆ. 4, 5ನೇ ಕ್ರಮಾಂಕದಲ್ಲಿ ಎಂದಿನಂತೆ ಶ್ರೇಯಸ್ ಅಯ್ಯರ್, ನಾಯಕ ಕೆಎಲ್ ರಾಹುಲ್‌ ಆಡಲಿದ್ದಾರೆ. ಇನ್ನು ರಿಂಕು ಸಿಂಗ್ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಲಿದ್ದು, ಫಿನಿಶರ್ ಪಾತ್ರ ನಿಭಾಯಿಸಲಿದ್ದಾರೆ.

ಬೌಲಿಂಗ್​ ವಿಭಾಗ ಹೇಗಿರಲಿದೆ?

ಇನ್ನು ಆಲ್​ರೌಂಡರ್ ಕೋಟಾದಲ್ಲಿ ಅಕ್ಷರ್ ಪಟೇಲ್​ಗೆ ಅವಕಾಶ ಸಿಗಲಿದ್ದು, ವಾಷಿಂಗ್ಟನ್ ಸುಂದರ್ ಮತ್ತೆ ಬೆಂಚ್ ಬಿಸಿ ಮಾಡಬೇಕಾಗುತ್ತದೆ. ಸ್ಪಿನ್ ಬೌಲಿಂಗ್‌ನಲ್ಲಿ ಚಹಲ್ ಮತ್ತು ಕುಲ್ದೀಪ್ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇಬ್ಬರೂ ಫಾರ್ಮ್​​ನಲ್ಲಿದ್ದರೂ ಕುಲ್ದೀಪ್​ಗೆ ಮಣೆ ಹಾಕುವ ಸಾಧ್ಯತೆ ಇದೆ. ವೇಗಿಗಳಲ್ಲಿ ಮುಕೇಶ್ ಕುಮಾರ್, ಅರ್ಷ್ ದೀಪ್ ಈಗಾಗಲೇ ಆಡುವುದು ಖಚಿತಗೊಂಡಿದೆ.

ವೈಟ್​ವಾಶ್ ಮುಖಭಂಗದಿಂದ ಪಾರಾಗುತ್ತಾ ಭಾರತ?

ಆದರೆ ಮೂರನೇ ವೇಗಿಯಾಗಿ ದೀಪಕ್ ಚಹರ್ ಆಡದಿರುವುದು ಖಚಿತಗೊಂಡಿದೆ. ಹಾಗಾಗಿ ಅವೇಶ್ ಖಾನ್ ಕಣಕ್ಕಿಳಿಯುವುದು ಖಚಿತವಾಗಿ. 2021-22ರ ಸಾಲಿನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ವೈಟ್​ವಾಶ್ ಮುಖಭಂಗಕ್ಕೆ ಒಳಗಾಗಿದ್ದ ಭಾರತ ಈ ಬಾರಿ ಸೇಡು ತೀರಿಸಿಕೊಳ್ಳಲು ಪಣತೊಟ್ಟಿದೆ. ಸದ್ಯ ತಂಡದಲ್ಲಿ ರೆಡ್ ಹಾಟ್ ಫಾರ್ಮ್ ನಲ್ಲಿದ್ದು ಯಾರಿಗೆಲ್ಲಾ ಅದೃಷ್ಟ ಖುಲಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ರಜತ್ ಪಟಿದಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಅರ್ಷ್ ದೀಪ್ ಸಿಂಗ್, ಅವೇಶ್ ಖಾನ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ