KBC 15: ಸಚಿನ್ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಉತ್ತರ ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್; ಯಾವುದು ಆ ಪ್ರಶ್ನೆ?
Dec 28, 2023 01:33 PM IST
ಸಚಿನ್ ಕುರಿತ ಪ್ರಶ್ನೆಗೆ ತಡಬಡಾಯಿಸಿ ತಪ್ಪು ಕೊಟ್ಟ ಸ್ಮೃತಿ ಮಂಧಾನ-ಇಶಾನ್ ಕಿಶನ್.
- Kaun Banega Crorepati: ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿಲು ಇಶಾನ್ ಕಿಶನ್ ಮತ್ತು ಸ್ಮತಿ ಮಂಧಾನ ತಡಬಡಾಯಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ಹಾಗೂ ಐಕಾನ್ ಅಮಿತಾಭ್ ಬಚ್ಚನ್ ನಿರೂಪಿಸುವ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ (Kaun Banega Crorepati)ಯ ಇತ್ತೀಚಿನ ಸಂಚಿಕೆಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಮತ್ತು ಮಹಿಳಾ ತಂಡದ ಉಪನಾಯಕಿ ಸ್ಮತಿ ಮಂಧಾನ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಲೆಜೆಂಡರಿ ಸಚಿನ್ ತೆಂಡೂಲ್ಕರ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಸಂಬಂಧಿಸಿದ ಪ್ರಶ್ನೆಗೆ ತಡಬಡಾಯಿಸಿದ್ದಾರೆ.
25 ಲಕ್ಷ ಬಹುಮಾನದ ಪ್ರಶ್ನೆಯನ್ನು ಕ್ರಿಕೆಟ್ಗೆ ಸಂಬಂಧಿಸಿ ಕೇಳಲಾಯಿತು. ಇದು ಕಾರ್ಯಕ್ರಮದ 12ನೇ ಪ್ರಶ್ನೆಯಾಗಿತ್ತು. ಅಲ್ಲಿಯವರೆಗೂ ಸರಿಯಾದ ಉತ್ತರಗಳನ್ನು ನೀಡುತ್ತಾ ಇಶಾನ್-ಮಂಧಾನ 12ನೇ ಪ್ರಶ್ನೆಗೆ ಉತ್ತರಿಸಲು ಹೆಣಗಾಡಿದರು. ಆರಂಭದಲ್ಲಿ ತಪ್ಪು ಉತ್ತರ ಕೊಟ್ಟರು. ಆದರೆ ಲೈಫ್ ಲೈನ್ ಪಡೆದು ಸರಿಯಾದ ಉತ್ತರವನ್ನು ಆಯ್ಕೆ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಪ್ರಶ್ನೆ ಹೀಗಿತ್ತು ನೋಡಿ..
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮೊದಲ ಅಂತಾರಾಷ್ಟ್ರೀಯ ಶತಕವನ್ನು ಗಳಿಸಿದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಆಟಗಾರ ಯಾರು ಎಂಬ ಪ್ರಶ್ನೆಯನ್ನು ಕೇಳಲಾಯಿತು. ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದವರು ಎಂಬುದು ಸುಳಿವು. ಓದುಗರು ಸಹ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬಹುದು.
- ರಾಹುಲ್ ದ್ರಾವಿಡ್
- ಅನಿಲ್ ಕುಂಬ್ಳೆ
- ಸೌರವ್ ಗಂಗೂಲಿ
- ಜಾವಗಲ್ ಶ್ರೀನಾಥ್
ಪ್ರಶ್ನೆಗೆ ಈ ನಾಲ್ಕು ಉತ್ತರಗಳನ್ನು ನೀಡಲಾಗಿತ್ತು. ಆದರೆ ಉತ್ತರ ನೀಡಲು ಭಾರತೀಯ ಕ್ರಿಕೆಟಿಗರು ಹರಸಾಹಸಪಟ್ಟರು. ಇಬ್ಬರೂ ಚರ್ಚಿಸಿದ ನಂತರ ಒಂದು ನಿರ್ಧಾರಕ್ಕೆ ಬಂದರು. ಅಲ್ಲದೆ, ಸರಿಯಾದ ಉತ್ತರ ಕೊಡುವುದಕ್ಕೂ ಮುನ್ನ ಒಂದು ಲೈಫ್ಲೈನ್ ಕೂಡ ಪಡೆದರು. ಸಾಕಷ್ಟು ಕಷ್ಟಪಟ್ಟ ಇಬ್ಬರೂ ತಪ್ಪು ಉತ್ತರವಾಗಿದ್ದ ಜಾವಗಲ್ ಶ್ರೀನಾಥ್ ಅವರನ್ನು ಆಯ್ಕೆ ಮಾಡಿದರು. ತದನಂತರ ಲೈಫ್ಲೈನ್ ಬಳಸಿ ಸರಿ ಉತ್ತರವಾಗಿದ್ದ ಅನಿಲ್ ಕುಂಬ್ಳೆ ಎಂದು ಹೇಳಿ ಗೆದ್ದರು.
ಇಶಾನ್ ಕಿಶನ್ ಮಾನಸಿಕ ಆಯಾಸದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಕ್ತಾಯದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ. ಸ್ಮೃತಿ ಮಂಧಾನ ಇಂದಿನಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಹರ್ಮನ್ ಪ್ರೀತ್ ಕೌರ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದರೆ, ಸ್ಮೃತಿ ಮಂಧಾನ ಉಪನಾಯಕಿ.
ಕುಂಬ್ಳೆ ಪದಾರ್ಪಣೆ ಪಂದ್ಯದಲ್ಲಿ ಸಚಿನ್ ಶತಕ
1990ರ ಆಗಸ್ಟ್ 9ರಂದು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಇಂಗ್ಲೆಂಡ್-ಭಾರತ ತಂಡಗಳ ನಡುವೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಸಚಿನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಸಚಿನ್ 68 ರನ್ ಸಿಡಿಸಿದ್ದರು. ಇನ್ನು ಅನಿಲ್ ಕುಂಬ್ಳೆ ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆದರು.