ಮಹಿಳೆಯರ ಏಷ್ಯಾಕಪ್ ಫೈನಲ್; ಭಾರತ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಜಯಿಸಿದ ಶ್ರೀಲಂಕಾ ವನಿತೆಯರು
Jul 28, 2024 06:54 PM IST
ಮಹಿಳೆಯರ ಏಷ್ಯಾಕಪ್ ಫೈನಲ್; ಭಾರತ ತಂಡವನ್ನು ಮಣಿಸಿ ಚೊಚ್ಚಲ ಟ್ರೋಫಿ ಜಯಿಸಿದ ಶ್ರೀಲಂಕಾ ವನಿತೆಯರು
- Women's Asia Cup Final 2024: ಮಹಿಳೆಯರ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಟೀಮ್ ಇಂಡಿಯಾ ಮಣಿಸಿದ ಶ್ರೀಲಂಕಾ ವನಿತೆಯರು ಚೊಚ್ಚಲ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ.
ಮಹಿಳೆಯರ ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. 9ನೇ ಆವೃತ್ತಿಯಲ್ಲಿ ಬರೋಬ್ಬರಿ 8ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಭಾರತ ವನಿತೆಯರಿಗೆ ಆಘಾತ ನೀಡಿದ ಲಂಕಾ, ಫೈನಲ್ನಲ್ಲಿ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಜುಲೈ 28ರಂದು ಭಾನುವಾರ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2024ರ ಏಷ್ಯಾಕಪ್ ಫೈನಲ್ನಲ್ಲಿ ಚಾಮರಿ ಅಟ್ಟಪಟ್ಟು ಮತ್ತು ಹರ್ಷಿತಾ ಸಮರವಿಕ್ರಮ ಭರ್ಜರಿ ಬ್ಯಾಟಿಂಗ್ ನಡೆಸಿ ಹರ್ಮನ್ ಪಡೆಯ ದಾಖಲೆಯ 8ನೇ ಪ್ರಶಸ್ತಿಗೆ ಅಡ್ಡಿಯಾದರು.
ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್ಗೆ ಪ್ರವೇಶಿಸಿ ಭಾರತದ ವಿರುದ್ಧವೇ ಸೋತಿದ್ದ ದ್ವೀಪರಾಷ್ಟ್ರ, ಕೊನೆಗೂ ತನ್ನ 6ನೇ ಪ್ರಯತ್ನದಲ್ಲಿ ಕನಸನ್ನು ನನಸಾಗಿಸಿಕೊಂಡಿದೆ. ಅಲ್ಲದೆ, ಐದು ಫೈನಲ್ಗಳ ಸೇಡು ತೀರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತನ್ನ ಪಾಲಿನ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸ್ಮೃತಿ ಮಂಧಾನ 60 ರನ್ ಗಳಿಸಿ ಗಮನ ಸೆಳೆದರು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 18.4 ಓವರ್ಗಳಲ್ಲೇ ಗೆಲುವಿನ ನಗೆ ಬೀರಿ ಐತಿಹಾಸಿಕ ದಾಖಲೆಗೆ ಪಾತ್ರವಾಯಿತು. ಚಾಮರಿ 61 ಮತ್ತು ಹರ್ಷಿಕಾ ಅಜೇಯ 69 ರನ್ ಬಾರಿಸಿ ಪ್ರಮುಖ ಪಾತ್ರವಹಿಸಿದರು.
ಹರ್ಷಿತಾ-ಚಾಮರಿ ಭರ್ಜರಿ ಆಟ
166 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿದ ಅವಧಿಯಲ್ಲಿ ವಿಕೆಟ್ ಕಳೆದುಕೊಂಡಿತು. ವಿಶ್ಮಿ ಗುಣರತ್ನೆ 1 ರನ್ ಗಳಿಸಿ ಔಟಾದರು. ಆರಂಭಿಕ ಆಘಾತದ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಅಬ್ಬರಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಉತ್ತಮ ಸಾಥ್ ಕೊಟ್ಟರು. ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಭಾರತದ ಬೌಲರ್ಗಳು ಪರದಾಡಿದರು. ಎರಡನೇ ವಿಕೆಟ್ಗೆ 87 ರನ್ಗಳು ಹರಿದು ಬಂದವು. ಇದರ ನಡುವೆ ಚಾಮರಿ ಅರ್ಧಶತಕವನ್ನೂ ಪೂರೈಸಿದರು.
ಹಾಫ್ ಸೆಂಚುರಿ ಬೆನ್ನಲ್ಲೇ ಅಟ್ಟಪಟ್ಟು ಔಟಾದರು. 43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 61 ರನ್ ಸಿಡಿಸಿ ಗೆಲುವಿನ ಅಡಿಪಾಯ ಹಾಕಿಕೊಟ್ಟರು. ನಂತರ ತಂಡವನ್ನು ಹರ್ಷಿತಾ ಮುಂದುವರೆಸಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕವನ್ನೂ (69*) ಪೂರೈಸಿದರು. ಆ ಮೂಲಕ ಭಾರತದ 8ನೇ ಏಷ್ಯಾಕಪ್ ಟ್ರೋಫಿಯ ಕನಸನ್ನು ನುಚ್ಚು ನೂರು ಮಾಡಿದರು. ಕವಿಶಾ ದಿಲ್ಹಾರಿ (30*) ಅಮೋಘ ಬ್ಯಾಟಿಂಗ್ ನಡೆಸಿದರು.
ಸ್ಮೃತಿ ಮಂಧಾನ ಏಕಾಂಗಿ ಹೋರಾಟ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 44 ರನ್ ಹರಿದು ಬಂದರೂ ಶಫಾಲಿ ವರ್ಮಾ 16 ರನ್ಗಳಿಗೆ ಆಟ ಮುಗಿಸಿದರು. ಫೈನಲ್ನಲ್ಲಿ ಪದಾರ್ಪಣೆಗೈದ ಉಮಾ ಚೆಟ್ರಿ ಅವರು 9 ರನ್ಗೆ ಸುಸ್ತಾದರು. ನಾಯಕಿ ಹರ್ಮನ್ಪ್ರೀತ್ ಕೌರ್ (11) ಕೂಡ ನಿರಾಸೆ ಮೂಡಿಸಿದರು. ಸತತ ವಿಕೆಟ್ ಪತನದ ಮಧ್ಯೆಯೂ ಸ್ಮೃತಿ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.
ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಅಲ್ಲದೆ, 29 ರನ್ ಸಿಡಿಸಿದ ಜೆಮಿಮಾ ರೊಡ್ರಿಗಸ್ ಅವರೊಂದಿಗೆ 4ನೇ ವಿಕೆಟ್ಗೆ 41 ರನ್ ಸೇರಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿ ಅಜೇಯರಾಗಿ ಉಳಿದರು. ಲಂಕಾ ಪರ ಕವಿಶಾ ದಿಲ್ಹಾರಿ 2, ನಾಯಕಿ ಚಾಮರಿ ಅಟ್ಟಪಟ್ಟು, ಸಚಿನಿ ನಿಸಂಸಲಾ, ಪ್ರಬೋದನಿ ತಲಾ 1 ವಿಕೆಟ್ ಪಡೆದರು.